ದಿನಾಂಕ: 19/10/2024ರಂದು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಳಿಯ, ಸೋಂದಾದ, ಸಾದ್ವಿ ಶ್ರೀ ಜೈನ ಮಠದಲ್ಲಿ, ಜಾಗೃತ ವೇದಿಕೆ ಸೋಂದಾ, ಮಿಥಿಕ್ ಸೊಸೈಟಿ ಬೆಂಗಳೂರು, ಪುರಾತತ್ವ ಇಲಾಖೆ ಮೈಸೂರು, ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ, 07ನೇ ರಾಷ್ಟ್ರೀಯ ಇತಿಹಾಸೋತ್ಸವದಲ್ಲಿ, ನಾನು ಮಂಡಿಸಿದ, ರಾಜಾಡಳಿತಕ್ಕೂ ಹಿಂದಿನ, ಕೊಡಗಿನ ಇತಿಹಾಸ ಎಂಬ ವಿಷಯಾಧರಿತ ಲೇಖನ…
– ಚಾಮೆರ ದಿನೇಶ್ ಬೆಳ್ಯಪ್ಪ, ಪ್ರದಾನ ಸಂಪಾದಕ
ಕೊಡಗು ಎಂದರೆ ಒಂದು ಭೂಬಾಗ, ಪ್ರದೇಶ, ಜಿಲ್ಲೆ, ಪ್ರಕೃತಿ ರಮಣೀಯ ಸ್ಥಳ, ಎನ್ನುವುದು ಎಷ್ಟು ಸಮಂಜಸವೋ, ಅದಕ್ಕಿಂತಲೂ ಮಿಗಲಾದದ್ದು ಕೊಡಗಿನ ಮೂಲನಿವಾಸಿ ಜನರ ಸಾವಿರಾರು ವರ್ಷಗಳ, ಸಂಸ್ಕೃತಿ, ಪರಂಪರೆ, ಆಡಳಿತ ವ್ಯವಸ್ಥೆಯೊಂದಿಗಿನ ಬದುಕಿನ ಶೈಲಿ. ಈ ಕಾರಣಕ್ಕಾಗಿಯೇ ಕೊಡಗು ಅಂದಿನಿಂದ ಇಂದಿನವರೆಗೂ ಇತರ ಎಲ್ಲಾ ಪ್ರದೇಶಗಳಿಗಿಂತಲೂ ವಿಭಿನ್ನವಾಗಿ ನಿಲ್ಲುತ್ತದೆ.
ಕೊಡಗಿನ ಇತಿಹಾಸವನ್ನು ಅರಿಯಲು ನೂರಾರು ಸಂಶೋಧಕರು, ತಜ್ಞರು, ದೇಶ ವಿದೇಶದ ವಿದ್ವಾಂಸರು ಅಧ್ಯಯನ ನಡೆಸಿದ್ದಾರೆ. ಅವರರವರ ವಿವೇಚನೆ ಆಲೋಚನೆ, ಲಭ್ಯ ಸಾಕ್ಷಗಳ ಆಧಾರದಲ್ಲಿ, ದಾಖಲೀಕರಣವನ್ನು ಮಾಡಿದ್ದಾರೆ. ಕೆಲವರು ರಾಜಾಡಳಿತ(ಅರಸುಮನೆತನ)ದಿಂದ ಆಚೆಗಿನ ಕೊಡಗಿನ ಇತಿಹಾಸವನ್ನು ಧಾಖಲಿಸುವ ಪ್ರಯತ್ನ ಮಾಡಿ, ಮೂಲಕ್ಕೆ ಇಳಿದರೂ, ತಳ ಸಿಕ್ಕಿರುವ ಹಾಗೆ ಭಾಸವಾಗುವುದಿಲ್ಲ.
“ಕಾಡಿನಲ್ಲಿ ಒಂದು ಕಲ್ಲು ಸಿಕ್ತದೆ ಅದಕ್ಕೆ ಕಿವಿಗೊಟ್ಟು ಕೇಳು, ಅದು ನಿನಗೆ ಕಥೆ ಹೇಳ್ತದೆ” ಎಂದು, ಹೆಸರಾಂತ ಕಾಂತಾರ ಚಿತ್ರದ ಸಂಬಾಷಣೆಯಲ್ಲಿ ಉಲ್ಲೇಖವಾದಂತೆ, ಕೊಡಗಿನ ಪ್ರತೀ ಬೆಟ್ಟ ಗುಡ್ಡ, ನದಿ ತೊರೆ, ಮರಗಿಡ, ಕಲ್ಲು ಮಣ್ಣೂ ಕೂಡ ಒಂದೊಂದು ಇತಿಹಾಸದ ಕಥೆಯನ್ನು ಹೇಳುತ್ತವೆ. ಆದರೆ ಬಹುಪಾಲು ಜನರು ಆ ಕಥೆಯನ್ನು ಕಿವಿಗೊಟ್ಟು ಕೇಳದಿರುವುದು ವಿಪರ್ಯಾಸ.
