ಮೈಸೂರು ಮಹಾನಗರದೊಳಗೆ, ಹತ್ತು ಏಕರೆ ಜಾಗ ಹೊಂದುವುದೆಂದರೆ ಅದೊಂದು ಸಾಧನೆಯೇ ಸರಿ. ಆದರೆ ಈ ಹತ್ತು ಏಕರೆಯನ್ನು ಕೇವಲ ಹತ್ತು ಸಾವಿರಕ್ಕೆ ಖರೀದಿಸಿದರೆ ಅದು ರೋಚಕ ಮತ್ತು ರೋಮಾಂಚನಕಾರಿ. ಅಂತಹದ್ದೇ ಒಂದು ರೋಮಾಂಚನಕಾರಿ ಕಥೆಯಾದರೂ ವಾಸ್ತವ ಸತ್ಯ, ದಿ. ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘದ ಇತಿಹಾಸ.
ಅದು 1959ನೇ ಇಸವಿ, ಆಗ ಕೊಡಗಿನಲ್ಲಿ ದೈತ್ಯವಾಗಿ ಬೆಳೆದಿದ್ದ ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದೊಳಗಿನ ರಾಜಕೀಯ ಮೇಲಾಟಕ್ಕೆ ಶೆಡ್ಡು ಹೊಡೆದ, ಅಂದಿನ ಸಹಕಾರೀ ಧುರೀಣ, ದಿವಂಗತ ಮನೆಯಪಂಡ ಬೆಳ್ಯಪ್ಪ ಅವರು, 31/01/1959ರಂದು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಕಾಫಿ ಬೆಳೆಗಾರರನ್ನು ಸೇರಿಸಿ, ಮೈಸೂರಿನಲ್ಲಿ ದಿ. ಮೈಸೂರುಕಾಫಿ ಸಂಸ್ಕರಣಾ ಸಹಕಾರ ಸಂಘವನ್ನು ಸ್ಥಾಪಿಸುತ್ತಾರೆ. ಈ ಮೂರೂ ಜಿಲ್ಲೆಯ ಕಾಫಿ ಬೆಳೆಗಾಗರರಿಗೆ, ನ್ಯಾಯಸಮ್ಮತ ಮಾರುಕಟ್ಟೆಯೊಂದಿಗೆ, ಎತರೆ ಅವಶ್ಯ ನೆರವಾಗುವ ಪ್ರಮುಖ ಉದ್ದೇಶದೊಂದಿಗೆ ಪ್ರಾರಂಭವಾದ ಈ ಸಂಘವೂ, 1087 ಬಿಡಿ ಸದಸ್ಯರು, 13 ಬೆಳೆಗಾರರಲ್ಲದ ಸದಸ್ಯರು ಮತ್ತು 59 ಸಹಕಾರ ಸಂಘ ಸದಸ್ಯರು ಸೇರಿದಂತೆ ಒಟ್ಟು 1159 ಸದಸ್ಯರೊಂದಿಗೆ ಕಾರ್ಯಾರಂಭ ಮಾಡುತ್ತದೆ.
