ಕುಶಾಲನಗರ, ನ.07: ಇತ್ತೀಚೆಗೆ ಕೊಡಗಿನ ಕುಶಾಲನಗರ ತಾಲೋಕಿನ ಕೊಡವತಿ ಮಹಿಳೆಯೊಬ್ಬರ ಮನೆಗೆ, ವಕ್ಫ್ ಬೋರ್ಡ್ ಹೆಸರಿನಲ್ಲಿ ಕೆಲ ವ್ಯಕ್ತಿಗಳು ಬಂದು, ಇದು ವಕ್ಫ್ ಬೋರ್ಡಿಗೆ ಸೇರಿದ ಆಸ್ತಿ ತಾವು ಕೂಡಲೇ ಮನೆ ಖಾಲಿ ಮಾಡಬೇಕು, ಎಂದು ಬೆದರಿಸಿ, ನಂತರ ದೂರವಾಣಿ ಮೂಲಕವೂ ಮಹಿಳೆಗೆ ಧಮಕಿ ಹಾಕಿದ ಪ್ರಕರಣ ಸದ್ದು ಮಾಡುತಿದ್ದು, ಮೇಲ್ನೋಟಕ್ಕೆ ಇವರು ವಕ್ಫ್ ಬೋರ್ಡಿಗೆ ಸಂಬಂದಿಸಿದ ವ್ಯಕ್ತಿಗಳಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಹಾಗಾದರೆ ಈ ಆಗುಂತಕರು ಯಾರು ಎಂಬ ತನಿಖೆ ನಡೆದು, ಸತ್ಯ ಹೊರಬರುವ ಮೂಲಕ, ಕೊಡಗಿನಲ್ಲಿ ಶಾಂತಿ ಕದಡುವ ಪ್ರಯತ್ನಕ್ಕೆ ಎಳ್ಳು ನೀರು ಬಿಡಬೇಕಿದೆ.
ಕಳೆದ ಅಕ್ಟೋಬರ್ 25ರಂದು, ಕುಶಾಲನಗರ ಮುಳ್ಳುಸೋಗೆಯಲ್ಲಿ ಇರುವ ಪುಚ್ಚಿಮಂಡ ರೇಣುಕಾ ಉತ್ತಪ್ಪ(ತಾಮನೆ: ಕೇಕಡ) ಅವರ ಮನೆಗೆ ಪೂರ್ವಾಹ್ನ 11 ಗಂಟೆಯ ಆಸುಪಾಸಿನಲ್ಲಿ ಇಬ್ಬರು ವ್ಯಕ್ತಿಗಳು ಬಂದು, ಏಕಾ ಏಕಿ ಮನೆ ಖಾಲಿ ಮಾಡಿ, ಇದು ನಮ್ಮ ವಕ್ಫ್ ಬೋರ್ಡಿಗೆ ಸೇರಿದ ಆಸ್ತಿ, ಎಂದು ಯಾವುದೇ ನೋಟೀಸ್ ಇಲ್ಲದೆ ಮೌಖಿಕವಾಗಿ ಹೇಳುತ್ತಾರೆ. ಇದನ್ನ ಕೇಳಿ ಕೋಪಗೊಂಡ, ಪುಚ್ಚಿಮಂಡ ರೇಣುಕಾ ಉತ್ತಪ್ಪ ಅವರು, ದೈರ್ಯಗುಂದದೇ ಆ ವ್ಯಕ್ತಿಗಳಿಗೆ ಧಮಕಿ ಹಾಕಿದಾಗ, ಆಗುಂತಕರು, ನಮ್ಮೊಂದಿಗೆ ಇನ್ನೂ ಹದಿನೈದು ಜನರಿದ್ದು ಅವರನ್ನೂ ಕರೆಯುವುದಾಗಿ ಹೇಳುತ್ತಾರೆ. ಆದರೂ ಧೈರ್ಯಗುಂದದ ರೇಣುಕಾ ಉತ್ತಪ್ಪ, ಪೊಲೀಸರನ್ನು