ಚೆಯ್ಯಂಡಾಣೆ, ಮೇ.31: (nadubadenews) : (ವರದಿ: ಅಶ್ರಫ್) ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಕಡಂಗ ಪಟ್ಟಣದಲ್ಲಿ ಸೂಕ್ತ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಿದರೂ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಟ್ರಾಫಿಕ್ ಕಿರಿಕಿರಿ ನಿತ್ಯ ನಿರಂತರವಾಗಿದೆ. ಪಟ್ಟಣದಲ್ಲಿ ಸರಕಾರಿ ಪ್ರಾಥಮಿಕ ಶಾಲೆ, ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಸರಕಾರಿ ಆಯುಷ್ ಆಸ್ಪತ್ರೆ, ಕೆನರಾಬ್ಯಾಂಕ್, ಕೆಡಿಸಿಸಿ ಬ್ಯಾಂಕ್, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಬ್ಯಾಂಕ್, ನ್ಯಾಯಬೆಲೆ ಅಂಗಡಿ, ಅಂಚೆ ಕಚೇರಿ, 2 ಅಂಗನವಾಡಿ ಕೇಂದ್ರ, 2 ಜುಮಾ ಮಸೀದಿ, 2 ಮದರಸ, ಮಹಾಗಣಪತಿ ದೇವಸ್ಥಾನ ಹಾಗೂ ಹಲವಾರು ವಾಣಿಜ್ಯ ಉದ್ಯಮ ಸಂಕೀರ್ಣ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳು ಕಾರ್ಯಾಚರಿಸುತ್ತಿದ್ದು ದಿನದಿಂದ ದಿನಕ್ಕೆ ಸಾರ್ವಜನಿಕರ ಸಂಖ್ಯೆ ಪಟ್ಟಣದಲ್ಲಿ ಹೆಚ್ಚಾಗುತ್ತಿದೆ. ಎಡಪಾಲ, ಕರಡ, ಪೊದ್ದಮಾನಿ, ಕೆದಮೂಳ್ಳೂರು, ಕಡಂಗಮರೂರು, ಜೌಕಿ, ಪಾಲಂಗಾಲ, ಬೊಳ್ಳ್‌ಮಾಡು ಗ್ರಾಮಗಳಿಂದ ಗ್ರಾಹಕರು ಖರೀದಿ ಹಾಗೂ ವಹಿವಾಟಿಗಾಗಿ ಕಡಂಗ ಪಟ್ಟಣವನ್ನೇ ಅವಲಂಬಿಸಿದ್ದಾರೆ.
ಮುಖ್ಯ ರಸ್ತೆಯಲ್ಲೇ ಆಟೋ ನಿಲ್ದಾಣವಿದ್ದು 2 ಬದಿಯಲ್ಲಿ ವಾಹನ ಸಂಚರಿಸಲು ಆಟೋ ನಿಲ್ದಾಣದಿಂದ ತೊಂದರೆ ಯಾಗುತ್ತಿದೆ.ಕೆಲವರು ಆಟೋ ನಿಲ್ದಾಣದಲ್ಲಿ ದ್ವಿಚಕ್ರ ಹಾಗೂ ಮತ್ತಿತರ ವಾಹನ ನಿಲುಗಡೆ ಗೊಳಿಸುತ್ತಿದ್ದು, ಮತ್ತೊಂದು ಬದಿಯಲ್ಲಿ ವಾಹನ ನಿಲುಗಡೆ ಗೊಳಿಸುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ. ಬ್ಯಾಂಕ್ ವಹಿವಾಟಿಗೆ ಬರುವ ಗ್ರಾಹಕರು ಆತುರದಿಂದ ರಸ್ತೆಯಲ್ಲೆ ವಾಹನ ನಿಲ್ಲಿಸಿ ತೆರಳುವುದರಿಂದ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ.
ತಿಂಗಳಲ್ಲಿ 1 ರಿಂದ 15 ವರೆಗೆ ಒಂದು ಬದಿ 16 ರಿಂದ 31 ರವರೆಗೆ ಮತ್ತೊಂದು ಬದಿಯಲ್ಲಿ ವಾಹನ ನಿಲುಗಡೆ ಗೊಳಿಸುವಂತೆ ಗ್ರಾಮ ಪಂಚಾಯಿತಿ ವತಿಯಿಂದ ಬೋರ್ಡ್ ಆಳವಡಿಸಿದರು ಕೂಡ ಇದನ್ನು ಯಾರು ಪಾಲಿಸುತಿಲ್ಲ.
