
ಸೂರ್ಲಬ್ಬಿ, ಜೂ.30, (nadubadenews): ಗರ್ವಾಲೆ ಗ್ರಾಮಪಂಚಾಯತಿ ವ್ಯಾಪ್ತಿಯ, ಮಾದಾಪುರ-ಸೂರ್ಲಬ್ಬಿ-ಶಾಂತಳ್ಳಿ ಮಾರ್ಗವಾಗಿ ಸೋಮವಾರಪೇಟೆಯನ್ನು ಸಂಪರ್ಕಿಸುವ ಮುಖ್ಯ ರಸ್ಥೆಗೆ ಹೊಂದಿಕೊಂಡಂತೆ, ಸೂರ್ಲಬ್ಬಿ ಬಳಿ ಇರುವ ಮೇದುರಪೊಳೆ ಫಾಲ್ಸ್ ಮಳೆಗಾಲದಲ್ಲಿ ನಯನಮನೋಹರವಾಗಿ ಕಂಗೊಳಿಸುತ್ತದೆ. ಇತ್ತೀಚೆಗೆ ಪ್ರವಾಸಿಗರ ದಂಡು ಈ ವಿಹಂಗಮ ನೋಟವನ್ನು ಕಣ್‌ಮನ ಸೆಳೆಯಲು ತಂಡೋಪತಂಡವಾಗಿ ಆಗಮಿಸುತ್ತಾರೆ. ಕೆಲ ಪ್ರವಾಸಿಗರ ಹುಚ್ಚಾಟಗಳು ಎಲ್ಲೆ ಮೀರಿದ್ದು, ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವಂತೆ ಭಾಸವಾಗುತ್ತದೆ. ಆದರೆ ಸ್ಥಳೀಯ ಗ್ರಾಮ ಪಂಚಾತಿಯಾಗಲಿ, ಪೊಲೀಸ್ ಇಲಾಖೆಯಾಗಲಿ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ನಿರ್ಲಕ್ಷೆ ತಳೆದಿರುವುದು, ಅಧಿಕಾರಿಗಳೂ ಬಲಿಗಾಗಗಿಯೇ ಕಾದಿದ್ದಾರೆಯೇ ಎನ್ನುವ ಸಂಶಯ್ಕಕೆ ಎಡೆಮಾಡಿಕೊಡುತ್ತಿದೆ.
ದಿನಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸುವ ಈ ಮೇದುರ ಫಾಲ್ಸ್‌ನಲ್ಲಿ ಕನಿಷ್ಟ ಒಂದು ಎಚ್ಚರಿಕೆಯ ಸೂಚನಾ ಫಲಕ ಅಳವಡಿಕೆಯಾಗಿಲ್ಲ. ನದಿಗೆ ಇಳಿಯದಂತೆ ಯಾವುದೇ ಎಚ್ಚರಿಕೆಗಳಿಲ್ಲ, ಸ್ವಚ್ಚತೆಗೆ ಬೇಕಾದ ಸರಿಯಾದ ವ್ಯವಸ್ಥೆಗಳಿಲ್ಲ. ದೂರದೂರಿನಿಂದ ಬರುವ ಪ್ರವಾಸಿಗರು ಸಹಜ ಕುತೂಹಲದಿಂದ ನದಿಗೆ ಇಳಿದು, ಬಂಡೆಗಳ ಮೇಲೆ ನಿಂತು ರೀಲ್ಸ್, ಫೋಟೋಶೂಟ್ ಮಾಡುತ್ತಾರೆ, ಸ್ವಲ್ಪ ಚಾರಿದರೂ ಯಮಪುರಿಗೆ ಪ್ರಯಾಣ ಕಟ್ಟಿಟ್ಟ ಬುತ್ತಿ. ಇದೆಲ್ಲವೂ ಸ್ಥಳೀಯ ಗ್ರಾಮ ಪಂಚಾಯತಿಯ ಗಮನದಲ್ಲೂ ಇದೆ, ಸ್ಥಳೀಯರು ಸಾಕಷ್ಟು ಭಾರಿ ಪಂಚಾಯತಿಗೆ ಎಚ್ಚರಿಕೆ ನೀಡಿದ್ದಾರೆ ಆದರೂ ನಿರ್ಲಕ್ಷದ ಹಿಂದಿರುವ ಉದ್ದೇಶ ಪ್ರಾಣಬಲಿ ಪಡೆಯುವುದಾ ಎನ್ನುವುದು ಸ್ಥಳೀಯ ನಿವಾಸಿಗಳ ಮತ್ತು ಅನೇಕ ಪ್ರವಾಸಿಗರ ಪ್ರಶ್ನೆಯಾಗಿದೆ.
ಗರ್ವಾಲೆ ಗ್ರಾಮ ಪಂಚಾಯತಿ ಆಡಳಿತ ಮನಸ್ಸುಮಾಡಿದರೆ ಮೇದುರ ಫಾಲ್ಸ್‌ನಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ, ಪ್ರವಾಸಿಗರಿಂದ ಸುಂಕ ವಸೂಲಿ ಮಾಡುವ ಮೂಲಕ ಅದೇ ಆದಾಯದಿಂದ ಅಲ್ಲಿಯ ಭದ್ರತೆ ಮತ್ತು ಸ್ವಚ್ಚತೆಯನ್ನು ನಿರ್ವಹಿಸಬಹುದು. ಪೊಲೀಸ್ ಇಲಾಖೆಯಾದರೂ ಅಲ್ಲಿ ಬೀಟ್ ವ್ಯವಸ್ಥಯನ್ನೋ ಇಲ್ಲ ಕನಿಷ್ಟ ಒಂದು ಸೂಚನಾ ಫಲಕವನ್ನೋ ಅಳವಡಿಸಿ ಎಚ್ಚರಿಕೆಯನ್ನು ನೀಡಬಹುದು. ಇವೆರಡೂ ಇಲಾಖೆಗಳು ಕಣ್ಣುಮುಚ್ಚಿ ಕುಳಿತಿರುವ ಕಾರಣದಿಂದ ಸ್ಥಳೀಯ ಪರಿಸರ ಸ್ವಚ್ಚತೆ ಹದಗೆಡುತ್ತಿರುವ ಜೊತೆಗೆ, ಮುಂದೆ ಸಾವು ನೋವುಗಳು ಸಂಭವಿಸಿದರೆ ಗ್ರಾಮ ಪಂಚಾಯತಿ ಆಡಳಿತವೇ ನೇರ ಹೊಣೆಯಾಗಬೇಕು, ಇಲ್ಲವೇ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳಿಯರ ಒತ್ತಾಯವಾಗಿದೆ.