ವಿರಾಜಪೇಟೆ, ಜು.18;(Nadubadenews): ಭಗವಂತ ಎಲ್ಲವನ್ನೂ ಎಲ್ಲರಿಗೂ ಕೊಡಲಾರ, ಕೆಲವರಿಗೆ ಕೊಡುವ ಶಕ್ತಿ ಕೊಟ್ಟರು ಕೊಡುವ ಮನಸ್ಸು ನೀಡಲಾರ. ಹಲವರಿಗೆ ಕೊಡುವ ಮನಸ್ಸಿದ್ದರೂ ಕೊಡುವ ಶಕ್ತಿ ಇರಲಾರದು. ಮತ್ತೆ ಕೆಲವರಿಗೆ ಕೊಡುವ ಶಕ್ತಿ ಇಲ್ಲದಿದ್ದರೂ ಕೊಡಿಸುವ ಮನಸ್ಸು ಮತ್ತು ಶಕ್ತಿಯನ್ನು ಕರುಣಿಸುತ್ತಾನೆ. ಬಹುಷಃ ನಾನೂ ಕೂಡ ಮೂರನೇ ವರ್ಗಕ್ಕೆ ಸೇರತ್ತೇನೆ. ಕೊಡುವ ಶಕ್ತಿ ಇನ್ನೂ ಬರಲಿಲ್ಲ ಆದರೆ, ಬಯಸಿದವರಿಗೆ ಬಯಸಿದನ್ನ ತಲುಪಿಸುವ ಶಕ್ತಿಯನ್ನು ಭಗವಂತ ಕರುಣಿಸಿದ್ದಾನೆ
ಇರುವ ಜಾಗವನ್ನು ಹೇಗೆಂದರೆ ಹಾಗೆ ಬಳಸುವ ಬದಲು, ಒಂದು ಉದ್ದೇಶ ಮತ್ತು ಸಕಾರಣಗಳನ್ನು ಇಟ್ಟುಕೊಂಡು, ಕಾಯಾ ವಾಚಾ ಮನಸಾ ದೃಡತೆಯಿಂದ ಹೊರಟರೆ, ಸಾಕಷ್ಟು ಯಮಪರೀಕ್ಷೆಗಳ ನಂತರವೇ ಭಗವಂತ ನಾನಾ ವೇಶಧಾರಿಯಾಗಿ ಕೈ ಹಿಡಿದು ಮುನ್ನಡೆಸುತ್ತಾನಂತೆ. ಅದನ್ನೇ ಮನದಲ್ಲಿಟ್ಟು ಹೊರಟದ್ದು. ಯಾವುದೇ ನಿರೀಕ್ಷೆಗಳಿಲ್ಲ. ಕನಿಷ್ಟ, ಪ್ರತಿಫಲಾಪೇಕ್ಷೆ ಇಲ್ಲ. ಎಲ್ಲವನ್ನೂ ಮಾದೇವ ಮಾತಾಯಿಯ ಲೀಲೆ ಎಂದುಕೊಂಡು, ಹಲವು ಕಡೆ ಮುಗ್ಗರಿಸಿದ್ದರೂ, ಆರ್ಥಿಕ ಜರ್ಜಿರಿತನಾಗಿದ್ದರೂ, ಸಮಾಜಕ್ಕೆ ಏನಾದರೊಂದು ಮಾಡಬೇಕೆಂಬ ತುಡಿತ. ನಿತ್ಯ ಬಳಸುವ ಸರಂಜಾಮು ಸರಕಿನಿಂದಲೇ ಸೇವೆಗಯ್ಯುವ ಅಚಲ ಹಂಬಲದಿಂದ, ನಾನಾ ಕಾರಣಗಳಿಗೆ ಬಳಕೆಯಾಗುವ ಸಾಮಾಜಿಕ ಮಾದ್ಯಮವನ್ನು ಹೀಗೂ ಬಳಸಬಹುದಾ ಎಂಬ ಪ್ರಯತ್ನಕ್ಕೆ ಕೈ ಹಾಕಿ ಎರಡು ವಿಭಾಗಗಳಲ್ಲಿ ಸಫಲನಾದೆ. ಅದರಲ್ಲಿ ಎರಡನೇಯದು ನಮ್ಮ ಕೊಡಗು ತುರ್ತು ಸ್ಪಂದನ ವಾಟ್ಸಾಪ್ ಬಳಗ.
