ಮಡಿಕೇರಿ ಆ.14(Nadubadenews): ಸಂಪಾಜೆ ವಲಯದ ಚೆಂಬು ಗ್ರಾಮ ಪಂಚಾಯಿತಿಯ ದಬ್ಬಡ್ಕ, ಕಲ್ಲಾಳ, ಯು.ಚೆಂಬು ಗ್ರಾಮಗಳ ಆನಹಳ್ಳ, ಕಾಂತಬೈಲು, ಊರುಬೈಲು, ಮಾರ್ಪಡ್ಕ, ನಿಡಂಜಿ, ಕೊಪ್ಪ, ನಡುಬೆಟ್ಟು, ಕದಂಬಾಡಿ ಹೊದಟ್ಟಿ, ಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದ ಆನೆಗಳ ಹಾವಳಿ ಹೆಚ್ಚಾಗಿದ್ದು ವಿಪರೀತ ಕೃಷಿ ನಷ್ಟವಾಗಿರುತ್ತದೆ;
ಈ ಭಾಗದ ರೈತರು ವಿಶೇಷವಾಗಿ ತೆಂಗು, ಬಾಳೆ, ಅಡಿಕೆ, ಕೊಕೋ, ರಬ್ಬರ್ ಕೃಷಿಗಳಿಗೆ ಅವಲಂಬಿತರಾಗಿದ್ದು, 11 ಎನ್ಸರ್ ಗಳು ಚಾಲ್ತಿಯಲ್ಲಿದ್ದು, ಪಟ್ಟಿ ಘಾಟ್ ಮೀಸಲು ಅರಣ್ಯದ ಸಮೀಪ ಇರುತ್ತದೆ ಮಾನವ-ವನ್ಯಪ್ರಾಣಿ ಸಂಘರ್ಷ ತಡೆಗಟ್ಟಲು ನಿಡಿಂಜಿಯಿಂದ ಆನೆಹಳ್ಳದವರೆಗೆ 02.00 ಕಿ.ಮೀ ಆನ ವಿರೋಧಕ ಕಂದಕವನ್ನು ನಿರ್ಮಾಣ ಮಾಡಲಾಗಿರುತ್ತದೆ. ಸದರಿ ಪುದೇಶವು ತೀವು ಇಳಿಜಾರು ಪ್ರದೇಶವಾಗಿದ್ದು, ನಿರಂತರವಾಗಿ ಆನೆ ಬರುವ ಸ್ಥಳಗಳಲ್ಲಿ ಆರ್.ಸಿ.ಸಿ ಪಿಲ್ಲರ್ ಕಾಮಗಾರಿ ಕೈಗೊಂಡಿದ್ದು, ಆನೆಗಳು ಇಪಿಟಿ ಒಳಗೆ ಕಾಡಿನಿಂದ ಜಾರಿ ಇಳಿದು ಮತ್ತೊಂದು ಭಾಗದ ಮಣ್ಣನ್ನು ಕಾಲಿನಿಂದ ಜಡಿದು ಸಂಗ್ರಹಿಸಿ ದಿಬ್ಬ ಮಾಡಿ ಪಿಲ್ಲರ್ ಗಳ ಬದಿಯಿಂದ ಗ್ರಾಮಕ್ಕೆ ನುಗ್ಗಿ ಬರುತ್ತದೆ. ಕಾಡಾನೆಗಳು ಪಕ್ಕದಲ್ಲೆ ಇರುವ ಪಟ್ಟಿ ಘಾಟ್ ಮೀಸಲು ಅರಣ್ಯದಿಂದ ಊರುಗಳಿಗೆ ಲಗ್ಗೆಯಿಟ್ಟು ಕೃಷಿಗಳನ್ನು ತಿಂದು ಧ್ವಂಸಗೊಳಿಸಿ ಬೆಳಗಿನ ಜಾವ ಕಾಡಿಗೆ ವಾಪಾಸ್ಸಾಗುತ್ತದೆ.
ಇದರಿಂದ ಕಂಗಾಲಾದ ಸ್ಥಳೀಯ ಗ್ರಾಮಸ್ಥರು, ಕರ್ನಾಟಕ ರಾಜ್ಯ ರೈತ ಸಂಘ, ಸಂಪಾಜೆ ಬೆಳೆಗಾರರ -ಸಹಾಯಕ ಸಂಘ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮಾನವ ಸಾವಿಗೆ ಕಾರಣವಾದ ಕಾಡಾನೆಯನ್ನು ಸೆರ ಹಿಡಿಯುವಂತೆ ಪ್ರತಿಭಟನೆ ನಡೆಸಿದ್ದರು. ಶಾಸಕರಾದ ಎ .ಎಸ್ ಪೊನ್ನಣ್ಣ ಕಾಡಾನೆಯನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಮಾನವನ ಸಾವಿಗೆ ಕಾರಣವಾದ ಕಾಡಾನೆಯನ್ನು ಸೆರೆಹಿಡಿಯದಿದ್ದಲ್ಲಿ, ಸದರಿ ಆನೆಯು ಹಳ್ಳಿ / ಪಟ್ಟಣಗಳಿಗೆ ನುಗ್ಗಿ ಇನ್ನೂ ಹೆಚ್ಚಿನ ಅನಾಹುತ ಉಂಟುಮಾಡಿ, ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕ / ಆಡಳಿತ ಹಿತದೃಷ್ಟಿಯಿಂದ ಸದರಿ ಆನೆಯನ್ನು ಸೆರೆ ಹಿಡಿದು ಸ್ಮಳಾಂತರಿಸುವುದು ಸೂಕ್ತವೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ಪ್ರಾದೇಶಿಕ ವಿಭಾಗ, ಮಡಿಕೇರಿಗೆ ಕೋರಿಕೆ ಸಲ್ಲಿಸಿದ್ದರು.
ಇದನ್ನು ಪರಿಗಣಿಸಿ ಆನೆಯನ್ನು ಸೆರೆ ಹಿಡಿದು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ದುಬಾರೆ / ಹಾರಂಗಿ ಆನೆ ಬಿಡಾರದಲ್ಲಿ ಲಭ್ಯವಿರುವ ನುರಿತ ಆನೆಗಳನ್ನು ಬಳಸಿಕೊಂಡು ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿ ಮತ್ತು ಸ್ಥಳೀಯ ಜನರಿಗೆ ಯಾವುದೇ ಅಪಾಯವಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮತ್ತು ಕಾರ್ಯಚರಣೆ ನಂತರ ವರದಿ ಸಲ್ಲಿಸತಕ್ಕದ್ದು.ಸಕ್ಷಮ ಪ್ರಾಧಿಕಾರದ ಅನುಮೋದನೆ ಮೇರೆಗೆ ಆದೇಶ ನೀಡಲಾಗಿದೆ.