ನಡುಬಾಡೆ ಹೆಸರಿನ ಮಾಧ್ಯಮ ಸಂಸ್ಥೆ ಹುಟ್ಟು ಹಾಕಬೇಕೆಂಬ ಸಂಕಲ್ಪ ಮಾಡಿ, ಮೂರು ವರ್ಷಗಳೇ ಕಳೆದವು. ಆ ನಡುವೆ ನಾನಾ ಏಳು ಬೀಳುಗಳು, ಎಡರು ತೊಡರುಗಳು. ಕೆಲವಾರು ಸ್ವಯಂಕೃತ ಪ್ರಮಾದಗಳು, ಹಲವಾರು ಕಾಲೆಳೆಯೋ ಕೈಗಳ ನಡುವೆ, ಕಳೆದ ಸೆಪ್ಟೆಂಬರ್ 05/2024ರಂದು ನಡುಬಾಡೆ ನ್ಯೂಸ್ ವೆಬ್‌ಸೈಟ್ ಲೋಕಾರ್ಪಣೆ ಮಾಡಿ, ಸುದ್ದಿ, ಮಾಹಿತಿ ಬಿತ್ತರಿಸಲು ಪ್ರಾರಂಭಿಸಿದೆವಾದರೂ, ನಡುವೆ ಕೆಲ ತಾಂತ್ರಿಕ ಕಾರಣಗಳಿಂದ ಮತ್ತೆ 10 ದಿನ ಪ್ರಸಾರ ನಿಂತು ಹೋಯಿತು. ಆದರೂ ಎಡೆಬಿಡದ ಪ್ರಯತ್ನದ ಫಲವಾಗಿ, ಮತ್ತೆ ಸೆಪ್ಟೆಂಬರ್ 25ರಂದು ಮರು ಪ್ರಸಾರ ಆರಂಭಿಸಿದೆವು.
ಮರು ಪ್ರಸಾರ ಪ್ರಾರಂಭಿಸಿ ಇಂದಿಗೆ 45 ದಿನಗಳಾದವು. ಅಂದಿನಿಂದ ಇಂದಿನವರೆಗೂ ವೀಕ್ಷಕರ ಸಂಖ್ಯೆ ಏರುತ್ತಲೇ ಹೋಗಿ, ಇಂದಿಗೆ ಬರೋಬ್ಬರಿ 32,648 ವೀಕ್ಷಕರನ್ನು ಪ್ರತಿನಿತ್ಯ ಪಡೆದಿದ್ದೇವೆ.
ಹಲವಾರು ಪೋರ್ಟಲ್‌ಗಳಿಗೆ ಹೋಲಿಸಿದರೆ, ಇದು, ಯಾವ ಲೆಕ್ಕವೂ ಅಲ್ಲ. ಆದರೆ, ಇದು ನಮಗೆ ಆನೆಯ ಮೇಲೆ ಕೂತಷ್ಟು, ಮಾಮೇರು ಪರ್ವತವ ಏರಿ ಕೂಗಿದಷ್ಟು ಸಂಭ್ರಮ. ಯಾಕೆಂದರೆ ನಮಗೆ ಇದು ಅನಿವಾರ್ಯ ಅವಶ್ಯಕತೆ ಆಗಿತ್ತು. ಸತತ ಸೋಲುಗಳು, ಅವಮಾನಗಳು, ಹೀಯಾಳಿಕೆಗಳನ್ನೇ ನೋಡಿದ್ದ ನಾವು, ಒಂದೊಮ್ಮೆ ಹತಾಷೆಯಿಂದ ಈ ಯೋಜನೆ, ಯೋಚನೆಯನ್ನೇ ಕೈ ಬಿಟ್ಟು, ಭೂಗತವಾಗುವ ನಿರ್ಧಾರವನ್ನೂ ಮಾಡಿದ್ದೆವು. ಆದರೆ ವಿಧಿ ಲಿಖಿತ ಮತ್ತು ಇಷ್ಟ ದೈವ ಯಾರಿಗೆ ಯಾವತ್ತು, ಏನನ್ನು, ಯಾವ ರೂಪದಲ್ಲಿ ಕೊಡಬೇಕೋ, ಅದನ್ನು ಕೊಟ್ಟೇ ಕೊಡುತ್ತದೆ. ಯಾರಿಂದ, ಯಾವುದನ್ನು ಯಾವಾಗ ಮಾಡಿಸಬೇಕೋ, ಅದನ್ನ ಮಾಡಿಸೀಯೇ ಮಾಡುತ್ತದೆ, ಎನ್ನುವುದಕ್ಕೆ ನಾವು ಮತ್ತೊಂದು ನಿದರ್ಶನವಾಗಿದ್ದೇವೆ.
