ಕುಶಾಲನಗರ ಜೂನ್:25, (nadubadenews): ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿಗಳು ತಮ್ಮ ಸಾಲಾ ದಿನಗಳಲ್ಲಿ ಕನ್ನಡ ಅಭ್ಯಾಸ ಮಾಡಿದಾಗ ಮಾತ್ರ ಕನ್ನಡ ಭಾಷೆಯನ್ನು ಉಳಿಸಿ, ಬೆಳಸಲು ಸಾಧ್ಯ. ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಕನ್ನಡಕ್ಕೆ ಆದ್ಯತೆ ಸಿಗಬೇಕು ಎಂದು ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ತಿಳಿಸಿದರು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕುಶಾಲನಗರದ ಪಾತಿಮಾ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸೂದನ ರಾಘವಯ್ಯ ದತ್ತಿ ನಿಧಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಕನ್ನಡದ ಬಗ್ಗೆ ಯಾವುದೇ ತಾತ್ಸಾರ ಭಾವನೆ ಮೂಡದ ಹಾಗೆ ವಾತಾವರಣ ನಿರ್ಮಾಣವಾಗಬೇಕು. ಕನ್ನಡದ ಬದಲಾಗಿ ಬೇರೆ ಯಾವುದೇ ಭಾಷೆಯಿಲ್ಲ. ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನವಿದೆ. ಅದನ್ನು ಬೆಳೆಸುವ ನಿಟ್ಟಿನಲ್ಲಿ ಇಂದಿನ ಯುವ ಪೀಳಿಗೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.
ತುಂಬಾ ಮಕ್ಕಳಿಗೆ ಕಾಲೇಜಿಗೆ ಬಂದರು ಕಾಗುಣಿತ ಗೊತ್ತಿರುವುದಿಲ್ಲ. 10ನೇ ತರಗತಿ ಒಳಗೆ ಕನ್ನಡವನ್ನು ಚೆನ್ನಾಗಿ ಅಭ್ಯಾಸ ಮಾಡಿಸಿದಾಗ ಮಾತ್ರ ಉತ್ತಮ ಗುಣಮಟ್ಟದ ಕನ್ನಡ ನಿರೀಕ್ಷೆ ಮಾಡಬಹುದು. ಕನ್ನಡ ಕಲಿತ ಮೇಲೆ ಬೇರೆ ಯಾವುದೇ ಭಾಷೆಯನ್ನು ಕಲಿಯಿರಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿನಿ ಅಧಿಯಾ ಅವರನ್ನು ಕಾನ್ವೆಂಟ್ ಒಂದರಲ್ಲಿ ಸನ್ಮಾನಿಸಿ ಗೌರವಿಸಲು ಕಾರಣ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುವ ಮಕ್ಕಳಲ್ಲಿ ಕನ್ನಡ ಪ್ರೇಮ ಉತ್ತೇಜಿಸುವ ಉದ್ದೇಶ. ಈಗ ಇಲ್ಲಿರುವ ವಿದ್ಯಾರ್ಥಿಗಳು ಮುಂದಿನ ವರ್ಷದಲ್ಲಿ ಈ ರೀತಿಯ ಗೌರವ ಪಡೆಯಲು ಪೈಪೋಟಿಗೆ ಬರಬೇಕು ಎಂದು ಹೇಳಿದರು.
ಫಾತಿಮಾ ಕಾನ್ವೆಂಟ್ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಚೇತನಾ, ಕಸಾಪ ಕಾರ್ಯದರ್ಶಿ ಎಸ್.ನಾಗರಾಜ್, ಖಜಾಂಚಿ ಕೆ.ವಿ.ಉಮೇಶ್, ನಿರ್ದೇಶಕರಾದ ಬಿ.ಸಿ.ದಿನೇಶ್, ಎಂ.ಎನ್.ಕಾಳಪ್ಪ, ಸೂದನ ರತ್ನಾವತಿ, ಹೆಬ್ಬಾಲೆ ಹೋಬಳಿ ಕಸಾಪ ಅಧ್ಯಕ್ಷ ಎಂ.ಎನ್.ಮೂರ್ತಿ, ಕಾರ್ಯದರ್ಶಿ ಸುಬ್ರಹ್ಮಣ್ಯ, ಪಾತಿಮಾ ಶಾಲೆಯ ಶಿಕ್ಷಕರಾದ ಸಂತೋಷ್, ಮಂಜುಳಾ ಇತರರು ಉಪಸ್ಥಿತರಿದ್ದರು.