
ನಡುಬಾಡೆ ನ್ಯೂಸ್: ಕೇರಳ ಮೂಲದ ಟೆಕ್ಕಿ ಶರಣ್ಯ ಎಂಬ ಯುವತಿ ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ಎಂದು ಬಂದು ನಾಪತ್ತೆಯಾಗಿ ಸತತ ನಾಲ್ಕು ದಿನಗಳ ಹುಡುಕಾಟ, ತೊಳಲಾಟದ ನಂತರ ಅರಣ್ಯದೊಳಗೆ ಸುರಕ್ಷಿತ ಪತ್ತೆಯಾಗಿ ಪ್ರಕರಣ ಸುಖಾಂತ್ಯ ಕಂಡಿದೆ.
ಆದರೆ ಈ ಶರಣ್ಯ ಮತ್ತು ಆಕೆಯ ಕುಟುಂಬಸ್ಥರ ತಡವಳಿಕೆ, ಹಾವಭಾವ ಹಾಗೂ ಸತತ ನಾಲ್ಕು ದಿನಗಳ ಅರಣ್ಯವಾಸದ ನಂತರವೂ ಶರಣ್ಯಳ ಮಾನಸಿಕ ಮತ್ತು ದೈಹಿಕ ಹುರುಪು ಸಾರ್ವಜನಿಕ ವಲಯದಲ್ಲಿ ತೀವ್ರ ಸಂಶಯಕ್ಕೆ ಎಡೆ ಮಾಡಿದೆ. ಏಪ್ರಿಲ್ ಎರಡರಂದು ಅಂತರ್ಜಾಲದಲ್ಲಿ ನೋಂದಣಿ ಮಾಡುವ ಮೂಲಕ ಕಕ್ಕಬ್ಬೆ ಬಳಿಯ ಖಾಸಗಿ ಹೋಂಸ್ಟೇ ಒಂದಕ್ಕೆ ಆಗಮಿಸುವ ಶರಣ್ಯ ಮಾರನೆಯ ದಿನ ಚಾರಣಕ್ಕಾಗಿ ತಡಿಯಂಡಮೊಳ್ಗೆ ಪ್ರಯಾಣಿಸಲು ಹೊರಡುತ್ತಾಳೆ. ಏಕಾಂಗಿ ಪ್ರಯಾಣಕ್ಕೆ ತಡೆಯೊಡ್ಡಿದ ಅರಣ್ಯ ಇಲಾಖೆಯು ಇತರ ಪ್ರವಾಸಿಗರು ತೆರಳುತ್ತಿದ್ದ ಗುಂಪಿನೊಂದಿಗೆ ಆಕೆಯನ್ನೂ ಕಳುಹಿಸಿ ಒಟ್ಟಾಗಿಯೇ ಹಿಂತಿರುಗಬೇಕು ಎಂಬ ಸ್ಪಷ್ಟ ನಿರ್ಧೇಶನವನ್ನೂ ನೀಡುತ್ತಾರೆ. ಆದರೆ ಸಂಜೆಯ ವೇಳೆಗೆ ಇತರ ಚಾರಣಿಗರು ಹಿಂತಿರುಗಿದರು ಕೂಡ ಶರಣ್ಯ ಮಾತ್ರ ಗುಂಪಿನಲ್ಲಿ ಇರಲಿಲ್ಲ. ಅಷ್ಟರಲ್ಲಾಗಲೇ ತಾನು ತಂಗಿದ್ದ ಹೋಂಸ್ಟೇಗೆ ಕರೆ ಮಾಡಿದ್ದ ಶರಣ್ಯ, ಬೆಟ್ಟದಲ್ಲಿ ದಾರಿ ತಪ್ಪಿದ್ದು ದಾರಿ ಸಿಗುತ್ತಿಲ್ಲ, ಎಂಬ ಸಂದೇಶವನ್ನು ನೀಡುತ್ತಾಳೆ. ಆನಂತರ ಆಕೆಯ ಫೋನ್ ಸ್ವಿಚ್ ಆಫ್ ಆಗುವುದಲ್ಲದೆ, ಎಲ್ಲ ಸಂಪರ್ಕದಿಂದಲೂ ಕಡಿತಗೊಳ್ಳುತ್ತದೆ. ಇತ್ತ ಅರಣ್ಯ ಇಲಾಖೆ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂಧಿಗಳು, ಹಾಗೂ ಸ್ಥಳೀಯರು ತೀವ್ರ ಹುಡುಕಾಟವನ್ನು ಪ್ರಾರಂಭಿಸಿ, ರಾತ್ರಿ ಹಗಲೆನ್ನದೆ ಸತತ ಮೂರು ದಿನಗಳ ಕಾಲ ಶರಣ್ಯಳಿಗಾಗಿ ಶೋಧನೆ ಮಾಡುತ್ತಾರೆ.
