ಸೋಮವಾರಪೇಟೆ, ಡಿ. 03: (ಸುಮತಿ ಬಿ.ಪಿ) ನವೆಂಬರ್ ತಿಂಗಳಿಗೆ ಮಾತ್ರ ಕನ್ನಡಾಭಿಮಾನವನ್ನು ಸೀಮಿತಗೊಳಿಸದೆ ವರ್ಷಪೂರ್ತಿ ಬೆಳೆಸಿಕೊಳ್ಳಬೇಕು ಎಂದು ಸೋಮವಾರಪೇಟೆ ಬಿ.ಟಿ ಸಿ. ಜಿ. ಕಾಲೇಜಿನ ಉಪನ್ಯಾಸಕರಾದ ಹುಚ್ಚೆಗೌಡರು ಅಭಿಪ್ರಾಯ ಪಟ್ಟರು.
ಕೊಡಗು ಕನ್ನಡಸಿರಿ ಸ್ನೇಹಬಳಗ ತಾಲ್ಲೂಕು ಘಟಕ ಹಾಗೂ ವಿದ್ಯಾ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಕೇರ್ ಟ್ರೈನಿಂಗ್ ಸೆಂಟರ್ ಸಹಯೋಗದಲ್ಲಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ‘ಗಾನ ಸಿರಿ ‘ ಕನ್ನಡ ಹಳೆಯ ಚಿತ್ರಗೀತೆಗಳ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿ ಆಗಮಿಸಿ ಮಾತನಾಡಿದ ಅವರು, ಕನ್ನಡ ಭಾಷೆ ಅಳಿವಿನ ಅಂಚಿನಲ್ಲಿದೆ ಎಂದು ಕೆಲವರು ಹೇಳುತ್ತಿರುತ್ತಾರೆ. ಆದರೆ ನಮ್ಮ ಭಾಷೆ ಸುರಕ್ಷಿತವಾಗಿದೆ. ಕೆಲವರಲ್ಲಿ ಭಾಷಾ ಬಳಕೆ ಬಗ್ಗೆ ಕೀಳರಿಮೆ ಇದೆ, ಅದು ಮೊದಲು ದೂರವಾಗಬೇಕು. ಹಿಂದೆ ನಾವು ಸಾಕಷ್ಟು ವೈವಿಧ್ಯಮಯ ಕನ್ನಡ ಗೀತೆಗಳನ್ನು ಆಲಿಸಿಕೊಂಡು ಬೆಳೆದೆವು. ಕಾಲ ಬದಲಾದಂತೆ ಸಂಗೀತವು ಕೂಡ ಬದಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ, ಕೊಡಗುಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ವಿ. ಮುರಳೀಧರ್ ಅವರು ಮಾತನಾಡಿ ‘ಅನುಕೂಲದ ಕೊರತೆಯಿಂದಾಗಿ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳು ಸಂಗೀತದಿಂದ ದೂರ ಉಳಿಯಬೇಕಾಗಿದೆ. ನಗರಪ್ರದೇಶದಲ್ಲಿರುವಂತೆ ಹಳ್ಳಿಗಳಲ್ಲಿಯೂ ಸಹ ಸೌಲಭ್ಯ ಹಾಗು ವೇದಿಕೆ ಕಲ್ಪಿಸಿದರೆ ಅನೇಕ ಪ್ರತಿಭೆಗಳು ಹೊರಬರುತ್ತಾರೆ’ಎಂದರು. ಹಿಂದೆ ಅರ್ಥಪೂರ್ಣವಾದ ಸಾಹಿತ್ಯ,ಹಿತವಾದ ಸಂಗೀತದೊಂದಿಗೆ ಮೂಡಿಬರುತಿದ್ದ ಕನ್ನಡ ಚಲನಚಿತ್ರಗಳು ಇಂದಿಗೂ ಕಿವಿಗಳಿಗೆ ಮುದನೀಡುತ್ತಿವೆ. ಸಂಗೀತ ಕ್ಷೇತ್ರ ಪ್ರಸಿದ್ಧಿ ಪಡೆದಿದ್ದು ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಸಾಧನೆ ಮಾಡಬೇಕು ಎಂದು ಸಲಹೆನೀಡಿದರು.
ಉಪಸ್ಥಿತರಿದ್ದ ಹಲವು ಗಾಯಕರು ಹಳೆಯ ಚಲನಚಿತ್ರಗಳನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಗಮನ ಸೆಳೆದರು. ಈ ಕಾರ್ಯಕ್ರಮದಲ್ಲಿ ಮುರಳೀಧರ್ ಹಾಗೂ ಪೀಟರ್ ಅವರು ಸಹ ಹಾಡಿ ಕೇಳುಗರ ಮನ ರಂಜಿಸಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡಸಿರಿ ಸ್ನೇಹ ಬಳಗದ ತಾಲ್ಲೂಕು ಘಟಕದ ಅಧ್ಯಕ್ಷರಾದ ಹೆಚ್.ಜಿ. ಜವರಪ್ಪ ಅವರು ಮಾತನಾಡಿ ಇಂದಿನ ಈ ಕಾರ್ಯಕ್ರಮದಲ್ಲಿ ಗಾಯಕರು ಹಾಡಿದ ಹಾಡುಗಳು ಒಂದಕ್ಕಿಂತ ಒಂದು ಸುಶ್ರಾವ್ಯವಾಗಿತ್ತು. ಕೇಳಿ ತುಂಬಾ ಸಂತೋಷವಾಯಿತು. ಇಲ್ಲಿ ಹಾಡಿದ ಕೆಲವು ಹಾಡುಗಳನ್ನು ಕೇಳಿ ನಾನು ಪ್ರೌಢಶಾಲೆಯಲ್ಲಿ ಹಾಡುತ್ತಾ ಗೆಳೆಯರೊಂದಿಗೆ ಕಳೆದ ಜೀವನವು ನೆನಪಾಗುತ್ತಿದೆ. ಇಲ್ಲಿ ಹಾಡಿದ ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ, ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ ಮುಂತಾದ ಗಾಯಕರನ್ನು ಹೋಲುವ ಸ್ವರದವರು ಇದ್ದಾರೆ. ಇವರಿಗೆ ಮುಂದೆ ಒಳ್ಳೆಯ ಅವಕಾಶಗಳು ದೊರೆಯಲಿ ಎಂದರು.
ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಕೇರ್ ಟ್ರೈನಿಂಗ್ ಸೆಂಟರ್ ಪ್ರಾಂಶುಪಾಲರಾದ ಸುಲೈಮಾನ್ ಹಾಗು ಅವರ ಪತ್ನಿ ಅಲೀಮಾ ಸುಲೈಮಾನ್ ಅವರು ಗಾಯಕರಿಗೆ ಶುಭವನ್ನು ಹಾರೈಸಿದರು. ಬಳಗದ ಹಿರಿಯರಾದ ಮಲ್ಲಪ್ಪ, ನ.ಲ.ವಿಜಯ, ಪೀಟರ್, ಕರ್ನಾಟಕ ಲೇಖಕಿಯರ ಬಳಗದ ಕಾರ್ಯದರ್ಶಿ ಶರ್ಮಿಳಾ ರಮೇಶ್, ಬಳಗದ ಕಾರ್ಯದರ್ಶಿ ಎಲ್.ಎಂ.ಪ್ರೇಮ, ಖಜಾಂಚಿ ಸಿ.ಕೆ. ಮಲ್ಲಪ್ಪ ನವರು ಉಪಸ್ಥಿತರಿದ್ದರು.