✍-ಚೆಪ್ಪುಡೀರ ಕಾರ್ಯಪ್ಪ , ಖ್ಯಾತ ಹಾಕಿ ವೀಕ್ಷಕ ವಿವರಣೆಗಾರರು
ಸುದೀರ್ಘ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕೂರ್ಗ್ ರೆಜಿಮೆಂಟ್, ಭಾರತೀಯ ಸೇನೆಯ ಗೌರವಾನ್ವಿತ ರೆಜಿಮೆಂಟ್ ಗಳಲ್ಲಿ ಒಂದಾಗಿದೆ. ಯುದ್ಧ ಭೂಮಿಯಲ್ಲಿ ಮತ್ತು ಕ್ರೀಡಾ ಮೈದಾನದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿರುವ ಕೂರ್ಗ್ ರೆಜಿಮೆಂಟ್ ಶಿಸ್ತು, ಸೇವೆ ಮತ್ತು ಸಾಧನೆಯ ಸಂಕೇತದ ಪ್ರಭಲ ಘಟಕವಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸೇವೆಗೆ ಹೆಸರುವಾಸಿಯಾಗಿರುವ ಕೂರ್ಗ್ ರೆಜಿಮೆಂಟ್ ಕ್ರೀಡಾ ವಲಯದಲ್ಲಿ ಬಹಳ ಮುಂಚೂಣಿಯಲ್ಲಿದೆ.
ಮಿಲಿಟರಿ ಇತಿಹಾಸದಲ್ಲಿ ಕೂರ್ಗ್ ರೆಜಿಮೆಂಟ್ ತುಂಬಾ ಪ್ರಾಮುಖ್ಯತೆಯನ್ನು ಹೊಂದಿದೆ. ದೇಶಭಕ್ತಿ, ದೇಶ ಸೇವೆ ಮತ್ತು ಶೌರ್ಯ-ಸಾಹಸದ ಸಂಕೇತವನ್ನು ಪ್ರತಿಬಿಂಬಿಸುತ್ತದೆ.
ಕೊಡಗಿನಲ್ಲಿ ನಡೆಯುವ ಹಾಕಿ ಹಬ್ಬಗಳಲ್ಲಿ ಭಾಗವಹಿಸುವುದು ಕೂರ್ಗ್ ರೆಜಿಮೆಂಟ್ ನ ಸಂಪ್ರದಾಯವಾಗಿದೆ. ಈ ಪಂದ್ಯಾವಳಿಯಲ್ಲಿ ಗಳಿಸಿದ ಮೊದಲ ಗೋಲಿಗೆ ರೆಜಿಮೆಂಟ್ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಕರ್ನಾಟಕ ರಾಜ್ಯದ, ಕೊಡಗು ಜಿಲ್ಲೆಯ ಸೈನಿಕರಿಂದ ಇದು ಕೂಡಿದೆ. ಸಮರ ಸಂಪ್ರದಾಯವನ್ನು ಹೊಂದಿರುವ ಕೊಡವರು ಮಿಲಿಟರಿಯಲ್ಲಿ ಸೇವೆ ಸಲ್ಲಿಸುವ ಸಂಪ್ರದಾಯವನ್ನು ಹೊಂದಿದ್ದಾರೆ. ಮಿಲಿಟರಿ ನೀತಿಯು ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು. ಧೈರ್ಯ, ನಿಷ್ಠೆ ಹಾಗೂ ಕರ್ತವ್ಯ ಪರಿಪಾಲನೆಯನ್ನು ಸೂಚಿಸುತ್ತದೆ. ಇದು ರಾಷ್ಟ್ರೀಯ ಭದ್ರತೆಗೆ ವಿಶೇಷ ಕೊಡುಗೆಯಾಗಿ ಪರಿಣಮಿಸಿದೆ.
ಇಂಡೋ-ಪಾಕಿಸ್ತಾನಿ ಯುದ್ಧಗಳು ವಿದೇಶಗಳಲ್ಲಿ ಶಾಂತಿ ಪಾಲನಾ ಕಾರ್ಯಾಚರಣೆಗಳು ಸೇರಿದಂತೆ ವಿವಿಧ ಸಂಘರ್ಷಗಳಲ್ಲಿ ಇದು ಭಾಗವಹಿಸಿದೆ.