ಮಾಧ್ಯಮಗಳು ಕೂಡ ಎಡಬಿಡದೆ ಸುದ್ದಿ ಬಿತ್ತರಿಸಿ ಸರ್ಕಾರವನ್ನು ಮತ್ತಷ್ಟು ಎಚ್ಚರಿಸುತ್ತಾ ಅಪರೇಷನ್ ಶರಣ್ಯಕ್ಕೆ ವೇಗ ನೀಡಲು ಪ್ರಯತ್ನಿಸುತ್ತವೆ. ಸರ್ಕಾರವು ಕೂಡ ಸ್ಥಳೀಯ ಶಾಸಕರಾದ ಎ.ಎಸ್. ಪೊನ್ನಣ್ಣ, ಅರಣ್ಯ ಸಚಿವರು ಮಾತ್ರ ಅಲ್ಲದೆ ಖುದ್ದು ಮುಖ್ಯಮಂತ್ರಿಗಳು ಕೂಡ ಅರಣ್ಯ ಇಲಾಖೆಗೆ ಹೆಚ್ಚಿನ ಸವಲತ್ತುಗಳನ್ನು ನೀಡಿ ತಂತ್ರಜ್ಞಾನ ಬಳಕೆಯ ಮೂಲಕ ಹುಡುಕಾಟಕ್ಕೆ ಪ್ರೋತ್ಸಾಹಿಸುತ್ತಾರೆ . ಇದರ ಜೊತೆಗೆ ಸ್ಥಳೀಯ ಮತ್ತು ಇಡೀ ಮಲೆಕಾಡಿನ ಎಲ್ಲಾ ಕೋನಗಳನ್ನೂ ಬಲ್ಲ, ಕುಡಿಯ ಜನಾಂಗದ ಹಿರಿಯರು ಕಿರಿಯರಾದಿಯಾಗಿ ಪ್ರತಿಯೊಬ್ಬರೂ ಶರಣ್ಯಳ ಸುರಕ್ಷಿತ ಪತ್ತೆಗಾಗಿ ಪ್ರಯತ್ನಿಸುವ ಜೊತೆಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ .
ಫಲಿಸಿದ ಆದಿ ಗುರುವಿನ ಪ್ರಾರ್ಥನಾ ಫಲ: ಕೊಡವ ಸಂಪ್ರದಾಯದಲ್ಲಿ ನೆಲ್ಲಕ್ಕಿಯಲ್ಲಿ ನಿಂತು ಆಧಿಕಾರೋಣನಿಗೆ ಮತ್ತು ಇಷ್ಟ ದೇವರಿಗೆ ಒಕ್ಕಣೆಯನ್ನು ಕಟ್ಟಿ ಅಕ್ಕಿ ಹಾಕುವ ಮೂಲಕ ಪ್ರಾರ್ಥಿಸಿದರೆ ಅದಕ್ಕೆ ಪ್ರತಿಫಲ ದಕ್ಕುತ್ತದೆ ಎಂಬ ಅಚಲ ಮತ್ತು ಸ್ಪಷ್ಟ ನಂಬಿಕೆ ಇದೆ. ಕೊಡವ ಪರಂಪರೆಯನ್ನು ಪಾಲಿಸುವ ಕುಡಿಯ ಜನಾಂಗ ಹಿರಿಯರೂ ತನ್ನ ಆಧಿಕಾರೋಣ ಮತ್ತು ಇಷ್ಟದೇವಕ್ಕೆ ಪ್ರಾರ್ಥನೆ ಸಲ್ಲಿಸಿ ಶರಣ್ಯ ಜೀವಂತ ಪತ್ತೆಗೆ ಕೋರುತ್ತಾರೆ ಮತ್ತು ಅದೇ ಕುಡಿಯ ಜನಾಂಗದ ಯುವಕರು ಕಾಡಿನೊಳಗೆ ತಮ್ಮ ಅನುಭವ ಮತ್ತು ಆತ್ಮಸ್ತೈರ್ಯದ ಶೋಧನೆಯನ್ನ ಕೈಗೊಂಡು ಶರಣ್ಯಳನ್ನು ನಾಲ್ಕನೇಯ ದಿನ ಜೀವಂತ ಮತ್ತು ಸುರಕ್ಷಿತವಾಗಿ ಪತ್ತೆ ಹಚ್ಚುತ್ತಾರೆ.
