
ಸೂರ್ಲಬ್ಬಿ, ಜು.01; (nadubadenews): ರೈತ ದೇಶದ ಬೆನ್ನೆಲೆಬು ಎನ್ನುತ್ತೇವೆ, ಭತ್ತಬೆಳೆಯುವ ರೈತ ನಿಜವಾದ ಅನ್ನದಾತ, ಆದರೆ ಆತನ ಪರಿಪಾಟಲು ಮಾತ್ರ ಆಳುವ ವರ್ಗಕ್ಕೆ ಅರಣ್ಯರೋಧನೆಯಾಗಿಯೇ ಇಂದಿಗೂ ಇದೆ. ಇಡೀ ವರ್ಷ ಹೊಟ್ಟೆಬಟ್ಟೆಕಟ್ಟಿ, ಬಿಸಿಲು ಮಳೆಯನ್ನು ಲೆಕ್ಕಿಸದೆ ವರ್ಷದ ಕೂಳಿಗಾಗಿ ದುಡಿಯುವ ರೈತನ ಬೆಳೆಗಳು ಕ್ಷಣಮಾತ್ರದಲ್ಲಿ ಕಾಡು ಪ್ರಾಣಿಗಳ ಪಾಲಾಗುತ್ತಿವೆ. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎಂಬಂತೆ ಇಡೀ ವರ್ಷ ಬಸಿದ ಬೆವರನ್ನು ಕೆಲವೇ ಘಂಟೆಗಳಲ್ಲಿ ಕಳೆದುಕೊಂಡ ರೈತರ ಪಾಡು, ತನ್ನ ತನುವನ್ನೆ ಕಳೆದುಕೊಂಡಂತೆ, ಜಂಗಾಬಲವೇ ಉಡುಗಿ ಹೋಗಿ ಆಕಾಶವೇ ಕಳಚಿಬಿದ್ದ ನರಕಯಾತನೆ. ಆದರೂ ರೈತನ ಕಣ್ಣೀರು ಮಾತ್ರ, ಗಾಳಿಯಲ್ಲಿ ಗಾಳಿಯಾಗಿ, ನೀರಿನಲ್ಲಿ ನೀರಾಗಿ ಕಾಣದಂತೆ ಮಾಯವಾಗಿಬಿಡುತ್ತದೆ.
ಇಂತಹದ್ದೇ ಒಂದು ಘಟನೆ ಸೋಮವಾರಪೇಟೆ ತಾಲೂಕು ಗರ್ವಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂಬಾರಗಡಿಗೆ ಗ್ರಾಮದಲ್ಲಿ ನಡೆದಿದೆ. ಇಲ್ಲಿಯ ರೈತ ಕನ್ನಿಗಂಡ ಕುಟ್ಟಪ್ಪ ಅವರು, ಭತ್ತದ ನಾಟಿಗಾಗಿ ತಿಂಗಳುಗಳಿಂದ ಉತ್ತು ಬಿತ್ತಿ ಎಲ್ಲಾ ತಯಾರಿಯನ್ನೂ ಮಾಡಿದ್ದರು. ನಿನ್ನೆ ಸುಮಾರು ಹತ್ತಿಪ್ಪತ್ತು ಜನರು ಅಗೆಮಡಿಯನ್ನು ಕಿತ್ತು ನಾಟಿಗೆ ತಯಾರಿ ಮಾಡಿದ್ದರು. ಇಂದು ಕೂಟ್‌ನಾಟಿಕಂಬಳ ನಡೆಯುವುದಿತ್ತು(ಕೂಟ್‌ನಾಟಿ ಕಂಬಳ ಎಂದರೆ ಮುಯ್ಯಾಳು ಪದ್ದತಿ, ಇಂದಿಗೂ ಆ ಭಾಗದಲ್ಲಿ ಜೀವಂತವಿರುವ ನಿನಗೆ ನಾನು ನನಗೆ ನೀನು ವ್ಯವಸ್ಥೆ) ಗದ್ದೆ ನಾಟಿಯ ದಿನ ಎಂದರೆ ಅದೊಂದು ಕೆಲಸವಾಗಿರದೆ ಮನೆಯಲ್ಲಿ ಹಬ್ಬದ ಸಡಗರವೇ ಇರುತ್ತದೆ. ಮುಂಜಾನೆ ಎಷ್ಟೇ ಮಳೆ ಇದ್ದರೂ, ಚಳಿ ಕೊರೆಯುತಿದ್ದರೂ ಜಿಗಣೆಗಳು ಸಾಲು ಸಾಲು ಕಚ್ಚಿ ಗಂಟಿಕ್ಕಿದರೂ ಲೆಕ್ಕವಿಲ್ಲ. ಗದ್ದೆಗೆ ಎತ್ತು ಕಟ್ಟಿ, ಊಳುವವರ ಜಾನಪದೀಯ ಹಾಡುಗಳು, ನಾ ಮುಂದು ತಾಮುಂದು ಎಂದು ಊಳುವ ಪರಿ, ಗದ್ದೆ ಬದುವಿನಲ್ಲಿ ನೀರು ಸರಿ ಮಾಡುವವರ ಊರಾಟ, ಊಳುವವರಿಗೆ ಕಾಫಿ, ಎತ್ತುಗಳಿಗೆ ಹುಲ್ಲು ತರುವವರು, ಮನೆಯಲ್ಲಿ ಊಳುವವರಿಗೆ ಬೇರೆ, ನಾಟಿಗೆ ಬರುವವರಿಗೆ ಬೇರೆ ಖಾದ್ಯಗಳ ಅಡುಗೆ ತಯಾರಿ ಯಾವುದೇ ಉತ್ಸವಕ್ಕೂ ಕಡಿಮೆ ಇಲ್ಲದಂತೆ ನಡೆಯುತ್ತದೆ. ರೈತ ಕನ್ನಿಗಂಡ ಕುಟ್ಟಪ್ಪ ಅವರ ಮನೆಯಲ್ಲೂ ಇಂದು ಅದೇ ಉತ್ಸವದ ಸಂಭ್ರಮ ಕಳೆಗಟ್ಟಿತ್ತು. ಎಂದಿನಂತೆ ಮುಂಜಾನೆಯ ಮಳೆ, ಚಳಿ, ಜಿಗಣೆಯನ್ನೂ ಲೆಕ್ಕಿಸದೆ ಗದ್ದೆ ನಾಟಿ ಮಾಡುವ ಹುಮ್ಮಸ್ಸಿನಿಂದ ಎತ್ತುಗಳೊಂದಿಗೆ ಗದ್ದೆಗೆ ಬಂದ ಕುಟ್ಟಪ್ಪ ಮುಂಜಾನೆಯ ಮಂಜುಕವಿದ ಮಬ್ಬೆಳಕಿನಲ್ಲಿ ತಮ್ಮ ಕಣ್ಣನ್ನೇ ತಾವು ನಂಬಲಾಗದ ಸ್ಥಿತಿ. ನಿನ್ನೆ ತಾನೆ ಊರಿನ ಹೆಂಗಳೆಯರು ಸಂಭ್ರಮದಿಂದ ಶಶಿಕಿತ್ತು ಕಟ್ಟಿ ಇಟ್ಟಿದ್ದ, ಭತ್ತದ ಪೈರು ಬೆಳಗಾಗುವಷ್ಟರಲ್ಲಿ ಚೆಲ್ಲಾಪಿಲ್ಲಿಯಾಗಿಬಿಟ್ಟಿದೆ. ಇಡೀ ಯಾಕತೆಂವ(ಅಗಡಿ) ಪೂರ್ತಿ ಚೆಲ್ಲಾಡಿರುವ ಹಚ್ಚಹಸುರಿನ ಶಶಿಮಡಿಗಳ ನಡು ನಡುವೆ ಬೃಹತಾಕಾರದ ಕಂದಕದಂತೆ ಕಾಣುವ ಆನೆಯ ಹೆಜ್ಜೆಗುರುತುಗಳನ್ನು ನೋಡಿ, ಸಂಭ್ರಮದಲ್ಲಿದ್ದ ರೈತ ಕುಟ್ಟಪ್ಪರ ಜಂಗಾಬಲವೇ ಉಡುಗಿ ಹೋಗಿದೆ. ವರುಷಕ್ಕಾಗಬೇಕಾದ ಹೊಟ್ಟೆಪಾಡಿಗೆ ಒಂದೇ ರಾತ್ರಿಯಲ್ಲಿ ನೀರಿನಲ್ಲಿ ಹೋಮ ಹಾಕಿದಂತಾಗದ್ದ ವಾಸ್ತವ ಸತ್ಯವನ್ನು ಅರಗಿಸಿಕೊಳ್ಳಲು ಆ ರೈತಮನ ಎಷ್ಟು ಪರಿತಪಿಸರಬಹುದು ಎಂಬುದನ್ನು ಅಲ್ಲಿಯ ಕೃಷಿಕಾರ್ಯದ ಅನುಭವ ಇರುವವರಿಗೆ ಮಾತ್ರ ಅರ್ಥೈಸಿಕೊಳ್ಳಲು ಸಾಧ್ಯವೇನೋ.
ಕುಂಬಾರಗಡಿಗೆ ಮೂಲ ಹೆಸರು, ಕುಂಬ್‌ಡಿ. ಕುಂಬ್‌ಡಿ ಎಂದರೆ ತಲೆಬಾಗಿ ನಮಿಸು ಎಂದರ್ಥ. ಅಂದರೆ ಅದು ದೇವಭೂಮಿ ಅಲ್ಲಿಯೇ ಆ ಭಾಗದ ಬಹುಪಾಲು ದೇವತೆಗಳ ಮೂಲಸ್ಥಾನ. ಪುರಾತನ ನಾಗರೀಕತೆಯನ್ನು ಹೊಂದಿದ್ದ ಭಕ್ತಿಯೂ ಕೂಡ ಅದೇ ಗ್ರಾಮಕ್ಕೆ ಸೇರುತ್ತದೆ. ಗ್ರಾಮದ ಆರಾದ್ಯ ದೇವ ಸುಭ್ರಯ್ಯ, ಆದಿಕುಕ್ಕೆಯಿಂದ ಸೂರ್ಲಬ್ಬಿಗೆ ನೆಲೆಗೊಳ್ಳಲು ಬರುವಾಗ ಇದೇ ಕುಂಬ್‌ಡಿ ಗ್ರಾಮದಲ್ಲಿ ನಿಂತು ಹೊರಟ ಎಂಬ ಪುರಾಣ ಕಥೆ ಇದೆ. ಇದಕ್ಕೆ ಸಾಕ್ಷಿ ಪುರಾವೆಗಳು ಅಲ್ಲಿವೆ. ಕೊಡಗಿನಲ್ಲಿ ಹನ್ನೆರಡು ಕೊಂಬುಗಳಲ್ಲಿ ಸ್ಥಾನನೆಲೆ ಕಂಡಿರುವ ಕೊಡವರ ಆರಾದ್ಯ ದೈವ ಕಲ್ಯಾಟಜ್ಜಪ್ಪನೂ ಇದೇ ಊರಿನಲ್ಲಿ ನೆಲೆಕೊಂಡಿದ್ದಾನೆ. ಇಂತಾ ಪವಿತ್ರ ದೇವಭೂಮಿಯಲ್ಲಿ ಸಾಕ್ಷಾತ್ ಗಣಪತಿಯ ಅಪರಾವತಾರವಾದ ಆನೆ ಬಂದು ಹಸಿರು ಪೈರನ್ನು ಈ ಪರಿಯಾಗಿ ಹಾನಿಗೆಡವಿದ್ದು ನ್ಯಾಯವೇ ಎನ್ನುವುದಕ್ಕೆ ಉತ್ತರ ಆ ಭಗವಂತನೇ ನೀಡಬೇಕಿದೆ.