1973 ರಲ್ಲಿ 37 ಕೂರ್ಗ್ ಮೀಡಿಯಂ ರೆಜಿಮೆಂಟ್ ಸ್ಥಾಪನೆ ಆಯಿತು. ಈಗ ಈ ರೆಜಿಮೆಂಟ್ 99 A.P.O ನಲ್ಲಿದೆ. ಇದರಲ್ಲಿ ಕೊಡವ, ತಮಿಳು, ಮಲಯಾಳಿ ತೆಲುಗು ಜನರು ಮಿಶ್ರವಾಗಿದ್ದಾರೆ. ಯುದ್ಧಕ್ಕೆ ಹೊರಡುವ ಸಂದರ್ಭದಲ್ಲಿ ಎಲ್ಲಾ ವಾಹನಗಳನ್ನು ಸಾಲಿನಲ್ಲಿ ನಿಲ್ಲಿಸಿ ಕಾವೇರಿ ಮಾತಾ ಕೀ ಜೈ ಎಂದು ಮೂರು ಬಾರಿಗೆ ಘೋಷಣೆ ಕೂಗಿ ನಂತರ ಕಾರ್ಯಾಚರಣೆಗೆ ಹೊರಡುವುದು ವಾಡಿಕೆಯಾಗಿದೆ.
ಕೂರ್ಗ್ ರೆಜಿಮೆಂಟ್ ಹಾಕಿ ಕ್ರೀಡೆಯಲ್ಲಿ 6 ಬಾರಿ, 1959 ರಿಂದ 1967 ರವರೆಗೆ ನಾರ್ದರ್ನ್ ಕಮಾಂಡ್ ಅನ್ನು ಪ್ರತಿನಿಧಿಸಿದ್ದಾರೆ.
ಇಂದಿನ ಕೊಡಗಿನ ಯುವಕರು ಆದಷ್ಟು ಕೂರ್ಗ್ ರೆಜಿಮೆಂಟಿಗೆ ಸೇರಿ, ಭಾರತದಲ್ಲಿರುವ ಈ ಏಕೈಕ ಕೂರ್ಗ್ ರೆಜಿಮೆಂಟನ್ನು ಮುಂದಿನ ಪೀಳಿಗೆಗೂ ಉಳಿಸಬೇಕು ಎಂಬುದು ಹಿರಿಯ ಕ್ರೀಡಾ ಸಾಧಕರ ಆಶಯವಾಗಿದೆ.
1994ರಲ್ಲಿ ಪದಾತಿ ಸೈನ್ಯ ಘಟಕವನ್ನು ಪುನರುಜ್ಜೀವನಗೊಳಿಸಲಾಯಿತು. ಹಲವಾರು ಬದಲಾವಣೆಗಳ ನಂತರ ಇದನ್ನು 14 ಕೂರ್ಗ್ ರೆಜಿಮೆಂಟ್ ಎಂದು ನಾಮಕರಣ ಮಾಡಲಾಯಿತು. ನಾಗಪುರ ಮತ್ತು ಬರ್ಮಾದ ಯುದ್ಧ ಗೌರವವನ್ನು ಅದಕ್ಕೆ ನೀಡಲಾಯಿತು.
1946ರಂದು ಈ ಘಟಕವನ್ನು ಫಿರಂಗಿಗಳ ಬಂಡಾರವಾಗಿ ಪರಿವರ್ತಿಸಲಾಯಿತು ಮತ್ತು 10 ಇಂಡಿಯನ್ ಆಂಟಿ ಟ್ಯಾಂಕ್ ರೆಜಿಮೆಂಟ್ ಆರ್ಟಿಲರಿ ಎಂದು ಹೆಸರಿಡಲಾಯಿತು. 1947ರಂದು 37 ಆಂಟಿ ಟ್ಯಾಂಕ್ ರೆಜಿಮೆಂಟ್ ಎಂದು ಮರುನಾಮಕರಣಗೊಂಡಿತು. 1973 ರಿಂದ ಈ ರೆಜಿಮೆಂಟನ್ನು ಮಧ್ಯಮ ರೆಜಿಮೆಂಟ್ ಆಗಿ ಮರುಸಂಘಟಿಸಲಾಯಿತು. ಈ ರೆಜಿಮೆಂಟ್ ಉನ್ನತ ಸಂಪ್ರದಾಯಗಳ ದೀರ್ಘ ರೇಖೆಯನ್ನು ಹೊಂದಿರುವ ಅನಾಯ್ ನಲ್ಲಿರುವ ಅತ್ಯಂತ ಹಳೆಯ ಘಟಕಗಳಲ್ಲಿ ಒಂದಾಗಿರುವುದರಿಂದ ರೆಜಿಮೆಂಟ್ ತನ್ನ ಹೆಸರಿನಲ್ಲಿ ಪೂರ್ವ ಪ್ರತ್ಯಯವಾಗಿ ಕೂರ್ಗ್ ಪದವನ್ನು ಬಳಸುವುದನ್ನು ಮುಂದುವರಿಸಲು ಅನುಮತಿ ನೀಡುವುದು ಅಕ್ಷೇಪಣೆಯವಾಗಿತ್ತು.
