
ವಿರಾಜಪೇಟೆ, ಮೇ. 02:(ನಡುಬಾಡೆ ನ್ಯೂಸ್): ಕೊಡಗಿನ ರಸ್ತೆಗಳು ಅಪಾಯಕಾರಿಯಾಗಿದ್ದು, ಸೂಕ್ತ ರಸ್ತೆ ಸುರಕ್ಷತಾ ಕ್ರಮಕ್ಕಾಗಿ ರಾಷ್ಟ್ರ ಮಟ್ಟದ ಸಾಮಾಜಿಕ ಕಾರ್ಯಕರ್ತ ಕೆಂಜಂಗಡ ರೋಷನ್ ನಾಣಯ್ಯ ಅಭಿಯಾನ ಆರಂಬಿಸಿ, ನಿರಂತರ ಸಂಪರ್ಕದೊಂದಿಗೆ ಜಾಗೃತಿ ಮೂಡಿಸುತಿದ್ದಾರೆ.
ಕೊಡಗಿನ ರಸ್ತೆಗಳು ಕಡಿದಾಗಿದ್ದು, ರಸ್ತೆಗಳ ಸಾಮರ್ಥ್ಯ ಮೀರಿ ವಾಹನಗಳು ಸಂಚರಿಸುತ್ತಿವೆ. ಅದರಲ್ಲೂ ಪ್ರವಾಸಿಗರ ಆಗಮನ ದಿನದಿಂದ ದಿನಕ್ಕೆ ಏರುತ್ತಿವೆ. ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಬರುವ ವಾಹನ ಚಾಲಕರು ಕೊಡಗಿನ ರಸ್ತೆಯ ಕುರಿತು ಅರಿವಿಲ್ಲದೆ, ವೇಗಮಿತಿಯನ್ನು ಅಳವಡಿಸಿಕೊಳ್ಳದೇ ಮನಸೋ ಇಚ್ಚೆ ಚಾಲಿಸುವುದು ಮತ್ತು ಕೊಡಗಿನಲ್ಲಿಯೂ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಬಹುತೇಕ ಎಲ್ಲಾ ಪಟ್ಟಣಗಳು ವಾಹನಗಳಿಂದ ಕಿಕ್ಕಿರಿಯುತ್ತಿವೆ. ಈ ಎಲ್ಲಾ ಕಾರಣಗಳಿಂದ ಅನಿರೀಕ್ಷತ ಅಪಘಾತಗಳು ಸಂಭವಿಸುತ್ತಿದ್ದು, ಅಮಾಯಕರು, ಯುವಕರು, ಸೇರಿದಂತೆ ಅಮೂಲ್ಯ ಜೀವಹಾನಿ ಆಗುತ್ತಿದೆ. ಇದನ್ನ ಮನಗಂಡ ರಾಷ್ಟ್ರ ಮಟ್ಟದ ಸಾಮಾಜಿಕ ಕಾರ್ಯಕರ್ತ ಕೆಂಜಂಗಡ ರೋಷನ್ ನಾಣಯ್ಯ ಅವರು, ರಸ್ತೆ ಸುರಕ್ಷತಾ ಅಭಿಯಾನ ಪ್ರಾರಂಭಿಸಿದ್ದು, ಸರ್ಕಾರ ಮತ್ತು ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾದಿಸುವ ಜೊತೆಗೆ, ಸಾಮಾಜಿಕ ಮಾದ್ಯಮದ ಮೂಲಕವೂ ಜಾಗೃತಿ ಮೂಡಿಸುತ್ತಿದ್ದಾರೆ.
ಈ ಕುರಿತು ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಅವರೊಂದಿಗೆ ಮಾತುಕತೆ ನಡೆಸಿದ ರೋಷನ್ ನಾಣಯ್ಯ ಅವರು, ನಂತರ ಕೊಡಗು ಜಿಲ್ಲಾ ಪೊಲೀಸ್ ವರಷ್ಟಾಧಿಕಾರಿಗಳಿಗೆ, ವಿರಾಜಪೇಟೆ ಪೊಲೀಸ್ ಅಧೀಕ್ಷಕರಿಗೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಕುದ್ದಾಗಿ ಮನವಿ ಸಲ್ಲಿಸಿದ್ದು, ಅತೀ ಹೆಚ್ಚು ಅಪಘಾತವಾಗುವ ವಿರಾಜಪೇಟೆಯ ಬುಟ್ಟಂಗಾಲದಿಂದ ಗೋಣಿಕೊಪ್ಪ ಆನೇ ಚೌಕೂರುವರೆಗೂ ತುರ್ತಾಗಿ ರಸ್ತೆ ಸುರಕ್ಷತೆಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇವರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಶಾಸಕ ಪೊನ್ನಣ್ಣ ಅವರು ಕೂಡ ಇಲಾಖಾ ಅಧಿಕಾರಿಗಳಿಗೆ ಕ್ರಮ ಕೈಗೋಳ್ಳುವಂತೆ ಸೂಚಿಸಿದ್ದಾರೆ. ಪೋಲೀಸ್ ಇಲಾಖೆ ತಕ್ಷಣಕ್ಕೆ ಪಾತೂರ್ ಬಳಿಯಲ್ಲಿ ಬ್ಯಾರಿಕೇಡ್ ಅಳವಡಿಸಿದ್ದು, ಲೋಕೋಪಯೋಗಿ ಇಲಾಖೆಗೆ, ಆನೆ ಚೌಕೂರಿನಿಂದ ರಸ್ತೆ ಟ್ಯಾಪಿಂಗ್ ಮಾಡುವಂತೆ ಪತ್ರ ಬರೆದು ಕೋರಿದ್ದಾರೆ. ಲೋಕೋಪಯೋಗಿ ಇಲಾಖೆ ಕೂಡ ಕಾರ್ಯ ಕೈಗೊಂಡಿದ್ದು ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ರೋಷನ್ ನಾಣಯ್ಯ ತಿಳಿಸಿದ್ದಾರೆ.
ತಮ್ಮ ಅಭಿಯಾನಕ್ಕೆ ಶಾಸಕ ಪೊನ್ನಣ್ಣ ಮತ್ತು ಅಧಿಕಾರಿಗಳಿಂದ ಉತ್ತಮ ಸ್ಪಂದನೆ ಸಕಾಲದಲ್ಲಿ ದೊರೆತಿದ್ದಕ್ಕೆ ಧನ್ಯವಾದ ಅರ್ಪಿಸಿರುವ ಕೆಂಜಂಗಡ ರೋಷನ್ ನಾಣಯ್ಯ ಅವರು, ಸಾರ್ವಜನಿಕರೂ ಕೂಡ ತನ್ನ ಕಾರ್ಯವನ್ನು ಶ್ಲಾಗಿಸಿರುವ ಕುರಿತು ಹರ್ಷ ವ್ಯಕ್ತಪಡಿಸಿದ್ದಾರಲ್ಲದೆ ಕೊಡಗಿನಾದ್ಯಂತ ಎಲ್ಲಾ ಅಪಾಯಕಾರಿ ರಸ್ತೆಗಳಲ್ಲಿಯೂ ಸೂಕ್ತ ಕ್ರಮವಾಗಬೇಕು ಹಾಗೇ ವಾಹನ ಚಾಲಕರೂ ಕೂಡ ರಸ್ತೆಯ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸುವಂತಾಗಬೇಕು ಎಂದು ಕರೆ ನೀಡಿದ್ದಾರೆ.