– ಚಾಮೆರ ದಿನೇಶ್ಬೆಳ್ಯಪ್ಪ
ಮನೆಯೆಂಬ ಪಾಠಶಾಲೆಯಿಂದ ಕಲಿಕೆಯೆಡೆಗೆ ಹೆಜ್ಜೆ ಇಟ್ಟಾಗ ದೊರಕುವ ಅಂಗನವಾಡಿ ಎಂಬ ಮೊದಲ ಗುರುಕುಲದಲ್ಲಿನ ಟೀಚರ್ ಬಹುಪಾಲು ವಿದ್ಯಾರ್ಥಿಗಳಿಗೆ ಪ್ರಥಮ ಗುರುವಾಗಿರುತಿದ್ದರು. ನನಗೂ ಅಂತಃದೊಂದು ಗುರವಾಗಿ ಸಿಕ್ಕಿ, ತನ್ನ ವೃತ್ತಿಯುದ್ದಕ್ಕೂ, ಆ ನಂತರವೂ ಅತ್ಯಂತ ಪ್ರೀತಿಯಿಂದ, ಕಾಳಜಿಯಿಂದ ಆಶೀರ್ವಾದ ಮಾಡುತ್ತಿದ್ದ ಅತ್ಯಂತ ಗೌರವಾನ್ವಿತ ಟೀಚರ್ ನಿನ್ನೆ ತಮ್ಮ ಇಹಲೋಕ ಪ್ರಯಾಣವನ್ನು ಮುಗಿಸಿ, ಭೂಗರ್ಭದ ಒಡಲು ಸೇರಿದರು. ಅವರಿಗಾಗಿ ಅಕ್ಷರ ಪೋಣಿಸದಿದ್ದರೆ ಕಲಿತ ವಿದ್ಯೆಗೇ ಅವಮಾನ ಮಾಡಿದಂತೆಯೇ ಸರಿ.
ಅದಕ್ಕೂ ಮುನ್ನ ಆ ಮಹಾತಾಯಿ ಸಾವಿರಾರು ವಿದ್ಯಾರ್ಥಿಗಳಿಗೆ ಸರಿಸುಮಾರು ನಾಲಕ್ಕು ದಶಕಗಳ ಕಾಲ ತನ್ನ ಗರಡಿಯಲ್ಲಿ ಅಕ್ಷರಾಭ್ಯಾಸ ಮಾಡಿಸಿದ ಆ ಊರಿನ ಬಗ್ಗೆ ಹೇಳಲೇ ಬೇಕು. ನಮ್ಮಲ್ಲಿ ಎಷ್ಟೋ ಜನ ಸ್ವರ್ಗ ಮತ್ತು ಅದರ ಅನುಭವದ ಬಗ್ಗೆ, ಅಲ್ಲಿಯ ಐಷಾರಾಮಿ ಆಡಂಬರದ ಬದುಕಿನ ವ್ಯವಸ್ಥೆಯ ಬಗ್ಗೆ ವರ್ಣಿಸುವುದನ್ನು ಕೇಳಿರುತ್ತೇವೆ. ಆದರೆ ನಾವು ನಿಜ ಸ್ವರ್ಗದಲ್ಲೇ ನಮ್ಮ ಬಾಲ್ಯದ ಕೆಲವು ವರುಷಗಳನ್ನು ಕಳೆದವರು. 70,80ರ ದಶಕದಲ್ಲಿ ಆ ಊರಿನ ಹೆಸರು ಕೇಳಿದರೆ ಹೊರ ಪ್ರಪಂಚಕ್ಕೇನೋ ಹೀಯಾಳಿಕೆ, ತಾತ್ಸಾರ, ಕಡೆಗಣನೆ. ಕಾರಣ ಅಭೀವೃದ್ದಿ, ನಾಗರೀಕ ಸೌಲಭ್ಯ ಎಂಬ ಆಧುನಿಕಾಸುರನಿಂದ ನೂರಾರು ಮಾರು ದೂರ ಇದ್ದ ಊರದು. ಎಷ್ಟರ ಮಟ್ಟಿಗೆ ಎಂದರೆ ಸತ್ತರೂ ಹೊರಬೇಕು, ಹೆತ್ತರೂ ಹೊರಬೇಕು. ಇನ್ನು ಇತರ ಸೌಲಭ್ಯಗಳ ಕಲ್ಪನೆಯೇ ದೂರ ಬಿಡಿ. ಆದರೂ ಆ ಊರಿನಲ್ಲೋಂದು ಅಂಗನವಾಡಿ ಮತ್ತು ಶಾಲೆ ಇತ್ತು.
