ವಿರಾಜಪೇಟೆ, ನ.25: ದೇಶದ ಅಪ್ರತಿಮ ಸೇನಾನಿಗಳು ಎಂದು ಖ್ಯಾತರಾಗಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಪದ್ಮ ಭೂಷಣ ಜನರಲ್ ತಿಮ್ಮಯ್ಯ ನವರನ್ನು ಅವಹೇಳನ ಮಾಡಿದ ಅರೋಪಿ ವಕೀಲ ವಿದ್ಯಾಧರನಿಗೆ ನಿಯಮ ಬಾಹಿರವಾಗಿ ಸಹಕಾರ ನೀಡಿದ ಅಡಿಶನಲ್ ಜೆ.ಎಂ.ಎಫ್.ಸಿ ನ್ಯಾಯಾಲಯದ ಎ.ಪಿ.ಪಿ ಧನಂಜಯ ರವರನ್ನು ಹುದ್ದೆಯಿಂದ ತೆರವುಗೊಳಿಸಲು ಸರ್ಕಾರಕ್ಕೆ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ರವರ ಮುಖೇನ ಒತ್ತಾಯಿಸಲಾಗಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಆಗ್ರಹಿಸಿದ್ದಾರೆ.
ಪೋಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. IPC ಸೆಕ್ಷನ್ 124(A) ರದ್ದಾಗಿರುವ ಕಾರಣ BNS ಸೆಕ್ಷನ್ 352(2) ಮತ್ತು 192 ರಲ್ಲಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದರು. ತಡ ರಾತ್ರಿಯಲ್ಲಿ ನ್ಯಾಯಾಧೀಶರ ಮುಂದೆ APP ಯವರು ಆಕ್ಷೇಪಣೆ ಸಲ್ಲಿಸಿದ್ದು ಜನರ ಭಾವನೆಗಳನ್ನು ಧಕ್ಕೆಗೊಳಿಸಿದೆ. ಕಳೆದ ಸುಮಾರು 4 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ APP ಯಾಗಿ ಸೇವೆ ಸಲ್ಲಿಸುತ್ತಿರುವ ಧನಂಜಯರವರಿಗೆ ಯಾವುದೋ ಪಟ್ಟಭದ್ರ ಹಿತಾಶಕ್ತಿಗಳು ಒತ್ತಡ ಹೇರಿರುವ ಸಾಧ್ಯತೆ ಇದ್ದು, ಅವರು ಮಧ್ಯರಾತ್ರಿಯಲ್ಲಿ ಆರೋಪಿಗೆ ಸಹಕಾರ ನೀಡುವ ಉದ್ದೇಶದಿಂದಲೇ ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.
ಫೀಲ್ಡ್ ಮಾರ್ಷಲ್ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಭಾರತ ಸರ್ಕಾರದ ಮಹೋನ್ನತ ಗೌರವಗಳಾಗಿದ್ದು ಅದನ್ನು ಪಡೆದವರನ್ನು ಅಪಮಾನಿಸುವುದು ರಾಜದ್ರೋಹವಾಗುತ್ತದೆ. ಈ ನಿಟ್ಟಿನಲ್ಲಿ ಘನ ನ್ಯಾಯಾಲಯದ ಅನುಮತಿ ಪಡೆದು ಭಾರತದ ಸಾರ್ವಭೌಮತ್ವ ಮತ್ತು ಘನತೆಯನ್ನು ಅಪಾಯಕ್ಕೆ ಒಳಪಡಿಸಿದ ಹಿನ್ನಲೆಯಲ್ಲಿ BNS ಸೆಕ್ಷನ್ 152 ರಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಕೇಸ್ ದಾಖಲಿಸಲಾಗುವುದು ಎಂದು ತೆನ್ನಿರ ಮೈನಾ ಹೇಳಿದ್ದಾರೆ.