ಈ ಪ್ರಕರಣ ಇಷ್ಟದೈವ ನಂಬಿದವರ ಕೈಬಿಡಲಾರ ಮತ್ತು ತಮ್ಮ ನಂಬಿಕೆ ಸುಳ್ಳಾಗುವುದಿಲ್ಲ ಎಂಬುದನ್ನು ತೋರಿಸಿದ್ದು ಮಾತ್ರವಲ್ಲ, ಕೊಡಗಿನ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮೂಡಲಿದ್ದ ಕಪ್ಪು ಚುಕ್ಕೆಯೊಂದನ್ನು ನಿರಾಳವಾಗಿಸಿತು. ಕುಡಿಯ ಜನಾಂಗದ, ಆ ಯುವಕರ ನಿರಾಪೇಕ್ಷಿತ, ಮತ್ತು ನಿಸ್ವಾರ್ಥದ ಪರಿಶ್ರಮ ಮತ್ತು ಅರಣ್ಯ ಇಲಾಖೆ ಪೊಲೀಸ್ ಇಲಾಖೆ ಮತ್ತು ಜನಪ್ರತಿನಿಧಿಗಳ ಎಡೆಬಿಡದ ಪ್ರಯತ್ನಕ್ಕೆ ಯಶಸ್ಸಿನ ಫಲ ಲಭಿಸಿತು ನಿಜ.
ಆದರೆ, ಅದೊಂದು ಅನುಮಾನ ಮಾತ್ರ ಎಲ್ಲರಲ್ಲೂ ಮೂಡಿದ್ದು ಶರಣ್ಯ ಸಿಕ್ಕಿದ ಆ ಕ್ಷಣದಿಂದಲೇ ಆಕೆಯ ನಡೆನುಡಿ, ಹಾವಭಾವದ ಬಗ್ಗೆ ತೀವ್ರ ಚರ್ಚೆಗಳು ಅನುಮಾನಗಳು ವ್ಯಕ್ತಗೊಳ್ಳುತ್ತಿವೆ . ಕಳೆದ ನಾಲ್ಕು ದಿನಗಳ ಹಿಂದೆ ಕೇರಳದಿಂದ ಬಂದ ಶರಣ್ಯ, ದಟ್ಟಾರಣ್ಯ ಪ್ರವೇಶಕ್ಕೆ ಏಕಾಂಗಿ ಅನುಮತಿ ಇಲ್ಲ ಮತ್ತು ಗುಂಪಿನಲ್ಲಿಯೇ ಹಿಂತಿರುಗಬೇಕು ಎಂಬ ಇಲಾಖೆಯ ಸ್ಪಷ್ಟ ನಿರ್ದೇಶನದ ಹೊರತಾಗಿಯೂ ಗುಂಪಿನಿಂದ ದೂರಾದದ್ದು ಏಕೆ..? ಒಂದು ವೇಳೆ ಈಕೆ ನಿಧಾನವಾಗಿ ನಡೆದಿದ್ದರೂ ಅಥವಾ ಗುಂಪಿನಿಂದ ದೂರದಲ್ಲಿ ತನ್ನ ಚಟುವಟಿಕೆಯನ್ನು ನಡೆಸಿದ್ದರೂ, ಕಂಡು ಕೇಳದಷ್ಟು ದೂರಕ್ಕೆ ಹೋದದ್ದು ಏಕೆ..? ಎನ್ನುವ ಪ್ರಶ್ನೆಯಿಂದ ಪ್ರಾರಂಭವಾಗುವ ಅನುಮಾನದ ಅಲೆ, ದೂರವಾಣಿ ಕರೆ ಮಾಡಿ ಹೋಂ ಸ್ಟೇಗೆ ಮಾಹಿತಿ ನೀಡಿದ ಈಕೆ, ನಂತರ ನೆಟ್ವರ್ಕ್ ಪ್ರದೇಶದಿಂದ ಕೆಳಹೋದದ್ದೇಕೆ..? ಒಂದು ವೇಳೆ ಫೋನ್ ಸ್ವಿಚ್ ಆಫ್ ಆಗಿದ್ದರು ಫೋನ್ ಮಾಡಿದ್ದ ಜಾಗದಲ್ಲಿಯೇ ನಿಲ್ಲಬಹುದಿತ್ತು ಎಂಬುದು ಮತ್ತೊಂದು ಅನುಮಾನದ ನಡೆ.