ಕಳೆದ ವರ್ಷ ಜುಲೈ 18ರಂದು ಮದ್ಯಾಹ್ನ ನೋಡನೋಡುತಿದ್ದಂತೆ ವಿರಾಜಪೇಟೆ ಪಟ್ಟಣದಲ್ಲಿ ಮೇಘಸ್ಪೋಟದಂತೆ ಮಳೆ ಸುರಿಯಿತು, ಬೆಟ್ಟ ಗುಡ್ಡ, ಚರಂಡಿಗಳಿಂದ ಒಮ್ಮೆಲೆ ನೀರು ರಸ್ತೆಗೆ ನುಗ್ಗಿಬಂತು. ಸರಿಸುಮಾರು 45ನಿಮಿಷಗಳಷ್ಟು ಸಮಯ ನಡೆದ ಆ ಸನ್ನಿವೇಶ, 2018-19ರ ಕೊಡಗಿನ ಪರಿಸ್ಥತಿಯನ್ನು ನೆನಪಿಸಿತು. ಮತ್ತೊಮ್ಮೆ ಕೊಡಗು ಅಪಾಯಕ್ಕೆ ಸಿಲುಕಲಿದೆಯಾ ಎನ್ನುವ ಭಯ ಶುರುವಾಗಿ, ಯಾವುದಕ್ಕೂ ಪರಿಸ್ಥಿತಿ ಎದುರಿಸಲು, ಮಳೆಯಿಂದ ತೊಂದರೆಗೀಡಾದವರಿಗೆ ಸಹಾಯ ಆಗಬಹುದೇನೋ ಎನ್ನುವ ಉದ್ದೇಶದಿಂದ ಜನಪ್ರತಿನಿಧಿಗಳು, ಅಧಿಕಾರಿಗಳು, ಪತ್ರಕರ್ತರು ಮತ್ತು ನಾಗರಿಕರನ್ನೊಳಗೊಂಡ, ಕೊಡಗು ತುರ್ತು ಸ್ಪಂದನೆ ಎನ್ನುವ ವಾಟ್ಸಾಪ್ ಬಳಗವನ್ನು ತೆರೆದೆ.
ಈ ಗುಂಪಿನ ಮೂಲಕ ತುರ್ತು ಅಗತ್ಯ ಇರುವವರು ಸಂಪರ್ಕಿಸಿದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವ ಗುರಿ ಹೊಂದಲಾಗಿತ್ತು. ನಿರಂತರ ಒಂದು ತಿಂಗಳುಗಳ ಕಾಲ ಜಿಲ್ಲೆಯ ವಿವಿಧ ಸಮಸ್ಯೆಗಳು ಅನಾವರಣಗೊಂಡು, ಜನಪ್ರತಿಗಳು ಮತ್ತು ಅಧಿಕಾರಿಗಳಿಂದ ತಕ್ಷಣಕ್ಕೆ ಸ್ಪಂದನೆಯೂ ದೊರೆಯಿತು. ಅಷ್ಟರಲ್ಲಾಗಲೇ ಮಳೆಯ ರಭಸವೂ ತಗ್ಗಿತ್ತು. ಹಾಗಾಗಿ ಗುಂಪನ್ನು ಮುಚ್ಚುವ ಯೋಚನೆ ಮಾಡಿದಾಗ, ಕೊಡಗಿನಾದ್ಯಂತ ಹವವು ನಾಗರೀಕರು, ವರ್ಷಗಳ ಪ್ರಯತ್ನದಿಂದ ಪರಿಹಾರ ಕಾಣದ ಸಮಸ್ಯೆಗಳು ಒಂದು ತಿಂಗಳಲ್ಲಿ ಪರಿಹಾರವಾಗಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಸಂಪರ್ಕಿಸಲು ಒಳ್ಳೆಯ ವೇದಿಕೆಯಾಗಿ ಕೊಡಗು ತುರ್ತು ಸ್ಪಂದನೆ ಕಾರ್ಯನಿರ್ವಹಿಸುತ್ತಿದೆ. ಈ ಬಳಗವನ್ನು ಮುಚ್ಚಬೇಡಿ ಎಂದು ಮನವಿ ಮಾಡಿದ ಮೇರೆಗೆ, ಹಾಗೇ ಮುಂದುವರೆದು ಇಂದಿಗೆ ಒಂದು ವರ್ಷ ಪೂರೈಸಿದ್ದೇವೆ.
ಕಳೆದ ಈ ಒಂದು ವರ್ಷದಲ್ಲಿ ಜಿಲ್ಲೆಯ ಮೂಲೆ ಮೂಲೆಗಳಿಂದ ಸಮಸ್ಯೆಗಳ ಮಹಾಪೂರವೇ ಈ ವಾಟ್ಸಾಪ್ ಗುಂಪಿನ ಮೂಲಕ ಅನಾವರಣಗೊಂಡಿದೆ. ಜನಪ್ರತಿಗಳು ಮತ್ತು ಅಧಿಕಾರಿಗಳು ತಕ್ಷಣಕ್ಕೆ ಸ್ಪಂದಿಸಿ ಪರಿಹಾರವನ್ನೂ ನೀಡಿದ್ದಾರೆ. ಸರ್ಕಾರಿ ಬಸ್ಸಿನ ವ್ಯವಸ್ಥೆಯೇ ಕಾಣದ ಊರಿಗೆ ಬಸ್ಸು ಹೋಗಿದೆ, ದಶಕಗಳ ಕಾಲ ರಸ್ತೆಯೇ ಇಲ್ಲದ ಊರಿಗೆ ರಸ್ತೆಗಳಾಗಿವೆ. ಕುಡಿಯುವ ನೀರಿಗೆ ಪರಿತಪಿಸುತ್ತಿದ್ದವರಿಗೆ ನೀರಿನ ವ್ಯವಸ್ಥೆಯಾಗಿದೆ. ವೈದ್ಯಕೀಯ ಸಹಾಯ ಬೇಕಾದವರಿಗೆ ನೆರವು ನೀಡಲಾಗಿದೆ. ವಿದ್ಯುತ್ ಸಮಸ್ಯೆ ಇದ್ದವರಿಗೆ ಪರಿಹಾರ ನೀಡಲಾಗಿದೆ. ಶಾಲಾ ಶಿಕ್ಷಣಕ್ಕೂ ಸಹಾಯ ಹಸ್ತ ಹರಿದಿದೆ. ಕಾನೂನಾತ್ಮಕ ಸಮಸ್ಯೆಗಳಿಗೂ ಧ್ವನಿಯಾಗಿದೆ. ಎಷ್ಟೋ ಸಮಸ್ಯೆಗಳು ಈ ಗುಂಪಿನ ಮೂಲಕ ಪರಿಹಾರ ಕಂಡರೆ, ಅದೆಷ್ಟೋ ಸಮಸ್ಯೆಗಳು ತುರ್ತುಸ್ಪಂದನೆಯ ಹೆಸರಿನಲ್ಲಿ ಸ್ಥಳೀಯವಾಗೇ ಪರಿಹಾರ ಕಂಡುಕೊಂಡವು. ಮತ್ತೊಂದಿಷ್ಟು ಪರಿಹಾರದ ಪ್ರಗತಿಯಲ್ಲಿವೆ. ಒಟ್ಟಿನಲ್ಲಿ ಕೊಡಗು ತುರ್ತುಸ್ಪಂದನೆ ವಾಟ್ಸಾಪ್ ಗುಂಪಿನ ಮೂಲಕ ಅನಾವರಣಗೊಂಡ 98% ಕೊಡಗಿನ ಸಮಸ್ಯೆಗಳು ಪರಿಹಾರ ಕಂಡಿವೆ. ಕೆಲವೊಂದಿಷ್ಟು ಪರಿಹಾರ ಪಡೆದು ಕೊಂಡವರು ತಮ್ಮ ಕಾರ್ಯ ಸಾಧನೆಯನ್ನು ಹೇಳಿಕೊಂಡರೆ, ಮತ್ತೊಂದಷ್ಟು ಜನಕ್ಕೆ ಕೆಲಸ ಆದ ತಕ್ಷಣಕ್ಕೆ ಸ್ವಾಭಿಮಾನ, ಆತ್ಮಾಭೀಮಾನ ಎರಡೂ ಅಡ್ಡಬಂದು, ತಮ್ಮ ಕೆಲಸ ಆಯಿತು ಎನ್ನೋ ಮಾಹಿತಿಯನ್ನೇ ನೀಡದಷ್ಟು ಸದೃಡರಾಗಿ ಬೀಗಿದ್ದಾರೆ. ನಾವೂ ಅಂತವರನ್ನ ಮತ್ತು ಅವರು ಪಡೆದುಕೊಂಡ ಕೆಲಸ ಕಾರ್ಯದ ಬಗ್ಗೆ ಬಲ್ಲೆವಾದರೂ ನಿರೆಕ್ಷೇಗಳೆ ಇಲ್ಲದ ಜಾಗದಲ್ಲಿ ಹೆಗ್ಗಳಿಕೆಯ ಅಫೇಕ್ಷೆ ಏತಕ್ಕೆ ಎಂದು ಸುಮ್ಮನಾಗಿದ್ದೇವೆ. ಆದರೂ, ನಿಮ್ಮ ಕೆಲಸ ಆಗಿದೆ ಎಂಬ ಕನಿಷ್ಟ ಮಾಹಿತಿಯನ್ನಾದರೂ ಕೊಡಿ ಎಂಬುದೊಂದು ಬೇಡಿಕೆಯನ್ನೂ ಈ ಮೂಲಕ ಇಡುತ್ತೇವೆ.
ಕೊಡಗಿನ ಸಮಸ್ಯೆಗಳ ಧ್ವನಿಯಾಗಿ ಕಳೆದ ಒಂದು ವರ್ಷದಿಂದ ನಿತ್ಯ ನಿರಂತರ ಸಾಗಲಷ್ಟೇ ಸೀಮಿತವಾಗಿ ಗುಂಪನ್ನು ಬಳಸಿದ ಎಲ್ಲಾ ಸದಸ್ಯರಿಗೆ ಮೊದಲು ವಂದಿಸುತ್ತಾ, ಈ ಬಳಗವನ್ನು ನಿರಂತರ ಗಮನಿಸಿ, ಆದ್ಯತೆಯ ಪರಿಹಾರಕ್ಕೆ ಸೂಚಿಸುತ್ತಿರುವ ಶಾಸಕಧ್ವಯರಾದ ಅಜ್ಜಿಕುಟ್ಟಿರ ಪೊನ್ನಣ್ಣ ಹಾಗೂ ಡಾ. ಮಂಥರ್ ಗೌಡ ಮತ್ತವರ ಆಪ್ತಶಾಖೆಗೆ ಕೃತಜ್ಞತೆ ಸಲ್ಲಿಸುತ್ತಾ, ಸಮಸ್ಯಗಳಿಗೆ ತಮ್ಮ ಅಧಿಕಾರದ ವ್ಯಾಪ್ತಿಯಲ್ಲಿ ಸ್ಪಂದಿಸಿ ಪರಿಹಾರ ನೀಡಿದ ಎಲ್ಲಾ ಅಧಿಕಾರಿ ವರ್ಗಕ್ಕೆ ಧನ್ಯವಾದ ಸಮರ್ಪಿಸುತ್ತೇವೆ. ಮುಂದೆಯೂ ಕೂಡ ನಿಮ್ಮೆಲ್ಲರ ಹಾರೈಕೆ ಇದ್ದಷ್ಟೂ ದಿನ, ಭಗವಂತನ ಶ್ರೀರಕ್ಷೆ ಇದ್ದಷ್ಟೂ ಕಾಲ, ಸಮಾಜಕ್ಕಾಗಿ, ನಾಡು, ನುಡಿ, ಸಂಸ್ಕೃತಿ, ಜಾನಪದಕ್ಕಾಗಿ ದುಡಿಯಲು ಹಂಬಲಿಸುತ್ತೇನೆ. ಮತ್ತೊಮ್ಮೆ ತಮಗೆಲ್ಲರಿಗೂ ಶಿರಸಾವಂದನೆಗಳು….
✍🏼 ಚಾಮೆರ ದಿನೇಶ್ ಬೆಳ್ಯಪ್ಪ