ವಿರಾಜಪೇಟೆ, ನ.13: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಕೊಡಗು ಸೇರಿದಂತೆ ರಾಜ್ಯದ ಹಲವೆಡೆ ಮತ್ತೆ ಮಳೆಯಾಗುವ ಸಾದ್ಯತೆ ಇದೆ ಎಂದು, ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತದ ಪರಿಚಲನೆಯು ಬಂಗಾಳಕೊಲ್ಲಿಯಲ್ಲಿ ತೀವ್ರಗೊಳ್ಳುತ್ತಿದೆ. ಸೋಮವಾರ (ನ.11) ನೈಋತ್ಯ ದಿಕ್ಕಿನತ್ತ ತಿರುಗಿರುವ ಈ ರಣಭೀಕರ ಸುಳಿಗಾಳಿಯು ಸಮುದ್ರ ಮಟ್ಟದಿಂದ ಬರೋಬ್ಬರಿ 5.8 ಕಿಮೀ ವರೆಗೆ ಇದೆ. ಇದರ ಪ್ರಭಾವದಿಂದಲೇ ಮುಂದಿನ 24 ಗಂಟೆಗಳಲ್ಲಿ ದಕ್ಷಿಣದ ಕರಾವಳಿ ರಾಜ್ಯಗಳಿಗೆ IMD ಭಾರೀ ಮಳೆ ಮುನ್ಸೂಚನೆ ನೀಡಿದೆ. ಈಗಾಗಲೇ ತಮಿಳುನಾಡಿನ ಚೆನ್ನೈನಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಎಂದು ಅಲ್ಲಿಯ ಸ್ಥಳೀಯ ಆಡಳಿತ ತಿಳಿಸಿದೆ.
ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿ, ಒಂದು ಸ್ಟ್ರಫ್ ಪೂರ್ವ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಇದೆ. ಅದು ಸ್ಪಷ್ಟ ವಾಯುಭಾರ ಕುಸಿತವಾಗಿ ನಿರ್ಮಾಣವಾದರೆ, ಅದು ಚಂಡಮಾರುತವಾಗಿ ಬದಲಾಗಿ, ಇನ್ನಿಲ್ಲದ ಹಾವಳಿ ಸೃಷ್ಟಿಸಿಬಿಡಬಹುದು ಎಂಬ ಆತಂಕ ಕರಾವಳಿ ರಾಜ್ಯಗಳ ಜನರಲ್ಲಿ ಸೃಷ್ಟಿಯಾಗಿದೆ.
ನೈಋತ್ಯ ಬಂಗಾಳ ಕೊಲ್ಲಿಯಿಂದ ಉತ್ತರ ಕರಾವಳಿ ಆಂಧ್ರಪ್ರದೇಶದ ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯವರೆಗೆ ಸಾಗಲಿದೆ. ಮತ್ತೊಂದು ಸ್ಟ್ರಫ್ ಪೂರ್ವ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಇದೆ. ಇದು ಸಮುದ್ರ ಮಟ್ಟದಿಂದ 1.5 ಕಿಮೀ ವರೆಗೆ ವ್ಯಾಪಿಸಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ದಕ್ಷಿಣ ಭಾರತದ ವಿವಿಧ ರಾಜ್ಯಗಳಿಗೆ ಭಾರೀ ಮಳೆ ಆಗಬಹುದು ಎಂದು ಅಂದಾಜಿಸಲಾಗಿದೆ.
ವಾಯುಭಾರ ಕುಸಿತವು ತೀವ್ರಗೊಂಡಿದ್ದೇ ಆದಲ್ಲಿ ಚಂಡಮಾರುತ ಸೃಷ್ಟಿ ಬಹುತೇಕ ಖಚಿತವಾಗಿದೆ. ಇದು ಕರಾವಳಿ ರಾಜ್ಯಗಳಲ್ಲಿ ಅಕರಶಃ ತಲ್ಲಣಗೊಳಿಸಲಿದೆ. ಈ ಕುರಿತು ಮುಂದಿನ 48 ಗಂಟೆಗಳಲ್ಲಿ ಮಾಹಿತಿ ಸಿಗುವ ಸಾಧ್ಯತೆ ಇದೆ.
ಚಂಡಮಾರುತ ಪರಿಚಲನೆ ಪ್ರಭಾವದಿಂದ ಕರಾವಳಿ ರಾಜ್ಯಗಳಲ್ಲಿ ಮಬ್ಬು ವಾತಾವರಣ ಸೃಷ್ಟಿಯಾಗಿದೆ. ಆಂಧ್ರ ಪ್ರದೇಶ, ತಮಿಳುನಾಡು, ಕರ್ನಾಟಕ, ಒಡಿಶಾ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಆಂಧ್ರ ಪ್ರದೇಶ ಕರಾವಳಿಯಲ್ಲಿ ಈಗಾಗಲೇ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಮುಂದಿನ ಮೂರು ದಿನ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ.
ತಮಿಳುನಾಡಿನ ಚೆನ್ನೈನಲ್ಲಿ ಭಾರೀ ಮಳೆಯ ಕಾರಣಕ್ಕೆ ಶಾಲೆಗಳಿಗೆ ರಜೆ ಕೊಡಲಾಗಿದೆ. ಚೆನ್ನೈ ಮಹಾನಗರ ವಿವಿಧೆಡೆ ಮಕ್ಕಳ ಹಿತದೃಷ್ಟಿಯಿಂದ ಒಂದು ದಿನ ಸಾರ್ವಜನಿಕ ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ, ಕೊಡಗು, ಮೈಸೂರು, ಕರಾವಳಿ, ಮಲೆನಾಡು, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು ಸೇರಿದಂತೆ ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ.