
ಮುಟ್ಟ, ಜು.25,(nadubadenews): ಕೊಡಗು ಜಿಲ್ಲೆಯಲ್ಲಿ ಈ ಭಾರಿಯ ಮಳೆಗಾಲ ಈ ವರೆಗೂ ಏಕಾ ಏಕಿ ಎರಗಿ ಭಾರೀ ಹಾನಿ ಮಾಡಿಲ್ಲವಾದರೂ, ನಿಧಾನವಾಗಿ ಸ್ಲೋಪಾಯಿಸನ್ ತರ ರೈತರ ಬಾಳು ಭವಿಷ್ಯವನ್ನು ಕೊಲ್ಲುತ್ತಿದೆ. ಕಳೆದು ಹಲವು ವರ್ಷಗಳಿಗೆ ಹೋಲಿಸಿದರೆ ಈ ಭಾರೀ ಮಳೆಯ ಪ್ರಮಾಣ ಅಧಿಕ. ಕೊಡಗಿನ ಹಲವು ಭಾಗಗಳಲ್ಲಿ ವಾರ್ಷಿಕ ವಾಡಿಕೆಗಿಂತಲೂ ಅಧಿಕ ಮಳೆ ಈಗಾಗಗಲೇ ದಾಖಲಾಗಿದೆ.
ತಲೆಕಾವೇರಿ ಹಾಗೂ ಸೂರ್ಲಬ್ಬಿ ಭಾಗದಲ್ಲಂತೂ ಈಗಾಗಲೇ 250 ಇಂಚಿನ ಸಮೀಪ ಮಳೆಯಾಗಿದೆ. ಹಲವು ಗ್ರಾಮೀಣ ಭಾಗಗಳಲ್ಲಿ ಈಗಾಗಲೆ ಭತ್ತದ ನಾಟಿ ಮುಗಿದಿದೆ. ಮತ್ತೊಂದಿಷ್ಟು ಭಾಗಗಳಲ್ಲಿ ನಾಟಿ ಮಾಡಲು ತಯಾರಾಗಿದ್ದಾರೆ. ಆದರೆ ಎಡೆಬಿಡದ ಮಳೆಯ ಕಾರಣ ಸಂಪೂರ್ಣ ನಾಟಿ ಮತ್ತು ಅಗೆಮಡಿಗಳು ಕೊಳೆತು ನಾಶ ಆಗಿದ್ದು, ಈ ವರ್ಷದ ಭತ್ತ ಬೆಳೆಯುವುದೂ ಅಸಾದ್ಯ ಎನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಮಡಿಕೇರಿ ತಾಲೂಕು, ಗಾಳಿಬೀಡು ಗ್ರಾಮ ಪಂಚಾಯತಿ ಮತ್ತು ಸೋಮವಾರಪೇಟೆ ತಾಲೂಕು ಗರ್ವಾಲೆ ಬೆಟ್ಟದಳ್ಳಿ, ಶಾಂತಳ್ಳಿ, ತೋಳೂರು ಶೆಟ್ಟಳ್ಳಿ, ಹಾನಗಲ್ಲು, ಕಿರಗಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಭತ್ತದ ನಾಟಿಕಾರ್ಯ ಬಹುಪಾಲು ಮುಕ್ತಾಯವಾಗಿದ್ದು, ನಾಟಿಯೆಲ್ಲ ಕೊಳೆತು ತೇಲುತ್ತಿವೆ. ನಾಟಿಗಾಗಿ ಉಳಿದ ಅಗೆಯೂ ಸಂಪೂರ್ಣ ಕೊಳೆತು ಹೋಗಿವೆ.
ಗಾಳಿಬೀಡು ವ್ಯಾಪ್ತಿಯ ಮುಟ್ಲು ಗ್ರಾಮದ ಪುದಿಯತಂಡ ಬೆಳ್ಯಪ್ಪ ಅವರ ಅಗೆಯು ಸಂಪೂರ್ಣ ಕೊಳೆತು ಹೋಗಿದ್ದು, ಕೃಷಿಯ ಮೇಲಿನ ಪ್ರೀತಿ, ಮತ್ತು ಆಹಾರದ ಆಧಾರವೂ ಆಗಿರುವ ಭತ್ತವನ್ನು ಇಳಿವಯಸ್ಸಿನಲ್ಲಿಯೂ ಬೆಳೆಯುವ ಬೆಳ್ಯಪ್ಪ ಅವರ ಅನುಭವದಲ್ಲಿ ಇದೇ ಮೊದಲು ಈ ರೀತಿಯ ಕೊಳೆ ಸಸಿಮಡಿಗೆ ಬಂದಿರುವುದು, ಈಗ ಹೊಸದಾಗಿ ಬಿತ್ತನೆಯೂ ಮಾಡಲಾಗುವುದಿಲ್ಲ, ನಾಟಿ ಮಾಡದಿದ್ದರೆ ಮುಂದಿನ ವರ್ಷದ ಅನ್ನಕ್ಕೆ ಅಭಾವ ಆಗುತ್ತದೆಂದು ಆತಂಕಗೊಂಡಿದ್ದಾರೆ.