ಪ್ರಾಥಮಿಕವಾಗಿ ಈ ರೆಜಿಮೆಂಟ್ ಕೊಡವರಿಂದ ಸಂಯೋಜಿಸಲ್ಪಟ್ಟಿತ್ತು. ದಕ್ಷಿಣ ಭಾರತದ ಇತರ ರಾಜ್ಯಗಳ ಸಿಬ್ಬಂದಿಯನ್ನು ಈ ರೆಜಿಮೆಂಟಿಗೆ ನಂತರದ ದಿನಗಳಲ್ಲಿ ಸೇರಿಸಲಾಯಿತು.
ಕೂರ್ಗ್ ರೆಜಿಮೆಂಟ್ ನ ವಿಶೇಷ ದಿನವಾದ ರೈಸಿಂಗ್ ಡೇ ಯಂದು ಕುಪ್ಪೆಚಾಲೆ ಹಾಗು ಪೀಚೆಕತ್ತಿಯನ್ನು ಧರಿಸಿ ಕೊಡವರ ಸಾಂಪ್ರದಾಯಿಕ ಬೊಳ್‌ಕಾಟ್ ಆಡಲಾಗುತ್ತದೆ.
37 ಕೂರ್ಗ್ ರೆಜಿಮೆಂಟ್ ನ ಸದಸ್ಯರು
ಅಂದಿನ ಕೂರ್ಗ್ ರೆಜಿಮೆಂಟ್ ಮುಕ್ಕಾಟೀರ ಅಯ್ಯಪ್ಪ, ಪುಚ್ಚಿಮಂಡ ದೇವಯ್ಯ, ಎಂ.ಬಿ. ಚೆಮ್ಮಯ್ಯ, ಕಟ್ಟೇರ ಗಣಪತಿ, ಚಾರಿಮಂಡ ಪೂವಯ್ಯ, ಕರುಣಾಕರನ್, ಚಂಬಾಂಡ ಸುಬ್ಬಯ್ಯ, ಕುಂಞ್ಞಂಡ ಅಪ್ಪಯ್ಯ, ಕಂಗಾಂಡ ನಾಣಯ್ಯ, ಕುಟ್ಟಂಡ ಸುಬ್ಬಯ್ಯ, ಬಡ್ಕಡ ಮಾಚಯ್ಯ, ಬಿ ಪಿ ವರ್ಮ, ಮಚ್ಚಾರಂಡ ಭೀಮಯ್ಯ, ಎನ್.ವೈ.ಸುವಾನಿ, ಎಂ.ಎನ್.ಅಪ್ಪಯ್ಯ, ಎಂ.ಬಿ. ಉತ್ತಪ್ಪ, ಕೆ.ಎಂ.ಉಲ್ಲಾಸ್, ನೆಲ್ಲಮಕ್ಕಡ ಜಪ್ಪು ಮುದ್ದಯ್ಯ, ಸರಂಜನ ದಾಸ್ ಇವರುಗಳನ್ನು ಒಳಗೊಂಡಿತ್ತು.
ಕೌಟುಂಬಿಕ ಹಾಕಿ ಹಬ್ಬ
ಕೂರ್ಗ್ ರೆಜಿಮೆಂಟ್ ತಂಡವು ಅಪ್ಪಚೊಟ್ಟೋಳಂಡ ಹಾಗು ಬಿದ್ದಂಡ ಕೌಟಂಬಿಕ ಹಾಕಿ ಹಬ್ಬದಲ್ಲಿ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿ ಅದ್ಭುತ ಪ್ರದರ್ಶನ ಪಂದ್ಯಾವಳಿ ಆಡಿ ಕ್ರೀಡಾಪ್ರಿಯರ ಮನ ಗೆದ್ದರು. ಬಿದ್ದಂಡ ಕೌಟಂಬಿಕ ಹಾಕಿ ಹಬ್ಬದಲ್ಲಿ ನೇಮಕಾತಿ ಶಿಬಿರವನ್ನು ಆಯೋಜಿಸಿ ಕೆಲವು ಯುವಕರನ್ನು ಸೇನೆಗೆ ಸೇರಿಸಿದರು.
