Nadubadenews, ಸಂಪಾಜೆ ಅ.22 : ಕೊಡಗು ಜಿಲ್ಲೆಯ ಅರಣ್ಯಭಾಗದ ನಿವಾಸಿಗಳನ್ನು ಕಾಡುತ್ತಿರುವ ವನ್ಯಪ್ರಾಣಿಗಳ ಸಮಸ್ಯೆಗೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ ಅವರು ನಿರಂತರ ಶ್ರಮ ವಹಿಸುತಿದ್ದು, ಶೀಘ್ರದಲ್ಲಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದು, ಕರ್ನಾಟಕ ಸರ್ಕಾರದ ರಾಜ್ಯ ವನ್ಯ ಜೀವಿ ಸಂರಕ್ಷಣಾ ಮಂಡಳಿಯ ಸದಸ್ಯ ಶ್ರೀ ಸಂಕೇತ್ ಪೂವಯ್ಯ ಅವರು ಭರವಸೆ ನೀಡಿದರು.
ಸಂಪಾಜೆ ಹೋಬಳಿಯ ಸಂಪಾಜೆ, ಚೆಂಬು, ಪೆರಾಜೆ ಭಾಗದಲ್ಲಿ ಜನಸಾಮಾನ್ಯರ ಬವಣೆಯಾಗಿರುವ ವನ್ಯಜೀವಿ ಹಾಗೂ ಮಾನವ ಸಂಘರ್ಷಕ್ಕೆ ಸಂಬಂಧಪಟ್ಟ ರೈತರೊಂದಿಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾನ್ಯ ಶಾಸಕರಾದ ಶ್ರೀ ಎ.ಎಸ್ ಪೊನ್ನಣ್ಣ ರವರ ಸೂಚನೆಯಂತೆ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಶ್ರೀ ಸಂಕೇತ್ ಪೂವಯ್ಯ ರವರು ಆಗಮಿಸಿ ಸಾರ್ವಜನಿಕ ಚರ್ಚೆ ನಡೆಸಿದರು. ಅರಣ್ಯ ಇಲಾಖೆ ವತಿಯಿಂದ ACF ಮೋಷಿನ್ ಭಾಷಾ ರವರು ಆಗಮಿಸಿದ್ದರು.
ಸಂಪಾಜೆ ಗ್ರಾಂ.ಪಂ. ಸಭಾಭವನದಲ್ಲಿ ಅ 22 ರಂದು ನಿಗದಿಪಡಿಸಿದ ಸಭೆಗೆ ಆಗಮಿಸಿದ ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಮಾನ್ಯ ಸಂಕೇತ್ ಪೂವಯ್ಯ ಅವರಲ್ಲಿ ಹೇಳಿಕೊಂಡು ಮನವಿ ಸಲ್ಲಿಸಿದರು. ಕೊಡಗು ಸಂಪಾಜೆ, ಪೆರಾಜೆ, ಚೆಂಬು ಗ್ರಾಮದ ಆನೆ, ಮಂಗ ಹಾಗೂ ಇತರ ವನ್ಯ ಪ್ರಾಣಿಗಳಿಂದ ಕೃಷಿಕರು ಅನುಭವಿಸುತ್ತಿರುವ ಹಾವಳಿಯ ಸಮಸ್ಯೆ, ವಿದ್ಯುತ್, ನೆಟ್ ವರ್ಕ್ ಹಾಗೂ ಇತರ ಮೂಲಭೂತ ಸಮಸ್ಯೆಗಳಿಗೆ ಅರಣ್ಯ ಇಲಾಖೆ ವತಿಯಿಂದ ಆಗುತ್ತಿರುವ ವಿಳಂಬದ ಬಗ್ಗೆ ಗ್ರಾಮಸ್ಥರು ಹೇಳಿಕೊಂಡು ಮನವಿಯನ್ನು ನೀಡಿದರು.
ಸೂರಜ್ ಹೊಸೂರು, ಬಿ.ಎ ಗಣಪತಿ, ಗಿರೀಶ್ ಹೊಸೂರು ಮತ್ತಿತರರು ಮಾತನಾಡಿ ಸಂಕ್ಷಿಪ್ತವಾಗಿ ಜನರ ಸಮಸ್ಯೆಗಳನ್ನು ಮಾನ್ಯ ಸಂಕೇತ್ ಪೂವಯ್ಯ ರವರಿಗೆ ಹಾಗೂ ಎಸಿಎಫ್ ರವರಿಗೆ ಮನವರಿಕೆ ಮಾಡಿಕೊಟ್ಟರು.
ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸಂಕೇತ ಪೂವಯ್ಯ ರವರು, ಈ ಎಲ್ಲಾ ಸಮಸ್ಯೆಗಳ ಅರಿವು ಮಾನ್ಯ ಶಾಸಕರಾದ ಶ್ರೀ ಎ.ಎಸ್ ಪೊನ್ನಣ್ಣರವರಿಗೆ ಇದ್ದು, ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಮಾನ್ಯ ಶಾಸಕರ ಅವಿರತ ಶ್ರಮ ಹಾಗೂ ಪ್ರಯತ್ನಗಳನ್ನು ಸಭೆಗೆ ವಿವರಿಸಿದ್ದರು.
ಕಳೆದ ಆಗಸ್ಟ್ 11ರಂದು ಮಾನ್ಯ ಶಾಸಕರು 11 ದೇಶಗಳ ಪ್ರಮುಖರೊಂದಿಗೆ ಹಾಗೂ ನಮ್ಮ ನೆರೆ ರಾಜ್ಯಗಳ ಸಂಬಂಧಪಟ್ಟ ಇಲಾಖೆ ಮತ್ತು ಸಚಿವರೊಂದಿಗೆ ಸಭೆ ನಡೆಸಿ, ಈ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೈಗೊಂಡ ಶಿಫಾರಸುಗಳನ್ನು ಮಾನ್ಯ ಅರಣ್ಯ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ನೀಡಿರುವ ಬಗ್ಗೆ ಹೇಳಿದರು. ಮಾನವ ಪ್ರಾಣಿ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರೀ ಪೊನ್ನಣ್ಣ ರವರು ಈಗಾಗಲೇ 50 ಕ್ಕೂ ಅಧಿಕ ಸಭೆಯನ್ನು ಕೇಂದ್ರ ಸ್ಥಾನದಲ್ಲಿ ನಡೆಸಿ ಸೂಕ್ತ ಮಾರ್ಗಗಳ ಬಗ್ಗೆ ಚಿಂತಿಸಿರುವುದನ್ನು ಸಭೆಗೆ ಹೇಳಿದರು. ಸಭೆಗೆ ಶ್ರೀ ಸಂಕೇತ್ ಪೂವಯ್ಯ ರವರು ಈ ಕೆಳಗಿನ ವಿಷಯಗಳನ್ನು ಮನವರಿಕೆ ಮಾಡಿದರು.
ಪ್ರಮುಖವಾಗಿ ಆನೆಗಳು ನಾಡಿಗೆ ಬರುವುದನ್ನು ತಡೆಯಲು ರೈಲ್ವೇ ಬ್ಯಾರಿಕೇಡ್ ಗಳನ್ನು ಅಳವಡಿಸಲು ಶಿಫಾರಸ್ಸು ಮಾಡಲಾಗಿದೆ. ಆನೆ ಹಾಗೂ ಇತರ ಪ್ರಾಣಿಗಳ ಚಲನವಲವನ್ನು ಗುರುತಿಸಲು ಸೋಲಾರ್ ಚಾಲಿತ ಕ್ಯಾಮರಗಳನ್ನು ಬಳಸುವುದು ಮತ್ತು ಈ ಕ್ಯಾಮರಗಳ ವೀಕ್ಷಣೆಯನ್ನು ಕೇಂದ್ರ ಸ್ಥಾನದಲ್ಲಿ ಮಾಡಲು ವ್ಯವಸ್ಥೆ ಕಲ್ಪಿಸುವುದು. ಆನೆಗಳ ಹಾವಳಿ ತಡೆಗಟ್ಟಲು ಸೋಲಾರ್ ದೀಪಗಳನ್ನು ಅಳವಡಿಸಲಾಗುವುದು. ಈ ಭಾಗದ ರೈತರಿಗೆ ಪ್ರಮುಖವಾಗಿ ಕಾಡುತ್ತಿರುವ ಮಂಗಗಳ ಹಾವಳಿಯಿಂದ ಬಚಾವ್ ಮಾಡಲು ಶ್ರೀ ಎ.