
ಕೊಡಕು ಜಿಲ್ಲೆಯ ಬಹುಕಾಲದ ವಿದ್ಯುತ್ ಸಮಸ್ಯೆ ಸರಿಪಡಿಸಲು, ವಿದ್ಯುತ್ ಉನ್ನತೀಕರಣಕ್ಕೆ ಸರ್ಕಾರದಿಂದ 208 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಕೊಡಗಿನ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಅನುದಾನವನ್ನು ವಿದ್ಯುತ್ ಕ್ಷೇತ್ರಕ್ಕೆ ತರಲಾಗಿದೆ, ಈ ಮೂಲಕ ವಿದ್ಯುತ್ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಹೆಜ್ಜೆ ಇಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರು ತಿಳಿಸಿದ್ದಾರೆ.
ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಕೊಡಗು ಜಿಲ್ಲೆಯವರೇ ಆಗಿದ್ದು, ಅವರೊಂದಿಗೆ ಸಮಾಲೋಚಿಸಿ ಅವರ ಸಹಕಾರದೊಂದಿಗೆ ವಿದ್ಯುತ್ ಉನ್ನತಿಕರಣಕ್ಕೆ 208 ಕೋಟಿ ಅನುದಾನವನ್ನು ಚೆಸ್ಕಾಂಗೆ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಸುಮಾರು 151 ಕೋಟಿ ವಿರಾಜಪೇಟೆ, 57 ಕೋಟಿ ಮಡಿಕೇರಿ ಕ್ಷೇತ್ರದ ವ್ಯಾಪ್ತಿಗೆ ದೊರೆಯಲಿದೆ ಮಾಹಿತಿ ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ 10 ಲಕ್ಷ ಕಿಲೋಮೀಟರ್ ವಿದ್ಯುತ್ ತಂತಿಗಳು ಹಾದು ಹೋಗಿವೆ. ಲೋಪದೋಷ ಉಂಟಾದಾಗ ತ್ವರಿತವಾಗಿ ಸರಿಪಡಿಸಲು ಇದರಿಂದ ವಿಳಂಬವಾಗುತ್ತದೆ. ಪ್ರಸಕ್ತ ವರ್ಷ ಅತಿ ಹೆಚ್ಚಿನ ಬಿರುಗಾಳಿ ಮಳೆಯಿಂದ ವಿದ್ಯುತ್ ನಿರ್ವಹಣೆ ಗೆ ಹೆಚ್ಚಿನ ನಿಗಾವಹಿಸಲಾಯಿತು. ಪ್ರತಿದಿನ ಸರಾಸರಿ 25 ವಿದ್ಯುತ್ ಕಂಬಗಳು ಮುರಿದು ಬೀಳುತ್ತಿದ್ದರೆ, ಅಷ್ಟೇ ಸಂಖ್ಯೆಯಲ್ಲಿ ಹೊಸದಾಗಿ ಅಳವಡಿಸಲಾಗುತ್ತಿತ್ತು. ಒಂದು ಕಡೆ ವಿದ್ಯುತ್ ಕಂಬಗಳ ಸರಬರಾಜು ಹಾಗೂ ಅವುಗಳನ್ನು ಸ್ಥಳದಲ್ಲಿ ಅಳವಡಿಸುವ ಯುದ್ದೋಪಾದಿಯಾಗಿ ಕೆಲಸ ನಿರ್ವಹಿಸಲಾಗಿದೆ. ಪ್ರಸ್ತುತ ವರ್ಷ ಮಳೆಗಾಲದಲ್ಲಿ 3800 ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಹಾಗೆಯೇ 120 ಟ್ರಾನ್ಸ್ಫಾರ್ಮರ್ಗಳ ದುರಸ್ತಿಯಾಗಿತ್ತು. ಹೊರಗಿನಿಂದ ಲೈನ್ಮ್ಯಾನ್ಗಳನ್ನು ಸಹ ಜಿಲ್ಲೆಗೆ ನಿಯೋಜನೆ ಮಾಡಿ ಈ ವರ್ಷ ವಿದ್ಯುತ್ ಸಮಸ್ಯೆಯನ್ನು ಜನರಿಗೆ ತೊಂದರೆಯಾಗದಂತೆ ನಿರ್ವಹಣೆ ಮಾಡಲು ಪ್ರಯತ್ನಿಸಲಾಗಿದೆ ಎಂದು ಪೊನ್ನಣ್ಣ ಅವರು ವಿವರಿಸಿದರು.
ಪ್ರತ್ಯೇಕ ಅನುದಾನದಲ್ಲಿ ಜಿಲ್ಲೆಗೆ ಬಾಳೆಲೆ, ಹುದಿಕೇರಿ, ಸಿದ್ದಾಪುರ, ಮೂರ್ನಾಡು, ಕಳತ್ಮಾಡು, ಕಾಟಕೇರಿಗಳಲ್ಲಿ 66/11ಹಾಗೂ 132/11 ಕೆ.ವಿ.ಯ ವಿದ್ಯುತ್ ಉಪ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಈ ಕಾಮಗಾರಿ ಪೂರ್ಣವಾದರೆ, ಮಳೆಗಾಲದಲ್ಲಿಯೂ ಸಹ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾಗಮಂಡಲ ಸಂಪಾಜೆ ಯಲ್ಲಿಯೂ 33ಕೆವಿ ಹುದಿಕೇರಿಯಲ್ಲಿ 66 ಕೆವಿ ವಿದ್ಯುತ್ ಉಪ ಕೇಂದ್ರವನ್ನು ಸ್ಥಾಪನೆ ಮಾಡಲಾಗುತ್ತಿದೆ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಮಾಹಿತಿ ನೀಡಿದ್ದಾರೆ.