ಮಡಿಕೇರಿ, ಸೆ.26:(ವರದಿ: ರವಿಗೌಡ, ಮಡಿಕೇರಿ) ಸರ್ಕಾರ ಅನುದಾನ ಕೊಟ್ಟರೂ ಅದನ್ನ ಸರಿಯಾಗಿ ಬಲಸಿಕೊಳ್ಳದೆ ಉಡಾಫೆ ಮಾಡುತ್ತಾ ತನ್ನ ಅಧಿಕಾರವನ್ನು ಕೇವಲ ತೋರಿಕೆಗಾಗಿ ಅನುಭವಿಸುವ ಹಲವು ಸ್ಥಳೀಯ ಜನ ಪ್ರತಿನಿಧಿಗಳ ನಡುವೆ, ಕೊಡಗು ಜಿಲ್ಲೆ ಮಡಿಕೇರಿ ನಗರ ಸಭೆಯ ಸದಸ್ಯೆ ಉಷಾಕಾವೇರಪ್ಪ ಅವರು, ಸರ್ಕಾರದ ಗುತ್ತಿಗೆದಾರ ನಿರ್ಲಕ್ಷಿಸಿದರೂ ತನ್ನ ವಾರ್ಡಿನ ನಿವಾಸಿಗಳಿಗಾಗಿ, ಸ್ವಂತ ಹಣದಿಂದ ಬೀದಿ ದೀಪ ಅಳವಡಿಸಿ ಮತ್ತೊಮ್ಮೆ ಮಾದರಿಯಾಗಿದ್ದಾರೆ.
ಮಡಿಕೇರಿ ನಗರದ ವಾರ್ಡ್ ನಂಬರ್ 14ರ ಹಲವು ಭಾಗದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬೀದಿ ದೀಪ ಕೆಟ್ಟು ನಿಂತಿದ್ದು, ಇದರ ಬಗ್ಗೆ ಸ್ಥಳೀಯರು ವಾರ್ಡ್ ಸದಸ್ಯರ ಗಮನಕ್ಕೆ ತಂದಾಗ, ನಗರ ಸಭೆ ಸದಸ್ಯೆ ಉಷಾ ಕಾವೇರಪ್ಪ ಅವರು, ಮಡಿಕೇರಿ ನಗರಸಭೆಯಿಂದ ವಿದ್ಯುತ್ ದೀಪದ ಗುತ್ತಿಗೆ ಪಡೆದ ಶ್ರೀನಿವಾಸ್ ಅವರಿಗೆ ಬೀದಿ ದೀಪಗಳನ್ನು ಸರಿಪಡಿಸುವಂತೆ ಹೇಳಿದ್ದರು. ಆದರೆ ದರಸ್ತಿಪಡಿಸಬೇಕಾದ ಗುತ್ತಿಗೆದಾರ, ನಮ್ಮ ಬಳಿ ಬೀದಿ ದೀಪದ ಸಲಕರಣೆಗಳು ಇಲ್ಲ ಎಂದು ಸಬೂಬು ಹೇಳುತ್ತಾರೆ. ತನ್ನ ಪತ್ನಿಗೆ ಮತ ನೀಡಿ, ಗೆಲ್ಲಿಸಿದ ವರ್ಡ್ ನಿವಾಸಿಗಳ ಸಮಸ್ಯೆಗೆ ಸ್ಪಂದಿಸುವದೇ ಧರ್ಮ ಎನ್ನುವ ಉಷಾ ಅವರ ಪತಿ, ಸಮಾಜಸೇವಕ, ಕಾವೇರಪ್ಪ ಅವರು ತನ್ನ ಸ್ವಂತ ಹಣದಿಂದ ತಮ್ಮ ವಾರ್ಡ್ ನ ಅಶ್ವಿನಿ ದೇವಾಲಯ ಜಂಕ್ಷನ್, ಅಶ್ವಿನಿ ಕ್ಯಾಂಟೀನ್ ಜಂಕ್ಷನ್, ವಿನೋದ್ ಮೆಡಿಕಲ್ ಅವರ ಮನೆಯ ಬಳಿ, ಸೇರಿದಂತೆ ಹಲವು ಭಾಗಗಳಲ್ಲಿ, ಬಲ್ಪ್ ಗಳು ಹಾಗೂ ಬೀದಿ ದೀಪದ ಸಲಕರಣೆಗಳನ್ನು ಅಳವಡಿಸಿ ಮಾದರಿಯಾಗಿದ್ದಾರೆ. ಇವರು ಈ ಹಿಂದೆಯೂ ಕೂಡ, ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳನ್ನು, ತನ್ನ ಸ್ವಂತ ಹಣದಿಂದ ಮಾಡಿ ಜನಮೆಚ್ಚುಗೆ ಪಡಿದಿರುವ, ಉಷಾಕಾವೇರಪ್ಪ ಅವರು, ಇತ್ತೀಚೆಗೆ ಮಡಿಕೇರಿ ಮೂರ್ನಾಡು ರಸ್ತೆಯ, ಜ. ತಿಮ್ಮಯ್ಯ ವೃತ್ತದ ಬಳಿ ಬಸ್ ತಂಗುದಾಣದ ಮೆಟ್ಟಿಲುಗಳನ್ನೂ ಸ್ವಂತ ಹಣದಿಂದ ಕಟ್ಟಿಸಿದ್ದ ಕಾರ್ಯವನ್ನೂ ಇಲ್ಲಿ ಗಮನಿಸಬಹುದು.
ನಗರ ಸಭೆಯಿಂದ ಬೀದಿ ದೀಪದ ನಿರ್ವಹಣೆಗೆ ಟೆಂಡರ್ ಪಡೆದವರ ಕರ್ತವ್ಯ ಏನು, ಮತ್ತು ಅವರ ಅವಶ್ಯಕತೆ ಏನಿದೆ? ಎನ್ನುವ ಅನುಮಾನ ಮಡಿಕೇರಿ ಜನರಲ್ಲಿ ಮೂಡುತ್ತಿದ್ದು, ನಗರ ಸಭೆಯ ಆಡಳಿತಾಧಿಕಾರಿಯೂ ಆಗಿರುವ, ಮಾನ್ಯ ಕೊಡಗು ಜಿಲ್ಲಾಧಿಕಾರಿಗಳು, ಮತ್ತು ಮಡಿಕೇರಿ ಶಾಸಕರಾದ ಡಾ. ಮಂಥರ್ಗೌಡ ಅವರು, ಮಡಿಕೇರಿ ನಗರ ಸಭೆಯಿಂದ ಟೆಂಡರ್ ಪಡೆದು, ಕಾಮಗಾರಿಯನ್ನು ನಿರ್ವಹಿಸದೆ, ಇಡೀ ಮಡಿಕೇರಿ ನಗರವನ್ನು ಕತ್ತಲ ಕೂಪಕ್ಕೆ ತಳ್ಳಿರುವ ಸದರಿ ಗುತ್ತಿಗೆದಾರನ ವಿರುದ್ದ, ಕ್ರಮ ಕೈಗೊಂಡು, ಮಡಿಕೇರಿ ನಗರವನ್ನು ಕತ್ತಲಲ್ಲೂ ಬೆಳಗುವಂತೆ ಮಾಡಬೇಕೆಂದು, ನಗರದ ನಿವಾಸಿಗಳು ಆಗ್ರಹಿಸಿದ್ದಾರೆ.