ಇನ್ನೂ ಇದಕ್ಕೆಲ್ಲ ಅರಣ್ಯ ಇಲಾಖೆ, ಸರ್ಕಾರದ ಅವ್ಯಾಜ್ಞಾನಿಕ ಮತ್ತು ಪುಸ್ತಕದ ಬದನೆಕಾಯಿಯಂತಿರುವ ಕಾನೂನುಗಳೆ ಈ ಎಲ್ಲಾ ಆವಂತರಕ್ಕೂ ಮೂಲ ಮತ್ತು ನೇರ ಕಾರಣ. ಕೊಡಗಿನ ಹಿರಿಯರಿಗೆ ಯಾವ ಸಮಯದಲ್ಲಿ ಯಾವ ಕಾರ್ಯ ಕೈಗೊಳ್ಳಬೇಕು, ತಮ್ಮ ಬೆಳೆ ಮತ್ತು ಭವಿಷ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಅರಿವಿತ್ತು, ಈ ಕಾರಣಕ್ಕಾಗಿಯೇ ವರ್ಷದಲ್ಲಿ ಹತ್ತರು ಭಾರಿ ಕಾಡು ಬೇಟೆಯ ಹೆಸರಿನಲ್ಲಿ ಇಡೀ ಊರಿಗೆ ಊರೇ ಒಂದಾಗಿ, ಕಾಡಿನೊಳಗೆ ನುಗ್ಗಿ, ಬೊಬ್ಬೆಯಿಡುತ್ತಾ ಕಾಡು ಪ್ರಾಣಿಗಳನ್ನು ಓಡಿಸುತಿದ್ದರು, ಎದುರಿಗೆ ಸಿಕ್ಕವನ್ನು ಹೊಡೆದು ತಿನ್ನುತಿದ್ದರು, ಮಾಂಸಾಹಾರ ನಮ್ಮ ಆಹಾರ ಪದ್ದತಿಯಲ್ಲೊಂದು ಹಾಗಾಗಿ ಪ್ರಾಣಿಗಳನ್ನು ಕೊಂದು ತಿನ್ನುವುದು ಸಾಮಾನ್ಯವೇ ಆಗಿತ್ತು. ಇದರಿಂದ ಭೆದರುತಿದ್ದ, ಪ್ರಾಣಿಗಳು ನಾಡಿನೊಳಕ್ಕೆ ಬರುತ್ತಿರಲಿಲ್ಲ ಬದಲಿಗೆ ಘೋಂಡಾರಣ್ಯ ಸೇರಿ ತಮ್ಮ ಆಹಾರವನ್ನು ಕಂಡುಕೊಳ್ಳುತಿದ್ದವು.
ಆದರೆ ಇತ್ತೀಚಿನ ಕಾಲಘಟ್ಟದಲ್ಲಿ ಅರಣ್ಯ ಕಾನೂನುಗಳಿಂದ ಈ ಪದ್ದತಿಯೂ ನಶಿಸಿ ಹೋಗಿದೆ. ಅರಣ್ಯ ಇಲಾಖೆಯ ಜೊತೆಗೆ ಸ್ಥಳೀಯ ಕೆಲ ತಲೆಹಿಡುಕರೂ ಸೇರಿಕೊಂಡು, ಸಾಂಪ್ರದಾಯಿಕ ಮತ್ತು ವೈಜ್ಞಾನಿಕ ಕ್ರಮಗಳಿಂದ ರೈತರು ಹಿಂದೆ ಸರಿಯುವಂತಾಯಿತು. ಇಂದು ಅತ್ತ ಧರಿ ಇತ್ತ ಪುಲಿ ಎಂಬಂತೆ ಬೆಳೆಯೂ ಇಲ್ಲ, ಭವಿಷ್ಯವೂ ಇಲ್ಲದಂತೆ ಆಕಾಶ ನೋಡುವ ಪರಿಸ್ಥಿತಿ ರೈತರದ್ದು. ಇದು ಒಂದೆರಡು ಗ್ರಾಮಗಳ ಕಥೆಯಲ್ಲ ಇಡೀ ಕೊಡಗಿನಾದ್ಯಂತ ಇರುವ ವಾಸ್ತವಾಂಶ.