ಕರೆಯುತ್ತೇನೆ, ಇಲ್ಲೇ ಇರಿ ಎಂದಾಗ, ಅಪರಿಚಿತರು ಅಲ್ಲಿಂದ ತೆರಳುತ್ತಾರೆ. ಮತ್ತೆ ಒಂದೆರಡು ದಿನಗಳ ನಂತರ ದೂರವಾಣಿ ಕರೆ ಮಾಡುವ ಆಗುಂತಕರು, ಮತ್ತೇ ಮನೆ ಖಾಲಿ ಮಾಡಿ, ಇಲ್ಲವೇ ಷರೀಯ ಕೋರ್ಟಿಗೆ ಹಾಜರಾಗಿ ಎಂದು ಬೆದರಿಸುತ್ತಾರೆ. ಇದರಿಂದ ಕಳವಳಗೊಂಡ ಪುಚ್ಚಿಮಂಡ ರೇಣುಕಾ ಉತ್ತಪ್ಪ ಅವರು, ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷರಿಗೆ ಪತ್ರದ ಮುಖೇನ ಸಹಾಯಕ್ಕೆ ಮನವಿ ಮಾಡಿ, ಪ್ರತಿಯನ್ನು ಮಾನ್ಯ ಮುಖ್ಯ ಮಂತ್ರಿಗಳಿಗೆ ಹಾಗೂ ಕೊಡಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ರವಾನಿಸುತ್ತಾರೆ.
ಇದನ್ನು ಗಮನಿಸಿದ ಕುಶಾಲನಗರ ಪೋಲೀಸರು, ಇಂದು ಖುದ್ದು ಬೆಂಗಳೂರಿನಲ್ಲಿರುವ ರೇಣುಕಾ ಉತ್ತಪ್ಪರ ಬಳಿ ತೆರಳಿ ದೂರು ಸ್ವೀಕರಿಸಿ, ಮುಂದಿನ ತನಿಖೆ ನಡೆಸುವ ಭರವಸೆ ನೀಡಿದರಲ್ಲದೆ, ದೂರುದಾರರಿಗೆ ಎಲ್ಲಾ ರೀತಿಯ ಭದ್ರತೆ ನೀಡುವ ಅಭಯ ನೀಡಿದ್ದಾರೆ.
ಇತ್ತ ವಕ್ಫ್ ಅಧಿಕಾರಿಗಳನ್ನ ವಿಚಾರಿಸಿದರೆ, ಉಲ್ಲೇಖಿತ ಜಾಗಕ್ಕೂ, ವಕ್ಫ್ ಬೋರ್ಡಿಗೂ ಯಾವುದೇ ಸಂಬಂಧ ಇಲ್ಲ. ಸದರಿ ಜಾಗ ನಮಗೆ ಸೇರಿದ ಯಾವುದೇ ದಾಖಲೆಗಳು ಬೋರ್ಡಿನಲ್ಲಿ ಇಲ್ಲ ಮತ್ತು ಯಾವುದೇ ನೋಟೀಸ್ ಇಲ್ಲದೆ ಯಾರೇ ಅಧಿಕಾರಿ ಅಥವಾ ವ್ಯಕ್ತಿಯನ್ನು ನಾವು ಕಳಿಸುವುದಿಲ್ಲ, ಎಂದು ಸ್ಪಷ್ಟನೆ ನೀಡಿರುವುದಾಗಿ, ಪೋಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ನಡುಬಾಡೆಗೆ ತಿಳಿಸಿದ್ದಾರೆ.