ಹಲವು ಜೈನ ಸಾಹಿತ್ಯ, ಪುರಾಣಗಳು, ಸ್ಕಂದ ಪುರಾಣ, ಪ್ರಾಚೀನ ತಮಿಳಿಗಂ ಸಾಹಿತ್ಯ, ಸಂಗಂ ಸಾಹಿತ್ಯ, ಶಿಲಾಪ್ಪತಿಗಾರಂ ಸೇರಿದಂತೆ ಅನೇಕ ಶಾಸನಗಳು, ಹಲವಾರು ವಿದೇಶಿ ಪ್ರವಾಸಿಗರ ಪ್ರವಾಸಿಕಥನಗಳಲ್ಲಿ, ಕೊಡಗಿನ ಇತಿಹಾಸ, ಅದರಲ್ಲೂ, ರಾಜ ಆಡಳಿತದ ಇತಿಹಾಸವನ್ನು ಸಾಕಷ್ಟು ಉಲ್ಲೇಖಿಸಿ, ವೈಭವೀಕರಿಸಲಾಗಿದೆಯೇ ಹೊರತು, ಆ ಮೊದಲ ಇತಿಹಾಸದ ವಾಸ್ತವತೆಗೆ ಹೋಗುವ ಪ್ರಯತ್ನ ಕಡಿಮೆ ಎನ್ನುವುದಕ್ಕಿಂತ ನಡೆದೇ ಇಲ್ಲ ಎನ್ನಬಹುದು. ಹಲವು ದಾಖಲೆಗಳಲ್ಲಿ ಉಲ್ಲೇಖವಾಗಿರುವಂತೆ ಕೊಡಗಿನ ರಾಜಕೀಯ ಇತಿಹಾಸ ಸುಮಾರು ಕ್ರಿಸ್ತಪೂರ್ವ ಎರಡನೇ ಶತಮಾನದಿಂದ ಕಂಡು ಬಂದರೂ, ಅದಕ್ಕಿಂತ ಸಾವಿರಾರು ವರ್ಷಗಳ ಕಾಲ, ಕೊಡಗು ಪ್ರತ್ಯೇಕವಾಗಿ, ಎಲ್ಲಾ ಹೊರ ಪ್ರಪಂಚಗಳಿಂದ ರಾಜಕೀಯ, ಸೈದ್ದಾಂತಿಕ, ಪ್ರಾಕೃತಿಕ, ಬೌಗೋಳಿಕ ವಿಭಿನ್ನತೆಯಿಂದ ಬಾಳಿದ ಕುರುವುಗಳು ಕೊಡಗಿನ ಅಲ್ಲಲ್ಲಿ ಸಿಗುತ್ತವೆ.
ಕೊಡವ ಜನಪದರು, ಈ ನಾಡಿನ ಮೂಲವನ್ನ, ಸಂಸ್ಕೃತಿ, ಸಂಪ್ರದಾಯವನ್ನು ಅತ್ಯಂತ ವಿಸ್ತೃತವಾಗಿ, ಕೂಲಂಕುಶವಾಗಿ ವಿವರಿಸುವ ಪ್ರಯತ್ನವನ್ನ ಮಾಡಿದ್ದಾರೆ. ಪ್ರಪಂಚದ ಎಲ್ಲಾ ಇತಿಹಾಸ ದಾಖಲೆಗಳ ಮೂಲ ಜನಪದವೇ. ಆ ಪ್ರಕಾರದ ಉಲ್ಲೇಖಗಳ ಆಧಾರದಲ್ಲಿಯೇ ಸಂಶೋಧನೆ, ಸತ್ಯ ಶೋಧನೆಗಳು ನಡೆದಿವೆ.
ಲಿಖಿತ ದಾಖಲೆಗಳ ಪ್ರಮಾಣ ಕಡಿಮೆ ಇರುವ, ಜಾನಪದ ಇತಿಹಾಸದ ಆಧಾರದಲ್ಲಿ, ಕೊಡಗಿನ ಪ್ರಾಚೀನ ಇತಿಹಾಸದ ಇಡೀ ಚಿತ್ರಣವನ್ನು ನಮ್ಮ ಜನಪದರು ನಮ್ಮ ಕಣ್ಣಮುಂದೆ ಕಟ್ಟುತ್ತಾ ಹೋಗಿದ್ದಾರೆ. ಈ ಪ್ರಖಾರದ ಜಾನಪದವನ್ನು ಅತ್ಯಂತ ಸಮೀಪ ಮತ್ತು ಶ್ರದ್ದೆಯಿಂದ ಅವಲೋಕಿಸಿದರೇ, ಇಂದಿನ ಕೊಡಗಿನ ಮೇಲ್ಮೈ ಲಕ್ಷಣ ಮತ್ತು ಬೆಟ್ಟಗುಡ್ಡಗಳಲ್ಲಿ, ನದಿ ತೊರೆಗಳಲ್ಲಿ, ದೊರೆಯುವ, ಜೀವಂತ ಸಾಕ್ಷಿಗಳು ಇದನ್ನು ಮತ್ತಷ್ಟು ಪುಷ್ಟೀಕರಿಸುತ್ತವೆ.
ರಾಜಾಡಳಿತಕ್ಕೂ ಮುಂಚಿನ ಕೊಡಗಿನ ಇತಿಹಾಸವನ್ನು ಅವಲೋಕಿಸುತ್ತಾ ಹೋದಾಗ, ಕೊಡಗಿನ ಆದೀಮ ಸಂಜಾತ ಮೂಲ ನಿವಾಸಿ ಜನಾಂಗವಾದ, ಕೊಡವರ ಬಾಳೋಪಾಟ್, ನಮಗೆ ಹಲವು ದಾಖಲೆಗಳನ್ನು ನೀಡುತ್ತದೆ. ಮತ್ತು ಇಂದಿನ ಸಂಸ್ಕೃತಿ ಪರಂಪರೆಯ ಭಾಗವಾಗಿ ಆಚರಿಸುವ ಕಟ್ಟುಪಾಡುಗಳು, ಹಬ್ಬಗಳು ಇವನ್ನು ಮತ್ತಷ್ಟು ಪ್ರಭಲವಾಗಿ ಪುಷ್ಟೀಕರಿಸುತ್ತವೆ. ರಾಜಾಡಳಿತ ಅಥವಾ ಅರಸು ಪರಂಪರೆಗೂ ಮುನ್ನ ಕೊಡಗನ್ನು ಒಂದು ವ್ಯವಸ್ಥಿತ ಸಿದ್ದಾಂತದೊಳಗೆ ರೂಪಿಸಿ ಅದನ್ನ ಆಚರಣೆಯ ಕಟ್ಟುಪಾಡುಗಳಾಗಿ ರೂಪಿಸಲಾಗಿತ್ತು.
