
ಮಡಿಕೇರಿ ಡಿ.16: ಅರೆಭಾಷಿಗರ ಭಾಷೆ, ಸಂಸ್ಕೃತಿ, ಸಂಪ್ರದಾಯದಲ್ಲಿ ಕೊಡಗಿನ ಐನ್ಮನೆಗಳ ಪಾತ್ರ ಅತ್ಯಂತ ಮಹತ್ವದಾಗಿದ್ದು, ಮನುಷ್ಯನ ಜೀವನ ಶೈಲಿಯ ಆರಂಭ ಮತ್ತು ಅಂತ್ಯದಲ್ಲಿ ಐನ್ಮನೆಯ ಪಾತ್ರ ಅತ್ಯಂತ ವಿಶಿಷ್ಠವಾಗಿದೆ ಎಂದು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಸೂದನ ಈರಪ್ಪ ಹೇಳಿದರು.
ಐಗೂರಿನ ಯಡವಾರೆ ಅರೆಭಾಷೆ ಗೌಡ ಸಮಾಜ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ 14 ನೇ ಅರೆಭಾಷೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಐನ್ಮನೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಅರೆಭಾಷಿಕರನ್ನು ಒಟ್ಟುಗೂಡಿಸಿ ಭಾಷೆ- ಸಂಸ್ಕೃತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಯತ್ನಿಸುವಂತಾಗಬೇಕು ಎಂದು ಹೇಳಿದರಲ್ಲದೆ, ಇಂದಿನ ಯುವ ಸಮೂಹ ಸಂಸ್ಕೃತಿ -ಭಾಷೆಯ ಬಗ್ಗೆ ಹೆಚ್ಚಿನ ಒಲವು ತೋರುತ್ತಿದ್ದು, ಅಕಾಡೆಮಿ ಯುವ ಸಮೂಹಕ್ಕೆ ವಿಶೇಷ ಉತ್ತೇಜನ ನೀಡುವ ಕಾರ್ಯಕ್ರಮ ರೂಪಿಸಲಿದೆ ಎಂದು ಸೂದನ ಈರಪ್ಪ ಅವರು ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಾಫಿ ಬೆಳೆಗಾರ ಮೂಲೆಮಜಲು ಮುತ್ತಪ್ಪ ಅವರು ಮಾತನಾಡಿ, ಅರೆಭಾಷಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಕೀಳರಿಮೆ ತೋರದೆ ಮುಂದೆ ಜನಾಂಗಕ್ಕೆ ಪೂರಕವಾಗಿ ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡಬೇಕು. ಇದಕ್ಕೆ ಅಕಾಡೆಮಿಯ ಸಹಾಯ ಪಡೆಯಬೇಕು ಎಂದರು.
ಯಡವಾರೆ ಅರೆಭಾಷೆ ಗೌಡ ಸಮಾಜದ ಗೌರವಾಧ್ಯಕ್ಷರು ಹಾಗೂ ವಕೀಲರಾದ ಪೊನ್ನಚ್ಚನ ಗಣಪತಿ ಅವರು ಮಾತನಾಡಿ, ಹಿರಿಯರು ಕಿರಿಯರಿಗೆ ಭಾಷೆ-ಸಂಸ್ಕೃತಿಯ ಬಗ್ಗೆ ತಿಳಿಹೇಳಿ, ಅರೆಭಾಷೆಯನ್ನು ಉಳಿಸಿ ಬೆಳೆಸಲು ಮಾರ್ಗದರ್ಶನ ನೀಡಬೇಕು ಎಂದು ಕಿವಿಮಾತು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗೌಡ ಸಮಾಜದ ಅಧ್ಯಕ್ಷರಾದ ಬಾರನ ಭರತ್ ಕುಮಾರ್ ಅವರು ಮಾತನಾಡಿ, ಮುಂದೆ ನಮ್ಮ ಸಮಾಜದ ವತಿಯಿಂದ ಅಕಾಡೆಮಿ ಸಹಯೋಗದೊಂದಿಗೆ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿ, ಅರೆಭಾಷಿಕರನ್ನು ಒಟ್ಟು ಗೂಡಿಸಲು ಪ್ರಯತ್ನ ನಡೆಸುವುದಾಗಿ ಹೇಳಿದರು.
ಈ ಸಂದರ್ಭ ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಬಾರನ ಗ್ರೀಷ್ಮ ಭರತ್ ಅವರಿಗೆ ಚೆರಿಯಮನೆ ರಾಮಪ್ಪ ನೀಡಿದ ನಗದು ಪುರಸ್ಕಾರ ಹಾಗೂ ಹತ್ತನೆ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ನಂಗಾರು ವೈಷ್ಣವಿ ಅವರಿಗೆ ಕಾಳೇರಮ್ಮನ ಸಾವಿತ್ರಿ ಅವರು ನೀಡಿದ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.




