ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ತಲುಪಿಸುವಲ್ಲಿ ಕೊಡಗು 5ನೇ ಸ್ಥಾನದಲ್ಲಿದೆ. ಮುಂದಿನ ಕೆಡಿಪಿ ಸಭೆ ಒಳಗೆ ಎಲ್ಲ ಅರ್ಹರನ್ನೂ ಯೋಜನೆಯ ಫಲಾನು ಭವಿಗಳನ್ನಾಗಿ ಮಾಡುವ ಮೂಲಕ ಜಿಲ್ಲೆಯನ್ನು ಮೊದಲನೇ ಸ್ಥಾನಕ್ಕೆ ತರಬೇಕು. ಇದಕ್ಕಾಗಿ ಸಂಬಂದ ಪಟ್ಟವರು ಶ್ರಮ ವಹಿಸಿಬೇಕೆಂದು, ಜಿಲ್ಲೆಯಲ್ಲಿರುವ ರೇಷನ್ ಕಾರ್ಡ್ಗಳ ಸಂಖ್ಯೆಗೂ ಯೋಜನೆ ಫಲಾನುಭವಿಗಳ ಸಂಖ್ಯೆಗೂ ದೊಡ್ಡ ವ್ಯತ್ಯಾಸ ಇದ್ದು, ಇಷ್ಟು ಸಂಖ್ಯೆಯಲ್ಲಿ ಮಹಿಳೆಯರು ಯೋಜನೆಯಿಂದ ಯಾಕೆ ಹೊರಗುಳಿದಿದ್ದಾರೆ, ಎನ್ನುವ ಸಂಬಂಧ ಕೊಡಲಾಗಿದ್ದ ವರದಿಯಲ್ಲಿ ಸಮರ್ಪಕ ಮಾಹಿತಿ ಇಲ್ಲ, ಮುಂದಿನ ಒಂದು ವಾರದೊಳಗೆ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಎಷ್ಟಿದೆ ಎನ್ನುವುದರ ಬಗ್ಗೆ ವಾರದೊಳಗೆ ವರದಿ ತಯಾರಿಸಿ ಕೊಡಬೇಕು ರಾಜ್ಯ ಗ್ಯಾರಂಟಿ ಅನುಷ್ಟಾನ ಪ್ರಾದಿಕಾರದ ಉಪಾಧ್ಯಕ್ಷೆ ಡಾ. ಪುಷ್ಟ ಅಮರನಾತ್ ಸೂಚಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತಂತೆ ಮಡಿಕೇರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಉಪಸ್ಥಿತಿಯಲ್ಲಿ ನಡೆದ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಡಾ.ಪುಷ್ಪಾ ಅಮರನಾಥ್, ಅವರು, ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ತಲುಪಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಹೇಳಿದರು. ಸರ್ಕಾರದ ಗ್ಯಾರಂಟಿ ಯೋಜನೆ ರಾಜಕೀಯಕ್ಕಾಗಿ ಮಾಡಿಲ್ಲ. ಜನಸಾಮಾನ್ಯರ ಕಲ್ಯಾಣಕ್ಕಾಗಿ ರೂಪಿಸಲಾಗಿದೆ. ಈ ಯೋಜನೆಗಳಿಗಾಗಿ ಸರ್ಕಾರ 56 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಯಾವೊಬ್ಬ ಅರ್ಹನೂ ಗ್ಯಾರಂಟಿ ಯೋಜನೆಗಳಿಂದ ವಂಚಿತವಾಗಬಾರದು ಎನ್ನುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾಳಜಿ ಆಗಿದೆ. ಹಾಗಾಗಿಯೇ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಈ ಪ್ರಾಧಿಕಾರ ಕಾರ್ಯ ನಿರ್ವಹಿಸುತ್ತಿದ್ದು, ಮನೆ ಮನೆಗೂ ಗ್ಯಾರಂಟಿ ಯೋಜನೆ ತಲುಪಿಸುವಲ್ಲಿ ತಾಲೂಕು ಮಟ್ಟದ ಪ್ರಾಧಿಕಾರಗಳು ಮಹತ್ವದ ಪಾತ್ರ ವಹಿಸಬೇಕಿದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರಿಗೆ ಅವರ ಅಧಿಕಾರ ಮತ್ತು ಕರ್ತವ್ಯದ ಬಗ್ಗೆ ಮಾಹಿತಿ ಕೊಡುವ ಸಲುವಾಗಿ ನವೆಂಬರ್ನಲ್ಲಿ ತರಬೇತಿ ಆಯೋಜಿಸುವಂತೆ ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ ಅವರಿಗೆ ಸೂಚನೆ ನೀಡಿದ ಡಾ.