ಕೊಡಗಿನ ಪ್ರಾಚೀನ ವಿಸ್ತಾರ, ಜನಸಂಖ್ಯೆ, ಜಾತಿ, ಧರ್ಮ, ಸಂಸ್ಕೃತಿ, ಭಾಷೆಗಳ ವಿಚಾರವಾಗಿ ಸಾಕಷ್ಟು ಚರ್ಚೆಗಳು, ದಾಖಲೀಕರಣ, ಸಂಶೋದನೆಗಳು ನಡೆದಿವೆ. ಇಲ್ಲಿ ಅದರ ವಿಚಾರ ಮತ್ತು ಪ್ರದೇಶದ ಸೀಮಿತತೆ, ಅಥವ ವಿಸ್ತೃತ ವ್ಯಾಪ್ತಿಯ ಬಗ್ಗೆ ಪ್ರಸ್ತಾಪಿಸುದಕ್ಕಿಂತ ಆಗಿನ ಬದುಕು ಮತ್ತು ಜನಜೀವನದ ಬಗ್ಗೆ ಉಲ್ಲೇಖಿಸುವುದು ಸೂಕ್ತ.
ಪ್ರಾಜಾಪ್ರಭುತ್ವ ವ್ಯವಸ್ತೆಯು ಲಭ್ಯ ದಾಖಲೆಗಳ ಆದಾರದಲ್ಲಿ ಪ್ರಾಚೀನ ಗ್ರೀಸ್‌ನ ಅಥೆನ್ಸ್ ನಗರ-ರಾಜ್ಯದಲ್ಲಿ ಸುಮಾರು ಕ್ರಿ.ಪೂ. 5ನೇ ಶತಮಾನದಲ್ಲಿ, ಮೊಟ್ಟಮೊದಲ ಬಾರಿಗೆ ದಾಖಲಾಗಿದೆ. ಕ್ರಿಸ್ತ ಪೂರ್ವ 02ನೇ ಶತಮಾನದಲ್ಲಿ ಕೊಡಗಿನ ಆಡಳಿತ ವ್ಯವಸ್ತೆ ಮತ್ತು ವಿದ್ಯಮಾನಗಳನ್ನು, ಸಂಗಂ ಸಾಹಿತ್ಯ ಮತ್ತು ತಮಿಳು ಬ್ರಾಹ್ಮಿ ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಅಂದರೆ ಕ್ರಿಸ್ತ ಪೂರ್ವ ಆದಿಯಲ್ಲೇ, ಕೊಡಗಿನ ಆದೀಮ ಸಂಜಾತ ಮೂಲನಿವಾಸಿಗಳು, ಮೂಲ ಬುಡಕಟ್ಟು, ಮತ್ತು ಅವಿಭಜಿತ ಒಕ್ಕೂಟ ವ್ಯವಸ್ತೆಯ ಭಾಗವಾಗಿದ್ದರು. ರಾಜ ಆಡಾಳಿತಕ್ಕೂ ನೂರಾರು ವರ್ಷಗಳ ಮುನ್ನ, ಕೊಡಗಿನಲ್ಲಿ ಅಧಿಕಾರ ವಿಕೇಂದ್ರೀಕರಣ ಮತ್ತು ಪ್ರಜಾಪ್ರಭುತ್ವ ಮಾದರಿಯ ಆಡಳಿತ ಇತ್ತು.
ಇದಕ್ಕೆ ಜಾನಪದದ ಆದರಾದಲ್ಲಿ ಮತ್ತು ಇಂದಿಗೂ ರೂಡಿ ಸಂಪ್ರದಾಯಗಳ ಆಚರಣೆಯ ಆಧಾರದಲ್ಲಿ, ಕಂಡುಬರುತ್ತಿರುವ ಆಚರಣೆಗಳು, ಕೊಡಗಿನ ಪುರಾತನ ಇತಿಹಾಸವನ್ನು ಸಾರಿ ಹೇಳುತ್ತವೆ.
ಪ್ರಾಚೀನ ಕೊಡಗಿನ ಆಡಳಿತ, ಅಧಿಕಾರ ವಿಕೇಂದ್ರೀಕರಣ ಹಾಗೂ ಪ್ರಜಾಪ್ರತ್ವ ಮಾದರಿಯ ಆಡಳಿತ ಮೊದಲು ಪ್ರಾರಂಬವಾದದ್ದೆ, ಒಕ್ಕ ಪದ್ದತಿ ಅಥವಾ ಕೌಟುಂಬಿಕ ಪದ್ದತಿಯಿಂದ. ಒಂದೇ ರಕ್ತ ಸಂಬಂಧದ ಆಧಾರದಲ್ಲಿ ಒಂದು ಒಕ್ಕವನ್ನು ಅಥವಾ ಕುಟುಂಬವನ್ನು ನಿರ್ದರಿಸಿ, ಆ ಕುಟುಂಬಕ್ಕೆ ಒಂದು ಹೆಸರನ್ನು ನೀಡಿ, ಅದರ ಕಾರ್ಯವ್ಯಾಪ್ತಿ ಮತ್ತು ಆಡಳಿತ ವ್ಯವಸ್ತೆಯನ್ನು ರೂಪಿಸಲಾಗುತಿತ್ತು. ಈ ಒಕ್ಕ ವ್ಯವಸ್ತೆಯಲ್ಲಿ ಒಕ್ಕದ ಮೂಲ ಪುರುಷನನ್ನ ಕಾರೋಣ, ಮಾಗುರು, ಅಜ್ಜಪ್ಪ ಹೆರಿನಿಂದ ಉಲ್ಲೇಖಿಸಿ ಆರಾದಿಸಲಾಗುತಿತ್ತು. ಈ ಗುರುಕಾರೋಣರೇ ಮೊದಲ ದೇವರು. ಈ ಗುರು ಕಾರೋಣರ ಸಾಕ್ಷಿಯಾಗಿ ಇಡೀ ಕುಟುಂಬವನ್ನ ನಿರ್ವಹಿಸಿ, ನಿಭಾಯಿಸಲಾಗುತಿತ್ತು. ಇಂತ ಒಕ್ಕದ ಹಿರಿಯನನ್ನ ಕೊರವುಕಾರ ಎಂಬ ಹೆಸರಿನಿಂದ ಉಲ್ಲೇಖಿಸಲಾಗುತ್ತದೆ. ಹಿರಿಯ ಮಹೀಳೆಯನ್ನು ಕೊರುವುಕಾರಿ ಎಂದು ಕರೆಯಲಾಗುತ್ತದೆ. ಇವರೇ ಆ ಒಕ್ಕದ ಎಲ್ಲಾ ನಿರ್ದಾರಗಳನ್ನು ತೆಗೆದುಕೊಳ್ಳುವ, ಪರಮಾಧಿಕಾರವನ್ನು ಹೊಂದಿರುತ್ತಾರೆ. ಜೊತೆಗೆ ಇಡೀ ಒಕ್ಕದ, ಕಷ್ಟ, ಸುಖ ಮತ್ತು ಬೇಕು, ಬೇಡಿಕೆಗಳನ್ನು ಈಡೇರಿಸುವ ಜವಾಬ್ದಾರಿಯನ್ನೂ, ಈ ಕೊರವುಕಾರನೇ ವಹಿಸಿಕೊಳ್ಳಬೇಕು. ಕುಟುಂಬದ ಸದಸ್ಯರ ನಡುವೆ ಏನೇ ಭೀನ್ನಾಭಿಪ್ರಾಯ, ಗೊಂದಲಗಳು, ವಿವಾದಗಳು ಬಂದರೂ, ಅದನ್ನು ಕೂಲಂಕುಶವಾಗಿ ವಿಚಾರಿಸಿ, ನ್ಯಾಯ ಸಮ್ಮತ ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯೂ, ಈ ಕೊರವುಕಾರನದ್ದೇ ಅಗಿದೆ. ಒಕ್ಕದೊಳಗಿನ ವಿವಾದ, ಅಸಮಾಧಾನಗಳು ತಣಿಯದಿದ್ದರೆ, ಆ ಸಮಸ್ಯೆಯನ್ನ ಊರ್ ಅಥವಾ ಕೇರಿಗೆ ಕೊಂಡೊಯ್ಯಲಾಗುತ್ತದೆ. ಒಂದು ವೇಳೆ, ಕೊರವುಕಾರನೇ ಆರೋಪಿತನಾಗಿ ತಪ್ಪಿತಸ್ಥನಾದರೆ, ಅಂತ ಸಂದರ್ಭದಲ್ಲಿ, ಕೊರವುಕಾರನ್ನನ್ನು ಬದಲಿಸುವ ವ್ಯವಸ್ತೆ, ಪ್ರಜಾಪ್ರಭುತ್ವ ಮಾದರಿಯಲ್ಲಿ ಒಕ್ಕ ಸದಸ್ಯರ ಬಹುಮತದ ಆಧಾರದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತಿತ್ತು. ಸಾಮಾನ್ಯವಾಗಿ ಒಕ್ಕದ ಹಿರಿಯನೇ ಕೊರವುಕಾರನಾಗಿರುತ್ತಾನಾದರೂ, ಕೆಲ ಸಂದರ್ಭಗಳಲ್ಲಿ, ಅರಿಯವನೇ ಪೆರಿಯಂವೊ ಅಂದರೆ ಅರಿತವನೇ ಹಿರಿಯ ಎಂಬ ನೆಲಗಟ್ಟಿನಲ್ಲಿ ಸಮರ್ಥ ಕಿರಿಯರನ್ನೂ ಒಕ್ಕ ಕೊರವುಕಾರನಾಗಿ ಆಯ್ಕೆ ಮಾಡಲಾಗುತಿತ್ತು. ಪ್ರತೀ ಒಕ್ಕಕೂ ಒಂದು ಪ್ರದೇಶ ಗಡಿಯನ್ನು ನಿಗದಿಪಡಿಸಿ, ಒಕ್ಕದ ಹೆಸರಿನಲ್ಲಿ ದಾಖಲಿಸಲಾಗುತಿತ್ತು, ಆ ಜಾಗವನ್ನು ಇಡೀ ಒಕ್ಕ ಸದಸ್ಯರು ಅನುಭವಿಸುವ ಅಧಿಕಾರ ನೀಡಿ, ಅದನ್ನು ಯಾವ ಕಾರಣಕ್ಕೂ ಪರಭಾರೆ ಮಾಡದಂತೆ ಕಟ್ಟುನಿಟ್ಟಿನ ಇಡಕಟ್ಟು ಇತ್ತು. ಇದನ್ನೇ ಭವಿಷ್ದಲ್ಲಿ ಜಮ್ಮ ಎಂದು ಕರೆಯಲಾಯಿತು. ನಾನಾ ಕಾರಣಗಳಿಂದ ಅಸ್ತಿತ್ವ ಕಳೆದು ಕೊಂಡ ಒಕ್ಕಗಳ ಜಮ್ಮಾವನ್ನು ಅರಸರ ಕಾಲದಲ್ಲಿ ಅವರ ಇಚ್ಚಾನುಸಾರ ಹಂಚಲಾಯಿತು. ಒಕ್ಕದ ಸದಸ್ಯರು ಅವಿಭಕ್ತವಾಗಿ ಒಂದೇ ಸೂರಿನಡಿ ಅಗತ್ಯಕ್ಕೆ ತಕ್ಕ ಕೋಣೆಗಳುಳ್ಳ ಮನೆಯನ್ನು ನಿರ್ಮಿಸಿ ವಾಸವಿದ್ದರು. ಇಂದಿಗೂ ಬಹುಪಾಲು ಒಕ್ಕಗಳಲ್ಲಿ ಇಂತ ಮನೆಗಳನ್ನು ಕಾಣಬಹುದು. ಈ ಮನೆಗಳನ್ನು ಬಲ್ಯಮನೆ, ಐನ್‌ಮನೆ, ಗುರುಮನೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇಂದಿಗೂ ಈ ಮನೆಗಳು ದೇವಾಲಯಗಳಿಗಿಂತ ಶ್ರೇಷ್ಟ ಮತ್ತು ಪವಿತ್ರವಾಗಿ ಕಾಣಲಾಗುತ್ತಿದೆ. ಇಲ್ಲಿಯೇ ಒಕ್ಕಕೆ ಸಂಬಂಧಿಸಿದ ಎಲ್ಲಾ ಆಚರಣೆಗಳು, ಸಭೆಗಳೂ ನಡೆಯುತಿದ್ದವು. ಇಂದಿಗೂ ಹಲವು ಒಕ್ಕಗಳು ಈ ವ್ಯವಸ್ಥೆಯನ್ನು ಉಳಿಸಿಕೊಂಡಿವೆ. ಇಡೀ ಕೊಡವು ಪರಂಪರೆಯ, ಮೂಲಬುನಾದಿಯೇ ಒಕ್ಕ ಪದ್ದತಿ. ಆದಿಯಲ್ಲಿ ಸುಮಾರು 4800+ ಒಕ್ಕಗಳು ಇದ್ದವೆಂಬ ದಾಖಲೆ ಇದೆಯದರೂ ಪ್ರಸ್ತುತ ಒಕ್ಕಗಳ ಸಂಖ್ಯೆ 1200+ಕ್ಕೆ ಕುಸಿದಿದೆ.
ಇಂತ ಹಲವು ಒಕ್ಕಗಳ ಸಮೂಹವನ್ನು ಕೇರಿ ಅಥವಾ ಊರ್ ಎಂದು ಕರೆಯಲಾಗುತ್ತದೆ. ಊರಿನ ಮಧ್ಯ ಭಾಗವನ್ನು ಗುರುತಿಸಿ, ಆಲದ ಮರ ಅಥವಾ ಚಿತ್ತಾಲ್ ಮರದ ಅಡಿಯ ಪ್ರದೇಶವನ್ನು ಊರ್ ಮಂದ್ ಅಥವಾ ಕೇರಿ ಮಂದ್ ಎಂದು ಕರೆಯಲಾಗುತ್ತದೆ. ಈ ಮಂದ್‌ಗರೆಯಲ್ಲಿ ಅಂಬಲ ಎಂಬ ಒಂದು ರೀತಿಯ ಮನೆಯನ್ನು ನಿರ್ಮಿಸಲಾಗುತ್ತದೆ. ಅದೇ ಆ ಊರಿನ ಪರಮ ಪವಿತ್ರವಾದ, ನ್ಯಾಯಾಲಯಕ್ಕೆ ಸಮನಾದ ಸ್ಥಳ. ಈ ಊರ್ ಅಥವಾ ಕೇರಿಯ ಮುಕ್ಯಸ್ಥನಾಗಿ ಊರ್ ತಕ್ಕ ಅಥವಾ ಕೇರಿ ತಕ್ಕ ಎಂಬ ಜವಬ್ದಾರಿಯನ್ನು ನೀಡಿ, ಅದನ್ನು ಸಮರ್ಥ ವ್ಯಕ್ತಿಗೆ ನೀಡಲಾಗುತ್ತಿತ್ತು. ತಕ್ಕನು ಇಡೀ ಊರಿನ ಮುಖಂಡನಾಗಿ, ಆ ಊರಿನ ಎಲ್ಲಾ ಆಗು ಹೋಗುಗಳು, ಬೇಕು, ಬೇಡಿಕೆಗಳನ್ನು, ನಿಭಾಯಿಸುವ ಹೊಣೆಗಾರಿಕೆಯನ್ನು ಹೊತ್ತಿದ್ದು, ಒಕ್ಕದೊಳಗೆ ನಿರ್ಣಯವಾಗದ ನ್ಯಾಯ ತೀರ್ಮಾನಗಳು ಊರಿನಲ್ಲಿ ಪ್ರಸ್ತಾಪವಾದರೆ, ಆ ಅಹವಾಲನ್ನು ಕೂಲಂಕುಷವಾಗಿ ಪರಿಶೀಲಿಸಿ, ಊರಿನ ಎಲ್ಲಾ ಸದಸ್ಯರ ಅಭಿಪ್ರಾಯನ್ನು ಪಡೆದು ತೀರ್ಪು ನೀಡುತಿದ್ದರು. ಊರಿಗೆ ಸಂಬಂದಿಸಿದ ಎಲ್ಲಾ ಹಬ್ಬ ಹರಿದಿನಗಳ ಆಚರಣೆಯ ತೀರ್ಮಾನಗಳು ಕೂಡ ಈ ಅಂಬಲದಲ್ಲಿಯೇ ತೀರ್ಮಾನವಾಗುತಿತ್ತು. ಒಂದು ವೇಳೆ, ಊರ್ ತಕ್ಕ ತಪ್ಪಿತಸ್ಥನಾದರೂ, ಪ್ರಜಾಪ್ರಭುತ್ವ ಮಾದರಿಯಲ್ಲಿ ಬದಲಾಯಿಸುವ ವ್ಯವಸ್ಥೆ ಇತ್ತು. ಇದಕ್ಕೆ ಪೂರಕವೆಂಬಂತೆ ತಕ್ಕ ಪೋಲಿಯಾಚೇಂಗಿ ಊರ್ )( ಪಾಳಾಗತಿಪ್ಪ (ತಕ್ಕ ಕೆಟ್ಟವನಾದರೆ ಊರು )( ಹಾಳಾಗದಿದ್ದಿತೇ) ಎಂಬ ಗಾದೆ ಇಂದಿಗೂ ಪ್ರಚಲಿತದಲ್ಲಿದೆ.
