https://nadubadenews.com
Skip to content
nadubadenews.com

nadubadenews.com

KODAVA & KANNADA

  • About us
  • Contact US
  • Privacy Policy
  • Sample Page
  • Terms and Conditions
site mode button

ಮುಂಗಾರಿನಲ್ಲಿ ವಿಪತ್ತು ನಿರ್ವಹಣೆ ಸಮರ್ಥವಾಗಿ ನಿಭಾಯಿಸಲು ಉಸ್ತುವಾರಿ ಕಾರ್ಯದರ್ಶಿ ಡಾ. ಎನ್.ವಿ.ಪ್ರಸಾದ್ ಸೂಚನೆ…

News, Informatin , Enteetinement and Advertisement
27/05/202527/05/2025nadubadenews@gmail.comLeave a Comment on ಮುಂಗಾರಿನಲ್ಲಿ ವಿಪತ್ತು ನಿರ್ವಹಣೆ ಸಮರ್ಥವಾಗಿ ನಿಭಾಯಿಸಲು ಉಸ್ತುವಾರಿ ಕಾರ್ಯದರ್ಶಿ ಡಾ. ಎನ್.ವಿ.ಪ್ರಸಾದ್ ಸೂಚನೆ…
Spread the love

      ಮಡಿಕೇರಿ ಮೇ.27(Nadubade News): ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಆರಂಭವಾಗಿದ್ದು, ಜಿಲ್ಲಾಡಳಿತದಿಂದ ಸಹಾಯವಾಣಿ ಸಂಖ್ಯೆ 08272-221077 ಆರಂಭಿಸಿದೆ. ಜೊತೆಗೆ 8550001077 ವಾಟ್ಸ್ಆಪ್ ಸಂಖ್ಯೆಯನ್ನು ಸಹ ಆರಂಭಿಸಿದ್ದು, ಅತಿವೃಷ್ಟಿಯಿಂದ ಉಂಟಾಗುವ ವಿಪತ್ತಿನ ಬಗ್ಗೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಅವರು ತಿಳಿಸಿದ್ದಾರೆ.  ಮುಂಗಾರು ಆರಂಭ ಹಿನ್ನೆಲೆ  ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ  ನಡೆದ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.   

    ಮಡಿಕೇರಿ ತಾಲ್ಲೂಕು ವಿಪತ್ತು ನಿರ್ವಹಣಾ ಕೇಂದ್ರ 08272-228396, ವಿರಾಜಪೇಟೆ ತಾಲ್ಲೂಕು ವಿಪತ್ತು ನಿರ್ವಹಣಾ ಕೇಂದ್ರ-08274-257328, ಸೋಮವಾರಪೇಟೆ ತಾಲ್ಲೂಕು ವಿಪತ್ತು ನಿರ್ವಹಣಾ ಕೇಂದ್ರ-08276-282045, ಕುಶಾಲನಗರ ತಾಲ್ಲೂಕು ವಿಪತ್ತು ನಿರ್ವಹಣಾ ಕೇಂದ್ರ-08276-200198 ಹಾಗೂ ಪೊನ್ನಂಪೇಟೆ ತಾಲ್ಲೂಕು ವಿಪತ್ತು ನಿರ್ವಹಣಾ ಕೇಂದ್ರ-08274-249700 ಸಹಾಯವಾಣಿ ಕೇಂದ್ರ ಆರಂಭಿಸಿಲಾಗಿದೆ ಎಂದರು.

   ಮಳೆಯಿಂದ ಉಂಟಾಗುವ ಹಾನಿ ಸಂಬಂಧ ಜಿಲ್ಲಾಡಳಿತದಿಂದ ಆರಂಭಿಸಿರುವ ವಾಟ್ಸ್ಆಪ್ ಗುಂಪಿಗೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಛಾಯಾಚಿತ್ರ ಹಾಗೂ ವಾಯ್ಸ್ ರೆಕಾರ್ಡ್ ಸಹಿತ ಮಾಹಿತಿ ನೀಡಬಹುದಾಗಿದೆ ಎಂದರು.  ವಿಪತ್ತು ನಿರ್ವಹಣೆ ಸಂಬಂಧ ಜಿಲ್ಲಾ ಮಟ್ಟದಲ್ಲಿ ವಾಟ್ಸ್ಆಪ್ ಗ್ರೂಪ್ ಮಾಡಿರುವಂತೆ ತಾಲ್ಲೂಕು ಮಟ್ಟದಲ್ಲಿಯೂ ಸಹ ತಹಶೀಲ್ದಾರರ ನೇತೃತ್ವದಲ್ಲಿ ವಾಟ್ಸ್ಆಪ್ ಗುಂಪು ರಚಿಸಿಕೊಂಡು ತಾ.ಪಂ.ಇಒ, ಪಿಡಿಒ, ಗ್ರಾ.ಪಂ.ಕಾರ್ಯದರ್ಶಿಗಳು, ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜಿನಿಯರ್ ಗಳು ಪೊಲೀಸ್, ಅಗ್ನಿಶಾಮಕ, ಗ್ರಾಮ ಸಹಾಯಕರು, ಗೃಹರಕ್ಷಕದಳ ಗುಂಪಿಗೆ ಸೇರಿಸಿಕೊಂಡು ವಿಪತ್ತು ನಿರ್ವಹಣೆಯನ್ನು ನಿರ್ವಹಿಸಬೇಕು ಎಂದರು.  

   ಈಗಾಗಲೇ ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರ ಜೊತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಹ ಸಮನ್ವಯ ಸಾಧಿಸಿ ವಿಪತ್ತು ನಿರ್ವಹಣೆ ಮಾಡಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಡಾ.ಎನ್.ವಿ.ಪ್ರಸಾದ್ ಅವರು ಸೂಚಿಸಿದರು.

   ಜಿಲ್ಲೆಯಲ್ಲಿ ಮುಂಗಾರು ಹಿನ್ನೆಲೆ ಬಿರುಗಾಳಿ ಹೆಚ್ಚಾಗಿದ್ದು, ಇದರಿಂದ ಮನೆ ಹಾಗೂ ವಿದ್ಯುತ್ ಕಂಬಕ್ಕೆ ಹೆಚ್ಚಿನ ಹಾನಿಯಾಗುತ್ತಿದೆ. ಆದ್ದರಿಂದ ಈ ಬಗ್ಗೆ ಗಮನ ಹರಿಸಬೇಕು ಎಂದರು.  

   ಲೋಕೋಪಯೋಗಿ, ಪಂಚಾಯತ್ ಮತ್ತಿತರ ಎಂಜಿನಿಯರ್ ಇಲಾಖೆಗಳು ರಸ್ತೆ ಹಾನಿ, ರಸ್ತೆಗೆ ಮರ ಬಿದ್ದಲ್ಲಿ ಸುಗಮ ಸಾರಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಡಾ.ಎನ್.ವಿ.ಪ್ರಸಾದ್ ಅವರು ಹೇಳಿದರು. ಅಗತ್ಯವಿರುವ ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಈ ಬಾರಿ ಮುಂಗಾರು ಮುಂಚಿತವಾಗಿ ಆರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಜಿಲ್ಲೆಯ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶದಲ್ಲಿನ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು.  ಕಾಳಜಿ ಕೇಂದ್ರದಲ್ಲಿ ಉತ್ತಮ ಆಹಾರ ನೀಡಬೇಕು. ಯಾವುದೇ ಕಾರಣಕ್ಕೂ ದೂರು ಬರದಂತೆ ಗಮನಹರಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು  ಅವರು ಕಿವಿಮಾತು ಹೇಳಿದರು.

   ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜ ಅವರು ಜಿಲ್ಲಾಡಳಿತ ಬಳಿ ಪ್ರಾಕೃತಿಕ ವಿಕೋಪ ನಿರ್ವಹಣೆಗೆ 40 ಕೋಟಿ ರೂ. ಹಣವಿದೆ. ಜೊತೆಗೆ ತಹಶೀಲ್ದಾರರ ಬಳಿಯು ಸಹ ಹಣವಿದೆ ಎಂದು ಮಾಹಿತಿ ನೀಡಿದರು.

ಈ ಬಾರಿ ಮೇ ತಿಂಗಳಲ್ಲಿಯೇ ಮುಂಗಾರು ಆರಂಭವಾಗಿದ್ದು, ಹೆಚ್ಚಿನ ಬಿರುಗಾಳಿಯಿಂದ ಮನೆಗೆ ಮರ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು. ಈ ಬಾರಿ 23 ಮನೆಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರದ ಮಾರ್ಗಸೂಚಿಯಂತೆ ಪರಿಹಾರ ಪಾವತಿಸಲು ಕ್ರಮವಹಿಸಲಾಗುತ್ತಿದೆ ಎಂದರು.

