ಮಡಿಕೇರಿ, ನ.13: ಪ್ರಕೃತಿಯ ವಿಸ್ಮಯ ತಾಣವಾಗಿರುವ, ಕೊಡಗನ್ನು ಸ್ವಚ್ಚ, ಸಮೃದ್ದ, ಸುರಕ್ಷವಾಗಿಡುವುದು, ಈ ನೆಲದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಅದಕ್ಕಾಗಿ ನಾವೆಲ್ಲರೂ ಕಟಿಬದ್ದರಾಗಿ ದುಡಿಯುವ ಅಗತ್ಯವಿದೆ ಎಂದು, ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಕೊಡಗಿನ ಆರ್ಕಿಡ್ ಸಂಚಲನ ಕಿರು ಚಿತ್ರ ವೀಕ್ಷಣೆ ಮತ್ತು ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿದ ಅಥಿತಿಗಳು, ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು.
ಪರಿಸರ ಸ್ನೇಹಿ ಯುವಕ, ಪಾಂಡಿರ ಕೌಶಿಕ್ ಕಾವೇರಪ್ಪ ನೇತೃತ್ವದ, ಮಲೆನಾಡ ಕೂಗು ಸಂಸ್ಥೆ, ಮತ್ತು FMC ಕಾಲೇಜಿನ ಸಹಯೋಗದಲ್ಲಿ ನಡೆದ, ಕಾರ್ಯಾಗಾರದಲ್ಲಿ ಮಾತನಾಡಿದ, ಮಡಿಕೇರಿ ಶಾಸಕ ಡಾ. ಮಂಥರ್ ಗೌಡ ಅವರು, ಸ್ವಚ್ಚ, ಸುರಕ್ಷ, ಸಮೃದ್ದ ಕೊಡಗು ನಮ್ಮ ಭಾಷಣಕ್ಕೆ ಸೀಮಿತವಾಗಿರದೆ, ಆಚರಣೆಗೆ ಬರಬೇಕು. ಅವರಿವರ ಬಗ್ಗೆ ಹೇಳುವ ಬದಲು, ನಾವೇ ನಮ್ಮ ಸುತ್ತಲ ಪರಿಸರವನ್ನು ಸಮೃದ್ದಗೊಳಿಸುವತ್ತ ಆಸಕ್ತಿ ವಹಿಸಬೇಕು. ಇತರ ಪ್ರದೇಶಗಳಿಗೆ ಹೋಲಿಸಿದರೆ ಕೊಡಗಿನ ಪರಿಸರ ಮತ್ತು ಅರಣ್ಯ ಪ್ರದೇಶಗಳು ಸುರಕ್ಷಿತವಾಗಿದೆ. ಇದಕ್ಕೆ ಮೂಲ ಕಾರಣ ಕೊಡಗಿನ ಮೂಲ ನಿವಾಸಿಗಳಿಗಿರುವ ಕಾಳಜಿ ಮತ್ತು ಜವಾಬ್ದಾರಿ. ಮೂಲ ನಿವಾಸಿಗಳ ಮೇಲೆ ಕಾನೂನಿನ ಒತ್ತಡ ಹೇರದೆ ಪರಿಸರದೊಂದಿಗಿನ ಭಾವಾನಾತ್ಮಕ ಬೆಸುಗೆಗೆ ಅನುವು ಮಾಡಿಕೊಡುವಂತಗಾಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಶ್ರಮಿಸಲಾಗುವುದು, ನಾಗರೀಕರೂ ಕೂಡ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ವೇಗದ ಚಾಲನೆ, ಮಾದಕ ವ್ಯಸನೆತಯಿಂದ ಸಮಾಜದ ಮೇಲಾಗುತ್ತಿರುವ ಪರಿಣಾಮದ ಕುರಿತು ಉಪನ್ಯಾಸ ನೀಡಿದ, ಕೊಡವ ಮಕ್ಕಡ ಕೂಟದ ಅಧ್ಯಕ್ಷ, ಬೊಳ್ಳಜ್ಜೀರ ಅಯ್ಯಪ್ಪ ಅವರು ನಮ್ಮ ಹಿರಿಯರು ಈ ಕೊಡಗನ್ನ ನಮಗೆ ಅತ್ಯಂತ ಕಾಳಜಿಯಿಂದ ಉಳಿಸಿಕೊಟ್ಟಿದ್ದಾರೆ. ಅದನ್ನ ಉಳಿಸುವಲ್ಲಿ ಇಂದಿನ ಯುವ ಪೀಳಿಗೆ ಶ್ರಮವಹಿಸುವ ಜವಾಬ್ದಾರಿಯನ್ನು ತೆಗೆದು ಕೊಳ್ಳಬೇಕು ಎಂದರಲ್ಲದೆ, ಇಂದಿನ ವಿದ್ಯಾರ್ಥಿಗಳು ಮಾದಕವ್ಯಸನ ವೇಗದ ವಾಹನ ಚಾಲನೆ ಮುಂತಾದ ಕೆಟ್ಟ ಹವ್ಯಾಸಗಳಿಂದ ತಮ್ಮ ಭವಿಷ್ಟವನ್ನ ಹಾಳುಮಾಡಿಕೊಳ್ಳುತಿದ್ದಾರೆ. ದುರಭಿರುಚಿಗೆ ಬಲಿಯಾಗದೆ ಭವಿಷ್ಯದ ಕುರಿತು ಉತ್ತಮ ಚಿಂತನಾ ನಿರ್ಣಯಗಳನ್ನು ತೆಗೆದುಕೊಂಡರೆ ಭವಿಷ್ಯ ಉತ್ತಮವಾಗಿರಲಿದೆ ಎಂದರು.
ಸಾಮಜಿಕ ಜವಾಬ್ದಾರಿ ಮತ್ತು ಕಳಕಳಿ ಎಂಬ ವಿಚಾರವಾಗಿ ಉಪನ್ಯಾಸ ನೀಡಿದ, ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ಬೆಳ್ಯಪ್ಪ ಅವರು, ಈ ಸಮಾಜದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿಯುತರೇ ಆಸದರೂ, ನಾವು ಆಯ್ಕೆ ಮಾಡಿಕೊಳ್ಳುವ ಗುರಿ ಮತ್ತು ದಾರಿ ನಮ್ಮ ಜವಾಬ್ದಾರಿಯ ಮಟ್ಟವನ್ನ ನಿರ್ಧರಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಖಾಸಗೀ ಬದುಕಿನ ಜೊತೆಗೆ, ಸಾಮಜಿಕ ಕಳಕಳಿಯನ್ನ ಹೊಂದುವತ್ತ ಚಿಂತಿಸಬೇಕು. ಟೀಕೆ, ಟಿಪ್ಪಣಿಗಳಿಗೆ ಕಿವಿಗೊಡದೆ, ನಮ್ಮ ನಂತರವೂ ಈ ಸಮಾಜದಲ್ಲಿ ನಮ್ಮ ಹೆಸರು ಶಾಸ್ವತವಾಗಿ ನೆಲೆಯೂರುವಂತೆ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಕೊಡಗಿನ ದೇವರಕಾಡು ಮತ್ತು ಸಂರಕ್ಷಣೆಯ ಕುರಿತು ಉಪನ್ಯಾಸ ನೀಡಿದ, ಸಾಹಿತಿ ಪುತ್ತಾಮನೆ ವಿದ್ಯಾಜಗದೀಶ್ ಅವರು, ಹಿರಿಯರು ಕೊಡಗಿನ ಪರಂಪರೆಯೊಂದಿಗೆ ಬೆರೆತಿರುವ ಪರಿಸರವನ್ನು ರಕ್ಷಿಸುವ ಕನಸಿನೊಂದಿಗೆ, ದೇವರಕಾಡುಗಳನ್ನು ಸೃಷ್ಟಿಸಿದ್ದಾರೆ. ಈ ದೇವರ ಕಾಡುಗಳನ್ನು ಉಳಿಸುವ ನಿಟ್ಟಿನಲ್ಲಿ ಚಿಂತನೆಗಳಾಗಬೇಕು, ದೇವರಕಾಡುಗಳು ಉಳಿದರೆ ಮಾತ್ರ ಸ್ವಚ್ಚ ಪರಿಸರ ಉಳಿಯಲು ಸಾದ್ಯ ಎಂದರು.
