ಬೆಂಗಳೂರು; ಜು.02, (nadubadenews): ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಿಗೆ ಸ್ಟೆಮಿ ಯೋಜನೆಯನ್ನು ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಇದರಿಂದ ಇನ್ನು ಮುಂದೆ ತಾಲೂಕು ಆಸ್ಪತ್ರೆಗಳಲ್ಲೇ ಹೃದಯಾಘಾತಕ್ಕೆ ಒಳಗಾದವರಿಗೆ ತುರ್ತು ಚಿಕಿತ್ಸೆ ನೀಡಲು ವ್ಯವಸ್ಥೆಯಾಗಲಿದೆ.
ಹೃದಯಾಘಾತದ ಲಕ್ಷಣಗಳಾದ ಎದೆನೋವು, ಉಸಿರಾಟದ ತೊಂದರೆ ಇರುವ ರೋಗಿಗಳು ತಾಲೂಕು ಆಸ್ಪತ್ರೆಗೆ ತೆರಳಿದಾಗ ತಕ್ಷಣವೇ ಇಸಿಜಿ ಪರೀಕ್ಷೆ ನಡೆಸಿ, ಆ ಮಾಹಿತಿಯನ್ನು ಜಯದೇವ ಆಸ್ಪತ್ರೆಯ ಹೃದ್ರೋಗ ತಜ್ಞರಿಗೆ ರವಾನಿಸಲಾಗುತ್ತದೆ. ಜಯದೇವದ ತಜ್ಞ ವೈದ್ಯರು ಈ ಡೇಟಾವನ್ನು ವಿಶ್ಲೇಷಿಸಿ, ರೋಗದ ತೀವ್ರತೆ ಗುರುತಿಸಿ, ತಾಲೂಕು ಆಸ್ಪತ್ರೆ ವೈದ್ಯರಿಗೆ ತ್ವರಿತ ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಅಗತ್ಯವಿದ್ದರೆ, ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು ಈ ಕುರಿತು ಮಾಹಿತಿ ನೀಡಿದ್ದು, ರಾಜ್ಯಾದ್ಯಂತ ಎಲ್ಲಾ ತಾಲೂಕುಗಳಿಗೆ ಸ್ಟೆಮಿ ಯೋಜನೆ ವಿಸ್ತರಣೆ ಮಾಡಲಾಗುತ್ತಿದೆ. ಈ ಮೊದಲು 86 ತಾಲೂಕು ಕೇಂದ್ರಗಳಲ್ಲಿ ಮಾತ್ರವೇ ಸ್ಟೆಮಿ ಯೋಜನೆ ಇತ್ತು. ಮುಂದಿನ ವರ್ಷದೊಳಗೆ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಯೋಜನೆ ಆರಂಭಗೊಳ್ಳಲಿದೆ ಎಂದರು. ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಎಸ್ಟಿ-ಎಲಿವೇಷನ್ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (ಸ್ಟೆಮಿ) ಯೋಜನೆಯನ್ನು 2023ರಲ್ಲಿ ಜಾರಿಗೆ ತಂದಿತು. ಸ್ಟೆಮಿ ಯೋಜನೆಯು ಹೃದಯಾಘಾತದಿಂದ ಆಗುವ ಸಾವಿನ ಪ್ರಮಾಣ ಕಡಿಮೆ ಮಾಡಲು ರೂಪಿಸಲಾದ ಚಿಕಿತ್ಸಾ ಕಾರ್ಯಕ್ರಮವಾಗಿದೆ ಎಂದಿದ್ದಾರೆ.