ಪೊನ್ನಂಪೇಟೆ ನ.19:(ಪುತ್ತರಿರ ಕರುಣ್ ಕಾಳಯ್ಯ):- 1965ರ ಇಂಡೋ-ಪಾಕಿಸ್ತಾನ ಯುದ್ದದಲ್ಲಿ ವೀರಮರಣನಪ್ಪಿದ ನಾಯಕ್ ಕೂಕಂಡ ಎನ್ . ಪೊನ್ನಪ್ಪನವರ ನೆನಪಿಗಾಗಿ ಪೊನ್ನಂಪೇಟೆಯ ಜೋಡು ಬೀಟಿ- ಕುಂದ ಸಂಪರ್ಕ ರಸ್ತೆಗೆ ದಿವಂಗತ ಕೂಕಂಡ. ಎನ್.ಪೊನ್ನಪ್ಪ ರಸ್ತೆ ಎಂದು ನಾಮಕರಣ ಅನಾವರಣ ಮಾಡಲಾಯಿತು.
ನಾಮ ಫಲಕ ಉದ್ಘಾಟನೆ ಮಾಡಿ ಮಾತನಾಡಿದ, ಅಖಿಲ ಕರ್ನಾಟಕ ಮಾಜಿ ಯೋಧರ ಸಂಘದ ಕೊಡಗು ಜಿಲ್ಲಾ ಅಧ್ಯಕ್ಷರಾದ ಕೊಟ್ಟುಕತ್ತಿರ ಸೋಮಣ್ಣ ಅವರು, ಅದೆಷ್ಟೋ ವೀರಯೋಧರು ದೇಶಕ್ಕಾಗಿ ಸೇವೆಸಲ್ಲಿಸಿದರೂ ಅವರ ನೆನಪು ಮಾತ್ರ ಜನಮಾನಸದಲ್ಲಿ ಉಳಿದಿಲ್ಲ, ಹಾಗಾಗಿ ಎಲ್ಲೆಡೆ ವೀರಯೋಧರಿಗೆ ಗೌರವ ಸಲ್ಲಿಸುವ ಕಾರ್ಯವಾಗಬೇಕೆಂದರು. ಕೂಕಂಡ ಪೊನ್ನಪ್ಪನವರು ಯುದ್ದದಲ್ಲಿ ಶತ್ರುಪಡೆಯೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿ ನಮಗೆ ಪ್ರೇರಣೆಯಾಗಿದ್ದಾರೆ ಎಂದರು.
ಪೊನ್ನಂಪೇಟೆ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಸುಬ್ರಮಣಿ ಮಂದಣ್ಣ ಅವರು ಮಾತನಾಡಿ, ಪೊನ್ನಂಪೇಟೆಯಲ್ಲಿ ವೀರಯೋಧ ಕೂಕಂಡ ಪೊನ್ನಪ್ಪ ಸ್ಮಾರಕ ಭವನ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದರು. ಊರಿನ ಹಿರಿಯರು, ಸಮಾಜ ಸೇವಕರು ಹಾಗು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮೂಕಳೆರ ಕುಶಾಲಪ್ಪ ಮಾತನಾಡಿ, ಕೂಕಂಡ ಪೊನ್ನಪ್ಪ ಬಾಲ್ಯದ ಸಾಹಸ ಹಾಗೂ ವೀರಯೋಧನ ಬಗ್ಗೆ ವಿವರಿಸದರು. ಹಳ್ಳಿಗಟ್ಟು ದೇವಾಲಯ ಸಮಿತಿ ಅಧ್ಯಕ್ಷ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಮಾತನಾಡಿ ಕೂಕಂಡ ಪೊನ್ನಪ್ಪನವರ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸುವ ಬಗ್ಗೆ ಪ್ರಸ್ತಾಪಿಸಿದರು. ಹುತಾತ್ಮ ಪೊನ್ನಪ್ಪನವರ ಸಹೋದರ ಹಾಗು ಮಾಜಿ ಯೋಧ ಕೂಕಂಡ ಕಾಶಿಯಪ್ಪ, ಬಿದ್ದಂಡ ಗೌರಮ್ಮ ಸೇರತಿಸಂತೆ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಪುತ್ತರಿರ ಕರುಣ್ ಕಾಳಯ್ಯ ಕೂಕಂಡ ಪೊನ್ನಪ್ಪನವರ ಬಗ್ಗೆ ವಿವರಿಸಿದರು
ಪೊರೆರ ಕುಶಿ ಅಕ್ಕಮ್ಮ ಪ್ರಾರ್ಥಿಸಿ, ಕೂಕಂಡ ಪಟ್ಟೆದಾರ ಕೂಕಂಡ ರಾಜಕಾವೇರಿಯಪ್ಪ ಸ್ವಾಗತಿಸಿ, ಕೂಕಂಡ ಪ್ರಥ್ವಿ ಅಯ್ಯಪ್ಪನವರು ವಂದಿಸಿ, ಕೂಕಂಡ ಪ್ರದೀಪ್ ಪೂವಯ್ಯ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ಯೋಧರ ಸಂಘ,ಸೇನಾಯೋಧರು, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗು ಸದಸ್ಯರು, ಗ್ರಾಮಸ್ಥರು ,ಕೂಕಂಡ ಕುಟುಂಬಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಯ ಸದಸ್ಯರು ಉಪಸ್ತಿತರಿದ್ದು, ವೀರ ಯೋಧನಿಗೆ ಪುಷ್ಪಾಂಜಲಿ ಆರ್ಪಿಸಲಾಯಿತು.