ಭಾರತತದ ಮೊಟ್ಟಮೊದಲ ಅಂತರಜಿಲ್ಲಾ ಸಹಕಾರ ಸಂಘ ಎಂಬ ಖ್ಯಾತಿಗೂ ಪಾತರವಾಗುವ, ದಿ. ಮೈಸೂರುಕಾಫಿ ಸಂಸ್ಕರಣಾ ಸಹಕಾರ ಸಂಘವು 1960 ರಲ್ಲಿ ಮೈಸೂರಿನ ಯಾದವಗಿರಿಯ, KRS ರಸ್ತೆಯ ಪಕ್ಕದಲ್ಲಿ 10.22 ಏಕರೆ ಜಮೀನನ್ನು ಖರೀದಿಸುತ್ತಾರೆ. ಅದರ ಅಂದಿನ ಮಾರುಕಟ್ಟೆ ಬೆಲೆ ಏಕರೆಗೆ ಕೇವಲ ಒಂದು ಸಾವಿರ ರೂ.ಗಳು ಮಾತ್ರ. ಆ ಜಾಗದಲ್ಲಿ ಬೃಹತ್ ಗೋದಾಮು ಸೇರಿದಂತೆ, ಸಂಘದ ಆಡಳಿತ ಕಛೇರಿಯನ್ನೂ ಸ್ಥಾಪಿಸಿ 1990ರ ದಶಕದ ವರೆಗೂ ಮೂರೂ ಜಿಲ್ಲೆಗಳ ಬೆಳೆಗಾರರ ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಾ, ಕೋಟ್ಯಂತರ ರೂ. ವ್ಯವಹಾರ ಮಾಡುವ ಸದರಿ ಸಂಘವೂ, ಸರ್ಕಾರ 1990ರಲ್ಲಿ ಕಾಫಿಯನ್ನು ಮುಕ್ತ ಮಾರುಕಟ್ಟೆಗೆ ತಂದಾಗ, ವ್ಯವಹಾರದಲ್ಲಿ ಹಿನ್ನಡೆಯನ್ನು ಅನುಭವಿಸಿ, ನಷ್ಟದತ್ತ ಕುಸಿಯಲಾರಂಭಿಸುತ್ತದೆ. 1996ರವರೆಗೆ ಚುನಾಯಿತ ಆಡಳಿತ ಮಂಡಳಿಯು ಸಂಘದ ಆಡಳಿತ ವ್ಯವಸತೆಯನ್ನು ನಿರ್ವಹಿಸುತ್ತದಾದರೂ, ತೀವ್ರ ವ್ಯವಹಾರಿಕ ಹಿನ್ನಡೆಯ ಕಾರಣ, 1997ರಲ್ಲಿ ಸ್ಥಗಿತಗೊಂಡು, 19098ರಲ್ಲಿ ಅಂದಿನ ಆಡಳಿತ ಮಂಡಳಿ ಸಹಕಾರ ಇಲಾಖೆಯ ಅಸಹಕಾರದ ಕಾರಣ ಸಾಮೂಹಿಕ ರಾಜೀನಾಮೆ ನೀಡುತ್ತಾರೆ. ಇದನ್ನೇ ಬಳಸಿಕೊಂಡ ಸರ್ಕಾರ ಆಡಳಿತ ಅಧಿಕಾರಿಯನ್ನು ನೇಮಿಸುತ್ತದೆ. ಆಡಳಿತ ಅಧಿಕಾರಿಯು, ಮಾಸಭೆ ಕರೆಯದೆ, ಚುನಾವಣೆಯನ್ನೂ ನಡೆಸದೇ ಇದ್ದ ಕಾರಣ, ನಿಯಮಾನುಸಾರ, 28/12/1999ರಲ್ಲಿ ಸದಸ್ಯರ ಒಪ್ಪಿಗೆಯನ್ನು ಪಡೆಯದೇ ಸಂಘವು ಸಮಾಪನೆಗೊಳ್ಳುತ್ತದೆ. ಇದರ ವಿರುದ್ದ ಹಿಂದಿನ ಆಡಳಿತ ಮಂಡಳಿ ಸಮಾಪನಾ ಆದೇಶವನ್ನು ಹಿಂಪಡೆದು, ನಿಯಮಾನುಸಾರ ಮಾಸಭೆ ಮತ್ತು ಚುನಾವಣೆ ನಡೆಸಿ ಸಂಘದ ಪಉನಶ್ಚೇತಕ್ಕೆ ಮನವಿ ಮಾಡುತ್ತಾರೆ. ಆದರೆ ದುರಾದೃಷ್ಟವಶಾತ್ ಸಹಕಾರ ಇಲಾಖೆ ಇದಕ್ಕೆ ಸ್ಪಂದಿಸದೆ ಸಮಾಪನಾ ಆದೇಶವನ್ನು ಮುಂದುವರೆಸುತ್ತಾರೆ. ಸುಮಾರು 2000ನೇ ಇಸವಿಯಲ್ಲಿಯೇ ಸಂಗದ ಮೌಲ್ಯವು ಸುಮಾರು 145 ಕೋಟಿ ರೂಪಾಯಿಗಳಷ್ಟಿತ್ತು. ಸಂಘದ ಆಸ್ತಿಯನ್ನು ಸರ್ಕಾರ ಸ್ವಾದೀನ ಮಾಡಿಕೊಳ್ಳುವ ಹುನ್ನಾರ ನಡೆಸಿತ್ತಾ ಎನ್ನುವ ಸಂಶಯಕ್ಕೆ ಪುಷ್ಟಿ ನೀಡುತ್ತದೆ.