ಹಲವು ಊರುಗಳನ್ನು ಒಟ್ಟು ಸೇರಿಸಿ ಒಂದು ನಾಡು ಎಂದು ರಚಿಸಲಾಗುತಿತ್ತು. ಆ ನಾಡಿಗೆ ಒಬ್ಬ ನಾಡ್‌ತಕ್ಕನನ್ನು ನೇಮಿಸಿ, ನಾಡಿನ ಮದ್ಯಭಾಗದಲ್ಲಿ ನಾಡ್ ಮಂದನ್ನು ರಚಿಸಲಾಗುತಿತ್ತು. ಆ ನಾಡಿಗೆ ಸಂಬಂಧಿಸಿದ ಎಲ್ಲಾ ಆಗು ಹೋಗುಗಳೂ ಕೂಡ, ಅದೇ ನಾಡ್‌ಮಂದಿನಲ್ಲಿ ನಡೆಯುತಿತ್ತು. ನಾಡ್ ತಕ್ಕನ ತೀರ್ಮಾನವೇ ಸಾರ್ವಕಾಲಿಕ ತೀರ್ಪಾಗುತಿತ್ತು. ನಾಡ್ ತಕ್ಕನನ್ನೂ ಕೂಡ ಬದಲಿಸುವ ಮತ್ತು ಪ್ರಶ್ನಿಸುವ ಅಧಿಕಾರ, ಆ ನಾಡಿನ ಸಾಮಾನ್ಯರಿಗೆ ಇತ್ತು. ಕೊಡಗಿನಲ್ಲಿ ಒಟ್ಟು 45 ನಾಡುಗಳಿದ್ದವು, ಪ್ರಸ್ತುತ 35 ನಾಡುಗಳ ಪ್ರಸ್ತಾಪವಿದೆ.
ನಾಡ್ ಮಂದಿನ ನಂತರ ಕೊಂಬು ಮತ್ತು ಪಟ್ಟಿ ಎಂಬ ವಿಭಾಗ ಇತ್ತು ಇದನ್ನು ಹಲವು ನಾಡುಗಳ ಒಂದು ಒಕ್ಕೂಟವಾಗಿ ರಚಿಸಲಾಗುತಿತ್ತು. ಕೊಂಬು ಎಂದರೆ ಪ್ರಾಚೀನ ಕಾಲದಲ್ಲಿ, ನಿರ್ಧಾರ ಮಾಡಲು ಬೇಕಾದ ತಂತ್ರಜ್ಞಾನ ಇಲ್ಲದ ಕಾರಣ, ಕೊಂಬು ಎಂಬ ಪರಿಕರವನ್ನು ಊದಿ ಅದರ ಧ್ವನಿ ನಿಂತ ಒಟ್ಟು ವ್ಯಾಪ್ತಿಯನ್ನು ಒಂದು ಕೊಂಬು ಎಂದು ತೀರ್ಮಾನಿಸಿ, ಆ ಕೊಂಬುಗಳ ಒಟ್ಟು ವ್ಯವಸ್ತೆಗೆ ಪಟ್ಟಿ ಎಂದು ಹೆಸರಿಸಲಾಗಿತ್ತು. ಪಟ್ಟಿ ಎಂದರೆ, ಅಗಲವಾದ ಅಥವಾ ವಿಸ್ತಾರವಾದ ಪ್ರದೇಶ ಎಂಬ ಅರ್ಥವನ್ನೂ ನೀಡುತ್ತದೆ. ಈ ಪಟ್ಟಿಯ ವ್ಯಾಪ್ತಿಗೆ ಸೇರಿದ ಎಲ್ಲಾ ವಿಚಾರಗಳು, ನಾಡ್ ಮಂದ್‌ಗರೆಯಲ್ಲಿ ತೀರ್ಮಾನವಾಗದ ವಿವಾದಗಳೂ ಪ್ರಸ್ತಾಪವಾಗಿ, ತೀರ್ಮಾನವಾಗುತಿತ್ತು. ಇದು ಉಚ್ಛ ನ್ಯಾಯಾಲದಂತೆ ಕಾರ್ಯನಿರ್ವಹಿಸುವ ಜೊತೆಗೆ, ರಾಜ್ಯ ಸರ್ಕಾರದಂತೆ ಜವಾಬ್ದಾರಿಯನ್ನೂ ನಿಭಾಯಿಸುತಿತ್ತು. ಇಲ್ಲಿ ತೀರ್ಪುಗಾರರಾಗಿ ಅಥವಾ ಆಡಳಿತಗಾರರಾಗಿ, ದೇಶ ತಕ್ಕರು ಕಾರ್ಯನಿರ್ವಹಿಸುತಿದ್ದರು. ಒಟ್ಟು 12 ಕೊಂಬು 08 ಪಟ್ಟಿಗಳು ಇವೆ.
