ಮಡಿಕೇರಿ, ಅ.26: ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಥಿತಿ ಶಿಕ್ಷಕರು ಮತ್ತು ಬಿಸಿಯೂಟ ತಯಾರಕರ ಪೂರ್ತಿ ವೇತನವನ್ನು ಮುಂದಿನ ಬುಧವಾರದೊಳಗೆ ಪಾವತಿಸುವಂತೆ ಸಂಬಂಧಿಸಿದ ಇಲಾಖೆಕೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಸೂಚಿಸಿದ್ದಾರೆ.
ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅಥಿತಿ ಶಿಕ್ಷಕರು ಮತ್ತು ಬಿಸಿಯೂಟ ತಯಾರಕರಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ಪಾವತಿಯಾಗದೆ, ಅನುಭವಿಸುತ್ತಿದ್ದ ಸಂಕಷ್ಟವನ್ನ ಗಮನಿಸಿದ ಶಾಸಕರು, ಶಾಲಾ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಮುಂದಿನ ಬುಧವಾರದೊಳಗೆ ಸಂಪೂರ್ಣ ಬಾಕಿ ಪಾವತಿಸುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ.
ರಾಜ್ಯ ಸರ್ಕಾರ ವೇತನ ಬಿಡುಗಡೆ ಮಾಡಿ ತಿಂಗಳು ಕಳೆದಿದ್ದರೂ, ಜಿಲ್ಲೆಯ ಅಧಿಕಾರಿಗಳು, ತಾಂತ್ರಿಕ ಅಡಚಣೆಯ ನೆಪವೊಡ್ಡಿ, ವೇತನ ಪಾವತಿಗೆ ಮೀನಾಮೇಷ ಎಣಿಸುತಿದ್ದರು. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸಮರ್ಪಕವಾಗಿ ವೇತನ ಪಾವತಿಯಾದರೂ, ಕೊಡಗಿನಲ್ಲಿ ತಾಂತ್ರಿಕ ಸಮಸ್ಯೆಯ ನೆಪ ಒಡ್ಡಲಾಗಿತ್ತು. ಶಾಸಕರ ಆದೇಶ ಬರುತಿದ್ದಂತೆ, ಎಚ್ಚೆತ್ತ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಅತಿಥಿ ಶಿಕ್ಷಕರು ಮತ್ತು ಬಿಸಿಯೂಟ ತಯಾರಕರ ವೇತನವನ್ನು, ಎರಡು ಹಂತದಲ್ಲಿ ಪಾವತಿಸಲು ಮುಂದಾಗಿದ್ದು, ಮೊದಲೆರಡು ತಿಂಗಳ ವೇತನ ನಾಡಿದ್ದು ಸೋಮವಾರ ಮತ್ತು ಉಳಿದೆರೆಡು ತಿಂಗಳ ವೇತನವು ಮುಂದಿನ ಬುಧವಾರದಂದು ಪಾವತಿಸುವುದಾಗಿ ತಿಳಿಸಿದ್ದಾರೆ.
ತಾಂತ್ರಿಕ ಲೋಪದಿಂದ ಆದ ಅಡಚಣೆಗೆ ವಿಷಾಧ ವ್ಯಕ್ತಪಡಿಸಿರುವ ಶಾಸಕ ಪೊನ್ನಣ್ಣ ಅವರು, ಮುಂದಿನ ದಿನಗಳಲ್ಲಿ ನಿಗಧಿತ ಸಮಯದೊಳಗೆ ವೇತನ ಪಾವತಿಸುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ ಎಂದು, ಕಾಗ್ರೇಸ್ ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕ ಸೂರಜ್‌ಹೊಸೂರು ಅವರು ತಿಳಿಸಿದ್ದಾರೆ.