ಬೆಂದೋಲೆ, ವಿಶೇಷ ಲೇಖನ..,
ಅಕ್ಟೋಬರ್ 31 ರಂದು ತಯಾರಾಗಬೇಕಿದ್ದ ಬೇಕರಿ ಉತ್ಪನ್ನಗಳು ಅಕ್ಟೋಬರ್ 25 ರಂದೇ ಜಿಲ್ಲೆಗೆ ಸದ್ದಿಲ್ಲದೇ ಮಾಕುಟ್ಟ ಗಡಿ ಚೆಕ್ ಪೋಸ್ಟ್ ಮೂಲಕ ಕೊಡಗು ಜಿಲ್ಲೆಗೆ ಎಂಟ್ರಿ ಕೊಡುತ್ತಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕೇರಳದ ಭಾರತ್ ಫುಡ್ಸ್ ಸಂಸ್ಥೆಯ ಬ್ರೆಡ್ ಹಾಗು ಇನ್ನಿತರ ಉತ್ಪನ್ನಗಳು ಕಳೆದ ಶುಕ್ರವಾರ ಅಕ್ಟೋಬರ್ 31ರಂದು ತಯಾರಾದ ದಿನಾಂಕದ ಮುದ್ರಣದೊಂದಿಗೆ ಬಂದಿದ್ದು, ಪೊಲೀಸರು ತಡೆದು ವಿಚಾರಣೆ ನಡೆಸಿದ ಕುರಿತು, ಮಾಹಿತಿ ಹಾಗು ದಾಖಲೆ ದೊರೆತಿದೆ. ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಕೂಡ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಸುಮ್ಮನಿರುವುದು ಮೇಲ್ನೋಟಕ್ಕೆ ಕಂಡುಬಂದಂತಿದೆ
ಕಣ್ಣೂರು ಜಿಲ್ಲೆಯಿಂದ ಹೆಚ್ಚು ಕಳಪೆ ಆಹಾರ:
ಕೊಡಗು ಜಿಲ್ಲೆಗೆ ಕೇರಳ ರಾಜ್ಯದ ಕಣ್ಣೂರು ಜಿಲ್ಲೆ ಹಾಗು ವಯನಾಡು ಜಿಲ್ಲೆಗಳಿಂದ ಹೆಚ್ಚು ಆಹಾರ ಉತ್ಪನ್ನಗಳು ಸರಬರಾಜು ಆಗುತ್ತಿದೆ. ಕಣ್ಣೂರು ಒಂದು ಜಿಲ್ಲೆಯಿಂದ 17ಕ್ಕೂ ಹೆಚ್ಚು ನಕಲಿ ಸಂಸ್ಥೆಗಳು 70ಕ್ಕೂ ಹೆಚ್ಚು ಆಹಾರ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಅವುಗಳಲ್ಲಿ ಬಹುತೇಕ ಉತ್ಪನ್ನಗಳು ಕಳಪೆ ಗುಣಮಟ್ಟ ಮತ್ತು ಬಳಸಲು ಯೋಗ್ಯವಲ್ಲ, ಎಂಬ ವರದಿ ಈಗಾಗಲೇ ಇಲಾಖೆ ತರಿಸಿಕೊಂಡಿದೆ. ಕಣ್ಣೂರು ಜಿಲ್ಲೆಯ ಇರಿಟ್ಟಿ ತಲಚೇರಿ, ಪಯ್ಯನ್ನೂರು, ತಳಿಪರಂಬ ತಾಲೂಕುಗಳಿಂದ ನಕಲಿ ಸಂಸ್ಥೆಗಳ ಹೆಸರಿನಲ್ಲಿ ಆಹಾರ ಉತ್ಪನ್ನಗಳು ಕೊಡಗು ಹಾಗೂ ಹಾಸನ ಜಿಲ್ಲೆಗೆ ಎಗ್ಗಿಲ್ಲದೆ ಸರಬರಾಜು ಆಗುತ್ತಿದೆ.
ವಾರಕ್ಕೆ ಮುನ್ನವೇ ದಿನಾಂಕ ಮುದ್ರಣ:
ಕೇರಳದಿಂದ ಕೊಡಗಿಗೆ ಸರಬರಾಜಾಗುವ ಆಹಾರ ಉತ್ಪನ್ನಗಳ ಪೈಕಿ ತಿಂಡಿ ತಿನಿಸುಗಳ, ಬೇಕರಿ ಉತ್ಪನ್ನಗಳಿಗೆ ತಯಾರಾಗುವ ದಿನಾಂಕದಿಂದ 07ದಿನ ತಡವಾದಂತೆ ಎಕ್ಸ್ಪೈರಿ ದಿನಾಂಕ ಮುದ್ರಿಸಲಾಗಿದೆ. ಅಕ್ಟೋಬರ್ 31ರಂದು ತಯಾರಾಗಿ, ಬಳಿಕ ಮಾರುಕಟ್ಟೆಗೆ ಸರಬರಾಜು ಆಗಬೇಕಿದ್ದ ಆಹಾರ, ತಿನಿಸುಗಳು ಅಕ್ಟೋಬರ್ 23ರಂದು ಯಾವುದೇ ಆತಂಕವಿಲ್ಲದೆ, ಕೊಡಗು ಜಿಲ್ಲೆಯನ್ನು ಪ್ರವೇಶಿಸಿದೆ.
