
ಬಲ್ಲಮಾವಟಿ ಏ.11 (ನಡುಬಾಡೆ ನ್ಯೂಸ್) :- ಮಕ್ಕಳು ದಿನದ ಬಹುಪಾಲು ಮೊಬೈಲ್‌ನಲ್ಲಿ ಮುಳುಗುವುದನ್ನು ಬಿಟ್ಟು, ಮೈದಾನದೆಡೆಗೆ ಧಾವಿಸಿಬಂದು, ಆಟ ಓಟಗಳಲ್ಲಿ ಪಾಲ್ಗೊಂಡರೆ ಆರೋಗ್ಯದ ಜೊತೆಗೆ ಮಾನಸಿಕ ಸ್ಥಮಿತವೂ ದ್ವಿಗುಣಗೊಳ್ಳುತ್ತದೆ ಎಂದು ಖ್ಯಾತ ಹಾಕೀ ವೀಕ್ಷಕ ವಿವರಣಗಾರ ಹಾಗೂ ಅಂಕಣಕಾರರಾಗಿರುವ ಚೆಪ್ಪುಡಿರ ಕಾರ್ಯಪ್ಪ ಅವರು ಕಿವಿ ಮಾತು ನುಡಿದರು.
ಬಲ್ಲಮಾವಟಿಯ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಪ್ರಾಯೋಜಕತ್ವದಲ್ಲಿ ಬಲ್ಲಮಾವಟಿಯ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ದಿನಾಂಕ 9-4-03-2025 ರ ಬುಧವಾರದಂದು ನಡೆದ ಉಚಿತ ಹಾಕಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಚೆಪ್ಪುಡಿರ ಕಾರ್ಯಪ್ಪ ಅವರು ಮಾತನಾಡುತ್ತಾ, ಪೋಷಕರು ಮಕ್ಕಳಿಗೆ ಒಂದು ದಿನಕ್ಕೆ ಮೊದಲೇ ಬೇಕಿರುವ ಎಲ್ಲಾ ಕಿಟ್ ಸಾಮಾಗ್ರಿಗಳನ್ನು ಸಿದ್ಧಪಡಿಸಿಕೊಂಡು, ಬೆಳಗ್ಗಿನ ಜಾವ ಅವರನ್ನು ಮೈದಾನಕ್ಕೆ ಕರೆತಂದರೆ ಮಕ್ಕಳು ಹಾಗೂ ಪೋಷಕರ ನಡುವೆ ಗಾಢ ಸಂಭಂದವನ್ನು ಪ್ರತಿಬಿಂಬಿಸುತ್ತದೆ ಎಂದು ನುಡಿದರು. ಇತ್ತೀಚೆಗೆ ಮೊಬೈಲ್ ನ ಬಳಕೆ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತಿದ್ದು, ಇದರಿಂದ ಮಕ್ಕಳ ಕ್ರೀಡಾ ಹಾಗು ದೈಹಿಕ ಶಿಕ್ಷಣದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿದೆ, ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಗಮನ ಹರಿಸಿ, ಮಕ್ಕಳ ದೈಹಿಕ ಮತ್ತು ಮಾನಸಿಕ ಸ್ಥಿಮಿತ ಕಾಪಾಡಬೇಕು ಎಂದರು. ಈ ಹಾಕಿ ತರಬೇತಿ ಶಿಬಿರ ನಡೆದ ಸ್ಥಳ, ಕೊಡಗಿನ ಪ್ರಕೃತಿ ಸೌಂದರ್ಯದ ರಮಣೀಯವಾದ ಸ್ಥಳಗಳಲ್ಲಿ ಒಂದಾಗಿದೆ. ಸುತ್ತಲೂ ಬೆಟ್ಟಗಳ ಸಾಲು, ಬ್ರಹ್ಮಗಿರಿಯ ತಪ್ಪಲಿನಲ್ಲಿ, ಇಗ್ಗುತಪ್ಪ ದೇವರ ಸನ್ನಿಧಿಯಲ್ಲಿ, ಮಲ್ಮ ಕುಂದಿನ ಅಡಿಯಲ್ಲಿ ಅದ್ಭುತ ಪ್ರಕೃತಿ ಸೌಂದರ್ಯ ಹೊಂದಿರುವ, ಕೊಡಗಿನಲ್ಲಿ ಎಲ್ಲಿಯೂ ಇಲ್ಲದ ಮನೋಹರವಾದ ಮೈದಾನ. ನುರಿತ ತರಬೇತುದಾರರ ಅಡಿಯಲ್ಲಿ ಈ ಶಿಬಿರದಲ್ಲಿ 82 ಮಕ್ಕಳು ಪಾಲ್ಗೊಂಡು ತರಬೇತಿ ಪಡೆದಿದ್ದು, ಪೋಷಕರು ಕೂಡ ಇದಕ್ಕೆ ಒತ್ತು ನೀಡಿ ಯಶಸ್ವಿಯಾಗಿ ತರಬೇತಿ ಶಿಬಿರವನ್ನು ಪೂರ್ಣಗೊಳಿಸಲು ಸಹಕರಿಸಿದಕ್ಕೆ ಸರ್ವರನ್ನೂ ಅಭಿನಂದಿಸುವುದಾಗಿ ಕಾರ್ಯಪ್ಪ ಅವರು ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಹಾಕಿಗೆ ಉತ್ತಜನ ನೀಡುತ್ತಿರುವುದನ್ನು ಈ ಸಂದರ್ಭದಲ್ಲಿ ಕಾರ್ಯಪ್ಪನವರು ಶ್ಲಾಘಿಸಿದರು. ವರ್ಷಕ್ಕೆ ಎರಡು ಬಾರಿ ಅಂದರೆ ಮಾರ್ಚ್-ಏಪ್ರಿಲ್ ಹಾಗು ಅಕ್ಟೋಬರ್ ತಿಂಗಳಲ್ಲಿ ಹಾಕಿ ತರಬೇತಿ ಶಿಬಿರಗಳನ್ನು ಆಯೋಜಿಸಿದರೆ ಮಾತ್ರ ಕೊಡಗಿನ ಹಾಕಿಗೆ ಉತ್ತಮ ಬೆಳವಣಿಗೆ ಸಿಗಲು ಸಾಧ್ಯ ಎಂದರು.
ನಾಲ್ನಾಡ್ ಹಾಕಿ ಕ್ಲಬ್ ಅಧ್ಯಕ್ಷರಾದ ಕರವಂಡ ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಅಪ್ಪಚೆಟ್ಟೋಳಂಡ ರವಿ ಮೊಣ್ಣಪ್ಪ, ಕಾಫಿ ಬೆಳೆಗಾರರು, ಎಮ್ಮೆಮಾಡು ಅವರು ಆಗಮಿಸಿದ್ದರು. ಕೈಬಿಲಿರ ಟಿಪ್ಪು ಚಂಗಪ್ಪ ಕಾಫಿ ಬೆಳೆಗಾರರು ನೆಲಜಿ, ಚೌರಿರ ಪೂಣಚ್ಚ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿ, ಬಲ್ಲಮಾವಟಿ, ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರು ಈ ಹಾಕಿ ಶಿಬಿರಕ್ಕೆ 25,000/- ರೂಪಾಯಿಗಳನ್ನು ನೀಡಿದರು. ಅಲ್ಲದೆ ಪ್ರತೀ ವರ್ಷ ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಪರವಾಗಿ ಈ ಹಾಕಿ ಶಿಬಿರಕ್ಕೆ ಹಣ ಸಹಾಯ ಮಾಡುವುದಾಗಿ ಅವರು ತಿಳಿಸಿದರು. ಈ ಉಚಿತ ಹಾಕಿ ತರಬೇತಿ ಶಿಬಿರವನ್ನು ಆಯೋಜಿಸಿದ ನಾಲ್ನಾಡ್ ಹಾಕಿ ಕ್ಲಬ್, ಬಲ್ಲಮಾವಟಿ ಇವರಿಗೆ ಪೋಷಕರು, ಗ್ರಾಮಸ್ಥರು ಹಾಗೂ ಅತಿಥಿಗಳು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.