
ರೈತಮುಖಂಡ ಚೆಪ್ಪುಡಿರ ಕಾರ್ಯಪ್ಪ ಆಗ್ರಹ
ತಿತಿಮತಿ, ಜೂ.30(nadubadenews): ಪೊನ್ನಂಪೇಟೆ ಹೋಬಳಿಯ ನೊಖ್ಯ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ದಶಕಗಳಿಂದ ಇದೆ. ಆದರೂ ಇದಕ್ಕೆ ಉತ್ತರ ಹಾಗೂ ಪರಿಹಾರ ಸಿಗಲೇ ಇಲ್ಲ. ಎಂಬ ಕಳವಳ ಗ್ರಾಮಸ್ಥರಿಂದ ವ್ಯಕ್ತವಾಗಿದೆ.
ಈ ಕುರಿತು ಮಾದ್ನಿಯಮ ಹೇಳಿಕೆ ನೀಡಿರುವ ರೈತಸಂಘದ ಪುಖಂಡ ಚೆಪ್ಪುಡಿರ ಕಾರ್ಯಪ್ಪ ಮತ್ತು ಗ್ರಾಮಸ್ಥರು ನಿರಂತರ ಕಾಡಾನೆಗಳ ಹಾವಳಿಯಿಂದಾಗಿ ತಿತಿಮತಿ, ನೋಖ್ಯ ಚಾವುಂಡಿಮೂಲೆ, ಕುಞ್ಞಿರಾಮನಕಟ್ಟೆ ಮತ್ತು ಜಂಗಲಾಡಿ ಪ್ರದೇಶಗಳು ತತ್ತರಿಸಿದೆ. ಅಳವಡಿಸಲಾಗಿರುವ 2.8 ಕಿಲೋಮೀಟರ್ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಕಳಪೆ ಎಂದು ಸಾಬೀತಾಗಿದೆ. ಇದರ ನಡುವೆ ಜಂಗಲಾಡಿಯಿಂದ ಮರಪಾಲದವರೆಗೆ ರೈಲ್ವೆ ಬ್ಯಾರಿಕೇಡ್ಗಾಗಿ ತಂದಿದ್ದ ಸಾಮಗ್ರಿಗಳು ಮಾಯವಾಗಿವೆ. ಈ ಅನುಷ್ಠಾನಕ್ಕೆ ತಂದ ಸಾಮಾಗ್ರಿಗಳು ಎಲ್ಲಿ ಹೋದವು ಎಂಬುದು ನೊಖ್ಯ ಗ್ರಾಮಸ್ಥರನ್ನು ಕಾಡುತ್ತಿರುವ ಪ್ರಶ್ನೆಯಾಗಿದ್ದು, ಈ ನಿರ್ಲಕ್ಷವೇ ಚೆನ್ನಂಗೊಲ್ಲಿಯಲ್ಲಿ ಕಾಡಾನೆ ತುಳಿತಕ್ಕೆ ಮಹಿಳೆ ಹಾಗು ನೊಖ್ಯ ಗ್ರಾಮದ ಪ್ರಗತಿಪರ ರೈತ ಮತ್ತು ಇಬ್ಬರು ಕಾರ್ಮಿಕರನ್ನು ಬಲಿ ಪಡೆದ ಆನೆ ಮಾನವನ ಸಂಘರ್ಷಕ್ಕೆ ಮೂಲ. ಇಷ್ಟಕ್ಕೆಲ್ಲ ಮೂಲ ಕಾರಣಕರ್ತರು ಅರಣ್ಯ ಇಲಾಖೆ ಎಂದಿರುವ ಅವರು, ಇಲಾಖೆಯ ದೃಷ್ಟಿಯಲ್ಲಿ ನೊಖ್ಯ ಗ್ರಾಮದ ರೈತರ ಉಳಿವು ಬೇಡ, ಆನೆಯಿದ್ದರೆ ಸಾಕು ಎಂಬ ಭಾವನೆ ಮೂಡಿದಂತಿದೆ. ಇತ್ತೀಚೆಗೆ ಅರಣ್ಯ ಸಚಿವರು ಬಂದಿದ್ದರೂ ಕೂಡ ನೊಖ್ಯ ರೈತಾಪಿ ವರ್ಗದವರನ್ನು ಮೂಲೆ ಗುಂಪು ಮಾಡಲಾಯಿತು ಎಂದು ಆರಪಿಸಿದ್ದಾರೆ.
ರೈತರೊಬ್ಬರ ಕಾಫಿ ತೋಟದಲ್ಲಿ ಬುಡಸಮೇತ 20ಕ್ಕೂ ಹೆಚ್ಚು ಕಾಫಿ ಗಿಡಗಳನ್ನು ಕಿತ್ತೊಗೆದಿದೆ. ಮಾಜಿ ಶಾಸಕರ ಮನೆಯ ಎದುರು ಆನೆ ಸಂಚರಿಸಿರುವುದು ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಇತ್ತೀಚೆಗೆ ಅರಣ್ಯ ಇಲಾಖೆ ನೊಖ್ಯ ಗ್ರಾಮದಲ್ಲಿ ಕಂದಕಗಳನ್ನು ಸ್ವಚ್ಚಗೊಳಿಸಿದರೂ ಕಾಡನೆಗಳು ತೋಟದಲ್ಲಿ ಬೀಡು ಬಿಟ್ಟಿದೆ. ಕಾಡಾನೆಯನ್ನು ಕಾಡಿಗೆ ಅಟ್ಟಿ ತದನಂತರ ಕಂದಕಗಳನ್ನು ಸ್ವಚ್ಛಗೊಳಿಸಬೇಕು ಎಂಬ ಕನಿಷ್ಠ ಪರಿಜ್ಞಾನವು ಅರಣ್ಯ ಇಲಾಖೆಗೆ ಇಲ್ಲ. ರೈಲ್ವೆ ಬ್ಯಾರಿಕೇಡ್ ಮುರಿದುಹೋಗಿರುವ ಜಾಗದಲ್ಲಿ ಮರದ ದಿಮ್ಮಿಯಿಂದ ಅದಕ್ಕೆ ತೇಪೆ ಹಾಕಲಾಗುತ್ತಿರುವುದು ಹಾಸ್ಯಾಸ್ಪದವೆಂದಿದ್ದಾರೆ.
