ಪೊನ್ನಂಪೇಟೆ, ಜ.03: ಪೊನ್ನಂಪೇಟೆ ಕುಂದಾ ರಸ್ತೆಯಲ್ಲಿರುವ ಎಸ್.ಎನ್.ಡಿ.ಪಿ. ಸಂಸ್ಥೆಗೆ ಸೇರಿದ ಜಾಗದಲ್ಲಿ, ಇಂದು ಶಾಸಕ ಎ.ಎಸ್. ಪೊನ್ನಣ್ಣ ಅವರು ಹಿಂದುಳಿದ ವರ್ಗಗಳ ಇಲಾಖೆಯ ಒಂದು ಕೋಟಿ ಅನುದಾನದಲ್ಲಿ ಗುರು ಮಂದಿರ ನಿರ್ಮಾಣದ ಭೂಮಿ ಪೂಜೆಯನ್ನು ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು ಚುನಾವಣಾ ಪೂರ್ವ ಭರವಸೆಯಂತೆ ಪೊನ್ನಂಪೇಟೆಯ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಸ್ಥೆಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಭವನ ನಿರ್ಮಾಣವನ್ನು ಮಾಡಿಸಿಕೊಡುತ್ತೇವೆ ಎಂದಿದ್ದೆ. ಅದರಂತೆ ಇಂದು ಒಂದು ಕೋಟಿ ಬಿಡುಗಡೆಗೊಳಿಸಿ ಹಿಂದುಳಿದ ಸಮುದಾಯದ ಆಶೋತ್ತರಗಳ ಅನುಷ್ಠಾನಕ್ಕೆ ಸರ್ಕಾರದಿಂದ ಒತ್ತು ನೀಡಲಾಗಿದೆ ಎಂದರು.
ಇದೇ ಸಂದರ್ಭ ಶ್ರೀ ನಾರಾಯಣ ಗುರು ಅವರ ಸಂದೇಶವನ್ನು ನೆನಪಿಸಿದ ಶಾಸಕರು ಎಲ್ಲರೂ ಜಾತಿ ಭೇದ ಮರೆತು ಮಾನವೀಯ ಮೌಲ್ಯಗಳನ್ನು ಪರಿಪಾಲಿಸುತ್ತಾ ಬದುಕಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್.ಎನ್.ಡಿ.ಪಿ. ಪ್ರಮುಖರು ಹಾಗೂ ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಶಾಜಿ ಅಚ್ಯುತನ್ ಪ್ರಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಧರ್ಮಜ ಉತ್ತಪ್ಪ,
ಎಸ್.ಎನ್.ಡಿ.ಪಿ. ಸಂಸ್ಥೆಯ ಅಧ್ಯಕ್ಷರಾದ ವಿ.ಬಿ. ರುದ್ರಪ್ಪ ಸ್ಥಾಪಕ ಅಧ್ಯಕ್ಷರಾದ ಕೆ.ಜೆ. ಪದ್ಮನಾಭ, ಪೊನ್ನoಪೇಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕೊಳೇರ ದಯಾ ಚಂಗಪ್ಪ, ಕಾಂಗ್ರೆಸ್ ಮುಖಂಡ ಮಾತ್ರoಡ ದಿಲ್ಲು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೀದೆರಿರ ನವೀನ್, ಎಸ್.ಎನ್.ಡಿ.ಪಿ. ಉಪಾಧ್ಯಕ್ಷರಾದ ಕೆ.ವಿ. ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಕೃಷ್ಣರಾಜೇಂದ್ರ, ಖಜಾಂಚಿ ದಿನೇಶ್ ಕುಟ್ಟ, ನಿಕಟ ಪೂರ್ವ ಅಧ್ಯಕ್ಷರಾದ ಎಂ.ಎಂ. ದಿಲೀಪ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು, ಕುಟ್ಟ, ಕೆ.ಕೆ.ಆರ್, ಸುಳುಗೋಡು ಶಾಖೆಗಳ ಪ್ರಮುಖರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಪೊನ್ನಂಪೇಟೆ ಎಸ್.ಎನ್.ಡಿ.ಪಿ. ಸಂಸ್ಥೆಯ ವತಿಯಿಂದ ಶಾಸಕರಾದ ಎ.ಎಸ್ ಪೂನ್ನಣ್ಣ ಅವರಿಗೆ ಇದೇ ಸಂದರ್ಭ ಶಾಲು ಹೊದಿಸಿ ಫಲತಾಂಬುಲ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ಪೊನ್ನಂಪೇಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಅರ್ಚಕರಾದ ನಾಗರಾಜ ಭಟ್ಟರಿಂದ ಪೂಜಾಕೈಂಕರ್ಯಗಳು ನೆರವೇರಿಸಲಾಯಿತು. ಎಸ್.ಎನ್.ಡಿ.ಪಿ. ಸದಸ್ಯರು, ನೂರಾರು ಸಾರ್ವಜನಿಕರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ನಡೆಯಿತು.