ಪುಷ್ಪಾ ಅಮರನಾಥ್, ಈ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು. ಜಿಲ್ಲಾ ಪಂಚಾಯಿತಿ ಆವರಣ ಸೇರಿದಂತೆ ಜನಸಂದಣಿ ಸೇರುವ ಪ್ರದೇಶಗಳಲ್ಲಿ ಪಂಚ ಗ್ಯಾರಂಟಿ ಯೋಜನೆಳ ಬಗ್ಗೆ ಮಾಹಿತಿ ನೀಡುವ ಫಲಕಗಳನ್ನು ಮುಂದಿನ ಒಂದು ವಾರದ ಒಳಗೆ ಅಳವಡಿಸ ಬೇಕು. ಇದರಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಭಾವಚಿತ್ರ ಕಡ್ಡಾಯವಾಗಿ ಇರಬೇಕು ಎಂದು ತಾಕೀತು ಮಾಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ತಲುಪುವಲ್ಲಿ ಕೆಲವೆಡೆ ಬ್ಯಾಂಕ್ ಗಳಲ್ಲಿ ತೊಂದರೆ ಆಗುತ್ತಿದೆ. ಇದನ್ನು ತಪ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ಗಳು ಸರ್ಕಾರದ ಜತೆ ಕೈ ಜೋಡಿಸಬೇಕು. ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಬ್ಯಾಂಕ್ಗಳ ಮೂಲಕ ವಿಶೇಷ ಅಭಿಯಾನ ನಡೆಸಿದರೆ ಉತ್ತಮ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಸಲಹೆ ನೀಡಿದರು. ಇದಕ್ಕೆ ಸಹಮತ ಸೂಚಿಸಿದ ಪುಷ್ಪಾ ಅಮರನಾಥ್ ಅಭಿಯಾನ ನಡೆಸುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.
ಜಿಲ್ಲೆಯಲ್ಲಿರುವ ರೇಷನ್ ಕಾರ್ಡ್ಗಳ ಸಂಖ್ಯೆಗೂ ಯೋಜನೆ ಫಲಾನುಭವಿಗಳ ಸಂಖ್ಯೆಗೂ ದೊಡ್ಡ ವ್ಯತ್ಯಾಸ ಇದ್ದು, ಇಷ್ಟು ಸಂಖ್ಯೆಯಲ್ಲಿ ಮಹಿಳೆಯರು ಯೋಜನೆಯಿಂದ ಯಾಕೆ ಹೊರಗುಳಿದಿದ್ದಾರೆ, ಎನ್ನುವ ಸಂಬಂಧ ಕೊಡಲಾಗಿದ್ದ ವರದಿಯಲ್ಲಿ ಸಮರ್ಪಕ ಮಾಹಿತಿ ಕೊಡದಿರುವುದರಿಂದ ಸಿಟ್ಟಾದ ಡಾ.ಪುಷ್ಪಾ ಅಮರನಾಥ್, ಒಂದು ವಾರದೊಳಗೆ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಎಷ್ಟಿದೆ ಎನ್ನುವುದರ ಬಗ್ಗೆ ವಾರದೊಳಗೆ ವರದಿ ತಯಾರಿಸಿ ಕೊಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಅನುಷ್ಟಾನ ಸಮಿತಿಯ ಪದಾಧಿಕಾರಿಗಳು, ಅಧಿಕಾರಿ ವರ್ಗ ಉಪಸ್ಥಿತರಿದ್ದರು