ಈ ಸಮಯದಲ್ಲಿ ಸಂಘದಲ್ಲಿ ಒಟ್ಟು 65ಖಾಯಂ ನೌಕರರು, 162 ಮಹಿಳಾ ಸಿಬ್ಬಂದಿ,16 ಜನ ಹಂಗಾಮಿ ಕಾರ್ಮಿಕರು, 04ಜನ ಕ್ಯಾಷ್ಯೂಯಲ್ ಕ್ಲರ್ಕ್ ಸೇರಿದಂತೆ ಒಟ್ಟು 247 ನೌಕರರಿದ್ದರು. ಸಂಸ್ಥೆಯ ಪುನಶ್ಚೇತನಕ್ಕೆ ಯಾವುದೇ ಕ್ರಮಗಳನ್ನು ಕೈಗೊಳ್ಳದ ಆಡಳಿತಾಧಿಕಾರಿಯ ನಡೆಯಿಂದಾಗಿ, ಸಂಘವು ತನ್ನ ನೌಕರರಿಗೆ ವೇತನ ಪಾವತಿಸಲೂ ಆಗದ ಸ್ಥಿತಿಗೆ ಬಂದು ಬಿಡುತ್ತದೆ. ಈ ಸಮಯದಲ್ಲಿ ಸರ್ಕಾರ ಮತ್ತೆ 1999ರಲ್ಲಿ ಸಂಘಕ್ಕೆ ಸಮಾಪನ ಅಧಿಕಾರಿಯನ್ನು ನೇಮಿಸುತ್ತದೆ. ಸಮಾಪನಾ ಅಧಿಕಾರಿ, ಸರ್ವ ಸದಸ್ಯರ ಸಭೆಯನ್ನೂ ಕರೆಯದೆ, 20213ರಲ್ಲಿ ಸಂಘದ ಹೆಸರಿನಲ್ಲಿದ್ದ 10.22 ಎಕರೆ ಆಸ್ಥಿಯ ಪೈಕಿ, 1.13 ಏಕರೆ ಮತ್ತು ಸಂಸ್ಥೆಯ ಅನುಪಯುಕ್ತ ಬಿಡಿಭಾಗಗಳನ್ನು 2007ರಲ್ಲಿ ನಿಯಮಾನುಸಾರ ಮಾರಾಟ ಮಾಡಿ ನೌಕರರ ವೇತನ, ಮತ್ತಿರ ಸಾಲವನ್ನೂ ತೀರಿಸಲಾಗುತ್ತದೆ. 2015ರಲ್ಲಿ 3.34 ಎಕರೆ ಜಾಗವನ್ನು ಸಹಕಾರ ಅಕಾಡೆಮಿ ಸ್ಥಾಪಿಸಲು, ಸಹಕಾರಿ ನಿಬಂಧಕರ ಹೆಸರಿಗೆ ನೋಂದಣಿ ಮಾಡಲಾಗುತ್ತದೆ. ಇದರಿಂದ ಯಾವುದೇ ಲಾಭಾಂಶವೂ ಸಂಘದ ಖಾತೆಗೆ ಜಮೆಯಾಗುವುದಿಲ್ಲ. ಇಷ್ಟಕ್ಕೇ ಸುಮ್ಮನಾಗದ ಸಂಘದ ಸಮಾಪನಾಧಿಕಾರಿ, 2015ರಲ್ಲಿ ಮತ್ತೆ 05 ಏಕರೆ ಜಾಗವನ್ನು(ಅಂದಿನ ಮಾರುಕಟ್ಟೆ ಬೆಲೆ 50 ಕೋಟಿ) ಆಸ್ತಿಯನ್ನು ಅರ್ಧ ಬೆಲೆ ಸರ್ಕಾರಿ ದರವಾಗಿ ನಮೂದಿಸಿ ಬಹಿರಂಗ ಹರಾಜಿಗೆ ಪತ್ರಿಕಾ ಪ್ರಕಟಣೆ ಹೊರಡಿಸುತ್ತಾರೆ. ಅಲ್ಲದೆ ಸಂಸ್ಥೆ ಹೆಸರಿನಲ್ಲಿ ಉತ್ತಮ ಸ್ಥಿತಿಯಲ್ಲಿದ್ದ, ಬೃಹತ್ 23 ಗೋದಾಮುಗಳ ಪೈಕಿ, 09 ಗೋದಾಮುಗಳನ್ನು ಯಾವುದೇ ಕಾರಣವಿಲ್ಲದೆ ನೆಲಸಮ ಮಾಡಿ, ಉಳಿದ 13 ಗೋದಾಮುಗಳನ್ನು ಖಾಸಗೀ ಕಂಪೆನಿಯೊಂದಕ್ಕೆ ಕೇವಲ 3ಲಕ್ಷ ಬಾಡಿಗೆಗೆ ನೀಡುತ್ತಾರೆ.