ಕೇವಲ ನೀರು ಮತ್ತು ಬಿಸ್ಕೆಟ್ ಗಳನ್ನು ಕೊಂಡೋಯ್ದಿದ್ದೆ ಎನ್ನುವ ಈಕೆ, ಮೊದಲ ದಿನವೇ ಬಿಸ್ಕೆಟ್ ಮುಗಿದು ಹೋದವು, ನಂತರದ ಮೂರು ದಿನ ಆಹಾರವಿಲ್ಲದೆ ನೀರು ಕುಡಿಯುತ್ತಾ ಸಮಯ ಕಳೆದೆ ಎನ್ನುತ್ತಾಳೆ. ಸ್ಥಳೀಯ ಅನುಭವಿಗಳಿಗೂ ಒಂದು ದಿನ ಹೋಗಿ ಬರಲೇ ಆಯಾಸವಾಗುವಾಗ, ಈಕೆ ಮಾತ್ರ ಸತತ ಮೂರು ದಿನಗಳ ಕಾಲ ಆಹಾರವಿಲ್ಲದೆ ಒಂದಿನಿತೂ ನಿತ್ರಾಣಗೊಳ್ಳದೆ, ಅದೇ ಉತ್ಸಾಹದಿಂದ ನಡೆಯುತ್ತಾ, ಬೆಟ್ಟ ಹತ್ತಿ ಬಂದದ್ದು ಹೇಗೆ..?
ಮೂರು ದಿನಗಳ ಕಾಲ ಅರಣ್ಯದಲ್ಲಿ ಅಡ್ಡಾಡಿದರು ಆಕೆ ತೊಟ್ಟಿದ್ದ ಬಟ್ಟೆ ಕಿಂಚಿತ್ತು ಮಸುಕಾಗಲಿಲ್ಲ ಏಕೆ..? ಸತತ ಮೂರು ನಾಲ್ಕು ದಿನಗಳ ಕಾಲ ಅನ್ನ ಆಹಾರವಿಲ್ಲದ ದೇಹ ಮತ್ತು ಮನಸ್ಸು ನಿತ್ರಾಣಗೊಳ್ಳುವುದಲ್ಲದೆ ತನ್ನ ಎಂದಿನ ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ. ಆದರೆ ಶರಣ್ಯ ಮುಖ ಸೊರಗಿದ್ದಾಗಲಿ ಸೋತಿದ್ದಾಗಲಿ ಅಥವಾ ಆಹಾರ ಸೇವಿಸದ ಛಾಯೆಯಾಗಲಿ ಕಾಣಲಿಲ್ಲ. ಸತತ ನಾಲ್ಕು ದಿನಗಳ ಕಾಲ ದಟ್ಟಾರಣ್ಯದಲ್ಲಿ ಏಕಾಂಗಿ ಮಾನವ ಸಂಚಾರ ಅಸಾಧ್ಯ. ಒಂದು ವೇಳೆ ಅನಿವಾರ್ಯ ಆದರೂ ಕೂಡ ಮಾನಸಿಕವಾಗಿ ಎಂತದೇ ಧೈರ್ಯವಂತರಾದರು ಕುಗ್ಗುತ್ತಾರೆ. ಆತಂಕ ಕೊಳಗಾಗುತ್ತಾರೆ. ಆದರೆ ಶರಣ್ಯ ಮುಖದಲ್ಲಾಗಲಿ, ದೇಹದ ಚಟುವಟಿಕೆಯಲ್ಲಾಗಲಿ ಆತಂಕದ ಅಥವಾ ಭಯದ ಛಾಯೆ ಗೋಚರಿಸಲಿಲ್ಲ ಎನ್ನುವುದು ಅನುಮಾನವನ್ನು ಮತ್ತಷ್ಟು ಪುಷ್ಟಿಗೊಳಿಸುತ್ತದೆ .
