
ಬೆಂಗಳೂರು,ಜು.22(nadubawenews); ಇಲ್ಲಿಯತನಕ ಅರೆ ಭಾಷೆ ಗೌಡ ಸಮಾಜಕ್ಕೆ ಕಾಂಗ್ರೆಸ್ ಪಕ್ಷವೇ ಅನುಕೂಲ ಮಾಡಿದೆ ಅರೆಭಾಷೆಗೌಡ ಸಮಾಜದ ಪ್ರಮುಖರಾದ ಸೂರ್ತಲೆ ಸೋಮಣ್ಣ ಹೇಳಿದ್ದಾರೆ. ಇಂದು ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಶ್ರೀ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರನ್ನು ಅವರ ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾಗಿ, ಇತ್ತೀಚೆಗೆ ಭಾಗಮಂಡಲ ಗೌಡ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಮಾನ್ಯ ಶಾಸಕರು ₹ 1 ಕೋಟಿ ಅನುದಾನ ಮಂಜೂರು ಭರವಸೆ ನೀಡಿರುವುದಕ್ಕೆ ಧನ್ಯವಾದ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಈ ಹಿಂದಿನ ಸರಕಾರದಲ್ಲಿ ಮಾನ್ಯ ಸಿದ್ದರಾಮಯ್ಯರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭ, ಗೌಡ ಸಮಾಜಕ್ಕೆ ₹75 ಲಕ್ಷ ಅನುದಾನ ನೀಡಿದ್ದರು. ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ಮಾತ್ರ ನಮ್ಮ ಜನಾಂಗಕ್ಕೆ ಹೆಚ್ಚಿನ ಅನುದಾನ ಮತ್ತು ಅನುಕೂಲತೆ ಮಾಡಿ ಕೊಟ್ಟಿದೆ ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಮಾಜೀ ಅಧ್ಯಕ್ಷರೂ ಆಗಿರುವ ಸೂರ್ತಲೆ ಸೋಮಣ್ಣ ಸ್ಮರಿಸಿದರು.
ಇದೇ ಸಂದರ್ಭದಲ್ಲಿ, ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ಅರೆಭಾಷೆ ಗೌಡ ಜನಾಂಗಕ್ಕೆ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರದ ಸ್ಥಾಪನೆಗಾಗಿ ಮದೆನಾಡು ಗ್ರಾಮದ ಸರ್ವೆ ನಂಬರ್ 98/1 ರ ಪೈಸಾರಿ ಜಾಗದಲ್ಲಿ ಖಾಲಿ ಇರುವ 13 ಎಕರೆ ಜಾಗವನ್ನು, ಕೊಡಗು ಗೌಡ ಸಮಾಜ – ಮಡಿಕೇರಿ, ಇವರಿಗೆ ಮಂಜೂರು ಮಾಡುವಂತೆಯೂ, ಹಾಗೂ ಸಮಾಜದ ಇನ್ನಿತರ ಹಲವು ಪ್ರಮುಖ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ಮನವಿಯನ್ನು ಸ್ವೀಕರಿಸಿದ ಶಾಸಕರು, ಸಮಾಜದ ಮನವಿಯನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಗೌಡ ಸಮಾಜದ ಪ್ರಮುಖರಾದ ಸೋಮಣ್ಣ, ಗಿರೀಶ್, ಬಿಎಸ್ ಆನಂದ್, ರಾಜೇಂದ್ರ, ಅನಂತ್ ಕುಮಾರ್, ವಸಂತ, ಸಂದೀಪ್, ಸೀತಾರಾಮ್, ಶ್ರೀಮತಿ ದಮಯಂತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.