ಸಂಪಾದಕೀಯ: ಅ. 03: ತೊಂಬತ್ತರ ದಶಕದಲ್ಲಿ, ಸೋಮವಾರಪೇಟೆಯಿಂದ ಹರಗಕ್ಕೆ ಚಪ್ಪೇಶ್ವರ ಹೆಸರಿನ ಒಂದು ಬಸ್ಸು ಬರುತಿತ್ತು. ಆ ಕಾಲಕ್ಕೆ ಆ ಭಾಗದ ಹತ್ತಾರು ಗ್ರಾಮಗಳಿಗೆ ಅದೊಂದೇ ಐರಾವತ. ನಮ್ಮ ಮನೆಯಿಂದ ಈ ಬಸ್ಸಿನ ಅಂತಿಮ ನಿಲ್ದಾಣ, ಹರಗ ಗ್ರಾಮದ ಹೆಬ್ಬುಳುವಿಗೆ ಸುಮಾರು ಐದು ಕಿ.ಮಿ. ಆಗಬಹುದು. ಆಗ ಅಲ್ಲಿವರೆಗೆ ಮಾತ್ರ ರಸ್ತೆ ಇತ್ತು. ಅಲ್ಲಿಂದೀಚೆಗೆ ಎಲ್ಲರಿಗೂ ಲೆಗ್ ಮೋಟರ್ ಸರ್ವಿಸೇ ಗತಿ. ಹೀಗೆ ರಾಜ ಗಾಂಭೀರ್ಯದಿಂದ ಬರುತ್ತಿದ್ದ ಚಪ್ಪೇಶ್ವರ ಬಸ್ಸ್, ತನ್ನೆಲ್ಲ ಶಕ್ತಿಯನ್ನ ಮೀರಿ ಹತ್ತಾರು ಗ್ರಾಮದ ಪ್ರಯಾಣಿಕರನ್ನ ಸೋಮವಾರಪೇಟೆಗೆ ಹೊತ್ತೊಯ್ಯುತ್ತಿತ್ತು.
ಸಂತೆ ದಿನವಾದ ಸೋಮವಾರ ಅಂತೂ, ಸೀಟ್ ಸಿಗೋದು ಇರಲಿ, ಪಾದ ಊರಿ ನಿಲ್ಲಲು ಜಾಗ ಸಿಕ್ಕರೇ ಹೆಚ್ಚು ಅನ್ನೋ ಪರಿಸ್ಥಿತಿ. ಬಸ್ಸಿನ ಚಾಲಕನ ಸ್ಥಿತಿ ಹೇಗಿತ್ತೆಂದರೆ, ತಿರುವುಗಳಲ್ಲಿ ಸ್ಟೇರಿಂಗ್ ಎಳೆಯಲು ಒಂದಿಬ್ಬರು ಯುವಕರನ್ನು ಪಕ್ಕದ ಗೇರ್ ಬಾಕ್ಸ್ ಮೇಲೆ ಕೂರಿಸಿಕೊಂಡಿರುತ್ತಿದ್ದರು. ಇನ್ನು ಬಸ್ಸಿನ ಕ್ಲೀನರ್ ಅಂತೂ ಬೆಟ್ಟ ಹತ್ತುವಾಗ ಒಂದು ಕಯ್ಯಲ್ಲಿ ಕಟ್ಟೆ, ಒಂದು ಕಯ್ಯಲ್ಲಿ ಡೋರನ್ನ ಹಿಡಿದು ನೇತಾಡುತ್ತಿದ್ದ. ಕಾರಣ ವಿಪರೀತ ಭಾರ ಹೊತ್ತ ಚಪ್ಪೇಶ್ವರ, ಬೆಟ್ಟ ಹತ್ತಲಾರದೆ ಹಿಮ್ಮುಖ ಚಲಿಸಿಬಿಟ್ಟರೆ, ಕಟ್ಟೆ ಇಡಲು ಸಹಾಯಕನ ತಯಾರಿ ಅದು. ಹೀಗೆ ಮಿತಿಮೀರಿದ ಭಾರವನ್ನ ಹೊರಲಾರದ ನಮ್ಮ ಬಂಡಿ ಚಪ್ಪೇಶ್ವರ, ಕೆಲವೊಮ್ಮೆ ಸೋತು ರಸ್ತೆ ಮದ್ಯಯೇ ಕೆಟ್ಟು ನಿಂತುಬಿಡುತ್ತಿದ್ದ.
