ಮಡಿಕೇರಿ, ಡಿ.05: ದೇಶ ದ್ರೋಹದ ಹೀಳಿಕೆ ನೀಡಿ, ಅದರ ದಾರಿ ತಪ್ಪಿಸಲು ಹೋಗಿ, ಪೊಲೀಸರಿಗೆ ತಗಲಾಕೊಂಡ ಸುಳ್ಯ ಮೂಲದ ಮಡಿಕೇರಿಯ ವಕೀಲ ಕೆ.ಆರ್. ವಿದ್ಯಾಧರ್ನ ಗಡಿಪಾರಿಗೆ ಆಗ್ರಹಿಸಿ ಮತ್ತು ಸಮಗ್ರ ತನಿಖೆಗೆ ಒತ್ತಾಯಿಸಿ, ನಾಳೆ (06/12/2024) ಶುಕ್ರವಾರ ಮಡಿಕೇರಿಯಲ್ಲಿ, ಮಾಜಿ ಸೈನಿಕರ ಸಂಘದ ನೇತೃತ್ವದಲ್ಲಿ, ನೂರಾರು ಸಂಘಟನೆಗಳ ಸಹಬಾಗಿತ್ವದಲ್ಲಿ ಭಾರೀ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
ಇಡೀ ದೇಶವೇ ಅಲ್ಲದೆ, ಪ್ರಪಂಚದಾದ್ಯಂತ ಮಾದರಿ ಸೇನಾ ನೇತಾರರಾಗಿ ಸುಪ್ರಸಿದ್ದರಾಗಿರುವ, ಮಹಾನ್ ನಾಯಕರಾದ ಫಿ.ಮಾ. ಕೊಡಂದೇರ ಕಾರ್ಯಪ್ಪ ಮತ್ತು ಪದ್ಮಭೂಷಣ ಜನರಲ್. ಕೊಡಂದೇರ ತಿಮ್ಮಯ್ಯ ಅವರ ಕುರಿತು ಸಪ್ತ ಸಾಗರ(ಕಡಲು) ಎಂಬ ವಾಟ್ಸಾಪ್ ಗುಂಪಿನಲ್ಲಿ ವಿದ್ಯಾಧರ ಎಂಬ ವ್ಯಕ್ತಿ ತಾನೂ ಒಬ್ಬ ಅಡ್ಮಿನ್ ಆಗಿದ್ದುಕೊಂಡು, ಅತ್ಯಂತ ತುಚ್ಚವಾಗಿ, ಬರೆದಿದ್ದ. ಈತನ ಹೇಳಿಕೆ ಸಾಮಾಜಿಕ ಮಾದ್ಯಮದಲ್ಲಿ ವೈರಲ್ ಆಗುತಿದ್ದಂತೆ, ಮತ್ತೇ ಈತನೇ ಆ ವಾಟ್ಸಾಪ್ ಬಲದಲ್ಲಿ ಶ್ರೀವತ್ಸಾ ಭಟ್ ಎಂಬ ಹೆಸರಿನವರು ಇಲ್ಲಿ ಯಾರಿದ್ದೀರಿ ನನಗೆ ಮಾಹಿತಿ ಕೊಡಿ, ಪೊಲೀಸರು ಕೇಳುತಿದ್ದಾರೆ ಎಂದು ಪ್ರಕರಣದ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದ. ಇದು ಈತನ ಕುಟಿಲ ಮನಸ್ಥಿತಿಯನ್ನು ತೋರಿಸಿದಲ್ಲದೆ ನ್ಯಾಯ ದೇವತೆಯನ್ನು ಆರಾಧಿಸುವ ವಕೀಲ ವೃತ್ತಿಗೂ ಅವಮಾನ. ಕೊನೆಗೆ ಈತನ ಬಂದಿಸಿದ ಪೊಲೀಸರು, ನ್ಯಾಯಾದೀಶರ ಮುಂದೆ ಹಾಜರುಪಡಿಸಿದ್ದು, ನಂತರ ಜಾಮೀನ ಮೇಲೆ ಆರೋಪಿ ವಿದ್ಯಾಧರ ಹೊರಗಿದ್ದಾನೆ.
ಕೊಡಗಿನಲ್ಲಿ ಜನಾಂಗಗಳ ನಡುವೆ ವಿಷಬೀಜ ಬಿತ್ತಿ ಪರಸ್ಪರ ದ್ವೇಷ ಬೆಳೆಸಲು ಸಂಚು ರೂಪಿಸಿದ್ದೇ ಅಲ್ಲದೆ ದೇಶದ ಅಪ್ರತಿಮ ನಾಯಕರನ್ನು ತುಚ್ಚವಾಗಿ ಅವಮಾನಿಸಿದ ಕಾರಣಕ್ಕಾಗಿ ಈತನನ್ನ ಸಮಗ್ರ ತನಿಖೆಗೆ ಒಳಪಡಿಸಬೇಕು ಮತ್ತು, ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ, ನಾಳೆ ಬೆಳಿಗ್ಗೆ 10ಘಂಟೆಗೆ ಮಡಿಕೇರಿಯ ಫಿ.ಮಾ. ಕಾರ್ಯಪ್ಪ ವೃತ್ತದಲ್ಲಿ ಸಮಾವೇಶಗೊಂಡು, ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಮಾಜಿ ಸೈನಿಕರ ಸಂಘ ಮತ್ತು ಮಡಿಕೇರಿ ಕೊಡವ ಸಮಾಜದ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಸಮಾಜ, ಜನಾಂಗಳ ಸಂಘ ಸಂಸ್ಥೆಗಳು ನಿರ್ಧರಿಸಿದ್ದು, ದೇಶಭಿಮಾನಿಗಳು ಹಾಗೂ ಸೇನಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಾಲ್ಗೊಳ್ಳುವಂತೆ ಕೋರಿದ್ದಾರೆ.