ನಲ್ಮೆಯ ಬಂಧುಗಳೆ…,
ಮನುಷ್ಯನ ಭಾವನೆಗಳನ್ನ ಉಲ್ಲಾಸಗೊಳಿಸುವ, ಹೊಸ ಹುರುಪಿನೊಂದಿಗೆ ನವ ದಿಕ್ಕಿನತ್ತ ತಿರುಗಿಸಬಲ್ಲ ಶಕ್ತಿ ತಾಕತ್ತು ಕಥೆ ಕಾದಂಬರಿಗಳಿಗೆ ಇದೆ. ಅದರಲ್ಲೂ ಕಾದಂಬರಿಗಳಂತೂ ಒಂದಿಡೀ ಸಂಸಾರ, ಸಾಮಾಜಿಕ ಬದುಕನ್ನೇ ಕಣ್ಣೆದುರಿಗೆ ತಂದು ನಿಲ್ಲಿಸುವ ವಾಸ್ತವ ಚಿತ್ರಗಳಿರುತ್ತವೆ. ಅದರಲ್ಲೂ ಬರಹಗಾರರ ನಿರೂಪಣಾ ಶೈಲಿ, ಕಥಾವಸ್ತುವಿನ ಆಧಾರದಲ್ಲಿ ಓದುಗರನ್ನ ತನ್ನೊಳಗೆ ಹಿಡಿದಿಟ್ಟುಕೊಳ್ಳುವ ಜೊತೆಗೆ, ಓದುಗನ ಮಾನಸಿಕ ಮತ್ತು ಸಾಮಾಜಿಕ ದಿಕ್ಕನ್ನ ಬದಲಿಸಿಬಿಡುವ ತಾಕತ್ತು ಕಾದಂಬರಿಗಳಿಗೆ ಇದೆ. ಅಂತ ತಾಕತ್ತಿರುವ ಕಾದಂಬರಿಕಾರರಲ್ಲಿ ಉಳ್ಳಿಯಡ ಡಾಟಿಪೂವಯ್ಯ ಕೂಡ ಒಬ್ಬರು.
ಆದಿ ಬ್ರಹ್ಮಗಿರಿ ಪತ್ರಿಕೆಯ ಉಪ ಸಂಪಾದಕಿಯಾಗಿರುವ, ಹಿರಿಯ ಪತ್ರಕರ್ತೆ ಉಳ್ಳಿಯಡ ಡಾಟಿ ಪೂವಯ್ಯ, ಮೊದಲ ಕೊಡವ ಕಾದಂಬರಿಕಾರ್ತಿ ಎಂಬ ಹೆಗ್ಗಳಿಕೆಯೂ ಇವರದೇ…,
ಇದಕ್ಕಿಂತ ಮಿಗಿಲಾಗಿ ಡಾಟಿ ಪೂವಯ್ಯ ಅವರು ನನ್ನ ಕೊಡವ ಸಾಹಿತ್ಯದ ಮೊದಲ ಗುರುಗಳು. ಕನ್ನಡದಲ್ಲಿ ಆ ಮೊದಲು ಬರೆಯುತ್ತಿದ್ದೆನಾದರೂ, 2006ರಲ್ಲಿ ಕೊಡವ ಭಾಷೆಯಲ್ಲಿ ಬರೆಯಲು ಹುರಿದುಂಬಿಸಿ, ಮೊದಮೊದಲು ತಿದ್ದಿ ತೀಡಿ ಸರಿದಾರಿಗೆ ಬರಹಗಳನ್ನು ತಂದವರು ಉಳ್ಳಿಯಡ ಪೂವಯ್ಯ ದಂಪತಿಗಳೇ…
ಉಳ್ಳಿಯಡ ಡಾಟಿ ಪೂವಯ್ಯ ಬರೆದ ಮೊದಲ ಕೊಡವ ಕಾದಂಬರಿ “ಒಯ್ಪತ್ ಮಲ್ಲಿಗೆ”. ತೊಂಬತ್ತರ ದಶಕದಲ್ಲಿ ಕೊಡವ ಸಾಹಿತ್ಯ ಲೋಕವನ್ನ ತನ್ನತ್ತ ಹಿಡಿದೆಳೆದು ಓದಿಸಿದ ಕಾದಂಬರಿ. ನಾನು ಓದಿದ ಮೊದಲ ಕೊಡವ ಕಾದಂಬರಿ ಕೂಡ ಇದೇ (2004ರಲ್ಲಿ). ಇದಲ್ಲದೆ, “ಭಾಷೆ ತಾ, ಜೆಳ್ಳ್, ತಂಪು ತಾಮನೆ, ನಾಡ್‌ಲ್ ನಾಳ್, ಆ ಮುಂದ್ ಮನೆ, ತೇನತ್ತಕಾರ, ಮೋವಕ್ಕೋರ್ ಮೊದ” ಸೇರಿದಂತೆ ಡಾಟಿ ಪೂವಯ್ಯ ಅವರು ಈ ವರೆಗೂ 22+ ಕೊಡವ ಕಾದಂಬರಿಗಳನ್ನು ಬರೆದಿದ್ದಾರೆ. ಇವರು ಬರೆದ ಎಲ್ಲಾ ಕಾದಂಬರಿಗಳೂ, ಅತ್ಯಂತ ಮೌಲ್ಯಯುತವಾಗಿ ಕೊಡವ ಮತ್ತು ಕೊಡಗಿನ ನೈಜ ಬದುಕನ್ನ ತೋರಿಸುವ ಜೊತೆಗೆ ಕೆಲ ಸಾಮಾಜಿಕ ಬದಲಾವಣೆ, ಕಂದಾಚಾರಗಳತ್ತಲೂ ಬೆಳಕು ಚೆಲ್ಲಿ, ಓದುತ್ತಿರುವವರೇ ಆ ಬರಹದೊಳಗೊಂದು ಪಾತ್ರವಾಗಿಬಿಡುವಂತೆ ತನ್ನಡೆಗೆ ಎಳೆಯಬಹುದಾದ, ಸೂಜಿಗಲ್ಲ ಹಿಡಿತ ಆ ಬರಹದಲ್ಲಿದೆ. ಅದರಲ್ಲೂ ನಾಡ್‌ಲ್ ನಾಳ್ ನನ್ನನ್ನ ಕೊಡವಾಮೆಯತ್ತ ಎಳೆದು ತಂದ ಕಾದಂಬರಿ. ಪ್ರತಿಯೊಬ್ಬರೂ ಓದಲೇಬೇಕಾದ ಬರಹಗಳು ಇವು ಎನ್ನುವುದಕ್ಕಿಂತ, ನಾವು ಅರಿಯಲೇ ಬೇಕಾದ ಹಲವು ನೈಜ ಬದುಕಿನ ಅಂಶಗಳು ಅವರ ಎಲ್ಲಾ ಬರಹಗಳಲ್ಲೂ ಇವೆ.