ಏನೆಲ್ಲಾ ಪದಾರ್ಥಗಳು ಸರಬರಾಜು:
ಕಣ್ಣೂರು ಜಿಲ್ಲೆಯಿಂದ ನಕಲಿ ಫ್ಯಾಕ್ಟರಿಗಳ ಹೆಸರಿನಲ್ಲಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(fssi) ನಕಲಿ ನೋಂದಾಯಿತ ಸಂಖ್ಯೆಯನ್ನು ಮುದ್ರಿಸಲಾಗಿದೆ. ಲೇಬಲ್ ನಲ್ಲಿ ಮುದ್ರಿಸಿರುವ ದೂರವಾಣಿ ಸಂಖ್ಯೆಯು ನಕಲಿಯಾಗಿ̧ದ್ದು ಕೊಡಗು ಜಿಲ್ಲೆಗೆ ನಕಲಿ ಹಾಗೂ ಬಳಸಲು ಯೋಗ್ಯವಲ್ಲದ ಬೇಕೇರಿ ಪದಾರ್ಥಗಳು ದಿನನಿತ್ಯ ಸರಬರಾಜು ಆಗುತ್ತಲೇ ಇದೆ.
ಕೇರಳ ಸರಕಾರಕ್ಕೆ ಕೊಡಗಿನಿಂದ ಪತ್ರ:
ಕೆಲ ದಿನಗಳ ಹಿಂದೆಯೇ, ಜಿಲ್ಲೆಯ ಅಧಿಕಾರಿಗಳಿಗೆ ಈ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ, ಉತ್ಪನ್ನಗಳನ್ನು ಪರಿಶೀಲಿಸಿ ಕ್ರಮ ಜರುಗಿಸುವಂತೆ, ಕಣ್ಣೂರು ಜಿಲ್ಲೆಯ ಆಹಾರ ಸುರಕ್ಷತೆ ಹಾಗು ಗುಣಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ. ಅಲ್ಲದೆ ಕೇರಳ ಸರಕಾರಕ್ಕೂ ಪತ್ರ ಬರೆಯಲಾಗಿದ್ದು ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಮೈಸೂರು ಪ್ರಯೋಗಾಲಯದಲ್ಲಿ ಸಂಸ್ಥೆಗಳ ಭವಿಷ್ಯ:
ಆಹಾರ ಸುರಕ್ಷತೆ ಹಾಗು ಗುಣಮಟ್ಟ ಪ್ರಾಧಿಕಾರದ ಪ್ರಯೋಗಾಲಯದಲ್ಲಿ, ಇನ್ನು 6 ವರದಿಗಳು ಬರಲು ಬಾಕಿ ಇದ್ದು, ಅವುಗಳ ವರದಿ ಬಂದ ಬಳಿಕ ಇಲಾಖೆಯ ಆಯುಕ್ತರ ಗಮನಕ್ಕೆ ತಂದು, ಕೇರಳ ಉತ್ಪನ್ನಗಳನ್ನು ಕರ್ನಾಟಕದಲ್ಲಿ ನಿಷೇದ ಮಾಡುವ ಸಾಧ್ಯತೆ ಇದೆ. ದಿನನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ನಕಲಿ ಸಂಸ್ಥೆಗಳ ಜೊತೆಗೆ ನೋಂದಾಯಿತ ಸಂಸ್ಥೆಗಳಿಗೂ ತಲೆನೋವು ಶುರುವಾಗಲಿದೆ.
ಪ್ರತಿಕ್ರಿಯೆ:
ಈ ಕುರಿತು ಪ್ರತಿಕ್ರಿಯಿಸಿರುವ, ಕೊಡಗು ಮತ್ತು ಹಾಸನ ಜಿಲ್ಲೆಗಳ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ, ಡಾ. ಅನಿಲ್ ಧವನ್ ಅವರು, 100ಕ್ಕೂ ಹೆಚ್ಚು ಆಹಾರ ಉತ್ಪನ್ನಗಳನ್ನು ತರಿಸಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಯೋಗಕಾಯದಲ್ಲಿ ಪರೀಕ್ಷೆ ಮಾಡಲಾಗಿದೆ. 30ಕ್ಕೂ ಮೀರಿದ ಉತ್ಪನ್ನಗಳು ಬಳಕೆಗೆ ಯೋಗ್ಯವಲ್ಲ ಎಂಬ ವರದಿ ಬಂದಿದೆ. ಕೇರಳದಿಂದ ಕೊಡಗು, ಹಾಸನ ಜಿಲ್ಲೆಗಳಿಗೆ ಸರಬರಾಜು ಆಗುವ ಆಹಾರ ಉತ್ಪನ್ನಗಳ ನಿಷೇದಕ್ಕೆ ಚಿಂತಿಸಲಾಗುತ್ತಿದೆ ಎಂದಿದ್ದಾರೆ.
ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಪ್ರತಿಕ್ರಿಯಿಸಿ, ಕೆರಳದಿಂದ ಬರುವ ಆಹಾರ ಪದಾರ್ಥಗಳ ಬಗ್ಗೆ ನಿಗಾವಹಿಸಲು, ಅಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ನಕಲಿ ಉತ್ಪನ್ನಗಳನ್ನು ಸರಬರಾಜು ಮಾಡುವ ಸಂಸ್ಥೆಗಳ ವಿರುದ್ಧ ಆಹಾರ ಸುರಕ್ಷತೆ ಹಾಗು ಗುಣಮಟ್ಟ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ಕಠಿಣ ಕ್ರಮ ಜರುಗಿಸಲಾಗುವುದು.
ಮುಂದಿನ ದಿನಗಳಲ್ಲಿ ಆಗಬಹುದಾದ ಪರಿಣಾಮ ಮತ್ತು ಅನಾಹುತವನ್ನು ಗಮನಲದಲ್ಲಿಟ್ಟು ತಕ್ಷಣಕ್ಕೆ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.