ಅಂತಿಮವಾಗಿ ಇಡೀ ಕ್ರೋಡ ಅಥವಾ ಕೊಡಗಿನ ವ್ಯಾಪ್ತಿಗೆ ಪರಮೋಚ್ಛ ನೆಲೆಯಾಗಿ, ದೇಶ ಮಂದನ್ನು ರಚಿಸಲಾಗಿತ್ತು. ದೇಶ ಮಂದ್, ಇಡೀ ವ್ಯವಸ್ಥೆಯ ಅಂತಿಮ ನಿರ್ಣಾಯಕ ಸ್ಥಾನವಾಗಿತ್ತು. ಈ ದೇಶ ಮಂದ್‌ಗೆ ಎಂಟು ದೇಶ ತಕ್ಕರನ್ನ ನೇಮಿಸಲಾಗಿ, ಎಂಟರಲ್ಲಿ ಒಬ್ಬನನ್ನ ತಲೆತಕ್ಕ ಎಂಬ ಮುಖಂಡತ್ವವನ್ನು ನೀಡಲಾಗಿತ್ತು. ತಲೆ ತಕ್ಕನು ಇತರ ಏಳು ದೇಶ ತಕ್ಕರ ಅಭಿಪ್ರಾಯವನ್ನು ಕ್ರೋಡೀಕರಿಸಿ ತೀರ್ಪು ನೀಡುತಿದ್ದರು. ಅದೇ ಅಂತಿಮ ಮತ್ತು ಪರಮೋಚ್ಚ ತೀರ್ಮಾನವಾಗಿ ಇಡೀ ಕ್ರೋಡ ಅಥವಾ ಕೊಡಗು ದೇಶವೇ ಈ ಆದೇಶವನ್ನು ಚಾಚೂ ತಪ್ಪದೆ ಪಾಲಿಸುತಿತ್ತು. ಎಲ್ಲಾ ದೇಶ ತಕ್ಕ, ತಲೆ ತಕ್ಕರನ್ನು ಬದಲಿಸುವ ಪ್ರಜಾಪ್ರಭುತ್ವ ವ್ಯವಸ್ಥೆಯೂ ಇತ್ತು. ಕೊಡಗಿನ ಸಮ ಮದ್ಯಬಾಗವಾದ ಕುರುಳಿ ಅಂಬಲ ದೇಶ ಮಂದ್ ಎಂಬುದು ಹಲವರ ಅಭಿಪ್ರಾಯವಾದರೂ, ಈ ಕುರಿತು ಕೂಲಂಕುಷ ವಿಮರ್ಷೆಯ ಅಗತ್ಯವಿದೆ.
ಕ್ರೋಡ ಅಥವಾ ಕೊಡವು ದೇಶ, ಪಟ್ಟಿ, ನಾಡ್, ಕೇರಿ ಒಕ್ಕಗಳನ್ನು ಕಾಯಲು, ಸಾಮರ್ಥ್ಯ ಇರುವ, ವ್ಯಕ್ತಿಯ ನೇತೃತ್ವದಲ್ಲಿ ಒಂದು ಸಮರ ಪಡೆಯನ್ನು ಸದಾ ಸನ್ನಧ್ದಿನಲ್ಲಿ ಇಡಲಾಗುತಿತ್ತು. ಇಂತ ಸಾಹಸಿಯನ್ನು ನಾಯಕನೆಂದು ಕರೆಯಲಾಗುತಿತ್ತು. ಯುದ್ದದಲ್ಲಿಯೋ ಅಥವ ಇನ್ಯಾವುದೇ ರೀತಿಯಲ್ಲಿ ಆ ನಾಯಕ ಕಾಲವಾದರೆ, ಅಂತವರಿಗೆ ಪಡೆಭೀರ ಎಂದು ಗೌರವ ನೀಡಿ, ಪ್ರತೀ ಸಂದರ್ಭದಲ್ಲಿಯೂ ಪೂಜನೀಯ ಸ್ಥಾನಮಾನ ನೀಡಲಾಗುತ್ತದೆ. ಇಂಥ ಪಡೆಭೀರರು ಎಲ್ಲಾ ಒಕ್ಕದಲ್ಲೂ ಒಬ್ಬರಿಬ್ಬರು ಇರುವುದು ವಿಶೇಷ.
