ಮಡಿಕೇರಿ, ಮೇ 21(Nadubade News): 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪ ಕೊಡಗಿನ ಜನತೆಯನ್ನು ಅಕ್ಷರಶಃ ನಡುಗುವಂತೆ ಮಾಡಿದ್ದು, ಸಣ್ಣ ಗಾಳಿ ಮಳೆ ಗುಡುಗು ಬಂದರೂ ಜನ ಹೆದರುವಂತೆ ಮಾಡಿದೆ. ಕಳೆದ ಎರಡು ವರ್ಷಗಳಲ್ಲಿ ಅಂತಹ ಭಾರಿ ಸಮಸ್ಯೆ ಏನೂ ಆಗಿಲ್ಲವಾದರೂ, ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಆತಂಕಕ್ಕೆ ಕಾರಣವಾದ ತಜ್ಞರ ವರದಿ
ಭಾರತೀಯ ಭೂಗರ್ಭ ಶಾಸ್ತ್ರಜ್ಞರು ಸರ್ಕಾರಕ್ಕೆ ಒಂದು ವರದಿ ಸಲ್ಲಿಸಿದ್ದು, ಇದು ಕೂಡ ಜನತೆಯ ಆತಂಕ ಹೆಚ್ಚಿಸಿದೆ. ಈ ಹಿಂದೆ ಪ್ರಾಕೃತಿಕ ವಿಕೋಪ ಸಂಭವಿಸಿದ್ದ ಸ್ಥಳದಲ್ಲೇ ಮತ್ತೆ ಅಪಾಯದ ಸಾಧ್ಯತೆ ಇದೆ ಎಂದು ಅವರು ವರದಿಯಲ್ಲಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಕೊಡಗಿನ 43 ಪ್ರದೇಶಗಳು ಅಪಾಯಕಾರಿ
ಕೊಡಗಿನಲ್ಲಿ 43 ಪ್ರದೇಶಗಳು ಅಪಾಯಕಾರಿ ಎಂದು ಎಚ್ಚರಿಕೆ ನೀಡಲಾಗಿದೆ. ಜೊತೆಗೆ, ಹಟ್ಟಿಹೊಳೆ ಕಾವೇರಿ ನದಿ ಹಾಗೂ ಲಕ್ಷ್ಮಣ ತೀರ್ಥ ನದೀಯ ತಟದಲ್ಲಿ ಇರುವವರು ಎಚ್ಚರ ವಹಿಸಬೇಕು ಎಂದು ತಜ್ಞರು ಎಚ್ಚರಿಕೆ ನೀಡಿರುವುದಾಗಿ ಕೊಡಗು ಜಿಲ್ಲಾಧಿಕಾರಿ ವೆಂಕಟರಾಜ ತಿಳಿಸಿದ್ದಾರೆ.
ತಜ್ಞರು ಎಚ್ಚರಿಕೆ ನೀಡಿರುವ ಪ್ರದೇಶಗಳಲ್ಲಿ ಅಗತ್ಯ ಸೇವೆಗಳು ಸುಲಭವಾಗಿ ಲಭ್ಯವರುವಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಪೊಲೀಸ್ ಇಲಾಖೆ, ಅಗ್ನಿಶಾಮಕ ಸಿಬ್ಬಂದಿ, ನೋಡಲ್ ಅಧಿಕಾರಿಗಳು ಹಾಗೂ ಸ್ವಯಂ ಸೇವಕರನ್ನು ಈಗಲೇ ನೇಮಿಸಿಕೊಳ್ಳಲಾಗಿದೆ. ಜೊತೆಗೆ ಸಂಭಾವ್ಯ ಪ್ರವಾಹ ಎದುರಾಗುವ ಏರಿಯಾದ ಸುತ್ತ ಮುತ್ತ 100 ಕ್ಕೂ ಹೆಚ್ಚು ಆಶ್ರಯ ಕೇಂದ್ರಗಳನ್ನು ಆರಂಭಿಸಲು ಚಿಂತನೆ ನಡೆಸಿದ್ದು, ಎಲ್ಲಾ ಮೂಲಭೂತ ಸೌಕರ್ಯ ಸಿದ್ಧಪಡಿಸಿಕೊಳ್ಳಲಾಗಿದೆ. ಜನತೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಇದೇ ತಿಂಗಳು 27 ರಂದು ಮುಂಗಾರು ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಜೂನ್ ಮೊದಲ ವಾರದಿಂದಲೇ ಕೊಡಗಿನಲ್ಲಿ ಮುಂಗಾರು ಮಳೆಯನ್ನು ನಿರೀಕ್ಷಿಸಬಹುದಾಗಿದೆ.