ಭತ್ತದ ಕೃಷಿಯೇ ಜೀವನಾಧಾರವಾಗಿರುವ ಆ ಭಾಗದ ರೈತರ ಪರಿಸ್ಥಿತಿ ಒಂದೆಡೆ ಕಾಡು ಪ್ರಾಣಿಗಳ ಹಾವಳಿ ಮತ್ತೊಂದೆಡೆ ಅತೀವೃಷ್ಟಿಯಿಂದ ಸಂಕಷ್ಟಕ್ಕೆ ಒಳಗಾಗಿದೆ. ಪ್ರತೀ ವರ್ಷ ಅತೀ ಹೆಚ್ಚು ಮಳೆಯಾಗುವ ಈ ಪ್ರದೇಶಗಳಲ್ಲಿ ಸರಿಯಾದ ಮಳೆ ಮಾಪಕವೂ ಇಲ್ಲದೆ ಮಳೆಯ ಪ್ರಮಾಣ ಅರಿಯದಾಗಿದ್ದು ಇದರಿಂದ ವೈಜ್ಞಾನಿಕ ಪದ್ದತಿಯ ಕೃಷಿಗೂ ತಡೆಯಾಗಿದೆ. ಇಲ್ಲಿಗೆ ಸಮೀಪದ ಸೂರ್ಲಬ್ಬಿಯಲ್ಲಿ ಮಳೆಮಾಪಕವಿದ್ದು, ಸೂರ್ಲಬ್ಬಿಯಲ್ಲಿ ಬೀಳುವ ಮಳೆಗಿಂತ ಕನಿಷ್ಟ ಐವತ್ತರಿಂದ ಅರುವತ್ತು ಇಂಚು ಅಧಿಕ ಮಳೆ ಹಮ್ಮಿಯಾಲ ಮುಟ್ಲು ಭಾಗಕ್ಕೆ ಸುರಿಯುತ್ತದೆ ಆದರೆ ಅಲ್ಲಿ ಮಾಪಕ ಅಳವಡಿಸದೇ ಇರುವುದು ನಿಖರ ಮಳೆ ಮಾಹಿತಿ ಲಭ್ಯವಾಗುತಿಲ್ಲ. ಸೂರ್ಲಬ್ಬಿಗೆ ಈಗಾಗಲೇ 195ಇಂಚು ಮಳೆ ಧಾಖಲಾಗಿದ್ದು, ಸ್ಥಳೀಯರ ಪ್ರಕಾರ ಹಮ್ಮಿಯಾಲ ಮುಟ್ಲು ಭಾಗಕ್ಕೆ 230ಇಂಚಿಗಿಂತಲೂ ಅಧಿಕ ಮಳೆಯಾಗಿದೆ ಎಂದು ಅಂದಾಜಿಸಿದ್ದಾರೆ. ಒಂದೆಡೆ ಕಾಡು ಹಂದಿ ಮತ್ತು ಆನೆಗಳು ನಾಟಿಗೂ ಮೊದಲು ಪೈರು ನಷ್ಟ ಮಾಡಿದರೆ, ಅಳಿದುಳಿದ ಪೈರು ಅಧಿಕ ಮಳೆಗೆ ಕೊಳೆತು ಹೋಗಿವೆ. ಸರ್ಕಾರ ಈ ಭಾಗಕ್ಕೆ ವಿಷೇಶ ಪ್ಯಾಕೇಜ್ ಘೋಷಿಸುವ ಮೂಲಕ ರೈತರ ನೆರವಿಗೆ ಬರಬೇಕೆಂಬ ನಿರೀಕ್ಷೆಯಲ್ಲಿ ರೈತರು ಅಪೇಕ್ಷಿಸುತಿದ್ದಾರೆ.