nadubadenews, ವಿರಾಜಪೇಟೆ, ಅ.25: ಅತ್ಯಧಿಕ ಮಳೆಯಾಗುವ ಗುಡ್ಡಗಾಡು, ಅದರಲ್ಲೂ ಬಹುಪಾಲು ಅರಣ್ಯ ಪ್ರದೇಶವೇ ಇರುವ ದಕ್ಷಿಣ ಕೊಡಗಿನಲ್ಲಿ ವಿದ್ಯತ್ ಸಮಸ್ಯೆಯದ್ದೇ ದೊಡ್ಡ ತಲೆನೋವಾಗಿತ್ತು, ಇದಕ್ಕೆ ಮೂಲ ಕಾರಣ ವಿಸ್ತಾರದಲ್ಲಿ ಅತಿದೊಡ್ಡ ಕ್ಷೇತ್ರವಾಗಿರುವುದು ಮತ್ತು ಹೆಚ್ಚಿನ ವಿದ್ಯತ್ ಲೈನ್‌ಗಳು, ಅರಣ್ಯ, ತೋಟದೊಳಗೇ ಹಾದು ಹೋಗಿರುವುದು. ಈ ಎಲ್ಲದರ ಜೊತೆಗೆ ಹಳೆಯದಾದ ವಿದ್ಯತ್ ಉಪಕೇಂದ್ರಗಳು ಹಾಗೂ ಕಡಿಮೆ ಸಾಮರ್ಥ್ಯದ ಪರಿಕರಗಳು. ಕಳೆದ ಹಲವು ದಸಕಗಳಿಂದ ಮೇಲ್ದರ್ಜೆಗೆ ಏರಿಸದೇ, ಲಭ್ಯ ಸಲಕರಣೆಗಳಿಗೇ ತೇಪೆ ಹಚ್ಚುವ ಕಾರ್ಯ ಆಗುತಿತ್ತು. ವಿರಾಜಪೇಟೆಯ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ತಾವು ಆಯ್ಕೆಯಾದ ಬಳಿಕ, ನಾಗೇರೀಕರಿಗೆ ಬೇಕಾಗುವ ಪ್ರಥಮ ಆದ್ಯತೆಯ ಮೂಲಭೂತ ಸೌಕರ್ಯವಾದ ವಿಧ್ಯತ್ ವ್ಯವಸ್ಥೆಗೆ, ಹೊಸ ಕಾಯಕಲ್ಪ ನೀಡುವ, ಯೋಜನೆಯನ್ನು ತಯಾರಿಸಿ, ಇಂಧನ ಸಚಿವರಿಗೆ ಸಲ್ಲಿಸಿದ್ದರು.
ಬಹುಕೋಟಿ ಮೊತ್ತದ ಈ ಯೋಜನೆಗೆ ಇದೀಗ ಸರ್ಕಾರದ ಅನುಮೋದನೆ ದೊರೆತಿದ್ದು, ದಕ್ಷಿಣ ಕೊಡಗಿನ ಬಹುಕಾಲದ ಬೇಡಿಕೆಯೊಂದು ಈಡೇರಿ, ವಿದ್ಯತ್ ಬರ ನೀಗಿದಂತಾಗಲಿದೆ. ನಾಲ್ಕು ಪ್ರಮುಖ ಭಾಗಗಳಲ್ಲಿ 66 ಕೆ.ವಿ.ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಹಾಗೂ ಎರಡು ಭಾಗಗಳಲ್ಲಿ 33 ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಸ್ಥಾಪನೆಯ ಕಾಮಗಾರಿ ಕೈಗೊಳ್ಳಲು, ಹದಿನೈದು ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸುವಂತೆ, ಇಂಧನ ಸಚಿವ ಕೆ.ಜೆ ಜಾರ್ಜ್, ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಕೋರಿಕೆ ಮೇರೆಗೆ, ಗುರುವಾರ, ಉನ್ನತ ಮಟ್ಟದ ಸಭೆ ನಡೆಸಿದ ಸಚಿವ, ಜಾರ್ಜ್ ಅವರು ಹುದಿಕೇರಿ,ಬಾಳಲೆ, ಮೂರ್ನಾಡು , ಸಿದ್ದಾಪುರ ಗಳಲ್ಲಿ 66 ಕೆ.ವಿ.ಸಾಮರ್ಥ್ಯದ ವಿದ್ಯುತ್ ಉಪಕೇಂದ್ರಗಳು ಹಾಗೂ ಸಂಪಾಜೆ, ಭಾಗಮಂಡಲ ಗಳಲ್ಲಿ 33ಕೆ.ವಿ. ಸಾಮರ್ಥ್ಯದ ವಿದ್ಯುತ್ ಉಪಕೇಂದ್ರಕ್ಕೆ ಸಂಬಂಧಿಸಿದ ಕಾಮಗಾರಿಗೆ, ಮುಂದಿನ ಹದಿನೈದು ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಚಿವರ ಗೃಹ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಸೇರಿದಂತೆ ಇಲಾಖೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.