ನಡಬಾಡೆಯೊಂದಿಗೆ ಮಾತನಾಡಿದ ದೂರುದಾರೆ, ಪುಚ್ಚಿಮಂಡ ರೇಣುಕಾ ಉತ್ತಪ್ಪ ಅವರು, ಪೊಲೀಸ್ ಇಲಾಖೆಯ ಕಾರ್ಯ, ಸ್ಪಂದನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕುಶಾಲನಗರ ಸಬ್ ಇನ್ಸ್ಪೆಕ್ಟರ್ ಗೀತಾ ಅವರೇ ಖುದ್ದು ಬೆಂಗಳೂರಿಗೆ ಬಂದು, ದೂರು ಸ್ವೀಕರಿಸಿದ್ದು, ಭದ್ರತೆಯ ಭರವಸೆಯನ್ನೂ ನೀಡಿದ್ದಾರೆ. ನನ್ನ ಪಿತ್ರಾರ್ಜಿತ ಆಸ್ತಿಯನ್ನು ಕಬಳಿಸಲು ಬಂದವರು ಯಾರು ಎನ್ನುವ ಸತ್ಯ ಅರಿವಾಗಬೇಕು. ವಕ್ಫ್ ಬೋರ್ಡ್ ಅಧಿಕಾರಿಗಳು ಅಲ್ಲ ಎಂದಾದರೆ, ಅವರು ಬಹಿರಂಗ ಹೇಳಿಕೆ ನೀಡಲಿ ಮತ್ತು ಯಾರು ವಕ್ಫ್ ಹೆಸರಿನಲ್ಲಿ ಬೆದರಿಕೆ ಹಾಕಿದ್ದಾರೆ ಎಂಬುದರ ಕುರಿತು ತನಿಖೆ ನಡೆದು ಸತ್ಯ ಹೊರ ಬರಲಿ ಎಂದಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆ ಸೂಕ್ತ ನ್ಯಾಯ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೂರುದಾರೆಗೆ ನೈತಿಕ ಬೆಂಬಲ ಸೂಚಿಸಿದ ಕೊಡವ ಸಮಾಜ, ಸಂಘಟನೆಗಳು,
ಈ ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಕೊಡವಾಮೆರ ಕೊಂಡಾಟ ಸಂಘಟನೆಯು, ದೂರುದಾರೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರಿಗೆ ಅಗತ್ಯ ನೆರವು ನೀಡಲಿದೆ ಮತ್ತು ಇಂತ ಘಟನೆಗಳಿಗೆ ಈಗಲೇ ಪೂರ್ಣ ವಿರಾಮ ಹಾಕಬೇಕಲ್ಲದೆ, ಕೊಡಗಿನಲ್ಲಿ ಶಾಂತಿ ಕದಡಲು ಮಾಡುವ ಹುನ್ನಾರಗಳಿಗೆ ಕಡಿವಾಣ ಹಾಕಬೇಕು ಎಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕುಶಾಲನಗರ ಕೊಡವ ಸಮಾಜ, ದೂರುದಾರೆಗೆ ಎಲ್ಲಾ ರೀತಿಯ ನೈತಿಕ ಬೆಂಬಲದೊಂದಿಗೆ ಸದಾ ಜೊತೆ ನಿಲ್ಲುವುದಾಗಿ ತಿಳಿಸಿದೆ.
ಒಟ್ಟಿನಲ್ಲಿ ಇದೊಂದು ಕಿಡಿಗೇಡಿಗಳ ಬೆದರಿಕೆಯ ಕಾರ್ಯದಂತೆ ಕಾಣುತಿದ್ದು, ಶಾಂತಿ ಪ್ರಿಯ ಕೊಡಗಿನಲ್ಲಿ ಇಂತ ಕ್ಷುಲ್ಲಕ ವಿಚಾರಗಳು, ಭಾವನಾತ್ಮಕವಾಗಿ ಮಾರ್ಪಟ್ಟು, ಅಹಿತಕರ ಘಟನೆಗಳು ನಡೆಯದಿರಲಿ. ರಾಜಕೀಯ ಪಕ್ಷಗಳ ದೊಂಬರಾಟಕ್ಕೆ ಅಮಾಯಕರು ಬಲಿಪಶು ಆಗದಿರಲಿ.
ಈ ನಿಟ್ಟಿನಲ್ಲಿ ದಕ್ಷ ಮತ್ತು ಸಮರ್ಥವಾಗಿರುವ ಕೊಡಗು ಜಿಲ್ಲಾ ಪೋಲೀಸರು, ಸೂಕ್ತ ತನಿಖೆಯ ಮೂಲಕ ಎಲ್ಲಾ ಊಹಾಪೋಹಗಳಿಗೂ, ಪೂರ್ಣ ವಿರಾಮ ಹಾಕಲಿದ್ದಾರೆ ಎಂಬ ವಿಶ್ವಾಸ ಸಾರ್ವಜನಿಕರಿಗಿದೆ.