ನವದೆಹಲಿ ನ.21: ಆಹಾರ ಭದ್ರತಾ ಯೋಜನೆಯಡಿಯಲ್ಲಿ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯನ್ನು ಅನುಷ್ಠಾನಗೊಳಿಸಿರುವ ಕೇಂದ್ರ ಸರ್ಕಾರವು ದೇಶದಲ್ಲಿ 5.8 ಕೋಟಿ ನಕಲಿ BPL ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದು, ಉಳಿದವು ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಬುಧವಾರ ತಿಳಿಸಿದೆ.
ಸಾರ್ವಜನಿಕ ಪಡಿತರ ವ್ಯವಸ್ಥೆಯ ಡಿಜಿಟಲೀಕರಣಕ್ಕೆ ದೇಶದಲ್ಲಿ ಚಾಲನೆ ನೀಡಲಾಗಿದ್ದು, ಒಟ್ಟು 80.6 ಕೋಟಿ ಪಡಿತರ ಚೀಟಿಗಳನ್ನು ಹೊಂದಿದ ಕುಟುಂಬಗಳಿವೆ. ಆಧಾರ್ ಸಂಖ್ಯೆ ಪರಿಶೀಲನೆ ಪ್ರಕ್ರಿಯೆ ಮೂಲಕ ಈ ನಕಲಿ ಚೀಟಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ದೇಶದಾದ್ಯಂತ 5.33 ಲಕ್ಷ ನ್ಯಾಯಬೆಲೆ ಅಂಗಡಿಗಳಲ್ಲಿ ತಂತ್ರಜ್ಞಾನ ಆಧಾರಿತ ಇ–ಪಿಒಎಸ್ (ಪಾಯಿಂಟ್ ಆಫ್ ಸೇಲ್) ಸಾಧನಗಳನ್ನು ಅಳವಡಿಸಿದ್ದು, ಇವುಗಳ ಮೂಲಕ ಪಡಿತರ ವಿತರಣೆ ವೇಳೆ ಆಧಾರ್ ಸಂಖ್ಯೆಯನ್ನು ದೃಢೀಕರಿಸಲಾಗುತ್ತದೆ. ಅರ್ಹ ಪಡಿತರ ಚೀಟಿದಾರರಿಗೆ ಮಾತ್ರ ಪಡಿತರ ವಿತರಿಸಲಾಗುತ್ತಿದೆ
ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಲಾಗಿದೆ ಎಂದು ಸ್ಪಷ್ಟನೆ ನೀಡಿರುವ ಕರ್ನಾಟಕ ರಾಜ್ಯ ಸರ್ಕಾರ, ರಾಜ್ಯದಲ್ಲಿ ಒಟ್ಟು 1,50,90,534 ಪಡಿತರ ಚೀಟಿಗಳಿದ್ದು, ಈ ಪೈಕಿ 10,68,042 ಅಂತ್ಯೋದಯ ಕಾರ್ಡ್ಗಳು, 1,14,60,137 ಬಿಪಿಎಲ್ ಕಾರ್ಡ್ಗಳು, ಉಳಿದಂತೆ, 25,62,355 ಎಪಿಲ್ ಕಾರ್ಡ್ಗಳು ಎಂದು ಮಾಹಿತಿ ನೀಡಿದೆ.
ರಾಜ್ಯದಲ್ಲಿ, ಒಟ್ಟು ಬಿಪಿಎಲ್ ಕಾರ್ಡ್ಗಳ ಪೈಕಿ 13,87,652 ಕಾರ್ಡ್ಗಳನ್ನು ಅನರ್ಹ ಎಂದು ಗುರುತಿಸಲಾಗಿದೆ. ಅವುಗಳಲ್ಲಿ 98,473 ಆದಾಯ ತೆರಿಗೆ ಪಾವತಿದಾರರು ಹೊಂದಿರುವ ಕಾರ್ಡ್ಗಳಾದರೆ, 4,036 ಸರ್ಕಾರಿ ನೌಕರರು ಹೊಂದಿರುವ ಕಾರ್ಡ್ಗಳಾಗಿವೆ. ಕುಟುಂಬದ ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಹೆಚ್ಚಿರುವವರು ಹೊಂದಿರುವ ಕಾರ್ಡ್ಗಳ ಸಂಖ್ಯೆ 10,09,476. ಕಳೆದ ಆರು ತಿಂಗಳುಗಳಿಂದ ಪಡಿತರವನ್ನೇ ಪಡೆಯದ ಕಾರಣಕ್ಕೆ ಅಮಾನತುಗೊಂಡ ಕಾರ್ಡ್ಗಳ ಸಂಖ್ಯೆ 2,75,667, ಮೃತಪಟ್ಟ 1,59,319 ಸದಸ್ಯರ ಹೆಸರುಗಳನ್ನು ಕಾರ್ಡ್ನಿಂದ ತೆಗೆದುಹಾಕಲಾಗಿದೆ, ಅಮಾನತು, ರದ್ದು ಮತ್ತು ಎಪಿಎಲ್ ಕಾರ್ಡ್ಗಳಾಗಿ ಬದಲಾಯಿಸಿದ ಒಟ್ಟು ಕಾರ್ಡ್ಗಳ ಸಂಖ್ಯೆ 3,81,983. ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ.
ಯಾವುದೇ ಕಾರಣಕ್ಕೂ ಅರ್ಹ ಬಡವರ BPL ಕಾರ್ಡುಗಳು ರದ್ದಾಗುವುದಿಲ್ಲ ಎಂದಿರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ಈಗಾಗಲೇ ರದ್ದಾಗಿರುವ ಕಾರ್ಡುಗಳನ್ನು ತಕ್ಷಣ ಪುನರ್ ಪರಿಶೀಲಿಸಿ, ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿದ್ದಾರೆ.