ಅರಣ್ಯ ಇಲಾಖೆಯವರು ಒಮ್ಮೊಮ್ಮೆ ಸೋಲಾರ್ ಅಳವಡಿಸುತ್ತಾರೆ, ಮತ್ತೊಮ್ಮೆ ಕಂದಕ ಸ್ವಚ್ಚಗೊಳಿಸುತ್ತಾರೆ, ಇನ್ನೊಮ್ಮೆ ರೈಲ್ವೆ ಬ್ಯಾರಿಕೇಡ್ ಅಳವಡಿಸುತ್ತೇವೆ ಎಂದು ಕಾಲವನ್ನು ತಳ್ಳುತ್ತಲೇ ಬರುತ್ತಿದ್ದಾರೆ. ಕೋವಿಡ್-19 ಸಂದರ್ಭದಲ್ಲಿ ಅರಣ್ಯ ಇಲಾಖೆಯ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಮುಂದಾದರು, ಆಗ ಕ್ವಾರಂಟೈನ್ ಇದ್ದ ಕಾರಣ ಟಿಂಬರ್ ಮರದ ಕೆಲಸ ಮಾಡುವ ಕೆಲಸಗಾರರನ್ನು ಕರೆತಂದು ಬ್ಯಾರಿಕೇಡ್ ನಿರ್ಮಾಣ ಮಾಡಲಾಯಿತು. ಆದರೆ ಇದು ಕಳಪೆ ಕಾಮಗಾರಿಯಾಗಿದ್ದು, ಅರಣ್ಯ ಇಲಾಖೆಯ ಹಗಲು ದರೋಡೆಯ ಭಾಗವಾಗಿದೆ ಎಂದು ನೇರ ಆರೋಪ ಮಾಡಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ತಿತಿಮತಿಯ ನೊಖ್ಯ ಗ್ರಾಮದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಬಗ್ಗೆ ಚರ್ಚಿಸಲು ಸ್ಥಳೀಯ ರೈತರನ್ನು ಆಹ್ವಾನಿಸದೆ ನಿರ್ಲಕ್ಷ ಮಾಡಿದ್ದಾರೆ. ದಶಕಗಳ ಕಾಲ ಆನೆ ಮಾನವ ಸಂಘರ್ಷದಲ್ಲಿ ಹೋರಾಟ ಮಾಡಿದವರನ್ನು ಸಭೆಗೆ ಆಹ್ವಾನಿಸದೆ, ಸ್ಥಳೀಯರಲ್ಲಿ ಮನಸ್ತಾಪ ಉಂಟು ಮಾಡುವಂತಹ ನಿರ್ಧಾರ ತೆಗೆದುಕೊಂಡಿರುವುದು ಇಲಾಕೆಯ ಒಡೆದು ಆಳುವ ನೀತಿಯನ್ನು ತೋರಿಸುತ್ತಿದೆ. ಇಂತಹ ನಿರ್ಣಯಗಳು ರೈತರು, ಗ್ರಾಮಸ್ಥರ ಹೋರಾಟಕ್ಕೆ ಪ್ರತಿಫಲವಲ್ಲ ಬದಲಿಗೆ ಇದು ಪ್ರಚಾರಕ್ಕೆ ಮಾತ್ರ ಸೀಮಿತಗೊಂಡಂತಿದೆ ಎಂದು ಬೇಸರ ಹೊರಹಾಕಿದ್ದಾರೆ.
ಇವೆಲ್ಲವನ್ನೂ ಗಮನಿಸಿದಾಗ ಅರಣ್ಯ ಇಲಾಖೆಯೇ ನಮಗೆ ಬೇಡವೆಂಬ ಚಿಂತನೆ ನೊಖ್ಯ ಗ್ರಾಮಸ್ಥರಲ್ಲಿ ಮೂಡಿದೆ.
ಆದರೆ ನೊಖ್ಯ ಹಾಗು ತಿತಿಮತಿ ಗ್ರಾಮಸ್ಥರು ವಲಸೆ ಹೋಗದೆ ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಕಾಪಾಡಿಕೊಂಡು ಬರಬೇಕು ಎಂಬುದು ಹಲವು ರೈತರ ಮನದಾಳದ ಮಾತುಗಳು. ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಲಿ. ಗ್ರಾಮಸ್ಥರು ಇಲಾಖೆ ಸರ್ಕಾರದಿಂದ ಸೂಕ್ತ ಉತ್ತರವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಚೆಪ್ಪುಡಿರ ಕಾರ್ಯಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.