ಒಂದು ರಾಷ್ಟ್ರ, ಸಮಾಜ ಮತ್ತು ಸಂಸ್ಥೆಯ ಅಭಿವೃದ್ಧಿಯಲ್ಲಿ ಇತಿಹಾಸ ಮತ್ತು ಸಂಪ್ರದಾಯಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಸಮುದಾಯ ಅಥವಾ ಸಂಸ್ಥೆಗಳಿಗೆ ಕೀರ್ತಿ ತಂದ ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿ ಈ ರೆಜಿಮೆಂಟ್ ನ ಸಿಬ್ಬಂದಿಗಳು ಸಹ ಅದನ್ನು ಮುಂದುವರಿಸಲು ಬಯಸುತ್ತಾರೆ. ಸೈನಿಕರು ಯುದ್ಧಭೂಮಿ ಮತ್ತು ಕ್ರೀಡಾ ಮೈದಾನದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾರೆ. ನಮ್ಮ ಪೂರ್ವಜರು ರಚಿಸಿದ ಆಚರಣೆಗಳು ಮತ್ತು ಘಟಕದ ಇತಿಹಾಸವನ್ನು ಮುನ್ನಡೆಸಿಕೊಂಡು ಹೋಗಬೇಕಾಗಿರುವುದು ಇಂದಿನ ಸಮುದಾಯದ ಆದ್ಯ ಕರ್ತವ್ಯವಾಗಿದೆ. ದಕ್ಷಿಣ ಭಾರತದ ವಿವಿಧ ರಾಜ್ಯಗಳಿಂದ ಬಂದ ಎಲ್ಲಾ ಪಡೆಗಳು ಕೂರ್ಗ್ ಬ್ಯಾನರ್ ನ ಅಡಿಯಲ್ಲಿ ಅಸ್ತಿತ್ವಕ್ಕೆ ಬಂದವು. ಇಂದು ಇದರ ಸನಾತನ ಪರಂಪರೆಯನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿವೆ.
37 ಕೂರ್ಗ್ ರೆಜಿಮೆಂಟ್ ನೇಮಕಾತಿ ಶಿಬಿರ
ಈ ರೆಜಿಮೆಂಟ್ ನ ಸದಸ್ಯರಾದ ನೆಲ್ಲಮಕ್ಕಡ ಜಪ್ಪು ಮುದ್ದಯ್ಯರವರನ್ನು ಸಂದರ್ಶಿಸಿ ಇದರ ಬಗ್ಗೆ ಮಾಹಿತಿ ಕಲೆ ಹಾಕಿದಾಗ, 2026ರ ಕೌಟುಂಬಿಕ ಹಾಕಿಯನ್ನು ಚೇನಂಡ ಕುಟುಂಬದವರು ವಹಿಸಲಿದ್ದು ಕೊಡವ ಹಾಕಿ ಅಕಾಡೆಮಿಯ ಅಧೀನದಲ್ಲಿ 37 ಕೂರ್ಗ್ ರೆಜಿಮೆಂಟ್ ನ ನೇಮಕಾತಿ ಶಿಬಿರವನ್ನು ಆಯೋಜಿಸಿದರೆ ಕೊಡವ ಭಾಷಿಕ ಸಮುದಾಯಕ್ಕೂ ಹಾಗೂ ಎಲ್ಲಾ ಅರ್ಹ ಯುವಕರಿಗೂ ಉದ್ಯೋಗ ಸಿಗುತ್ತದೆ ಹಾಗೂ ತಮ್ಮ ಜೀವನ ರೂಪಿಸಿಕೊಳ್ಳಲು ಒಂದು ಅವಕಾಶ ದೊರಕುತ್ತದೆ. ಈ ಸುವರ್ಣಾವಕಾಶವನ್ನು ಚೇನಂಡ ಕುಟುಂಬದವರು ಕಲ್ಪಿಸಿಕೊಟ್ಟಲ್ಲಿ ಕೊಡಗಿನ ಹಾಕಿಗೆ ಮತ್ತಷ್ಟು ಆನೆ ಬಲ ಬಂದಂತಾಗುತ್ತದೆ.
ಇಂದು ಕೊಡಗಿನಲ್ಲಿ ಹಾಕಿ ಮತ್ತು ಸೈನ್ಯ ಇಲ್ಲವಾದಲ್ಲಿ ಕೊಡಗು ಪಾತಾಳ ಲೋಕಕ್ಕೆ ಹೋಗಬಹುದು ಎಂಬುದು ನನ್ನ ಮನದಾಳದ ಮಾತು. ಇದನ್ನು ಜೋಪಾನವಾಗಿ ಕಾಪಾಡುವ ಹೊಣೆ ಕೌಟುಂಬಿಕ ಹಾಕಿ ಹಬ್ಬವನ್ನು ನಡೆಸುವ ಕುಟುಂಬಗಳ ಮೇಲಿದೆ.
ಹಾಕಿ ಕೇವಲ ಆಡಂಭರಕ್ಕೆ ಮಾತ್ರ ಸೀಮಿತವಾಗಬಾರದು. ಹಾಕಿಯನ್ನು ಉಳಿಸಲು ಹಾಗು ಬೆಳೆಸಲು ಪಣ ತೊಡಬೇಕು. ಇಂದಿನ ವರ್ತಮಾನದಲ್ಲಿ ಇದು ಬಹು ಮುಖ್ಯ.