ಇಂದೊಮ್ಮೆ ಕುಳಿತು ಯೋಚಿಸಿದರೆ ಅಂದಿನ ಕಾಲದಲ್ಲಿ ಅದು ನಿಜವಾದ ಸ್ವರ್ಗ, ದೇವಲೋಕ. ಯಾವುದೇ ಘಾಸಿಯಾಗದ ಪ್ರಕೃತಿ ಸೌಂದರ್ಯ, ಮಳೆ ಬರಲಿ, ಬಿಸಿಲಿರಲಿ, ಚಳಿಯಿರಲಿ ಯಾವುದಕ್ಕೂ ಅಂಜದ, ಅಲುಗಾಡದ ಜೀವನ ಶೈಲಿ. ಆ ಊರಿನ ಬಹುಪಾಲು ಜನ, ನಗರ, ಪಟ್ಟಣವನ್ನೇ ನೋಡಿದವರಲ್ಲ. ಮತ್ತೊಂದಷ್ಟು ದೈಹಿಕ ಸಮರ್ಥರು ಆಗೊಮ್ಮೆ ಈಗೊಮ್ಮೆ ಅಗತ್ಯ ವಸ್ತಗಳಿಗಾಗಿ ಪೇಟೆಗೆ ಹೋಗಿ ಬರುತಿದ್ದರು. ಅಲ್ಲಿಗೆ ವಸ್ತುಗಳು ಅಂತ ಅಗತ್ಯ ಬರುತಿದ್ದದ್ದೇ, ಉಪ್ಪು ಮತ್ತು ಅಡುಗೆ ಎಣ್ಣೆ ಮಾತ್ರ. ಉಳಿದಂತೆ ಎಲ್ಲಾ ಅಗತ್ಯಗಳನ್ನೂ ತಾವೇ ಉತ್ಪಾದಿಸಿಕೊಳ್ಳುತಿದ್ದರು. ಇನ್ನು ಮಳೆಗಾಲ ಶುರುವಾದರೆ ಮುಂದಿನ ನಾಲ್ಕೈದು ತಿಂಗಳಂತು ಹೊರ ಪ್ರಪಂಚದ ಸಂಪರ್ಕ ಸಂಪೂರ್ಣ ಕಡಿತಗೊಳ್ಳುತಿತ್ತು. ಪರಸ್ಪರ ಸಹೋದರತ್ವ, ಸಂಬಂಧಗಳಿಂದ ತಮ್ಮೊಳಗೇ ತಮ್ಮ ಪ್ರಪಂಚವನ್ನು ಕಿಚ್ಚು ಹೆಚ್ಚುಗಳಿಲ್ಲದೆ ಪಾಲಿಸುತಿದ್ದರು, ಇದೆಲ್ಲಕ್ಕಿಂತ ಹೆಚ್ಚಾಗಿ ಊರಿಗೆ ಉರೇ ದೈವಿಕ ಆಚರಣೆ ಮತ್ತು ನಂಬಿಕೆಯ ಪಾಲನೆಯಲ್ಲಿ ತಲ್ಲಿನವಾಗಿತ್ತು. ಆ ಊರಿನ ಹೆಸರು ಮಡಿಕೇರಿ ತಾಲೂಕು ಗಾಳಿಬೀಡು ಪಂಚಾಯತಿಗೆ ಒಳಪಡುತ್ತದೆ. ಈ ಗ್ರಾಮ ಯಾವುದರಲ್ಲೂ ಯಾರಿಗೂ ಕಮ್ಮಿಯಿರಲಿಲ್ಲ. ನಿಜ ದೇವಭೂಮಿ ಅದರಲ್ಲೂ ಕೊಡವ ಪದ್ದತಿಯ ಮೂಲ ಆಚರಣೆಯ ಹಿರಿಮೆಯನ್ನು ಇಂದಿಗೂ ಕಾಪಾಡಿ ಆಚರಿಸುತ್ತಿರುವ ಹಿರಿಮೆಯೂ ಇದೇ ಊರಿಗೆ ಸಲ್ಲಬೇಕು. ನಾ ಹೇಳಿದ್ದು ಕಲ್ಪನಾ ಕಥೆಯೂ ಅಲ್ಲ, ಯಾವುದೋ ಜಮಾನದ ಇತಿಹಾಸವೂ ಅಲ್ಲ. ಕೇವಲ 