ಈಕೆಯ ನಾಪತ್ತೆ ಸುದ್ದಿ ತಿಳಿದ ನಂತರ ಕಕ್ಕಬೆಗೆ ಆಗಮಿಸಿದ ಈಕೆಯ ಕುಟುಂಬಸ್ಥರಲ್ಲೂ ಕೂಡ ಯಾವುದೇ ಆತಂಕ ಕಳವಳ ಗೋಚರಿಸದೆ, ಸಾವಧಾನ ಚಿತ್ತರಾಗಿ ಇದ್ದದ್ದು ಮತ್ತೊಂದು ಪ್ರಶ್ನಾರ್ಥಕ ವಿಚಾರ. ಅಲ್ಲದೆ ಶರಣ್ಯ ಹಿಂತಿರುಗಿ ಬಂದಾಗ ಪರಸ್ಪರ ಸಂತೋಷದ ಆ ಲಿಂಗನ ಕಂಡಿತಾದರೂ ಯಾವುದೇ ಭಾವದ್ವೇಗ ಗೋಚರಿಸಲಿಲ್ಲ. ಆಕೆಯ ವೈದ್ಯಕೀಯ ತಪಾಸಣೆಯಲ್ಲೂ, ದೈಹಿಕವಾಗಿ ಅಥವಾ ಮಾನಸಿಕವಾಗಿ ಯಾವುದೇ ಏರಿಳಿತಗಳಿಲ್ಲದೆ ಎಲ್ಲವೂ ಸಹಜವಾಗಿಯೇ ಇದೆ ಎಂಬ ಮಾಹಿತಿ, ಆಕೆ ಸುರಕ್ಷಿತವಾಗಿದ್ದು ಯೋಜಿತ ಹುನ್ನಾರವನ್ನು ನಡೆಸಿದ್ದಳಾ ಎನ್ನುವ ಸಂಶಯ ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಸತತ ನಾಲ್ಕು ದಿನಗಳ ಕಾಲ ಕೊಡಗು ಜಿಲ್ಲಾ ಪೊಲೀಸ್, ಅರಣ್ಯ ಇಲಾಖೆ, ಜನಪ್ರತಿನಿಧಿಗಳು ಮತ್ತು ಸರ್ಕಾರಿ ವ್ಯವಸ್ಥೆಯೇ ಈಕೆಗಾಗಿ ಹುಡುಕಾಟ ನಡೆಸಿದ್ದು, ಸಾವಿರಾರು ಜನರ ಪ್ರಾರ್ಥನೆ, ಸ್ಥಳಿಯ ಗ್ರಾಮಸ್ಥರು ಮತ್ತು ಕುಡಿಯ ಜನಾಂಗದ ವಿಶೇಷಕಾಳಜಿಯ ಪ್ರಯತ್ನವನ್ನ ದುರುಪಯೋಗ ಪಡಿಸಿಕೊಂಡು ತನ್ನ ಪ್ರಚಾರಕ್ಕಾಗಿ ಶರಣ್ಯ ಹೀಗೆ ಮಾಡಿದ್ದಾಳ ಎನ್ನುವ ಅನುಮಾನವು ಮೂಡುತ್ತಿದೆ. ಈ ಎಲ್ಲದಕ್ಕೂ ಉತ್ತರವನ್ನು ನೀಡಬೇಕಾಗಿರುವುದು ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದ್ದು ತಕ್ಷಣ ಈಕೆಯನ್ನು ಕೂಲಂಕುಶ ತನಿಖೆಗೊಳಪಡಿಸಿ, ಸತ್ಯವನ್ನು ಸಾರ್ವಜನಿಕರ ಮುಂದಿಡಬೇಕು.
ಕರ್ನಾಟಕ ಸರ್ಕಾರದ ಮತ್ತು ಸಾರ್ವಜನಿಕರ ತೆರಿಗೆಯ ಹಣದಿಂದ ತನ್ನ ಪ್ರಚಾರ ಹೆಚ್ಚಿಸಿಕೊಳ್ಳಲು ಹುನ್ನಾರ ಮಾಡಿದ್ದೆ ಸತ್ಯವಾದರೆ, ಈಕೆಗೆ ಕಾನೂನಿನ ಕುಣಿಕೆಗೆ ಒಡ್ಡುವುದಲ್ಲದೆ, ಈಕೆಯಿಂದಲೇ ಆಗಿರುವ ಖರ್ಚು ವೆಚ್ಚವನ್ನು ವಸುಲಾತಿ ಮಾಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ. ಇಲಾಖೆ ಮತ್ತು ಸರ್ಕಾರ ಮುಂದೆ ಯಾವ ರೀತಿಯಲ್ಲಿ ಸಾರ್ವಜನಿಕರಿಗೆ ಸ್ಪಷ್ಟನೆ ನೀಡುತ್ತಾರೆ ಎಂಬುದು ಕಾದುನೋಡಬೇಕಷ್ಟೆ. ಈ ಹಿಂದೆಯೂ ಕೂಡ ಇದೇ ಯುವತಿ ಇಂಥದೇ ನಾಪತ್ತೆ ನಾಟಕವಾಡಿಗಳು ಎಂಬ ಮಾತುಗಳು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದ್ದು ಇದು ನಿಜವಾದಲ್ಲಿ, ಮುಂದೆ ಯಾರೂ ಕೂಡ ಇಂತ ಕೃತ್ಯಕ್ಕೆ ಕೈ ಹಾಕದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹವಾಗಿದೆ.
