ಮಡಿಕೇರಿ ಮೇ,21(Nadubade News): ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಮೇ.೨೩ ರಿಂದ ೨೬ರ ವರೆಗೆ ಮಾವು ಮತ್ತು ಹಲಸು ಹಣ್ಣಿನ ಮೇಳ ನಡೆಯಲಿದೆ ಎಂದು ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕೊಡಗು ಜಿಲ್ಲಾ ಹಾಪ್ ಕಾಮ್ಸ್ ಮುಖ್ಯ ಕಚೇರಿಯ ಆವರಣದಲ್ಲಿ ಅತ್ಯಪರೂಪದ ವಿವಿಧ ಬಗೆಯ ಮಾವು ಮತ್ತು ಹಲಸಿನ ಹಣ್ಣಿನ ಮೇಳ ನಡೆಯಲಿದೆ. ಬೆಳೆಗಾರರಿಗೆ ತಾವು ಬೆಳೆದ ಹಣ್ಣುಗಳ ಮಾರಾಟಕ್ಕೆ ಅನುವು ಮಾಡಿಕೊಡುವ ಮತ್ತು ವಿವಿಧ ತಳಿಯ, ವಿಭಿನ್ನ ರುಚಿಯ ಮಾವು, ಹಲಸನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ ಮೇಳವನ್ನು ಆಯೋಜಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇ೨೩ ರಂದು ಬೆಳಗ್ಗೆ ೧೦.೩೦ ಗಂಟೆಗೆ ನಡೆಯುವ ಮೇಳವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕೊಡಗು ಜಿ.ಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ತೋಟಗಾರಿಕೆ ಉಪನಿರ್ದೇಶಕ ಎಚ್.ಆರ್.ಯೋಗೇಶ್ ಹಾಗೂ ಕೊಡಗು ಜಿಲ್ಲಾ ಹಾಪ್ ಕಾಮ್ನ ಅಧ್ಯಕ್ಷರು ಮತ್ತು ಆಡಳಿತಮಂಡಳಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಕೊಡಗು ಜಿಲ್ಲಾ ಹಾಸ್ಕಾಮ್ಸ್ ತೋಟಗಾರಿಕೆಯ ಇಲಾಖೆಯ ಅಂಗ ಸಂಸ್ಥೆಯಾಗಿದ್ದು, ಇದು ಸಹಕಾರ ಇಲಾಖೆ ಮತ್ತು ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾಮಂಡಳಿಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಮಡಿಕೇರಿ ನಗರದ ಮುಖ್ಯರಸ್ತೆಯಲ್ಲಿರುವ ಅಂಚೆ ಕಚೇರಿಯ ಮುಂಭಾಗದಲ್ಲಿ ಹಾಪ್ ಕಾಮ್ಸ್ ಕೇಂದ್ರ ಕಚೇರಿ ಹಾಗೂ ಮಾರಾಟ ಮಳಿಗೆ ಇದ್ದು, ಈಗಾಗಲೇ ರೈತರಿಂದ ನಿಗದಿತ ದರದಲ್ಲಿ ಹಣ್ಣು, ತರಕಾರಿಯನ್ನು ಖರೀದಿಸಿ ಗ್ರಾಹಕರಿಗೆ ಅರ್ಹ ದರದಲ್ಲಿ ವಿತರಿಸಲಾಗುತ್ತಿದೆ. ಅಲ್ಲದೇ ಸಂಘದಲ್ಲಿ ಒಟ್ಟು ೧೪೯೦ ಸದಸ್ಯರಿದ್ದು, ಕಳೆದ ೧೪ ವರ್ಷಗಳಿಂದ ಸತತವಾಗಿ ಲಾಭದಲ್ಲಿ ಮುನ್ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಮೇಳದಲ್ಲಿ ಮಾವು ಪ್ರಿಯರಿಗೆ ಮಾವಿನ ಹಣ್ಣಿನ ವಿವಿಧ ತಳಿಗಳಾದ ಮಲಗೋಬ, ಸಿಂದೂರ, ರಸಪುರಿ, ತೋತಪುರಿ, ಬಾದಾಮಿ, ಮಲ್ಲಿಕ, ದಶೇರಿ ತಳಿಗಳ ಜತೆಗೆ ಸ್ಥಳೀಯ ಕಾಡು ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ಯೋಗ್ಯ ಬೆಲೆಗೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿ ೧೫ ಮಳಿಗೆಗಳಿಗೆ ಅವಕಾಶ ನೀಡಲಾಗಿತ್ತು. ಈ ಬಾರಿ ೨೦ ಮಳಿಗೆಗೆ ಅವಕಾಶ ನೀಡಲಾಗಿದ್ದು, ಈಗಾಗಲೇ ೨೦ ಮಳಿಗೆಗಳಿಗೆ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಅಂದು ತುಮಕೂರು, ಕೋಲಾರ, ರಾಮನಗರ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ರೈತರು ಹಣ್ಣುಗಳನ್ನು ಮಾರಾಟ ಮಾಡಲಿದ್ದಾರೆ ಎಂದು ವಿವರಿಸಿದರು.
ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಬಿ.ಎಸ್.ಮುತ್ತಪ್ಪ ಮಾತನಾಡಿ, ಇಂದು ಮಾವಿನ ಕಾಯಿಯನ್ನು ಬೇಗನೆ ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಸೇರಿದಂತೆ ಹಲವು ವಿಷಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಇಂತಹ ಹಣ್ಣುಗಳ ಸೇವನೆಯಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ ಅವರು, ಈ ಮಾವು ಮೇಳದಲ್ಲಿ ನೈಸರ್ಗಿಕವಾಗಿ ಮಾಗಿಸಿದ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಲಭ್ಯವಾಗಬೇಕು ಎಂಬ ನಿಟ್ಟಿನಲ್ಲಿ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಾಪ್ ಕಾಮ್ಸ್ ಸಿಇಓ ರೇಷ್ಮೆ ಗಿರೀಶ್, ನಿರ್ದೇಶಕರಾದ ಕೆ.ಎಂ.ಮನೋಹರ್, ಬೇಬಿ ಪೂವಯ್ಯ ಉಪಸ್ಥಿತರಿದ್ದರು.