ಎಸ್ ಪೊನ್ನಣ್ಣ ರೊಂದಿಗೆ ಚರ್ಚಿಸಿ ಮಂಕಿ ಟಾಸ್ಕ್ ಫೋರ್ಸ್ ರಚಿಸುವ ಬಗ್ಗೆ ಮಾನ್ಯ ಅರಣ್ಯ ಸಚಿವರಾದ ಶ್ರೀ ಈಶ್ವರ್ ಖಂಡ್ರೆ ರವರಿಗೆ ಮನವರಿಕೆ ಮಾಡಿ ರೈತರಿಗೆ ಆಗುತ್ತಿರುವ ಕೃಷಿ ಹಾನಿ ಮಾಡುತ್ತಿರುವ ಮಂಗಗಳ ಹಾವಳಿಯಿಂದ ಮುಕ್ತಿಗೊಳಿಸುವುದು. ವನ್ಯಪ್ರಾಣಿಗಳಿಂದ ಆದ ಬೆಳೆ ನಷ್ಟಕ್ಕೆ ಅತಿ ಶೀಘ್ರದಲ್ಲಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾರ್ವವಜಿನಿಕರ ಬಳಿಯಿಂದ ಮನವಿಯನ್ನು ಸ್ವೀಕರಿಸಿದ ಶ್ರೀ ಸಂಕೇತ್ ಪೂವಯ್ಯ ರವರು, ಇದರ ಬಗ್ಗೆ ವಿಮರ್ಶೆ ಮಾಡಿ ಮಾನ್ಯ ಶಾಸಕರೊಂದಿಗೆ ಚರ್ಚಿಸಿ, ಶಾಸಕರ ಗೃಹ ಕಚೇರಿಯಲ್ಲಿ ಅರಣ್ಯ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಕರೆಯಿಸಿ, ಚರ್ಚೆ ಮಾಡಿ ಶೀಘ್ರದಲ್ಲೇ ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪಯಸ್ವಿನಿ ಸಹಕಾರ ಸಂಘದ ನಿರ್ದೇಶಕ ಶ್ರೀ ಗಣಪತಿ ಬಿ.ಎ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರಾದ ಸುರೇಶ್ ಪಿ.ಎಲ್, ಮನು ಪೆರುಮುಂಡ, ಪರಮಾಲೆ ಗಣೇಶ್, ಸಂಪಾಜೆ ಅರಣ್ಯ ಸಮಿತಿ ಅಧ್ಯಕ್ಷ ಕೆ.ಕೆ ವಿಜಯ ಕುಮಾರ್ ಕನ್ಯಾನ, ಮಡಿಕೇರಿ ACF ಶ್ರೀ ಮೊಯಿದ್ದೀನ್ ಭಾಷಾ, ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಸೂರಜ್ ಹೊಸೂರು, ಮಡಿಕೇರಿ ಅಕ್ರಮ ಸಕ್ರಮ ಸದಸ್ಯರಾದ ಶ್ರೀಮತಿ ತುಳಸಿ ಗಾಂಧಿ ಪ್ರಸಾದ್, ಪ್ರಮುಖರಾದ ರವಿರಾಜ್ ಹೊಸೂರು, ರಿತಿನ್ ಡೆಮ್ಮಲೆ, ಮೊಯಿದ್ದೀನ್ ಕುಂಞಿ, ತಿರುಮಲ ಸೋನ, ಹನೀಫ್ ಕೊಯನಾಡು, ಚೆಂಬು ಗ್ರಾಂ.ಪಂ ಸದಸ್ಯ ಗಿರೀಶ್ ಹೊಸೂರು, ರಾಜೇಶ್ ಕುಡ್ಕುಳಿ, ಸುಧೀರ್ ಹೊದ್ದೆಟ್ಟಿ, ಅರಣ್ಯ ಇಲಾಖೆ ಸಿಬ್ಬಂದಿ ವರ್ಗ, ಕಂದಾಯ ಇಲಾಖೆ ಅಧಿಕಾರಿ ಹಾಗೂ ಸಂಪಾಜೆ, ಚೆಂಬು, ಪೆರಾಜೆ ಗ್ರಾಮಸ್ಥರು ಉಪಸ್ಥಿತರಿದ್ದರು.