ಸೂರ್ಲಬ್ಬಿ, ಜು.01; (ndubadenews): ಗರ್ವಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೂರ್ಲಬ್ಬಿ ಬಳಿಯ ಮೇದುರಪೊಳೆ ಪಾಲ್ಸ್ನಲ್ಲಿ ಪ್ರವಾಸಿಗರ ಹುಚ್ಚಾಟದ ಚಿತ್ರ ಸಹಿತ, ನಡುಬಾಡೆ ನ್ಯೂಸ್ನಲ್ಲಿ ಪ್ರಕಟವಾದ “ಮೇದುರ ಫಾಲ್ಸ್ನಲ್ಲಿ ಪ್ರವಾಸಿಗರ ಹುಚ್ಚಾಟ; ಬಲಿಬಯಸಿದೆಯಾ ಸ್ಥಳೀಯ ಆಡಳಿತ.” ಎಂಬ ತಲೆಬರಹದ ಸುದ್ದಿಯನ್ನು ಗಮನಿಸಿದ ಸ್ಥಳೀಯ ಆಡಳಿತ ಇಂದು ಫಾಲ್ಸ್ ಮತ್ತು ಹಳೇ ಸೇತುವೆಗೆ ಪ್ರವೇಶ ನಿಷೇದಿಸಿ, ಸುತ್ತಲೂ ಟೇಪ್ ಮೂಲಕ ಬ್ಯಾರಿಕೇಡ್ ನಿರ್ಮಿಸಿ, ಸೂಚನಾಫಲಕ ಅಳವಡಿಸಿದೆ.
ಮೊನ್ನೆ ಮೇದುರಪೊಳೆ ಜಲಪಾತ ವೀಕ್ಷಿಸಲು ಹೋಗಿದ್ದ ಸೋಮವಾರಪೇಟೆಯ ಸಮಾಜಸೇವಕಿ ಶ್ರೀಮತಿ ಅಶ್ವಿನಿ ಕೃಷ್ಣಕಾಂತ್ ಅವರು, ಹೊರಗಿನಿಂದ ಬಂದ ಪ್ರವಾಸಿಗರ ರೀಲ್ಸ್, ಫೋಟೋಶೂಟ್ ಹುಚ್ಚಾಟವನ್ನು ಮೊಬೈಲ್ನಲ್ಲಿ ಸೆರೆಹಿಡಿದು ನಡುಬಾಡೆ ನ್ಯೂಸ್ ಗಮನಕ್ಕೆ ತಂದಿದ್ದರು. ನಡುಬಾಡೆಯಲ್ಲಿ ಸುದ್ದಿ ಪ್ರಕಟಗೊಂಡಿದಲ್ಲದೆ, ಕೊಡಗು ತುರ್ತುಸ್ಪಂದನೆ ಬಳಗದಲ್ಲಿ ಶಾಸಕರು, ಸ್ಥಳೀಯ ಪಂಚಾಯತಿ ಮತ್ತು ಪೊಲಿಸ್ ಇಲಾಖೆಯ ಗಮನ ಸೆಳೆಯಲಾಗಿತ್ತು. ಸಾರ್ವಜನಿಕರಿಂದಲೂ ತೀವೃ ಆಗ್ರಹ ವ್ಯಕ್ತವಾಗಿತ್ತು, ಒತ್ತಡಕ್ಕೆ ಮಣಿದ ಸ್ಥಳೀಯ ಆಡಳೀತ ತಾತ್ಕಾಲಿಕ ತಡೆಕಲ್ಪಿಸಿದ್ದು, ಜಲಪಾತದ ಬಳಿ ಸ್ವಚ್ಚತಾ ಕಾರ್ಯ ಕೈಗೊಂಡಿದೆ. ಆದರೆ ಇಲ್ಲಿಗೆ ಶಾಶ್ವತ ಪರಿಹಾರ ಕಾರ್ಯ ಆಗಬೇಕಾಗಿದ್ದು ಮುಂದಿನ ದಿನಗಳಲ್ಲಿ ಆದ್ಯತೆಯಾಗಿ ಪರಿಗಣಿಸಲಿ ಎನ್ನುವುದು ನಡುಬಾಡೆ ನ್ಯೂಸ್ನ ಆಶಯ