ಕೊಡಗಿನಲ್ಲಿ ರಾಜಾಡಳಿತದ ಕುರುಹುಗಳು ದೊರೆಯುವುದು ಕ್ರಿ. ಪೂ. ಎರಡನೇ ಶಾತಮಾನದಿಂದ ಆದರೂ, ಕ್ರಿ.ಪೂರ್ವಕ್ಕೂ ಮೊದಲೇ, ಕೊಡವರಲ್ಲಿ ಸಮರ್ಪಕ ಆಡಳಿತ ವ್ಯವಸ್ಥೆಯನ್ನು ಕಾಣುತ್ತೇವೆ. ಮಹಾಮಾತೆ ಕಾವೇರಿಯು ಕೃತ ಯುಗದಲ್ಲಿಯೇ ಕೊಡಗಿನಲ್ಲಿ, ಆವಿರ್ಭವಿಸಿದ ಪ್ರಸ್ತಾಪವನ್ನು ಹಲವು ಪುರಾಣಗಳು ಮಾಡಿವೆ ಮತ್ತು ಜಾನಪದದಲ್ಲೂ ಉಲ್ಲೇಖಗಳು ಸಿಗುತ್ತವೆ. ಕಾವೇರಿ ಬರುವ ಮೊದಲೇ, ಕೊಡವು ದೇಶ ಅಸ್ತಿತ್ವದಲ್ಲಿತ್ತು, ಅಲ್ಲಿ ಕೌಟುಂಬಿಕ ಪ್ರಜಾಪ್ರಭುತ್ವ ವ್ಯವಸ್ತೆ ಜಾರಿಯಲ್ಲಿತ್ತು, ಎಂಬದೂ ಕೂಡ ಜಾನಪದ ಹಿತಿಹಾಸದಲ್ಲಿ ದೊರುಕುತ್ತದೆ. ಮತ್ತು ಇಂದಿಗೂ ಅಸ್ತಿತ್ವದಲ್ಲಿರುವ ತಕ್ಕಾಮೆಯ ವ್ಯವಸ್ಥೆ ಕೂಡ ಇದನ್ನ ಪುಷ್ಟೀಕರಿಸುತ್ತದೆ.
ಹೆಸರಾಂತ ಇತಿಹಾಸಕಾರ, ಡಾ. ಎಸ್.ಕೆ. ಶಾಸ್ತ್ರಿ ಅವರು, ಕೊಡವರು ಇತಿಹಾಸದ ಮೂಲದಲ್ಲಿದ್ದೀರಿ, ಆದರೆ ಇತಿಹಾಸದ ಪುಟದಲ್ಲಿ ಕಾಣುತಿಲ್ಲ ಎಂಬ ಮಾತನ್ನು ಸ್ಮರಿಸುತ್ತಾ ಅವರು ಹೇಳಿದಂತೆ, ಕೊಡಗು ತನ್ನದೇ ಒಂದು ಸಾಮ್ರಾಜ್ಯವಾಗಿ, ದೇಶವಾಗಿ ಅಧಿಕಾರ ವಿಕೇಂದ್ರೀಕೃತ, ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ, ಕ್ರಿಸ್ತಪೂರ್ವದ ಪೂರ್ವದಿಂದಲೇ ಕಾಣುತ್ತದಾದರೂ, ಇತಿಹಾಸದ ಪುಟಗಳಲ್ಲಿ ಹಲವುಕಡೆ, ಮಾಯವಾಗಿರುವುದು, ಒಂದು ಶ್ರೀಮಂತ ಪರಂಪರೆಯನ್ನು ನಮ್ಮ ಆಧುನಿಕ ಇತಿಹಾಸ ಕಳೆದುಕೊಂಡು ಬಡವಾಗಿದೆ ಎನ್ನಬಹುದು. ಅಲ್ಲದೆ ಹಲವು ಪ್ರಭಾವಿ ಆಡಳಿತ ವ್ಯವಸ್ಥೆಗಳು ಕೊಡಗಿನ ಮೂಲ ಇತಿಹಾಸದ ಚಿತ್ರಣವನ್ನು ಬದಲಾಯಿಸಿ, ತಮ್ಮ ಅಧಿಕಾರದ ದರ್ಪದಲ್ಲಿ ತಮಗೆ ಬೇಕಾದಂತೆ, ಬದಲಾಯಿಸಿ, ಕೆಲವನ್ನು ತಾವೇ ಸೃಷ್ಟಿ ಮಾಡಿರುವಂತೆ ದಾಖಲೀಕರಿಸಿರುವುದೂ ಕೂಡ ಒಂದು ನೈಜ ಪರಂಪರೆಯನ್ನು ಅಳಿಸುವ ಘೋರ ಪ್ರಯತ್ನ. ಆದರೂ ಭವ್ಯ ಕೊಡಗು ತನ್ನ ಬಹುಪಾಲು ವಾಸ್ತವತೆಯನ್ನು ಇಂದಿಗೂ ಕಾಪಾಡಿಕೋಂಡು ಬರುತಿದ್ದು, ಮುಂದಿನ ದಿನಗಳಲ್ಲಾದರೂ, ಕೊಡಗಿನ ಪುರಾತನ ಪ್ರಕೃತಿ ಆಧಾರಿತ ಸಂಶೋದನೆಗಳು ನಡೆದು, ನೈಜ ಇತಿಹಾಸ ಹೊರಬರಲಿ ಎಂಬ ಆಶಯದೊಂದಿಗೆ, ಪವಿತ್ರ ಕೊಡವು ಮಣ್ಣಿಗಾಗಿ, ದುಡಿದು, ಸಂಸ್ಕೃತಿ ಸಂಪ್ರದಾಯವನ್ನು ಉಳಿಸಿ, ನಿತ್ಯ ಪ್ರೇರಣೆಯಾಗಿ ಹರಸುತ್ತಿರುವ ಎಲ್ಲಾ ಗುರುಕಾರೋಣರಿಗೆ, ಆದಿಮಾತೆ ಕಾವೇರಿ, ತ್ರಿಮೂರ್ತಿಯಾದಿಯಾಗಿ, ಮಾದೇವ, ನಾಥರೂಪ ಇಗ್ಗುತಪ್ಪರನ್ನೂ ಸ್ಮರಿಸುತ್ತಾ, ವಿಷಯ ಸಮಾಪ್ತಿಗೊಳಿಸುತ್ತೇನೆ.