ನೀವು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ನಾವೆಂದೂ ಚ್ಯುತಿ ತರುವುದಿಲ್ಲ. ನಾವು ಅಂದು ಘೋಷಿಸಿರುವಂತೆ, ನಡುಬಾಡೆ ಟಿವಿ ಲೋಕಾರ್ಪಣೆಯೂ ಆಗಲಿದೆ. ಜೊತೆಗೆ ಮತ್ತೊಂದು ಸಾಹಸಕ್ಕೂ ಕೈ ಹಾಕಿದ್ದೇವೆ. ಅದನ್ನೂ ನಾವು ಮಾಡಿಯೇ ಸಿದ್ದ. ಈ ಎಲ್ಲ ಮೆಟ್ಟಿಲುಗಳಿಗೆ ಹೆಗಲಾದವರು ನೀವು, ಏನೂ ಅಲ್ಲದ ಕಲ್ಲು ಬಂಡೆಯೊಂದನ್ನ ಕೆತ್ತಿ, ತಿದ್ದಿ ತೀಡಿ, ಅದಕ್ಕೊಂದು ರೂಪ ನೀಡುತ್ತಿದ್ದೀರಿ. ಸೋತಾಗ ಬೆನ್ನುತಟ್ಟಿ ಹುರಿದುಂಬಿಸಿದಿರಿ, ಅವಮಾನ, ನಿಂದನೆಗಳು ಬಂದಾಗ ಕೈನೀಡಿ ನಾವಿದ್ದೇವೆ ಬಾ ಹೆಜ್ಜೆ ಹಾಕು ಎಂದಿದ್ದೀರಿ. ಎಡವಿದಾಗ ಬಿಗಿದಪ್ಪಿ ಮುಂದಡಿ ಇರಿಸಿದ್ದೀರಿ. ಎಷ್ಟೋ ಸಮಯದಲ್ಲಿ ಬೇಡ, ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಚೆಲ್ಲ ಹೊರಟಾಗ, ಪುಟ್ಟ ಮಕ್ಕಳನ್ನ ಗದರಿಸುವಂತೆ, ಗದರಿ, ಮೈಸವರಿ, ಪ್ರೇರೇಪಿಸಿದ್ದೀರಿ. ಎಲ್ಲಕ್ಕಿಂತ ಮಿಗಿಲಾಗಿ ಅನಿವಾರ್ಯವಾದಗಲೆಲ್ಲ, ಯಾವುದಾರೊಂದು ರೂಪದಲ್ಲಿ ಆರ್ಥಿಕ ನೆರವು ಒದಗಿಸಿದ್ದೀರಿ. ಇದಕ್ಕೂ ಮಿಗಿಲಾಗಿ ನಾವಿದ್ದೇವೆ, ನೀ ನಡೀ ಎಂದು ಹುರಿದುಂಬಿಸಿದ್ದೀರಿ.
ಈ ಎಲ್ಲಾ ಕಾರಣಗಳಿಂದ ಇಂದಿನ ಈ ಸಂಖ್ಯೆ ನಮಗೆ ವಿಷ್ಮಯ ಮತ್ತು ವಿಜಯದ ಸಂಕೇತವಾಗಿ ತೋಚುತ್ತಿದೆ. ಮುಂದೆ ಮತ್ತಷ್ಟು ವಿಭಿನ್ನ, ವಿಷಿಷ್ಟತೆಯನ್ನು ನಿಮ್ಮ ಮುಂದೆ ತರಲಿದ್ದೇವೆ. ಇಂದು 32,648 ಮುಂದಿನ ದಿನಗಳಲ್ಲಿ ಕೋಟಿಗಳ ಸಂಖ್ಯೆಯಲ್ಲಿ ಬೆಳೆಯಲಿ ಎಂದು, ಎಲ್ಲಾ ಮಾಗುರುಕಾರೋಣರನ್ನ, ದೇವಾನು ದೇವತೆಗಳನ್ನು ಶಿರಭಾಗಿ ಬೇಡುತ್ತಾ, ನಮ್ಮೊಂದಿಗೆ, ಹೆಜ್ಜೆಯಾದ, ಧ್ವನಿಯಾದ, ಉಸಿರಾದ, ಹೆಸರಾದ, ಕಿಸೆಯಾದ, ಹರಸಿದ, ಹೆದರಿಸಿದ, ಅವಮಾನಿಸಿದ, ನಿಂದಿಸಿದ, ಹಂಗಿಸಿದ, ಎಲ್ಲಮನಗಳಿಗೂ ವಂದಿಸುತ್ತೇವೆ.
ಮುಂದೆಯೂ ನೀವು ಏನೆಂದು ಕೊಳ್ಳುವಿರೋ ನಾವೂ ಕೂಡ ಹಾಗೇ…..