ವಾರಕ್ಕೊಮ್ಮೆ ಸಂತೆಗೆ ಹೋಗಿ, ಎರಡು ಮೂರು ಬ್ಯಾಗುಳಲ್ಲಿ ಹೊರಲಾರದಷ್ಟು ದಿನಸಿಗಳ ಜೊತೆಗೆ, ಆಗತಾನೆ ಚಡ್ಡಿ ಹಾಕುತಿದ್ದ ನನ್ನಂತ ಸಣ್ಣ ಮಕ್ಕಳು ಪೇಟೆ ನೋಡಲು, ಬಸ್ ಪ್ರಯಾಣದ ಮಜಾ ಮಾಡಲು ಹೋಗಿ, ಹಿರಿಯೊರೊಂದಿಗೆ ಇರುತ್ತಿದ್ದೇವು. ವಾರದ ಸಂತೆ ಆದ್ದರಿಂದ ವಾರವಿಡೀ ದುಡಿದು ದಣಿದಿದ್ದವರು, ಸ್ವಲ್ಪ ಕೆಂಪಮ್ಮನ ರುಚಿ ನೋಡಿ, ಸಂಜೆ ಸಮಯಕ್ಕೆ ಅವರೂ ಕೆಂಪಾಗಿ ಬಿಟ್ಟಿರುತ್ತಿದ್ದರು. ಈ ನಡುವೆ ಇದ್ದದೊಂದು ಬಸ್ಸು ಎಲ್ಲೋ ನಿಂತು ನಾನೊಲ್ಲೆ ಎಂದು ಬಿಟ್ಟರೆ, ಹೊರಲಾರದ ಬ್ಯಾಗು, ಜೋತುಬಿದ್ದ ಮಗು, ಒಳಗಿರುವ ಗುಂಡು, ಎಲ್ಲವೂ ಮಿಶ್ರವಾಗಿ, ಉರಿದು ಕೆಂಡವಾಗಿ, ಬಸ್ ಮಾಲೀಕರ ಮೇಲೆ ಮುಗಿ ಬೀಳುತ್ತಿದ್ದರು.
ಈ ಕಡೆಯಿಂದ ಪ್ರಯಾಣಿಕರು ಏ… ನಿನ್ನ ಬಸ್ ಸರಿ ಇಲ್ಲ, ನೀನು ಸರಿಯಾಗಿ ರಿಪೇರಿ ಮಾಡಿಸೋದಿಲ್ಲ, ಹಾಗೆ, ಹೀಗೆ ಎಂದೆಲ್ಲ ಕೂಗಾಡಿದರೆ, ಇನ್ನು ಬಸ್ ಮಾಲೀಕ, ಸುಮ್ಮನಿದ್ದಾರೆಯೆ, ಮೊದಲೇ ಬಸ್ಸು ಕೆಟ್ಟು ನಿಂತ ತಲೆಬಿಸಿ ಬೇರೆ, ಊರಿನ ಜನರ ಮಾತು ಬೇರೆ ಕೇಳಿ ಅದೇ ರಭಸದಲ್ಲಿ ತಿರುಗಿಸಿ ಬಯ್ಯುತಿದ್ದರು.
ಹೀಗೆ ಒಮ್ಮೆ ಜೋರು ಜಗಳ ನಡೆದಾಗ, ಬಸ್ ಮಾಲೀಕರು, “ಏ…. ನಿಮಗೆಲ್ಲಾ ನೆಟ್ಟಗೆ ಒಂದು ಜೋಡಿ ಎತ್ತು ಸಾಕೋಕಾಗಲ್ಲ… ಅದಕ್ಕೇ ವರ್ಷ ಇಡೀ ಪರ್ದಾಡುತ್ತೀರಿ. ಅಂತದ್ರಲ್ಲಿ ಒಂದು ಬಸ್ಸ್ ಸಾಕೋ ಕಷ್ಟ ಏನೂ ಅಂತ ಗೊತ್ತಾ….” ಎಂದಿದ್ದರು.
ಅಂದು ತೀರಾ ಸಣ್ಣವನಿದ್ದ ನನಗೆ ಆ ಮಾತು ಈಗಲೂ ಗುಂಯ್ ಗುಡತ್ತಲೆ ಇರುತ್ತೆ. ವಾಸ್ತವದಲ್ಲಿ ಅಂದು ಬಸ್ಸ್ ಮಾಲೀಕರು ಹೇಳಿದ ಮಾತು ಅಕ್ಷರಶಃ ಸರ್ವಕಾಲದ ಸತ್ಯ. ಆನೆ ಭಾರ ಆನೆಗೆ, ಇರುವೆ ಭಾರ ಇರುವೆಗೆ ಎಂಬಂತೆ, ಅವರವರ ಪರಿಸ್ಥಿತಿ, ಸನ್ನಿವೇಶಗಳು ಅವರಿಗೇ ಗೊತ್ತಿರೋದು.