ಮುಖ್ಯರಸ್ತೆಯ ಬದಿಯಲ್ಲಿಯೇ ನ್ಯಾಯಬೆಲೆ ಅಂಗಡಿ ಇದ್ದು ರಸ್ತೆಯ ಬದಿಯಲ್ಲಿ ವಾಹನ ನಿಲುಗಡೆ ಗೊಳಿಸಿ ನ್ಯಾಯ ಬೆಲೆ ಅಂಗಡಿಗೆ ತೆರಳುವುದರಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಬಿಗಡಾಯಿಸುತ್ತಿದೆ. ನ್ಯಾಯ ಬೆಲೆ ಅಂಗಡಿಗೆ ತೆರಳುವವರು ಸೂಕ್ತ ಪಾರ್ಕಿಂಗ್ ವ್ಯವಸ್ಥೆಮಾಡಿದ ಸ್ಥಳದಲ್ಲಿ ವಾಹನ ನಿಲುಗಡೆ ಗೊಳಿಸಿ ತೆರಳಿದರೆ ಸಮಸ್ಯೆ ಬಗೆಹರಿಯಲಿದೆ. ಸ್ಥಳೀಯ ವರ್ತಕರು ತಮ್ಮ ವಾಹನಗಳನ್ನು ಅಂಗಡಿ ಮುಂದೆ ನಿಲುಗಡೆ ಗೊಳಿಸದೆ ವಾಹನ ನಿಲುಗಡೆಗೆ ನಿಯೋಜಿಸಿದ ಬದಿಯಲ್ಲಿ ವಾಹನ ನಿಲುಗಡೆ ಗೊಳಿಸಿದರೆ ಟ್ರಾಫಿಕ್ ಸಮಸ್ಯೆ ತಪ್ಪಿಸ ಬಹುದು.
ಗ್ರಾಮ ಪಂಚಾಯಿತಿ ವತಿಯಿಂದ ನಾಮಫಲಕ ಅಳವಡಿಸಿದರೂ ಪ್ರಯೋಜನವಿಲ್ಲ
ಗ್ರಾಮಪಂಚಾಯಿತಿ ತಿಂಗಳಲ್ಲಿ ತಲಾ 15 ದಿನ ಮುಖ್ಯರಸ್ತೆಯ ಉಭಯ ಬದಿಯಲ್ಲಿ ವಾಹನ ನಿಲುಗಡೆ ಗೊಳಿಸಲು ಪೂರಕ ಸೂಚನಾ ನಾಮಫಲಕ ಅಳವಡಿಸಲಾಗಿದೆ. ಆಟೋ ರಿಕ್ಷಾ ನಿಲ್ದಾಣ,ದ್ವಿಚಕ್ರ ವಾಹನ ನಿಲ್ದಾಣ ಹಾಗೂ ಮತ್ತಿತರ ವಾಹನಗಳನ್ನು ನಿಲುಗಡೆ ಗೊಳಿಸಲು ಸೂಕ್ತ ನಾಮಪಲಕ ಆಳವಡಿಸಲಾಗಿದೆ. ಆದರೂ ಯಾರೊಬ್ಬರೂ ಕೂಡ ಇದನ್ನು ಪಾಲಿಸುತಿಲ್ಲ ಎಂಬುದು ಸಾರ್ವಜನಿಕರ ಅಸಮದಾನ.
ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು
ಪಟ್ಟಣದಲ್ಲಿ ಪೊಲೀಸರನ್ನು ನೇಮಿಸಿ ವಾಹನಗಳನ್ನು ಪಟ್ಟಣದ ರಸ್ತೆಯಲ್ಲಿ ಅಡ್ಡಾದಿಡ್ಡಿ ನಿಲುಗಡೆ ಗೊಳಿಸುವ, ಕಾನೂನು ಉಲ್ಲಂಘಿಸುವ ವಾಹನಕ್ಕೆ ಪೊಲೀಸ್ ಇಲಾಖೆ ದಂಡ ವಿಧಿಸಿದರೆ ಕಂಡಕಂಡಲ್ಲಿ ವಾಹನಗಳ ನಿಲುಗಡೆಯನ್ನು ತಪ್ಪಿಸಬಹುದು ಹಾಗೂ ಟ್ರಾಫಿಕ್ ಸಮಸ್ಯೆ ಬಗೆಹರಿದು ಸಾರ್ವಜನಿಕರ ಹಾಗೂ ಪಾದಚಾರಿಗಳ ಮುಕ್ತ ಸಂಚಾರಕ್ಕೆ ಅನುವುವಾಗಲಿದೆ. ಎಂಬುದು ಸಾರ್ವಜನಿಕ ಅಭಿಪ್ರಾಯವಾದರೆ,
ಪ್ರಮುಖರ ಅಭಿಪ್ರಾಯಗಳು ಹೀಗಿವೆ…,
ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹಾಗೂ ಅಡ್ಡಾದಿಡ್ಡಿ ವಾಹನ ನಿಲುಗಡೆ ಗೊಳಿಸುವುದನ್ನು ತಪ್ಪಿಸಲು ಪೊಲೀಸ್ ಇಲಾಖೆಯ ಆದೇಶದ ಮೇರೆಗೆ ರಸ್ತೆಯ ಉಭಯ ಬದಿಗಳಲ್ಲಿ ವಾಹನ ನಿಲುಗಡೆ ಗೊಳಿಸುವ ಸೂಚನಾ ಪಲಕವನ್ನು ಗ್ರಾಮ ಪಂಚಾಯಿತಿ ವತಿಯಿಂದ ಆಳವಡಿಸಲಾಗಿದೆ. ಇದನ್ನು ವಾಹನ ನಿಲುಗಡೆ ಗೊಳಿಸುವವರು ಪಾಲಿಸುತಿಲ್ಲ.
