
ಕೊಪ್ಪ, ಏ.20: (ಚಂದ್ರಮೋಹನ್) 1971ರಲ್ಲಿ ಬಾಂಗ್ಲಾ ದೇಶ ವಿಮೋಚನಾ ಸಮರದಲ್ಲಿ ಪಾಲ್ಗೊಂಡಿದ್ದ ಭಾರತೀಯ ಯೋಧರ ಕುಟುಂಬವನ್ನು ಗುರುತಿಸಿ ಪದಕ ಮತ್ತು ಪ್ರಮಾಣ ಪತ್ರವನ್ನು ಬಾಂಗ್ಲಾದೇಶ ಸರ್ಕಾರ ನೀಡುತಿದ್ದು, ಈ ನಿಟ್ಟಿನಲ್ಲಿ ಕೊಡಗಿನ ಯೋಧ ಸಿರಿಕಜೆ ಪಳಂಗಪ್ಪ ಅವರ ಕುಟುಂಬಸ್ಥರನ್ನು ಹುಡುಕಿಬಂದ ಸೇನಾಧಿಕಾರಿಗಳು ಪಿರಿಯಪಟ್ಟಣ ತಾಲೂಕು ಕೊಪ್ಪ ಬಳಿಯ ಮರಡಿಯೂರ್ನಲ್ಲಿ ನೆಲೆಸಿರು ಯೋಧರ ಕುಟುಂಬವನ್ನು ಭೇಟಿ ಮಾಡಿ ಗೌರವ ಅರ್ಪಿಸಿದರು.
ಕೊಪ್ಪ ಗ್ರಾಮ ನಿವಾಸಿ ಸೇನೆಯಲ್ಲಿ ಗನ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದ ಪಳಂಗಪ್ಪ ಎಂಬವರು 1971 ರಲ್ಲಿ ಬಾಂಗ್ಲಾದೇಶಕ್ಕೆ ಯುದ್ಧಕ್ಕೆ ಭಾರತದಿಂದ ನಿಯೋಜನೆಗೊಂಡ ಸಂದರ್ಭಯುದ್ಧದಲ್ಲಿ ಡಿಸೆಂಬರ್ 19, 1971ರಲ್ಲಿ ಹುತಾತ್ಮರಾಗಿದ್ದರು. ಆ ಸಂದರ್ಭ ಒಟ್ಟು 1563 ಮಂದಿ ಭಾರತೀಯ ಯೋಧರು ವೀರಮರಣ ಹೊಂದಿದ್ದರು. ಬಾಂಗ್ಲಾದೇಶದ ಸ್ವಾತಂತ್ರೋತ್ಸವ ದಿನವಾದ ಡಿಸೆಂಬರ್ 21ರಂದು ಅಲ್ಲಿನ ಅಂದಿನ ಪ್ರಧಾನಿ ಶೇಕ್ ಹಸೀನಾ ಅವರು ದೇಶದ ಯುದ್ಧದಲ್ಲಿ ಮಡಿದ ಭಾರತದ ಎಲ್ಲಾ ವೀರ ಯೋಧರ ಕುಟುಂಬ ಸದಸ್ಯರನ್ನು ಗೌರವಿಸುವ ನಿರ್ಣಯ ಕೈಗೊಂಡಿದ್ದರು. ಬಾಂಗ್ಲಾ ದೇಶದ ಪರವಾಗಿ ಭಾರತದಿಂದ ತೆರಳಿದ 1563 ಮಂದಿ ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ಗೌರವ ಸಲ್ಲಿಸುವ ಸಲುವಾಗಿ ವಿಶೇಷ ಫಲಕ ಹಾಗೂ ಮರಣೋತ್ತರ ಪ್ರಶಸ್ತಿಗಳನ್ನು ನೀಡಲು ಅಲ್ಲಿನ ಸರಕಾರ ಭಾರತ ಸರಕಾರಕ್ಕೆ ಹಸ್ತಾಂತರ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಆ ಸಂದರ್ಭ ಬಾಂಗ್ಲಾದೇಶದಲ್ಲಿ ವೀರ ಮರಣವನ್ನಪ್ಪಿದ ಕೊಪ್ಪ ಗ್ರಾಮದ ಹುತಾತ್ಮ ಯೋಧ ಸಿರಿಕಜೆ ಪಳಂಗಪ್ಪ ಅವರ ಕುಟುಂಬ ಸದಸ್ಯರನ್ನು ಪತ್ತೆಮಾಡಿ ಅವರಿಗೆ ಫಲಕ ಮರಣೋತ್ತರ ಪ್ರಶಸ್ತಿ ಪತ್ರಗಳನ್ನು ಹಸ್ತಾಂತರಿಸಲು ಮಹಾರಾಷ್ಟ್ರದ ನಾಸಿಕ್ನಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆನಂದ್ ಮತ್ತಿತರರು ಶುಕ್ರವಾರದಿಂದ ಕೊಪ್ಪ ಗ್ರಾಮಕ್ಕೆ ಬಂದು ಯೋಧ ಪಳಂಗಪ್ಪ ಅವರ ಕುಟುಂಬ ಸದಸ್ಯರಿಗೆ ಇದನ್ನು ತಲುಪಿಸಲು ಹುಡುಕಾಡಿದ್ದರು.
ಸ್ಥಳೀಯ ಉದ್ಯಮಿ ವಿನೋದ್ ಕುಮಾರ್ ಮತ್ತಿತರರು, ಸೇನಾ ಸಿಬ್ಬಂದಿಗಳೊಂದಿಗೆ, ಕುಶಾಲನಗರ ಮತ್ತು ಮಡಿಕೇರಿ ಮಾಜಿ ಸೈನಿಕರ ಸಂಘದ ಮೂಲಕ ಹುಡುಕಾಟ ನಡೆಸಿ, ಹುತಾತ್ಮ ಯೋಧ ಪಳಂಗಪ್ಪ ಅವರ ಪತ್ನಿ ಹೊನ್ನಮ್ಮ ಮತ್ತು ಅವರ ಕುಟುಂಬ ಸದಸ್ಯರಿಗೆ ಗೌರವ ಸಮರ್ಪಣೆ ಮಾಡಿದರು.