ಯಾರೋ ಒಬ್ಬ ತನ್ನ ಒಳಿತಿಗೋ, ಸಮಾಜದ ಒಳಿತಿಗೋ, ಏನೋ ಒಂದು ಕಾರಣಕ್ಕೆ ಏನೋ ಮಾಡಲು ಹವಣಿಸುತ್ತಾರೆ. ಆ ಕಾರ್ಯ ಕೆಲವೊಮ್ಮೆ ತಾ ಬಯಸಿದಂತೆ ಸಾಗದೆ, ತಾಂತ್ರಿಕವಾಗಿಯೋ, ಆರ್ಥಿಕವಾಗಿಯೋ ಅಡಚಣೆಯಾಗಿ, ನಿಂತಾಗ, ನಿಧಾನವಾದಾಗ, ಆ ಕೆಲಸ ಮತ್ತು ಶ್ರಮದ ಒಳಮರ್ಮ ಅರಿಯದೇ, ಕನಿಷ್ಟ ತಮ್ಮ ಸ್ವಂತ ಸಂಸಾರ ಸಾಗಿಸಲು ಯೋಗ್ಯರಲ್ಲದವರೆಲ್ಲ ಮಾತಾಡಲು, ಬಿಟ್ಟಿ ಉಪದೇಶ ಮಾಡಲು, ಟೀಕಿಸಿ, ಹುಸಿನಗೆಯಾಡಲು ಸುರುವಿಟ್ಟು ಕೊಳ್ಳುತ್ತಾರೆ. ಅಂತವರಿಗೆ ಸಮಾಜದ ಬಗ್ಗೆಯಾಗಲೀ, ಸಮಸ್ಯೆಯ ಬಗ್ಗೆಯಾಗಲೀ ಕಾಳಜಿಯೂ ಇಲ್ಲ. ಅವಶ್ಯಕತೆಯೂ ಇಲ್ಲ. ಇದೆಲ್ಲಕ್ಕಿಂತ ಒಳಿತು ಮಾಡಲು ಹೊರಟವರನ್ನ ಹಂಗಿಸಿ ಬಿಟ್ಟೆ, ಎನ್ನೋ ವಿಕೃತ ಸಂತೋಷ ಅಷ್ಟೆ ಅವರ ಆಭರಣ.
ಇಂತವರು ಸಮಾಜದಲ್ಲಿ ಅಂದೂ ಇದ್ದರು. ಇಂದು, ನಾಳೆ, ಮುಂದೆಯೂ ಇರುತ್ತಾರೆ. ಕೊಡಗಿನ ಇತಿಹಾಸದ ಪುಟಗಳನ್ನ ತಿರುವಿದರೆ ಸಾವಿರಾರು ವರ್ಷಗಳಿಂದಲೇ ಇಂತ ತಲೆ ಹಿಡುಕರು, ಮನೆ ಮುರುಕರು, ತಾನು ಮಾತ್ರ ಸರಿ, ಮಿಕ್ಕವರೇನೂ ಅಲ್ಲ ಎಂದು ಬೀಗಲು ಹೋಗಿ ಮಣ್ಣಾದವರ ಕಥೆಗಳನ್ನು ಅರಿಯಬಹುದು. ಆದರೆ ತನ್ನೊಳಗೆ ಒಂದು ನಿರ್ದಿಷ್ಟ ನಿಲುವಿಟ್ಟುಕೊಂಡು, ಹಿಡಿದ ಕಾರ್ಯ ಸಾಧನೆಯ ಯೋಜನೆ ಇದ್ದವರು, ಗಾಳಿಯಲ್ಲಿ ತೇಲಿ ತಲುಪಲಾಗದಿದ್ದರೂ, ತೆವಳಿಯಾದರೂ ಸರಿ, ಗುರಿ ಮುಟ್ಟುತ್ತಾರೆ. ಈಗ ನಾವು ಯಾರ ಸಾಲಿಗೆ ಸೇರಬೇಕು ನಾವು ಏನಾಗಬೇಕು ಎಂಬುದರ ಕುರಿತು ನಾವು ಚಿಂತಿಸೋಣ….