ಮಡಿಕೇರಿ ಮೇ.21(Nadubade News): ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಕ್ಲಬ್ (ಎಂಸಿಸಿ) ವತಿಯಿಂದ ಜಿಲ್ಲಾ ಫುಟ್ಬಾಲ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಫುಟ್ಬಾಲ್ ತರಬೇತಿ ಶಿಬಿರ ಸಮಾರೋಪಗೊಂಡಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಎಂಸಿಸಿ ಹಿರಿಯ ಆಟಗಾರರು, ಪೋಷಕರೂ ಆಗಿರುವ ಚಿನ್ನಪ್ಪ ಅವರು ಮಾತನಾಡಿ ಮಕ್ಕಳು ಮೊಬೈಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಮೈದಾನಕ್ಕಿಳಿದು ಆಟವಾಡಬೇಕು. ಕ್ರೀಡೆಯಲ್ಲಿ ಸಾಕಷ್ಟು ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳಬೇಕು. ತರಬೇತಿ ಶಿಬಿರದಲ್ಲಿ ಕಲಿತದ್ದನ್ನು ನಿರಂತರ ಅಭ್ಯಾಸ ಮಾಡಬೇಕೆಂದು ಕರೆ ನೀಡಿದರು.
ಮತ್ತೋರ್ವ ಅತಿಥಿ, ಹಿರಿಯ ಫುಟ್ಬಾಲ್ ಆಟಗಾರ ರವಿ ಅವರು ಮಾತನಾಡಿ ಎಂಸಿಸಿ ಕ್ಲಬ್ ಮೂಲಕ ಆಡಿದ ಆಟಗಾರರು ರಾಜ್ಯ, ರಾಷ್ಟ್ರಮಟ್ಟದ ಆಟಗಾರರಾಗಿ ಹೊರ ಹೊಮ್ಮಿದ್ದಾರೆ. ಈಗಿನ ಮಕ್ಕಳಿಗೆ ಸಾಕಷ್ಟು ಅವಕಾಶಗಳಿದ್ದು, ಅದನ್ನು ಸದುಪಯೋಗ ಪಡಿಸಿಕೊಂಡು ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವಂತಾಗಬೇಕು. ಅಭ್ಯಾಸ ನಿರಂತರವಾಗಿರಬೇಕೆಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ, ಎಂಸಿಸಿ ಅಧ್ಯಕ್ಷ ಹಾಗೂ ತರಬೆತುದಾರರೂ ಆಗಿರುವ ಕ್ರಿಸ್ಟೋಫರ್; ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ಸದಾ ನಿರಂತರಾಗಿರಬೇಕು. ಆಟ ಮುಂದುವರಿಸುತ್ತಾ ಕ್ರೀಡಾ ಕೂಟಗಳಲ್ಲಿ ಭಾಗವಹಿಸುವದರೊಂದಿಗೆ ಅವಕಾಶ ಸಿಕ್ಕಲ್ಲಿ ಆಯ್ಕೆ ಶಿಬಿಗಳಲ್ಲಿ ಪಾಲ್ಗೊಳ್ಳಬೇಕು. ಅವಶ್ಯದಲ್ಲಿ ತಾವು ಸಹಕಾರ ನೀಡುವದಾಗಿ ಹೇಳಿದರು. ಈ ತರಬೇತಿ ಮುಗಿದ ಬಳಿಕವೂ ಮಕ್ಕಳು ಮೈದಾನಕ್ಕಾಗಮಿಸಿ ಅಭ್ಯಾಸ ಮಾಡಬೇಕೆಂದು ಹೇಳಿದರು.
ಇದೇ ಸಂದರ್ಭ ಪೋಷಕರ ಪರವಾಗಿ ತರಬೇತುದಾರ ಕ್ರಿಸ್ಟೋಫರ್ ಅವರನ್ನು ನೆನಪಿನ ಕಾಣಿಕೆಯೊಂದಿಗೆ ಗೌರವಿಸಲಾಯಿತು. ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು. ಈ ಸಂದರ್ಭ ಎಂಸಿಸಿ ಕಾರ್ಯದರ್ಶಿ ಉಮೇಶ್‌ಕುಮಾರ್, ಎಂಸಿಸಿ ಆಟಗಾರ ಸುರ್ಜಿತ್, ವಿದ್ಯಾರ್ಥಿಗಳ ಪೋಷಕರು ಪಾಲ್ಗೊಂಡಿದ್ದರು. ಎಂಸಿಸಿ ಉಪಾಧ್ಯಕ್ಷ ಕುಡೆಕಲ್ ಸಂತೋಷ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಶಿಬಿರಾರ್ಥಿಗಳಿಗೆ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.