ಸೋಮವಾರಪೇಟೆ:ನ. 02: ಕೊಡಗಿನ ಉತ್ತರ ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರದ ವನ್ಯಜೀವಿ ಮಂಡಳಿ ಸದಸ್ಯರಾಗಿರುವ ಸಂಕೇತ್ ಪೂವಯ್ಯ ಅವರು ಕ್ರಮ ಕೈಗೊಳ್ಳಬೇಕೆಂದು ರೈತರು ಮನವಿ ಮಾಡಿದ್ದಾರೆ
ಉತ್ತರ ಕೊಡಗು ಭಾಗದಲ್ಲಿ, ಅದರಲ್ಲೂ ಗಡಿ ಪ್ರದೇಶಗಳಾದ ಗರ್ವಾಲೆ, ಗಾಳಿಬೀಡು, ಐಗುರು, ಗೋಣಿಮರೂರು, ತೊರೆನೂರು, ಮಾಲಂಬಿ, ಶನಿವಾಸಂತೆ, ಕೊಡ್ಲಿಪೇಟೆ, ಕೆದಕಲ್, ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳು, ನಿರಂತರ ಕಾಡಾನೆ, ಕಾಡುಕೋಣ, ಕಾಡು ಹಂದಿ, ಕೋತಿಗಳು, ನವಿಲುಗಳು ಸೇರಿದಂತೆ, ಮತ್ತಿತರ ಕಾಡು ಪ್ರಾಣಿಗಳಿಂದ, ಬೆಳೆ ಹಾನಿ, ಪ್ರಾಣ ಹಾನಿಯಂತ ದುರ್ಘಟನೆಗಳನ್ನು ನಿರಂತರ ಅನುಭವಿಸುತ್ತಿದ್ದಾರೆ.
ರೈತರು ಬೆಳೆಯುವ ಯಾವುದೇ ಬೆಳೆಯೂ ಕೂಡ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬಂತೆ ಆಗುತಿದ್ದು, ಸರ್ಕಾರದ ಪರ ಕೇಳುವ ಧ್ವನಿಗಳು ಇಲ್ಲದೆ, ಅತಂತ್ರ, ಅನಾಥ ಸ್ಥಿತಿಯಲ್ಲಿ ದಿನದೂಡುವಂತಾಗಿದೆ.
ಕರ್ನಾಟಕ ಸರ್ಕಾರದ ವನ್ಯಜೀವಿ ಮಂಡಳಿಯ ಸದಸ್ಯರಾಗಿರುವ ಮಾನ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು, ದಕ್ಷಿಣ ಕೊಡಗಿನ ಭಾಗಗಳಲ್ಲಿ ಅತ್ಯಂತ ಕ್ರಿಯಾಶೀಲ ಚಟುವಟಿಕೆಗಳ ಮೂಲಕ, ಅಲ್ಲಿಯ ರೈತಾಪಿ ವರ್ಗದ ಆಶಾಕಿರಣದಂತೆ ಸ್ಪಂದಿಸಿ, ಕಾರ್ಯನಿರ್ವಹಿಸುತ್ತಿದ್ದು, ಉತ್ತರ ಕೊಡಗಿಗೂ ತಮ್ಮ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿ, ಈ ಭಾಗದ ರೈತರ ದಯನೀಯ ಸ್ಥಿತಿಯನ್ನು ಅವಲೋಕಿಸಿ, ಜನ, ಜಾನುವಾರು, ಬೆಳೆಗಳನ್ನ ಉಳಿಸಿಕೊಡುವ ನಿಟ್ಟಿನಲ್ಲಿ, ಗಮನಹರಿಸಬೇಕೆಂದು, ಉತ್ತರ ಕೊಡು ಭಾಗದ ರೈತರು ಅವಲತ್ತುಕೊಂಡಿದ್ದಾರೆ.