35ವರ್ಷಗಳ ಹಿಂದೆ ನಾವೇ ಖುದ್ದು ಅನುಭವಿಸಿ, ಆಶ್ವಾಧಿಸಿದ ವಾಸ್ತವ ಸತ್ಯ ಜೀವನ. ಅದು ನನ್ನ ಅಮ್ಮನ ತವರೂರು. ಅದಕ್ಕಾಗಿಯೇ ನನಗೂ ಆ ಊರಿನ ಬಗ್ಗೆ ವ್ಯಾಮೋಹ. ಆ ಪುಣ್ಯಭೂಮಿಯಲ್ಲಿದ್ದ ಅಂಗನವಾಡಿಯ ಟೀಚರ್ ಆಗಿದ್ದವರೇ ನನ್ನ ಮೊದಲ ಅಧೀಕೃತ ಗುರುಗಳು.
ಅವರನ್ನು ತಂಬುಕುತ್ತಿರ ಪಾರ್ವತಿ ಎಂದರೆ ಹೊರಗಿನವರಿಗೆ ಹೋಗಲಿ ನೆರೆಮನೆಯವರಿಗೂ ಗೊತ್ತಾಗಲಿಕ್ಕಿಲ್ಲ. “ಕೋಲೆಗೊಂಡಿ ಟೀಚರ್” ಎಂದರೆ ಬಹುಷಃ ಆ ಭಾಗದಲ್ಲಿ ಗೊತ್ತಿಲ್ಲ ಎನ್ನುವ ಪದ ಕೇಳಲು ಸಾಧ್ಯವೇ ಇಲ್ಲ. ಹೌದು ಆ ಹೆಸರಿನಲ್ಲೇ ಒಂದು ಸ್ನೇಹ ತುಂಬಿದ ಪ್ರೀತಿ, ಪ್ರತಿಯೊಬ್ಬರನ್ನೂ “ನಾಡ ಕುಂಞೀ ಎನ್ನುತಿದ್ದ ತಾಯಿ ಮಮತೆ, ಕನ್ನಡಕದೊಳಗಿನ ನಿಷ್ಕಲ್ಮಶವಾದ ಕಣ್ಣುಗಳು, ತೆಳು ಶರೀರವಾದರೂ ಸ್ಪಟಿಕದಂತ ಚಟುವಟಿಕೆ, ಹೀಗೇ ವರ್ಣೀಸುತ್ತಾ ಹೋದರೆ ಅವರಿಗೆ ಅವರೇ ಸಾಟಿ. ಮೇಲೆ ಉಲ್ಲೇಖಿಸಿದಂತೆ ಅಂದಿನ ಕಾಲದಲ್ಲಿ ಆಧುನಿಕ ಪ್ರಪಂಚದಿಂದ ತೀರಾ ಹೊರಗಿದ್ದ ಹಮ್ಮಿಯಾಲದಲ್ಲಿ ಅಕ್ಷರ ಕಲಿತ ಹಿರಿಯರ ಸಂಖ್ಯೆಯೂ ತುಸು ಕಡಿಮೆಯೇ. ಆದರೆ ಕನ್ನಿಗಂಡ ಒಕ್ಕದಿಂದ, ತಂಬುಕುತ್ತಿರ ಒಕ್ಕಕ್ಕೆ ಬಾಳ್ಬಾಕೆ ಬಂದ ಪಾರ್ವತಿ ಅಲಿಯಾಸ್ ಕೋಲೆಗೊಂಡಿ ಟೀಚರ್ (ಕೋಲೆಗೊಂಡಿ ಎಂದರೆ ಅವರ ಮನೆತನದವರು ನೆಲೆಸಿದ್ದ ಜಾಗದ ಹೆಸರು) ಬಂದ ಮೇಲೆ, ಊರಿನ ಬಹುಪಾಲು ಎಲ್ಲರೂ ಅಕ್ಷರಸ್ತೆರೆ ಆದರು. ಅವರು ಕೇವಲ ಅಂಗನವಾಡಿಗೆ ಟೀಚರ್ ಆಗಿರದೆ, ಸೈನ್ಯದಲ್ಲಿದ್ದ ಯೋಧರು ಮೂರು ನಾಲ್ಕು ತಿಂಗಳಿಗೊಮ್ಮೆ ಮನೆಗಳಿಗೆ ಬರೆಯುತಿದ್ದ ಪತ್ರಗಳನ್ನು, ಹಿರಿಯರಿಗೆ ಓದಿ ಹೇಳಿ, ಇವರ ಅಭಿಪ್ರಾಯನ್ನು ಇನ್ಲ್ಯಾಂಡ್ ಲೆಟರ್ನಲ್ಲಿ ಅಚ್ಚೊತ್ತಿದಂತಿದ್ದ ತಮ್ಮ ಹಸ್ತಾಕ್ಷರದಿಂದ ಬರೆದು ಪೋಸ್ಟಿಗೆ ಕಳಿಸುವಲ್ಲಿಂದ, ಇತರ ಸರ್ಕಾರಿ ಕಾರ್ಯಗಳಲ್ಲಿಯೂ ನೆರವಾಗುತ್ತಿದ್ದರು.
ಇನ್ನು ಅಂಗನವಾಡಿಯಲ್ಲಿ ನಾವು ಟೀಚರ್ ಜೊತೆಗಿದ್ದೆವಾ ಅಮ್ಮನ ಜೊತೆಗಿದ್ದೆವಾ ಎನ್ನುವಷ್ಟು ಮಮತೆಯನ್ನು ಪ್ರತಿಯೊಬ್ಬರಿಗೂ ತೋರಿಸುತಿದ್ದರು. ನಾನು ಹಮ್ಮಿಯಾಲಕ್ಕೆ ಸುಮಾರು 25 ಕಿಲೋಮೀಟರ್ ದೂರದ ಮಂಕ್ಯದವನಾದರೂ ಅಜ್ಜಿಮನೆಯಲ್ಲಿಯೇ ಅಂಗನವಾಡಿ ವಿದ್ಯಾಭ್ಯಾಸ. ಅಮ್ಮ–ಅಪ್ಪ ದೂರದಲ್ಲಿದ್ದರೂ ಅಜ್ಜಿಮನೆಯಿಂದ ಅಂಗನವಾಡಿಗೆ ಹೋದರೆ ಟೀಚರ್ ಮತ್ತು ಉಪ್ಪಿಟಜ್ಜಿಯ ಜೊತೆಯಲ್ಲೇ ಆಟ, ಪಾಠ, ತುಂಟಾಟ ಎಲ್ಲಾ. ಟೀಚರ್ ಹೇಳುತಿದ್ದ ಪದ್ಯ, ಕಥೆ, ಮಾಡಿಸುತಿದ್ದ ನೃತ್ಯ, ಸ್ಲೇಟಿನ ಮಣಿ ಲೆಕ್ಕ, ಶಾಲಾ ಅವರಣದೊಳಗೇ ಅಂಗನವಾಡಿಯೂ ಇದ್ದ ಕಾರಣ, ನಮ್ಮ ಹಿರಿಯರೊಂದಿಗೆ ಆಟ, ಕಿರುಚಾಟ, ಅಂದಿನ ಸರ್ಕಾರ ಮಕ್ಕಳಿಗಾಗಿ ನೀಡುತಿದ್ದ ಪೌಷ್ಟಿಕಾಂಶದ ಪುಡಿಯಿಂದ ತಯಾರಿಸಿದ ರಾಗಿ ಮುದ್ದೆಯಂತ ಉಪ್ಪಿಟ್ಟು ಉಂಡೆಯ ತಿನಿಸು, ಮದ್ಯಾಹ್ನ ದೊಡ್ಡವರೊಂದಿಗೆ ಮಾನಿಪೊಳೆ ಕರೆಯಲ್ಲಿ ಊಟ, ಅಪರೂಪಕೊಮ್ಮೊಮ್ಮೆ ದೇವಸ್ಥಾನ ಬಳಿಯ ಕೊಲ್ಲಿಯಲ್ಲಿ ಮೀನುಗಳ ದರ್ಶನ. ಈ ಎಲ್ಲದರ ನಡುವೆ ಅಷ್ಟೂ ಮಕ್ಕಳು ದಿನದಲ್ಲಿ ಕನಿಷ್ಟ ಹತ್ತಿಪ್ಪತ್ತು ಬಾರಿ “ಟೀಚರ್ ಅಂವೊ ಹೊಜ್ಜತ್, ಇಂವೊ ಗಿಂಟ್ಚಿ, ಅವೊ ಮಾಂದ್ಚಿ, ಇವ ಕಡ್ಚತ್, ಅಂವೊ ಸೌಟ್ಚಿ…….” ಹೀಗೆ ದೂರುಗಳ ಸರಮಾಲೆಯನ್ನೇ ಎಳೆದು ಹಾಕಿದರೂ ಟೀಚರ್ ಮಾತ್ರ ಕಣ್ಣೊಟದಲ್ಲೇ ಎಲ್ಲವನ್ನೂ, ಎಲ್ಲರನ್ನೂ ನಿಭಾಯಿಸಿ ಸಂಬಾಳಿಸುತಿದ್ದರು. ಒಮ್ಮೆ ಅಂಗನವಾಡಿ ಮಕ್ಕಳ ತೂಕ ಮಾಡಲು ಇಲಾಖೆಯಿಂದ ಬಂದಿದ್ದರು. ಊರಿಂದ ಅಮ್ಮನೂ ಬಂದಿದ್ದರೂ, ಚಿಕ್ಕಮ್ಮಂದಿರೂ, ಮಾವಂದಿರು ಎಲ್ಲಾ ಇದ್ದರು, ಆ ತೂಗುವ ಯಂತ್ರ ಒಂದು ರೀತಿಯ ಉಯ್ಯಾಲೆಯಂತಿತ್ತು. ಎಲ್ಲರನ್ನು ಎತ್ತಿ ಅದರ ಮೇಲೆ ಕೂರಿಸುತಿದ್ದರು ಹೆಚ್ಚು ತೂಕ ಇದ್ದವರಿಗೆ ಬಹುಮಾನವೂ ಇತ್ತು. ತಕ್ಕಡಿಯನ್ನು ತೇತಾಗಿದ್ದ ನೋಡಿ ನಾನು ಎಲ್ಲರನ್ನ ಯಾಮಾರಿಸಿ ತಪ್ಪಿಸಿಕೊಂಡು ಓಡಿದ್ದೆ. ಅಲ್ಲಿದ್ದವರೆಲ್ಲ ಸೇರಿ ಕೋಳಿ ಹಿಡಿಯಲು ಹೊಂಚು ಹಾಕುವರಂತೆ ಸುತ್ತುವರೆದರು, ಟೀಚರ್ ಅಂತೂ ನೀನು ಕೇಳಿದು ಕೊಡಿಸುವೆ ಬಾ ಎಂದು ಅಂಗಲಾಚಿದರು, ಅಮ್ಮನ ಸಹೋದರ ಸಂಬಂದಿಯೊಬ್ಬರು 100ರ ನೋಟು ತೋರಿಸಿ ಇದನ್ನು ಕೊಡ್ತೀನಿ ಬಾ ಎಂದರು. ಅಂಗನವಾಡಿಯ ಎಲ್ಲಾ ಮಕ್ಕಳ ಕಡ್ಡಾಯ ತೂಕ ಆಗಲೇ ಬೇಕಿತ್ತು, ನಾನು ಸಿಗಲೇ ಇಲ್ಲ. ಕೊನೆಗೇ “ನಾಡ ಕುಂಞಿಕೇ ಪ್ರೈಸ್ ಬಾ” ಅಂತ ಟೀಚರ್ ಗೋಗರೆದರು ಆದರೂ ನಾ ಬರಲಿಲ್ಲ. ಇಲಾಖೆಯವರು ನನ್ನ ಅಂದಾಜು ತೂಕ ಬರೆದುಕೊಂಡು ಹೋದರು. ಇವರೆಲ್ಲ ಎಂತ ದಡ್ಡರು ಎಂದರೆ ಅಷ್ಟೆಲ್ಲ ಕಷ್ಟ ಪಟ್ಟು ನನ್ನ ಕರೆಯುವ ಬದಲು ನಮ್ಮ ಪಪ್ಪನ್ನ ಕರೆದು ಎದುರು ನಿಲ್ಲಿಸಿದ್ದರೆ ಸಾಕಿತ್ತು, ನಾನು ತೂಕಕ್ಕಲ್ಲ ನೇತಾಕಿದ್ದರೂ ಸುಮ್ಮನ್ನಿರುತಿದ್ದೆ. ನನ್ನ ಪುಣ್ಯ ಅವತ್ತು ಪಪ್ಪ ಬಂದಿರಲಿಲ್ಲ.
