
ಮಡಿಕೇರಿ ಏ.24:- ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ 2011 ಮತ್ತು (ತಿದ್ದುಪಡಿ) ಅಧಿನಿಯಮ 2014ರ ಅನುಸಾರ, ಸಕಾಲ ಅಧಿಸೂಚಿತ ಸೇವೆಗಳನ್ನು ನಿಗದಿತ ಕಾಲಾವಧಿಯಲ್ಲಿ ಪಡೆಯುವುದು ನಾಗರಿಕರ ಹಕ್ಕಾಗಿದೆ. ಸಕಾಲ ಕಾಯ್ದೆಯಡಿ ಅಧಿಸೂಚಿತ ಸೇವೆಯನ್ನು ಕೋರಿ ಸಲ್ಲಿಸಿದ ಅರ್ಜಿಯು ವಿಳಂಬವಾದಲ್ಲಿ ಅಥವಾ ಸಕಾಲ ಕಾಯ್ದೆಯಡಿ ಅಧಿಸೂಚಿತ ಸೇವೆಯನ್ನು ಕೋರಿ ಸಲ್ಲಿಸಿದ ಅರ್ಜಿಯು ತಿರಸ್ಕೃತಗೊಂಡಲ್ಲಿ ಅಥವಾ ಸಕಾಲ ಕಾಯ್ದೆಯಡಿ ಅಧಿಸೂಚಿತ ಸೇವೆಯನ್ನು ಕೋರಿ ಸಲ್ಲಿಸಿದ ಅರ್ಜಿಗೆ 15 ಸಂಖ್ಯೆಯ ಸಕಾಲ ಸ್ವೀಕೃತಿ ಸಂಖ್ಯೆ ನೀಡದಿದ್ದಲ್ಲಿ ಈ ಮೂರು ಸಂದರ್ಭಗಳಲ್ಲಿ ನಾಗರಿಕರು ಸಕಾಲ ಕಾಯ್ದೆಯಡಿ, ಪ್ರಥಮ ಮೇಲ್ಮನವಿಯನ್ನು ಸಕ್ಷಮ ಅಧಿಕಾರಿಗಳಿಗೆ ಸಲ್ಲಿಸಲು ಹಕ್ಕುಳ್ಳವರಾಗಿರುತ್ತಾರೆ.
ಮೇಲ್ಮನವಿ ಸಲ್ಲಿಸುವ ಕಾರ್ಯವಿಧಾನ; ಸಹಾಯವಾಣಿ ಕೇಂದ್ರದ 080-44554455 ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ ಸಕಾಲ ಮಿಷನ್ ಜಾಲತಾಣಕ್ಕೆ ಭೇಟಿ ನೀಡಿ, ಮೇಲ್ಮನವಿ ಸಲ್ಲಿಸಬಹುದು. ಅಥವಾ ಸೇವೆಗೆ ನೋಂದಾಯಿಸಿಕೊಳ್ಳುವ ಸಂದರ್ಭದಲ್ಲಿ ನೀವು ನೀಡಿದ ಮೊಬೈಲ್ ಸಂಖ್ಯೆಗೆ, ಸೇವೆ ವಿಳಂಬವಾದರೆ ಅಥವಾ ತಿರಸ್ಕೃತಗೊಂಡರೆ ಸಕಾಲ ಮಿಷನ್ ಕಡೆಯಿಂದ ಟೆಸ್ಟ್ ಲಿಂಕ್ ಕಳುಹಿಸಲಾಗುತ್ತದೆ. ನಾಗರಿಕರು ಲಿಂಕ್ ಅನ್ನು ಪ್ರೆಸ್ ಮಾಡುವ ಮೂಲಕ ಮೇಲ್ಮನವಿ ಸಲ್ಲಿಸಬಹುದು.
ಅರ್ಜಿಯನ್ನು ಇತ್ಯರ್ಥಗೊಳಿಸುವಲ್ಲಿ ವಿಳಂಬವಾದಲ್ಲಿ, ಒಂದು ಅರ್ಜಿಗೆ ದಿನ ಒಂದಕ್ಕೆ 20 ರೂ.ನಂತೆ, ಗರಿಷ್ಠ 500 ರೂ.ವರೆಗೆ ಪರಿಹಾರ ವೆಚ್ಚ ಪಡೆಯುವುದು ಮೇಲ್ಮನವಿದಾರರ ಹಕ್ಕಾಗಿರುತ್ತದೆ. ಯಾವುದೇ ಸಂದರ್ಭದಲ್ಲಿ ಪ್ರಥಮ ಮೇಲ್ಮನವಿಯ ತೀರ್ಪು ಬಗ್ಗೆ ಅಸಮಾನಧಾನವಿದ್ದಲ್ಲಿ ದ್ವಿತೀಯ ಮೇಲ್ಮನವಿಯನ್ನು ಮೇಲ್ಮನವಿ ಪ್ರಾಧಿಕಾರಕ್ಕೆ ನಾಗರಿಕರು ಸಲ್ಲಿಸಲು ಅವಕಾಶವಿದೆ ಎಂದು ಸಕಾಲ ಮಿಷನ್ ಆಡಳಿತಾಧಿಕಾರಿ ನಿವೇದಿತ ಎಸ್. ಅವರು ತಿಳಿಸಿದ್ದಾರೆ.