ವಿರಾಜಪೇಟೆ, ಡಿ.22: ಕೊಡಗಿನ ಮಣ್ಣು ಮತ್ತು ಪರಿಸರಕ್ಕೆ ಅದರದ್ದೇ ಮಹತ್ವವಿದೆ. ಕೊಡಗು ಉಳಿದರೆ ಮಾತ್ರ ದಕ್ಷಿಣ ಕರ್ನಾಟಕ ಉಸಿರಾಡುತ್ತದೆ ಎಂಬ ನಾಣ್ನುಡಿಯೂ ಇದೆ. ಆದರೆ ಇಂದಿನ ಪರಿಸ್ಥಿತಿಯನ್ನು ಗಮನಿಸಿದರೆ ಕೆಲವೇ ವರ್ಷಗಲ್ಲಿ ಕೊಡಗಿನ ಹಸಿರು ಬರಡಗಿ ದೊಡ್ಡ ಕಟ್ಟಡಗಳು ತಲೆ ಎತ್ತಿ, ಇಲ್ಲಿನ ತಂಪು ಪರಿಸರ ಮತ್ತು ನದಿಯ ಮೂಲವೂ ಮಾಸಿ ಹೋಗುವ ಅಪಾಯವನ್ನು ಕೊಡಗು ಎದುರಿಸುತ್ತಿದೆ. ಕಾರಣ ಕೊಗಿನಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ವ್ಯವವಾರ. ಇಲ್ಲಿಯ ಬಡ ಮೂಲನಿವಾಸಿ ರೈತರನ್ನು ನಾನಾ ಕಾರಣಗಳನ್ನು ನೀಡಿ ಬೆದರಿಸಿ ಸಿಕ್ಕಿದ ದರಕ್ಕೆ ತಮ್ಮ ಜಾಗಗಳನ್ನು ಮಾರುವ ಜಾಲ ಹಲವು ವರ್ಷಗಳಿಂದ ಸಕ್ರೀಯವಾಗಿದೆ. ಸಾವುರಾರು ಏಕರೆ ಫಲವತ್ತಾದ, ಹಸಿರು ಭೂಮಿಯನ್ನು ಖರೀದಿಸುವ ಹೊರಗಿನ ಉಧ್ಯಮಿಗಳು, ಈ ಜಾಗವನ್ನು ವಿವಿಧ ಕಾರಣಕ್ಕೆ ಪರಿವರ್ತನೆಮಾಡಿ, ಮರ ಗಿಡ, ಬೆಟ್ಟ ಗುಡ್ಡಗಳನ್ನು ನೆಲಸಮ ಮಾಡಿ ತಮ್ಮ ಉಧ್ಯಮಕ್ಕೆ ಬಳಸಿಕೊಳ್ಳುವ ಪ್ರಕ್ರಿಯೆ ಕೆಲವು ವರ್ಷಗಳಿಂದ ಅವ್ಯಾಹತವಾಗಿ ನಡೆಯುತ್ತಿದೆ.
ಇದು ಹೀಗೇ ಮುಂದುವರೆದರೆ ಮುಂದಿನ ಕೆಲವೇ ವರ್ಷಗಳಲ್ಲಿ ಕೊಡಗಿನ ಒಡಲು ಬರಿದಾಗುವುದು ಖಾತರಿ ಎಂಬ ಸನ್ನಿವೇಶ ನಿರ್ಮಾಣವಾಗಿದೆ. ಇದನ್ನ ತಡೆಯಲು ಪರಿಸರ ಪ್ರೇಮಿ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಅವರು ಈಗಾಗಲೇ ಕಾನೂನು ಪ್ರಕ್ರಿಯೆ ನಡೆಸುತ್ತಿದ್ದಾರೆ. ಕೊಡಗಿನಲ್ಲಿ ಕೃಷಿ ಭೂಮಿ ಪರಿವರ್ತನೆಯನ್ನು ನಿಷೇಧಿಸಬೇಕೆಂದು ಈಗಾಗಲೇ ನ್ಯಾಯಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಇದರ ಮುಂದುವರೆದ ಭಾಗವಾಗಿ ಹೊರಗಿನವರು, ಕೊಡಗಿನ ಕೃಷಿಭೂಮಿ ಖರೀದಿಸಬೇಡಿ, ಖರೀದಿಸಿ ಪರಿವರ್ತನೆಗೆ ಪರ್ಯತ್ನಿಸಿದರೆ ಮುಂದೆ ತಾವು ಕಾನೂನು ಕುಣಿಕೆಗೆ ಸಿಕ್ಕಿಹಾಕಿಕೊಳ್ಳಲಿದ್ದೀರಿ ಎಂಬ ಎಚ್ಚರಿಕೆ ಫಲಕವನ್ನು ತಮ್ಮ ತೋಟದಲ್ಲಿ ಸಾರ್ವಜನಿಕ ರಸ್ತೆಗೆ ಕಾಣುವಂತೆ ಅಳವಡಿಸಿದ್ದಾರೆ.
ನಡುಬಾಡೆ ನ್ಯೂಸ್‌ಗೆ ಮಾಹಿತಿ ನೀಡಿದ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಅವರು, ಇದನ್ನು ನೋಡಿಯಾದರೂ ಕೊಡಗಿನ ಲ್ಯಾಂಡ್ ಮಾಫಿಯಾಕ್ಕೆ ಕಡಿವಾಣ ಬೀಳಲಿ, ಮುಂದೆ ಆಗಬಹುದಾದ ಅಪಾಯದ ಪ್ರಮಾಣ ಕಡಿಮೆ ಆಗಲಿ ಎನ್ನುವುದು ನನ್ನ ಆಶಯ, ಇಂತ ಮಾಹಿತಿ ಫಲಕಗಳು ಕೊಡಗಿನ ಎಲ್ಲಾ ಸಾರ್ವಜನಿಕ ಮತ್ತು ಖಾಸಗೀ ಸ್ಥಳಗಳಲ್ಲಿ ಪ್ರದರ್ಶನವಾಗಲಿ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಸೈನ್ ಬೋರ್ಡ್ ಅಳವಡಿಸುವ ಪ್ರಕ್ರಿಯೆಯು ಒಂದು ಅಭಿಯಾನವಾಗಿ ಮಾರ್ಪಾಡಬೇಕು, ಮೂಲನಿವಾಸಿಗಳು ಸ್ವಯಂಪ್ರೇರಿತರಾಗಿ ತಮ್ಮ ಜಮೀನು, ತೋಟಗಳ ಬದಿಯಲ್ಲಿ ಇಂತ ಸೂಚನಾಫಲಕ ಅಳವಡಿಸುವುದರ ಮೂಲಕ ಹೆಚ್ಚಿನ ಜಾಗೃತಿಗೆ ಕೈಜೋಡಿಸಬೇಕೆಂದು ಕರ್ನಲ್ ಮುತ್ತಣ್ಣ ಮನವಿ ಮಾಡಿದ್ದಾರೆ. ಅಗತ್ಯ ವಿದ್ದವರಿಗೆ ತಾವೇ ಬೋರ್ಡ್ ಒದಗಿಸಿಕೊಡುವುದಾಗಿಯೂ ಭರವಸೆ ನೀಡಿರುವ ಅವರು, ನಮ್ಮ ತಾಯ್ನಾಡಿನ ರಕ್ಷಣೆಗೆ ನಾವೆಲ್ಲರೂ ಒಗ್ಗಟ್ಟಾಗಿ ದುಡಿಯೋಣ ಎಂದು ಕೋರಿದ್ದಾರೆ.