ಬೆಂಗಳೂರಿನ ಎಂ.ಎಸ್. ರಾಮಯ್ಯ ಕಾಲೇಜಿನ ಉಪನ್ಯಾಸಕರಾದ ಡಾ. ಪ್ರಶಾಂತ್ ಕುಮಾರ್ ಹೆಚ್.ಪಿ. ಅವರು, ಸಂದರ್ಶನಲ್ಲಿ ಸಂವಹನದ ಪ್ರಾಮುಖ್ಯತೆ ಎಂಬ ವಿಚಾರವಾಗಿ ನೀಡಿದ ತಮ್ಮ ಉಪನ್ಯಾಸದಲ್ಲಿ, ಒಬ್ಬ ವ್ಯಕ್ತಿಯ ಅಂತರಿಕ ಮನಸ್ಸಿನ ಭಾವನೆಗಳನ್ನು, ಆತನ ಬಾಹ್ಯ ಹಾವಭಾವದಿಂದ ಅಳೆಯಬಹುದು. ನಾವು ಪ್ರತಿಯೊಬ್ಬರನ್ನ ಬೇಟಿಯಾದಾಗ, ಸಂದರ್ಶನಗಳಿಗೆ ಹಾಜರಾಗುವಾಗ ನಮ್ಮ ಉಡುಗೆ, ತೊಡುಗೆ, ಚಲನವಲನಗಳು ಹೇಗಿರಬೆಕೆಂಬುದರ ಕುರಿತು ಅರಿತುಕೊಳ್ಳವುದು ಅವಶ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮೇಜರ್ ರಾಘವ ಅವರು, ಪರಿಸರವೇ ನಮ್ಮ ಅತಿ ದೊಡ್ಡ ಸಂಪಾದನೆ, ನಾವು ಹೇಗೆ ನಮ್ಮ ಪರಿಸರದ ಸ್ವಚ್ಚತೆ ಮತ್ತು ಸುರಕ್ಷತೆಯ ಕಾಳಜಿ ಮಾಡುತ್ತೇವೋ, ಅಷ್ಟೇ ಸಮೃದ್ದ ಬದುಕು ನಮ್ಮದಾಗುತ್ತದೆ. ಹಾಗಾಗಿ ನಾವೆಲ್ಲರೂ ನಮ್ಮ ಸುತ್ತಲಿನ ಪರಿಸರದ ಸಮೃದ್ದಿಗೆ ಶ್ರಮಿಸೋಣ ಎಂದರು.
ಪಾಂಡಿರ ಕೌಶಿಕ್ ಕಾವೇರಪ್ಪ ಅವರು ತಯಾರಿಸಿದ, ಕೊಡಗಿನ ಆರ್ಕಿಡ್ ಸಂಚಲನ ಎಂಬ ಕಿರು ಚಿತ್ರ ಪ್ರದರ್ಶನ ನಡೆಯಿತು. ಈ ಕುರಿತು ಮಾತನಾಡಿದ ಕೌಶಿಕ್ ಕಾವೇರಪ್ಪ ಅವರು, ಕೊಡಗಿನ ಪರಿಸರ ಶ್ರೀಮಂತಿಕೆಯ ಭಾಗವಾಗಿರುವ, ಆರ್ಕಿಡ್ ಅಥವ ಕಾಡ್ ಪೂವುಗಳ ಸಂತತಿಯನ್ನು ನೈಸರ್ಗಿಕವಾಗಿಯೇ ಉಳಿಸಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ನಿರಂತರ ಪ್ರಯತ್ನ ಮಾಡುತ್ತಿದ್ದು, ಇದೇ ವಿಚಾರವಾಗಿ ಕೆಲವೇ ದಿನಗಳಲ್ಲಿ ಕೊಡವ ಭಾಷೆಯಲ್ಲೂ ಕಿರು ಚಿತ್ರ ನಿರ್ಮಾಣ ಮಾಡಲಾಗುವುದು ಎಂದರು.
ಕಾಲೇಜಿನ ವಿಧ್ಯಾರ್ಥಿನಿಯರು ಪ್ರಾರ್ಥಿಸಿದರೆ, ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಪಿ. ಕೃಷ್ಣ ಅವರು ಸ್ವಾಗತಿಸಿ, ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗೀತಾಂಜಲಿ ಅವರು ವಂದಿಸಿದರು. ಮಲೆನಾಡ ಕೂಗು ಸಂಸ್ಥೆಯ ಸ್ವಯಂ ಸೇವಕರಾದ, ನಾಯಕಂಡ ಶಮಂತ್ ಮುದ್ದಪ್ಪ, ಸುಪ್ರಿತ್ ರಮೇಶ್ ಬೆಳ್ಳಿಯನ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.