   ಅಗ್ನಿಶಾಮಕ ದಳ, ಪೊಲೀಸ್ ರಕ್ಷಣಾ ತಂಡ, ಗೃಹರಕ್ಷಕ ದಳ, ವಿಕೋಪ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದು, ಭೂಕುಸಿತ ಹಾಗೂ ಪ್ರವಾಹ ಪೀಡಿತ ಪ್ರದೇಶಗಳನ್ನು ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಹಾಗೂ ಈ ಹಿಂದೆ ವಿಕೋಪವಾದ ಸ್ಥಳಗಳ ಆಧಾರದ ಮೇಲೆ ಗುರುತಿಸಲಾಗಿದೆ. ಒಟ್ಟು 43 ಪ್ರವಾಹ ಪೀಡಿತ ಮತ್ತು 44 ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.   

ಕೊಡಗು ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ಸೇರಿದಂತೆ ಹೋಬಳಿವಾರು ಒಟ್ಟು 20 ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ವಿಕೋಪಗಳು ಸಂಭವಿಸಿದಲ್ಲಿ ಸ್ಥಳೀಯ ಮಟ್ಟ ಹಾಗೂ ಜಿಲ್ಲಾಡಳಿತದೊಂದಿಗೆ ಸಮನ್ವಯ ಮಾಡಿಕೊಂಡು ಕಾರ್ಯ ನಿರ್ವಹಿಸಲಿದ್ದಾರೆ ಎಂದು  ಅವರು ಮಾಹಿತಿ ನೀಡಿದರು. 

   ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ಅವರು ಮಾತನಾಡಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಕುಟುಂಬಗಳಿಗೆ ಕೂಡಲೇ ಪರಿಹಾರ ವಿತರಿಸಬೇಕು. ಹಾಗೆಯೇ ಮನೆ ಹಾನಿ ಸಂಬಂಧ ಪರಿಹಾರ ವಿತರಿಸಬೇಕು ಎಂದು ಹೇಳಿದರು. ಶಾಲಾ ಕಾಲೇಜು ಕಟ್ಟಡಗಳ ಸುಸ್ಥಿತಿ ಬಗ್ಗೆ ಗಮನಹರಿಸಬೇಕು. ಸಮಸ್ಯೆಗಳಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದರು.

   ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಗೂ ಕ್ಷೀರಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ತಲುಪಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡುವಂತಾಗಬೇಕು. ಯಾವುದೇ ಕಾರಣಕ್ಕೂ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯಬಾರದು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಶಾಲಾ ಕೊಠಡಿ ದುರಸ್ತಿಗೆ ಪಂಚಾಯತ್ ರಾಜ್ ಎಂಜಿನಿಯರ್ ಗೆ ವಹಿಸಲಾಗಿದೆ ಎಂದರು ಇದೇ ಸಂದರ್ಭದಲ್ಲಿ  ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಪ್ರಗತಿ ಹಾಗೂ ವಸತಿ ಯೋಜನೆ ಬಗ್ಗೆ ಮಾಹಿತಿ ನೀಡಿದರು. 

    ಕಾರ್ಮಿಕ ಅಧಿಕಾರಿ ಕಾವೇರಿ ಅವರು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ 7 ಮಕ್ಕಳನ್ನು ಪತ್ತೆಹಚ್ಚಿ ಶಾಲೆಗೆ ಸೇರ್ಪಡೆ ಮಾಡಲಾಗಿದೆ ಎಂದರು.

   ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪ್ರಕೃತಿ ವಿಕೋಪ ಕಂಟ್ರೋಲ್ ರೂಮ್ ಸಹಾಯವಾಣಿ ಕೇಂದ್ರ 24*7 ಕಾರ್ಯ ನಿರ್ವಹಿಸಲಿವೆ. ಹಾಗೆಯೇ ಸೆಸ್ಕ್, ಅರಣ್ಯ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ ಎಂದರು.

   ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ವಿಕೋಪ ಪೀಡಿತ ಪ್ರದೇಶಗಳಲ್ಲಿ ಲಭ್ಯವಿರಬೇಕಾದ ಔಷಧ, ಚಿಕಿತ್ಸಾ ಉಪಕರಣಗಳ ಕುರಿತಂತೆ ಆರೋಗ್ಯ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಮಳೆಗಾಲದಲ್ಲಿನ ಸಮಸ್ಯೆ ಆದ ಸಾಂಕ್ರಾಮಿಕ ರೋಗ ನಿರ್ವಹಣೆಗೆ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಲಭ್ಯವಿರುವಂತೆ ಆರೋಗ್ಯ ಇಲಾಖೆಯಿಂದ ಕ್ರಮವಹಿಸಲಾಗಿದೆ. ಈ ಕಾಳಜಿ ಕೇಂದ್ರಗಳ ಉಸ್ತುವಾರಿಯನ್ನು ಆಯಾಯ ನೋಡಲ್ ಅಧಿಕಾರಿ ನಿರ್ವಹಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ವಿಪತ್ತು ನಿರ್ವಹಣಾ ಸಮಿತಿ ಸಭೆಗಳನ್ನು ನಡೆಸಲಾಗಿದೆ. ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಭೂವಿಜ್ಞಾನಿಗಳು ಭೂಕುಸಿತ ಪೀಡಿತ ಪ್ರದೇಶಗಳ ಬಗ್ಗೆ ಅಧ್ಯಯನ ನಡೆಸುತ್ತಿರುತ್ತಾರೆ ಎಂದರು.

    ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ಮಾಹಿತಿ ನೀಡಿ ಈ ಬಾರಿ ಮೇ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡುವ ಗುರಿ ಇದೆ. ಬಿತ್ತನೆ ಬೀಜ ಜೂನ್ ಮೊದಲ ವಾರದಿಂದ ವಿತರಿಸಲಾಗುತ್ತದೆ ಎಂದರು. 

   88 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, ಸೆಪ್ಟೆಂಬರ್ ವರೆಗೂ ರಸಗೊಬ್ಬರ ಪೂರೈಕೆಯಾಗಿದೆ. ಉಳಿದಂತೆ ರಸಗೊಬ್ಬರ ಪೂರೈಕೆಯಾಗಲಿದ್ದು,. ಡಿಎಪಿ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು ಮಾಹಿತಿ ನೀಡಿದರು.

   ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ನಗರಾಭಿವೃದ್ಧಿ ಇಲಾಖೆಗಳು ಮುಂತಾದ ಸಂಬಂಧಪಟ್ಟ ಎಂಜಿನಿಯರಿಂಗ್ ಇಲಾಖೆಗಳು ಪ್ರವಾಹದ ಪರಿಸ್ಥಿತಿ ತಲೆದೋರದಂತೆ ತಮ್ಮ ವ್ಯಾಪ್ತಿಯ ಚರಂಡಿ, ನಾಲೆಗಳಲ್ಲಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. 

   ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ಅವರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ತಾ.ಪಂ.ಇಒಗಳು, ಎಂಜಿನಿಯರ್ ಗಳು ಹಲವು ಮಾಹಿತಿ ನೀಡಿದರು.

Post navigation

ಬಿಳೂರಿನಲ್ಲಿ ಮನೆಯ ಮೇಲೆ ಬಿದ್ದ ಮರ, ಅದೃಷ್ಟ ವಶಾತ್‌  ತಪ್ಪಿದ ಜೀವ ಹಾನಿ
ಪೊನ್ನಂಪೇಟೆ ಕೊಡವ ಸಮಾಜಕ್‌ ಕಾಳಿಮಾಡ ಮೋಟಯ್ಯ ಕೂಟ್‌ಕಾರಕ್‌ ಓಟ್‌ಮಾಡಿತ್‌ ಗೆಲ್ಲ್‌ಚಿಡೀ…

Related Posts

23ರಂದು ಕಾವೇರಿ ಉದಯ ಅವರ ನೀಲಾ ನಿಲಯ ಕಾದಂಬರಿ ಲೋಕಾರ್ಪಣೆ…

20/05/202520/05/2025nadubadenews@gmail.com
ಸೋಮವಾರಪೇಟೆ ರೈತ ಹೋರಾಟ ಸಮಿತಿಯಿಂದ, ಅಹೋರಾತ್ರಿ ಧರಣಿಗೆ ನಿರ್ಧಾರ…

ಸೋಮವಾರಪೇಟೆ ರೈತ ಹೋರಾಟ ಸಮಿತಿಯಿಂದ, ಅಹೋರಾತ್ರಿ ಧರಣಿಗೆ ನಿರ್ಧಾರ…

29/04/202529/04/2025nadubadenews@gmail.com
ಟಿ.ಶೆಟ್ಟಿಗೇರಿ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಲೋಕಾರ್ಪಣೆ ….

ಟಿ.ಶೆಟ್ಟಿಗೇರಿ ಗ್ರಾಮ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಲೋಕಾರ್ಪಣೆ ….

10/05/202510/05/2025nadubadenews@gmail.com

Leave a Reply Cancel reply

Your email address will not be published. Required fields are marked *

  • Facebook
  • Instagram
  • WhatsApp
  • X
nadubadenews | Theme: News Portal by Mystery Themes.
error: Content is protected !!
WhatsApp us
Go to mobile version