
ಮಡಿಕೇರಿ,ಜು.11; (nadubadenews): ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಡಿಕೇರಿ ತಾಲ್ಲೂಕು ಬಾಲಭವನ ಸಮಿತಿ ಕೊಡಗು ಇವರ ಸಹಯೋಗದಲ್ಲಿ 2025-26ನೇ ಸಾಲಿನ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮವು ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಕೃಷ್ಣಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮಕ್ಕಳು ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಕುರಿತು ಹೆಚ್ಚು ಗಮನ ಹರಿಸಬೇಕು. ಈ ಯುಗದಲ್ಲಿ ಮೊಬೈಲ್ ಪೋನ್ಗಳು ಸರ್ವವ್ಯಾಪಿಯಾಗಿವೆ. ಸಂವಹನ, ಮನರಂಜನೆ ಮತ್ತು ಮಾಹಿತಿ ಪ್ರವೇಶಕ್ಕೆ ಅನಿವಾರ್ಯ ಸಾಧನಗಳಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸಾಧನಗಳು ಹಲವಾರು ಪ್ರಯೋಜನಗಳನ್ನು ನೀಡುತ್ತವೆಯಾದರೂ, ಅವುಗಳ ಸಂಭಾವ್ಯ ಋಣಾತ್ಮಕ ಪರಿಣಾಮ ಗುರುತಿಸುವುದು ಅತ್ಯಗತ್ಯ, ವಿಶೇಷವಾಗಿ ವಿದ್ಯಾರ್ಥಿಗಳ ಮೇಲೆ, ಶೈಕ್ಷಣಿಕ ಕಾರ್ಯಕ್ಷಮತೆಯಿಂದ ಹಿಡಿದು ಮಾನಸಿಕ ಮತ್ತು ದೈಹಿಕ ಆರೋಗ್ಯದವರೆಗೆ, ಈ ಮೊಬೈಲ್ ಫೋನ್ ಪರಿಣಾಮ ಬೀರುತ್ತದೆ. ಮಕ್ಕಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಓದಿನಲ್ಲಿ ಹೆಚ್ಚಾಗಿ ಆಸಕ್ತಿ ವಹಿಸಬೇಕು ಎಂದರು.
ಮಕ್ಕಳ ಕಲಾಪ್ರತಿಭೆ ಕಾರ್ಯಕ್ರಮದಲ್ಲಿ ಪ್ರಬಂಧ ಬರೆಯುವ ಸ್ಪರ್ದೆಯಲ್ಲಿ ವಿಜೇತರಾದ ಮಕ್ಕಳಿಗೆ ಶುಭ ಹಾರೈಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮೀ ಅವರು ಮಾತನಾಡಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ 1098 ಮಕ್ಕಳ ಸಹಾಯವಾಣಿ ಕುರಿತು ಮಾಹಿತಿ ನೀಡಿದರು ಹಾಗೂ ಇತ್ತೀಚಿನ ದಿನಗಳಲ್ಲಿ ಮಕ್ಕಳ ಅಪಹರಣ ಕುರಿತು ಮಾಹಿತಿ ನೀಡಿದರು.
ಅಪರಿಚಿತ ವ್ಯಕ್ತಿಯವರು ಮಕ್ಕಳಿಗೆ ಸಿಹಿ ತಿಂಡಿ ನೀಡಿ ಮಕ್ಕಳನ್ನು ಅಪಹರಿಸುತ್ತಾರೆ. ಇದರಿಂದ ಎಲ್ಲ ಮಕ್ಕಳು ಜಾಗರೂಕತೆಯಿಂದ ಇರಬೇಕು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಮಕ್ಕಳು ಜಿಲ್ಲಾ ಬಾಲಭವನ ಹಾಗೂ ತಾಲ್ಲೂಕು ಬಾಲಭವನದಿಂದ ಏರ್ಪಡಿಸುವ ಮಕ್ಕಳ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೆಗೌಡ ಅವರು ಮಾತನಾಡಿ ಮಕ್ಕಳು ಬಾಲ್ಯದಲ್ಲಿಯೇ ಮಕ್ಕಳಲ್ಲಿರುವ ಸೃಜನಾತ್ಮಕ ಕಲೆಯನ್ನು ವೃದ್ಧಿಸಲು ಇಂತಹ ಕಾರ್ಯಕ್ರಮ ಸಹಾಯವಾಗಲಿದೆ. ಮಕ್ಕಳಿಗೆ ಆಟ-ಪಾಠಗಳ ಜೊತೆಗೆ ನೃತ್ಯ, ಸಾಂಸ್ಕøತಿಕ ಕಲೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಲು ಜಿಲ್ಲಾ, ತಾಲ್ಲೂಕು ಬಾಲಭವನ ವತಿಯಿಂದ ಆಯೋಜಿಸುವ ಕಾರ್ಯಕ್ರಮಗಳು ಪ್ರೇರಣೆಯಾಗುತ್ತವೆ. ಮಕ್ಕಳ ಬೌದ್ಧಿಕ ವಿಕಾಸದೊಂದಿಗೆ ಭವಿಷ್ಯದ ಜೀವನಕ್ಕೆ ಮಾದರಿಯಾಗುತ್ತದೆ ಎಂದರು.
ಸ್ಪರ್ದೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ 05-16 ವರ್ಷದ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಅಯೋಜಿಸಿದ್ದು, 100ಕ್ಕೂ ಅಧಿಕ ಮಕ್ಕಳು ಭಾಗವಹಿಸಿದರು. ವಿಜೇತರಾದ ಮಕ್ಕಳು ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಪೆನ್ನುಗಳನ್ನು ವಿತರಿಸಲಾಯಿತು.
ಪಿ.ಎಂ.ಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರಾದ ಸುಶೀಲ ಅವರು ಸ್ವಾಗತಿಸಿದರು. ಕೇಶಿನಿ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಹಾಗೂ ಪೂಜಾ ಜಿಲ್ಲಾ ಬಾಲಭವನ ಸಿಬ್ಬಂದಿ ವರ್ಗ ಹಾಗೂ ಶಾಲಾ ಶಿಕ್ಷಕರ ವೃಂದದವರು ಹಾಜರಿದ್ದರು.