ಸೋಮವಾರಪೇಟೆ, ಸೆ. 26: (ವರದಿ:ಬಿ.ಪಿ.ಸುಮತಿ) ಸಾಹಿತಿ, ಕವಿ, ಹೇಮಂತ್ ಪಾರೇರಾ ರಚಿಸಿರುವ ‘ಒಲವಿನ ಸವಾರಿ’ ಕಥಾ ಸಂಕಲನ ಇಲ್ಲಿನ ಪತ್ರಿಕಾ ಭವನದಲ್ಲಿ ಲೋಕಾರ್ಪಣೆಗೊಂಡಿತು.
ಕೃತಿ ಬಿಡುಗಡೆಗೊಳಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಯಾರಿಗೆ ಇಚ್ಚಾ ಶಕ್ತಿಯೊಂದಿಗೆ ಬರಹದೊಳಗೆ ಇಳಿಯಲು ಸಾಧ್ಯವೋ ಅಂತವರಿಂದ ಮಾತ್ರ ಸಾಹಿತ್ಯ ಕೃತಿ ರಚನೆ ಸಾಧ್ಯ. ಸಾಹಿತ್ಯ ರಚಿಸಲು ಮೊದಲು ತಮ್ಮನ್ನ ತಾವು ತ್ಯಾಗ ಮಾಡುವ ಮನೋಭಾವ ಹೊಂದಿರಬೇಕು, ತಾಳ್ಮೆ ವಿವೇಚನೆಯಿಂದ ಮಾತ್ರ ಸಾಹಿತಿ ಮತ್ತು ಸಾಹಿತ್ಯಕ್ಕೆ ಮೌಲ್ಯ ದೊರೆಯುತ್ತದೆ ಎಂದರು.
ಹಿರಿಯ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಆಶಯ ನುಡಿಗಳನ್ನಾಡಿ, ಸುಂದರ ಪರಿಸರ ಮತ್ತು ಏಕಾಂತದ ಚಿಂತನೆ ಸಾಹಿತ್ಯ ಹೊರಬರಲು ಪೂರಕ ವಾತಾವರಣವಾಗಿದೆ. ಹೆಚ್ಚಿನವರು ನೈಜತೆಗಿಂತ ಭ್ರಮೆಯಲ್ಲಿಯೇ ಕಾಲ ಕಳೆಯುತ್ತಾರೆ. ಮೊದಲು ಭ್ರಮೆಯಿಂದ ಹೊರಬಂದು, ನೈಜತೆಯ ಬರವಣಿಗೆಯತ್ತ ಸಾಗಿದರೆ, ಸಾಹಿತ್ಯಲೋಕ ಮತ್ತಷ್ಟು ವಿಜ್ರಂಬಿಸಲಿದೆ. ಸಾಹಿತಿಗಳು ನಿಂತ ನೀರಾಗದೆ, ಒಂದೇ ಬರವಣಿಗೆ ಮೈಗಂಟಿಸಿಕೊಳ್ಳುವುದನ್ನು ಬಿಟ್ಟು, ವಿಭಿನ್ನ ರೀತಿಯ ದೃಷ್ಟಿಕೋನದಿಂದ ಬರೆಯಬೇಕು. ಜನರ ಮತ್ತು ವಿಮರ್ಷಕರ ಹೇಳಿಕೆಗಳನ್ನು ಕೇಳಿಸಿಕೊಳ್ಳಲು ಸಿದ್ಧರಾಗಿ ಬರವಣಿಗೆ ಮುಂದುವರೆಸಬೇಕು. ಆಗ ಮಾತ್ರ ಸಾಹಿತಿಗಳಿಂದ ಪರಿಪೂರ್ಣ ಬರವಣಿಗೆ ಹೊರಬರಲು ಸಾಧ್ಯ ಎಂದರು.
ಲೇಖಕಿ ಎಚ್.ಆರ್. ಪವಿತ್ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಹಿರಿಯ ಸಾಹಿತಿ ಜಲಾ ಕಾಳಪ್ಪ ಪುಸ್ತಕ ಪರಿಚಯ ಮಾಡಿದರು. ಲೇಖಕಿ ಮಿಲನಾ ಭರತ್, ಯಡವನಾಡು ಶ್ರೀ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ. ಗಣೇಶ್, ಹೊಸತೋಟ ದಿನೇಶ್, ಅರುಣಾ, ನ.ಲ. ವಿಜಯ್, ಕಾಜೂರು ಸತೀಶ್, ರುಬೀನಾ, ವಿಜೀತ್, ಹಾನಗಲ್ ವಿಜಯ್, ಪ್ರೇಮಾ, ಜವರಪ್ಪ, ರಂಜಿತ್ ಕವಲಪಾರ, ಸೋಮವಾರಪೇಟೆ ಜಾನಪದ ಪರಿಷತ್ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ನ ಸೋಮವಾರಪೇಟೆ ಬಳಗ, ಯಡವನಾಡು ಗ್ರಾಮಸ್ಥರು ಉಪಸ್ಥಿತರಿದ್ದರು
.