ಆ ನಂತರ ಕೂಡ ಟೀಚರ್ ತೋರಿದ ಪ್ರೀತಿಯಲ್ಲಿ ಒಂದಿನಿತೂ ಕಮ್ಮಿಯಾಗಲೇ ಇಲ್ಲ. ಮುಂದೆ ಪ್ರತಿಯೊಬ್ಬರ ಬೆಳವಣಿಗೆಯುದ್ದಕೂ ಸಿಕ್ಕಾಗಲೆಲ್ಲ ಅದೇ ಪ್ರೀತಿಯಿಂದ ಹರಸುತಿದ್ದರು. ನನ್ನ ಕಾರ್ಯಕ್ರಮಗಳು ಮಡಿಕೇರಿ ಆಕಾಶವಾಣಿಯಲ್ಲಿ ಪ್ರಸಾರ ಆದಾಗ “ನಾಡ ಕುಂಞಿ ನೋಟಿಕ್ಕ ಅಲ್ಲಿಕ್ ಎತ್ತಿತ್, ಇಂಞೂ ಎತ್ತರಕ್ ಬೊಳಿಯೊಂಡು ನೀನ್” ಎಂದಿದ್ದರು. ಸಿಕ್ಕಾಗ ಪ್ರತೀ ಭಾರಿ ಕಾಲು ಮುಟ್ಟಿ ನಮಸ್ಕಾರ ಮಾಡಿದಾಗಲೂ ಅದೇ ನಿಶ್ಕಲ್ಮಷ ಪ್ರೀತಿಯಿಂದ ತಲೆನೇವರಿಸಿ, ಬೆನ್ನುತಟ್ಟಿ ಆಶೀರ್ವದಿಸುತಿದ್ದರು.
ಹೀಗೇ ಸಾವಿರಾರು ಮಂದಿಯ ವಿದ್ಯಾಗುರುವಾಗಿ ಬಾಳಿನ ಬೆಳಕಾಗಿ, ನಿಷ್ಕಲ್ಮಷವಾಗಿ ಹರಸಿ ಬೆಳೆಸಿದ ನಮ್ಮ ನಲ್ಮೆಯ ಕೋಲೆಗೊಂಡಿ ಟೀಚರ್ ತಮ್ಮ 84ನೇ ವಯಸದಸಿನಲ್ಲಿ ತಮ್ಮ ಬಾಳ ಪಯಣ ಮುಗಿಸಿದ್ದಾರೆ. ಬೌತಿಕಕವಾಗಿ ಅವರು ನಮ್ಮೊಳಗಿಲ್ಲದಿದ್ದರೂ, ಅವರ ಆದರ್ಶ ನಡೆಗಳು ಎಂದಿಗೂ ಅವರ ನಲ್ಮೆಯ ಶಿಶುಗಳ ಬಾಳಿನಲ್ಲಿ ಇರಲಿದೆ ಎಂಬ ಅಛಲ ನಂಬಿಕೆಯೊಂದಿಗೆ, ಅಗಲಿದ ನಿಮ್ಮ ದಿವ್ಯಾತ್ಮಕ್ಕೆ ಗೌರವಪೂರ್ವಕ ಅಕ್ಷರತರ್ಪಣೆ… ಹೋಗಿ ಬನ್ನಿ ಟೀಚರ್…
– ಚಾಮೆರ ದಿನೇಶ್ಬೆಳ್ಯಪ್ಪ