ಇನ್ನು ಇಂದಿನ ಕುಂಬಾರಗಡಿಗೆಯ ವಿಚಾರಕ್ಕೆ ಬಂದರೆ ಆನೆ ಓಡಿಸಲು ಬಂದ ಅರಣ್ಯ ಇಲಾಖೆ, ಓಡಿಸಿಬಿಟ್ಟೆವು ಎನ್ನುತಿದ್ದಾರೆ ಆದರೆ ಎಲ್ಲಿಗೆ ಎಷ್ಟು ದೂರ ಎಂಬುದು ಮಾತ್ರ ಗಣೇಶನಿಗೇ ಗೊತ್ತು. ಮೊನ್ನೆ ಸೂರ್ಲ್ಲಬ್ಬಿಯಲ್ಲಿದ್ದವನ್ನು ಓಡಿಸಿ ಕುಂಬಾರಗಡಿಗೆಗೆ ಬಿಟ್ಟಿದ್ದಾರೆ, ಇಲ್ಲಿಂದ ಓಡಿದ ಆನೆಗಳು ಬಲಕ್ಕೆ ತಿರುಗಿದರೆ ಮುಟ್ಲು, ಹಮ್ಮಿಯಾಲ, ಎಡಕ್ಕೆ ತಿರುಗಿದರೆ ಕುಡಿಗಾಣ, ಹೆಗ್ಗಡಮನೆ, ಹಿಂತಿರುಗಿದರೆ ಮಂಕ್ಯ ಕಿಕ್ಕರಳ್ಳಿ ಗ್ರಾಮಗಳಿಗೆ ದಾಂಗುಡಿ ಇಡಲಿವೆ.
ಈ ವಿಚಾರದ ಕುರಿತು ನಡುಬಾಡೆ ನ್ಯೂಸ್, ಕೊಡಗು ತುರ್ತು ಸ್ಪಂದನಬಳಗದ ಮೂಲಕ ಶಾಸಕ ಡಾ. ಮಂಥರ್‌ಗೌಡರಿಗೆ ಮಾಡಿದ ಮನವಿಗೆ ಸ್ಪಂದಿಸಿದ ಶಾಸಕರ ಕಛೇರಿ, ನಡುಬಾಡೆನ್ಯೂಸ್‌ನ ಕೋರಿಕೆಯಂತೆ ಆನೆಗಳನ್ನು ಪುಷ್ಪಗಿರಿ ವನ್ಯಧಾಮದ ಭಕ್ತಿ ಘೋಂಡಾರಣ್ಯಕ್ಕೆ ಓಡಿಸಲು ಸೂಚಿಸಿದ್ದಾರೆ. ಆದರೆ ಅರಣ್ಯ ಇಲಾಖೆ ಎಷ್ಟರ ಮಟ್ಟಿಗೆ ಈ ಸೂಚನೆಯನ್ನು ಪಾಲಿಸುತ್ತದೆ ಮತ್ತು ಕೂಳು ಕಳೆದುಕೊಂಡ ರೈತರಿಗೆ ಎಷ್ಟರ ಪರಿಹಾರ ನೀಡಲಿದೆ ಎನ್ನುವುದನ್ನ ಕಾದು ನೋಡಬೇಕಿದೆ.
ಇಲ್ಲಿ ಇಂದು ನಡೆದ ಕುಟ್ಟಪ್ಪರ ಕಥೆ ಒಂದು ಸಾಕ್ಷ್ಯ ಮಾತ್ರ ಮಕೊಡಗಿನ ಬಹುಪಾಲು ಅತಿಸಣ್ಣ ರೈತರ ಪರಿಪಾಟಲೂ ಇದೇ.