- ಕೋಡಿರ ವಿನೋದ್ ನಾಣಯ್ಯ , ಉಪಾಧ್ಯಕ್ಷರು ನರಿಯಂದಡ ಗ್ರಾ.ಪಂ.
ನರಿಯಂದಡ ಗ್ರಾಮ ಪಂಚಾಯತಿಗೆ ಒಳಪಟ್ಟ ಗ್ರಾಮಗಳ ಪೈಕಿ ಕಡಂಗ ಪಟ್ಟಣ ದೊಡ್ಡದಿದೆ.15 ಸದಸ್ಯರುಗಳಿರುವ ಪಂಚಾಯತಿಯಲ್ಲಿ 5 ಸದಸ್ಯರುಗಳು ಈ ಗ್ರಾಮಗಳಿಂದಲೇ ಆಯ್ಕೆ ಯಾಗಿದ್ದಾರೆ.ಟ್ರಾಫಿಕ್ ಸಮಸ್ಯೆ ಅತೀಯಾಗಿದೆ ಇದಕ್ಕೆ ಸೂಚನಾಫಲಕ ಆಳವಡಿಸಿದರೆ ಮಾತ್ರ ಸಾಲದು ವಿರಾಜಪೇಟೆ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿ ಸಂಬಂಧ ಪಟ್ಟ ಪೊಲೀಸ್ ಇಲಾಖೆ ದಂಡ ವಿಧಿಸಿ ಕ್ರಮ ಕೈಗೊಂಡರೆ ಸ್ವಲ್ಪ ಮಟ್ಟಿಗೆಯಾದರು ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ.
- ನೆಲ್ಲಚಂಡ ಕಿರಣ್ ಕಾರ್ಯಪ್ಪ , -ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ
ಕಡಂಗ ಪಟ್ಟಣದಲ್ಲಿ ವಾಹನಗಳ ಸಂಚಾರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ,ವಾಹನ ಸವಾರರು ವಾಹನಗಳನ್ನು ಅಂಗಡಿಗಳ ಎದುರುಗಡೆ ಅಡ್ಡಾದಿಡ್ಡಿ ನಿಲುಗಡೆ ಗೊಳಿಸಿ ತೆರಳುದರಿಂದ ಟ್ರಾಫಿಕ್ ಸಮಸ್ಯೆ ತಲೆದೋರಿದೆ, ಸಂಬಂಧ ಪಟ್ಟ ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳಬೇಕು.
- ಝಕರಿಯ ಕೆ.ಎಚ್., – ವರ್ತಕ ಕಡಂಗ ಪಟ್ಟಣ
ಮುಂದಿನ ದಿನಗಳಲ್ಲಿ ಕಡಂಗ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು,ಅಡ್ಡಾದಿಡ್ಡಿ ವಾಹನ ನಿಲುಗಡೆಗೊಳಿಸುವ ಹಾಗೂ ಸೂಕ್ತ ಸ್ಥಳದಲ್ಲಿ ವಾಹನ ನಿಲುಗಡೆ ಗೊಳಿಸದ ವಾಹನಗಳಿಗೆ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು, ಅವಶ್ಯಕತೆ ಇದ್ದಲ್ಲಿ ಪಾರ್ಕಿಂಗ್ ಲೈನ್ (ಬಿಳಿ ಬಣ್ಣ ಬಳಿದು) ವ್ಯವಸ್ಥೆ ಮಾಡಲಾಗುವುದು.
- ಅನೂಪ್ ಮಾದಪ್ಪ, ವೃತ್ತ ನಿರೀಕ್ಷಕರು, ವಿರಾಜಪೇಟೆ ಪೊಲೀಸ್ ಠಾಣೆ