ವಿರಾಜಪೇಟೆ, ಡಿ.02: ಫೆಂಗಲ್ ಚಂಡಮಾರುತದ ಪ್ರಭಾವದಿಂದ, ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಮಳೆ ಆಗುತ್ತಿದ್ದು, ರಾಜ್ಯದಲ್ಲಿಯೂ ವ್ಯಾಪಕ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದ್ದು, ಕೊಡಗಿನಲ್ಲಿ ನಾಳೆ ಬೆಳಗ್ಗೆ 8.30ರವರೆಗೂ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಈಗಾಗಲೇ ನಾನಾ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಲವು ಭಾಗಗಳಲ್ಲಿ ಕಡಿಮೆ ಮಳೆ ಆಗುತ್ತಿರುವ ವರದಿಯಾಗಿದೆ.
ಭಾರಿ ಶೀತ ಗಾಳಿ, ಮಳೆ ಮತ್ತು ಚಳಿಯಿಂದ ತತ್ತರಿಸಿರುವ ಜನತೆ ಈಗಾಗಲೇ ಸಾಮೂಹಿಕ ಚಳಿ ಜ್ವರದ ಆತಂಕದಲ್ಲಿದ್ದಾರೆ. ದಿಢೀರ್ ಏರಿಕೆಯಾದ ಚಳಿಯಿಂದ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಇದನ್ನ ಅರಿತ ಕೆಲ ಜವಾಬ್ದಾರಿಯುತ ಶಾಲೆಗಳು ಇಂದು ಮದ್ಯಾಹ್ನವೇ ಮಕ್ಕಳನ್ನು ಮನೆಗೆ ಕಳುಹಿಸುವ ನಿರ್ಧಾರ ಮಾಡಿವೆ. ಮತ್ತೆ ಕೆಲ ಶಾಲೆಗಳು ನಾಳೆ ಶಾಲೆಗೆ ರಜೆ ಕೊಡಬೇಕಾ ಬೇಡವೇ ಎಂಬ ಗೊಂದಲದಲ್ಲಿವೆ.
ಈ ಕುರಿತು ನಡುಬಾಡೆ ನ್ಯೂಸ್‌ಗೆ ಪ್ರತಿಕ್ರಿಯಿಸಿದ ಕೊಡಗು DDPI ಅವರು, ಆರಂಜ್ ಅಲರ್ಟ್ ಘೋಷಣೆ ಆಗಿದೆ, ಆದರೆ ಮಳೆ ಬಹುತೇಕ ಕಡೆಗಳಲ್ಲಿ ಕಡಿಮೆ ಇರುವುದರಿಂದ ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ, ಜಿಲ್ಲೆಯಾದ್ಯಂತ ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈಗಾಗಲೇ ಶಾಲೆಗಳಲ್ಲಿ FA-3 ಪರೀಕ್ಷೆ ನಡೆಯುತಿದ್ದು, ವಿಪರೀತ ಮಳೆ, ಚಳಿಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ, ಶೀತ ಜ್ವರ ಬರಬಹುದು, ಕಳುಹಿಸದಿದ್ದರೆ ಪರೀಕ್ಷೆಯಿಂದ ಹೊರಗುಳಿಯಬೇಕಾಗಬಹುದು ಎಂಬ ಗೊಂದಲದಲ್ಲಿ ಪೋಷಕರಿದ್ದಾರೆ.
ಯಾವುದೇ ಸ್ಪಷ್ಟ ತೀರ್ಮಾನವನ್ನು ಇಲಾಖೆ ಅಧಿಕೃತವಾಗಿ ಘೋಷಿಸಿದರೆ, ಗೊಂದಲ ಪರಿಹಾರ ಆಗಬಹುದು.