ಸೋಮವಾರಪೇಟೆ, ಡಿ.17: ನಮ್ಮ ಭೂಮಿ ನಮ್ಮ ಹಕ್ಕು, ನಮ್ಮೆಲ್ಲರ ಬದುಕಿಗಾಗಿ ಈ ಹೋರಾಟ ಘೋಷಣೆಯಡಿ ರೈತ ಹೋರಾಟ ಸಮಿತಿ ಮತ್ತು ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳು, ಅವೈಜ್ಞಾನಿಕ ಅರಣ್ಯ ಕಾಯ್ದೆ ವಿರುದ್ಧ ಹೋರಾಟ ದಿನಾಮಕ 20/12/24ನೇ ಶುಕ್ರವಾರ ಬೃಹತ್ ಹರತಾಳಕ್ಕೆ ಭರದ ಸಿದ್ದತೆ ನಡೆಯುತ್ತಿದೆ. ಕೊಡಗು ಜಿಲ್ಲಾ ರೈತ ಸಂಘವೂ ಈ ಹೋರಾಟಕ್ಕೆ ತನ್ನ ನೈತಿಕ ಬೆಂಬಲ ವ್ಯಕ್ತಪಡಿಸಿದೆ.
ದಿನಾಂಕ 20-12-2024ನೇ ಶುಕ್ರವಾರ ಬೆಳಿಗ್ಗೆ 10-00 ಗಂಟೆಗೆ ಕೊಡಗು ಜಿಲ್ಲೆ, ಮಡಿಕೇರಿ ಫಿ.ಮಾ. ಕಾರ್ಯಪ್ಪ ವೃತ್ತದಿಂದ ರೈತ ಹೋರಾಟ ಸಮಿತಿ ಹಾಗೂ ರೈತ ಸಂಘದ ನೇತ್ರವದಲ್ಲಿ ಸಿ & ಡಿ ಹಾಗೂ ಇನ್ನಿತರ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಜನ ಜಾಗೃತಿಯೊಂದಿಗೆ ಸರ್ಕಾರದ ಕಣ್ಣು ತೆರೆಸಲು ಬೃಹತ್ ಜಾತ ನಡೆಯಲಿದೆ ಎಂದು ರೈತ ಹೋರಾಟ ಸಮಿತಿ ಸಂಚಾಲಕ ಚಕ್ರವರ್ತಿ ಸುರೇಶ್ ಅವರು ತಿಳಿಸದ್ದಾರೆ.
ಆವೈಜ್ಞಾನಿಕವಾಗಿ ಮಾಡಿರುವ ಸಿ & ಡಿ ಸರ್ವೆಯನ್ನು ರದ್ದುಗೊಳಿಸಿ, ಮರು ಸರ್ವೆ ಮಾಡಿ ರೈತರ ವ್ಯವಸಾಯ ಮಾಡಿರುವ ಭೂಮಿಯನ್ನು ರೈತರ ಹೆಸರಿಗೆ ಮಂಜೂರು ಮಾಡಬೇಕು. ಯಾವುದೇ ಮಾಹಿತಿ ಇಲ್ಲದೆ ಮಾಡಿರುವ, ಮೀಸಲು ಅರಣ್ಯ, ಸೆಕ್ಷನ್ 4/5 ಅನ್ನು ಕೈಬಿಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು, ಹಸಿರು ನ್ಯಾಯಾಲಯಕ್ಕೆ ಒತ್ತಡ ಹಾಕಿ, ಸ್ಥಳೀಯ ಜನರನ್ನು ಒಕ್ಕಲೆಬ್ಬಿಸುವುದನ್ನು ತಪ್ಪಿಸಬೇಕು. ಅರಣ್ಯ ಹಾಗೂ ಕಂದಾಯ ಇಲಾಖೆಗಳು ವಾಸ್ತವತೆ ಅರಿಯದೆ ಮಾಡಿರುವ ಡೀಮ್ಡ್ ಫಾರೆಸ್ಟ್ ಕಾಯ್ದೆಯನ್ನು ರೈತರ ಹಿತದೃಷ್ಟಿಯಿಂದ ಕೈಬಿಡಬೇಕು. ಕಸ್ತೂರಿರಂಗನ್ ವರದಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಿರಸ್ಕರಿಸಿ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗದ ಹಾಗೆ ಕೇರಳ ಮಾದರಿಯಂತೆ ಜಾರಿ ಮಾಡಬೇಕು. ಊರುಉಡುವೆ, ದೇವರಕಾಡು, ಗೋಮಾಳಗಳು ನಮ್ಮ ಪೂರ್ವಿಕರು ಊರಿನ ಹಿತದೃಷ್ಟಿಯಿಂದ ಮೀಸಲು ಮಾಡಿರುವ ಭೂಮಿಯಾಗಿದ್ದು, ಅದನ್ನು ಅರಣ್ಯ ಇಲಾಖೆಯ ಅಧೀನಕ್ಕೆ ಒಳಪಡಿಸದೆ, ಮೊದಲಿನಂತೆ ಗ್ರಾಮದ ಅಧೀನಕ್ಕೆ ಒಳಪಡಿಸಬೇಕು. ಈ ಆವೈಜ್ಞಾನಿಕ ಅರಣ್ಯ ಕಾಯ್ದೆಯಿಂದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನಮೂನೆ 50, 53, 57 ಅರ್ಜಿಗಳಿಗೆ ಅನುಗುಣವಾಗಿ ರೈತರಿಗೆ ಯಾವುದೇ ಅಡೆತಡೆಗಳಿಲ್ಲದೆ ಹಕ್ಕು ಪತ್ರ ವಿತರಿಸಬೇಕು. ನೆನೆಗುದಿಗೆ ಬಿದ್ದಿರುವ ದುರಸ್ಥಿ ಕಡತಗಳನ್ನು ಆದಷ್ಟು ಬೇಗ ದುರಸ್ಥಿ ಮಾಡಿಕೊಡಬೇಕು. ಬಡವರು ಕಟ್ಟಿರುವ ಮನೆಗಳಿಗೆ 94ಸಿ ದಾಖಲಾತಿಯನ್ನು ಹಿಂದಿನಂತೆ ವಿತರಿಸಬೇಕು. ರೈತರ 10 ಹೆಚ್.ಪಿ. ಪಂಪ್ ಸೆಟ್ಗೆ ಉಚಿತ ವಿದ್ಯುತ್ ನೀಡಬೇಕು. ಮಾನವ ಹಾಗೂ ವನ್ಯಜೀವಿಗಳ ಸಂಘರ್ಷದಲ್ಲಿ ನಮ್ಮ ಬದುಕುವ ಹಕ್ಕನ್ನು ಅರಣ್ಯ ಇಲಾಖೆಯ ಮೂಲಕ ಕಸಿದುಕೊಳ್ಳಬಾರದು ಎಂಬಿತ್ಯಾದಿ ಬೇಡಿಕೆಗಳೊಂದಿಗೆ, ಶಾಂತಿಯುತ ಮೆರವಣಿಯಲ್ಲಿ ಸಾಗಿ, ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ನೀಡಲಾಗುವುದು ಎಂದು ಸುರೇಶ್ ಅವರು ತಿಳಿಸಿದ್ದಾರೆ.
ದಿನಾಂಕ 20-12-2024ನೇ ಶುಕ್ರವಾರ ಬೆಳಿಗ್ಗೆ 10-00 ಗಂಟೆಗೆ ಮಡಿಕೇರಿಯ ಫಿ.ಮಾ.ಕಾರ್ಯಪ್ಪ ವೃತ್ತದಿಂದ ಪ್ರಾರಂಭವಾಗುವ ಮೆರವಣಿಗೆಗೆ ಈಗಾಗಲೇ ಉತ್ತರ ಕೊಡಗಿನ ನೂರಾರು ಗ್ರಾಮಗಳಿಗೆ ತೆರಳಿ ಜನ ಜಾಗೃತಿ ಮೂಡಿಸಲಾಗುತಿದ್ದು, ಸಾವಿರಾರು ರೈತರು ಬಂದು ಸೇರುವ ನಿರೀಕ್ಷೆ ಇದೆ. ಇದು ನಮ್ಮ ಮತ್ತು ಮುಂದಿನ ಪೀಳಿಗೆಯ ಭವಿಷ್ಯದ ಪ್ರಶ್ನೆಯಾಗಿದ್ದು, ರೈತಬಂಧುಗಳು ಮತ್ತು ಸಾರ್ವಜನಿಕರು ಸಾಗರೋಪಾದಿಯಲ್ಲಿ ಬಂದು ಈ ಹೋರಾಟದಲ್ಲಿ ಕೈ ಜೋಡಿಸಬೇಕು ಎಂದು, ರೈತ ಹೋರಾಟ ಸಂಘಟನೆಯ ಪದಾಧಿಕಾರಿಗಳು ಕೋರಿದ್ದಾರೆ.