ನಡುಬಾಡೆ ಹೊಸದೊಂದು ಧಾರವಾಹಿ ಮಾಡಬೇಕೆಂಬ ಇಂಗಿತ ವ್ಯಕ್ತವಾದಾಗ, ಮೊದಲಿಗೆ ನೆನಪಾದದ್ದೇ ಡಾಟಿ ಪೂವಯ್ಯರ ಈ “ನಾಡ್‌ಲ್ ನಾಳ್” ಅದಕ್ಕಾಗಿ ಅವರ ಅನುಮತಿ ಕೇಳಿದಾಗ, ನೀನೇನು ನನ್ನ ಕೇಳೋದು, ಯಾವುದು ಬೇಕೋ ಅದನ್ನು ತೆಗೆದುಕೊಂಡು ಹಾಕು ಎಂದುಬಿಟ್ಟರು. ಅವರ ಬರಹದಷ್ಟೇ ಔದಾರ್ಯ ಮನಸ್ಸಿಗೆ, ಶಿರಬಾಗಿ ನಮಸ್ಕರಿಸುತ್ತಾ, ನಡುಬಾಡೆ ಓದುಗರಿಗೆ ಮೊದಲ ಧಾರವಾಹಿಯನ್ನ, ಉಳ್ಳಿಯಡ ಡಾಟಿ ಪೂವಯ್ಯ ಅವರ ನಾಡ್‌ಲ್ ನಾಳ್ ಮೂಲಕ ಕೊಡವ ಭಾಷೆಯಲ್ಲಿಯೇ ಪ್ರಾರಂಬಿಸುತ್ತೇವೆ. ಕೊಡವ ಭಾಷೆ ಅರಿಯದವರೂ ಕೂಡ ಸುಲಭವಾಗಿ ಅರ್ಥೈಸಿಕೊಳ್ಳಬಲ್ಲ ಸರಳ ಭಾಷೆಯಲ್ಲಿ, ನೈಜತೆಗೆ ಸಮೀಪವಾಗಿ ನೇಯ್ದಿರುವ ಈ ಕಾದಂಬರಿಯನ್ನ, ಧಾರವಾಹಿ ರೂಪದಲ್ಲಿ ಪ್ರಕಟಿಸುತ್ತಾ ಹೋಗುತ್ತೇವೆ.
ಕಥೆಯ ಉದ್ದಕೂ, ತಾಯಿನೆಲದ ಪ್ರೀತಿ, ಕಾಳಜಿ ಮತ್ತು ದೈವತ್ವದ ಬೆಂಬಲವನ್ನ ವಾಸ್ತವಕ್ಕೆ ತೀರಾ ಹತ್ತಿರವಾಗಿ ನೆಯ್ದಿರುವ ಈ ಧಾರವಾಹಿಯನ್ನ, ತಾವೆಲ್ಲರೂ ಓದಿ, ಆಸ್ವಾದಿಸುವ ಜೊತೆಗೆ, ಕಥಾಹಂದರದೊಳಗಿರುವ ನೈಜತೆಯನ್ನ, ನಾವೂ ಸಾದ್ಯವಾದಷ್ಟು ಅಳವಡಿಸಲು ಪ್ರಯತ್ನಿಸೋಣ.
ಕನ್ನಡದಲ್ಲಿಯೂ ಕೂಡ ಕೆಲವೇ ದಿನಗಳಲ್ಲಿ ಬೇರೊಂದು ಧಾರವಾಹಿ ನಿಮ್ಮ ಮುಂದೆ ಬರಲಿದೆ. ನಿಮ್ಮೆಲ್ಲರ ಸಹಜ ಸಹಕಾರದೊಂದಿಗೆ ನಮ್ಮನ್ನ ಮತ್ತಷ್ಟು ಹುರಿದುಂಬಿಸುವಿರಿ ಎಂಬ ನಂಬಿಕೆಯೊಂದಿಗೆ…
– ಸಂ