ಮೂರೂ ಜಿಲ್ಲೆಯ ಕಾಫಿಬೆಳೆಗಾರ ರೈತರ ಹಿತಕ್ಕಾಗಿ ಹಿರಿಯರು ಅತ್ಯಂತ ಜವಾಬ್ದಾರಿ ಮತ್ತು ಶ್ರಮ ವಹಿಸಿ ಕಟ್ಟಿ ಬೆಳಸಿದ್ದ ದೇಶದ ಪ್ರಥಮ ಸಹಕಾರ ಸಂಗವು, ಸಮಾಪನಾ ಅಧಿಕಾರಿಯ ನಿರಂಕುಶ ಆಡಳಿತ ಮತ್ತು ದಬ್ಬಾಳಿಕೆಗೆ ಒಳಗಾಗಿ ತನ್ನೆಲ್ಲ ಆಸ್ತಿಗಳನ್ನು ಕಳೆದು ಕೊಳ್ಳುವ ದುಸ್ಥಿತಿಯನ್ನು ಕಂಡ, ಸಂಘದ ನೌಕರರೊಬ್ಬರು, ಕೊಡಗಿನ ಕೋಲತಂಡ ಸುಬ್ರಮಣಿ ಅವರ ಗಮನಕ್ಕೆ ತರುತ್ತಾರೆ.
ವಸ್ತುಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ, ಕೋಲತಂಡ ಸುಬ್ರಮಣಿ ಅವರು, ಅಮ್ಮತ್ತಿಯ ಹೋರಾಟಗಾರ ಮೂಕೋಂಡ ಬೋಸ್ ದೇವಯ್ಯ ಅವರೊಂದಿಗೆ ಮಾತುಕಥೆ ನಡೆಸಿ, ಸಂಘದ ಆಸ್ತಿಯನ್ನು ಪರಬಾರೆ ಮಾಡುವ ಬಹಿರಂಗ ಹರಾಜಿನಲ್ಲಿ ಯಾರೂ ಕೂಡ ಭಾಗವಹಿಸದಂತೆ ಮಾಧ್ಯಮ ಪ್ರಕಟಣೆ ನೀಡುತ್ತಾರೆ. ಇದರಿಂದ ಕ್ರುದ್ದರಾದ ಸಮಾಪನಾಧಿಕಾರಿ, ಕೊಡಗು ಜಿಲ್ಲಾ ಸಹಕಾರ ನಿಭಂದಕರಿಂದ ಮೂಕೋಂಡ ಬೋಸ್ ದೇವಯ್ಯ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆ ನೋಟೀಸ್ ಜಾರಿಗೊಳಿಸುತ್ತಾರೆ. ಇದಕ್ಕೆ ಜಗ್ಗದ ಮೂಕೋಂಡ ಬೋಸ್ ದೇವಯ್ಯ ಮತ್ತು ಕೋಲತಂಡ ಸುಬ್ರಮಣಿ ಜೋಡಿ, ತಕ್ಷಣ ಸಂಸ್ಥೆಯ ಇತರ ಸದಸ್ಯರನ್ನು ಒಟ್ಟು ಸೇರಿಸಿ, 20215ರಲ್ಲಿ ಅಮ್ಮತ್ತಿಯಲ್ಲಿ ಸಭೆ ನಡೆಸಿ, ಮೈಸೂರು ಕಾಫಿ ಸಂಸ್ಕರಣಾ ಸಕಾರ ಸಂಘ ನಿಯಮಿತ. ಸದಸ್ಯರ ಹಿತರಕ್ಷಣಾ ಸಮಿತಿ ಎಂಬ ಸಂಘಟನೆಯನ್ನು ರಚಿಸಿ, ಸಂಚಾಲಕರಾಗಿ ಮೂಕೊಂಡ ಬೋಸ್ ದೇವಯ್ಯ ಕಾರ್ಯದರ್ಶಿಯಾಗಿ ಕೋಲತಂಡ ಸುಬ್ರಮಣಿ ಅವರು ಮುಂದಾಳತ್ವ ವಹಿಸುತ್ತಾರೆ. ನಂತರ ಚಿಕ್ಕಮಗಳೂರು ಮತ್ತು ಹಾಸನದ ಸಂಘ ಸದಸ್ಯರನ್ನು ಸಂಪರ್ಕಿಸಿ ಅಲ್ಲಿಯೂ ಸಂಘಟಿಸುವ ಮೂಲಕ ಒಟ್ಟಾಗಿ, ದಿ. ಮೈಸೂರು ಕಾಫಿ ಸಂಸ್ಕರಣಾ ಘಟಕದ ಉಳಿವಿಗಾಗಿ ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗುವ ಸಮಿತಿಯು, ನೇರವಾಗಿ ಸರ್ಕಾರದ ವಿರುದ್ದ ಕಾನೂನು ಸಮರ ಸಾರುತ್ತದೆ.
20215ರಿಂದ ನಿರಂತರ ಕಾನೂನು ಹೋರಾಟ ಮಾಡುತ್ತಾ ಬಂದರು. ಅಂದಿನ ಸಹಕಾರ ಇಲಾಖೆಯ ರಿಜಿಸ್ಟಾರ ಮುರುವಂಡ ಅಯ್ಯಪ್ಪ ಸೇರಿದಂತೆ, ಹಲವು ಅಧಿಕಾರಿಗಳು, ಕಾನೂನು ತಜ್ಞರು, ಸಂಘದ ಸದಸ್ಯರ ಸಹಕಾರದ ಹೊರತಾಗಿಯೂ, ರಾಜಕೀಯ ಮೇಲಾಟ ಮತ್ತು ಕಾಣದ ಕೈಗಳ ಹಸ್ತಕ್ಷೇಪದಿಂದಾಗಿ, ಪ್ರಕರಣದ ಇತ್ಯರ್ಥವು ವಿಳಂಬವಾಗುತ್ತಾ ಹೋಗುತ್ತದೆ. ಆದರೂ ಛಲಬಿಡದ ಹೋರಾಟ ಸಮಿತಿಯು, 2022ರಲ್ಲಿ ಹೈಕೋರ್ಟಿನ ಹಿರಿಯ ವಕೀಲರಾಗಿದ್ದ ಮಾನ್ಯ ಎ.ಎಸ್. ಪೊನ್ನಣ್ಣ ಅವರಿಗೆ ಪ್ರಕರಣದ ವಕಾಲತ್ತು ನೀಡುತ್ತಾರೆ. ಪ್ರಕರಣದ ಹಿನ್ನಲೆ ಮತ್ತು ರೈತರಿಗೇ ಉಳಿಯಬೇಕಾಗಿರುವ ಅನಿವಾರ್ಯತೆಯನ್ನು ಸರ್ಕಾರಿ ವಕೀಲರಾಗಿರುವಾಗಲೇ ಮನಗಂಡಿದ್ದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು, ಇದಕ್ಕಾಗಿ ರೈತರಿಂದ ಒಂದು ರುಪಾಯಿಯೂ ಪಡೆಯದೆ, ಸಂಪೂರ್ಣ ಉಚಿತವಾಗಿ, ಪ್ರಕರಣ ಮುಂದುವರೆಸಿ, ಸಂಘಕ್ಕೆ ಜಯ ಧಕ್ಕಿಸಿ ಕೊಟ್ಟರು.
ಆ ನಂತರ ಆಂದಿನ ಸರ್ಕಾರ, ಸಂಬಂಧಿಸಿದ ಅಧಿಕಾರವನ್ನು ಸದಸ್ಯರಿಗೆ ನೀಡಲು, ಮೀನಾ ಮೇಷ ಎಣಿಸಿತ್ತು. ಹೋರಾಟ ಸಮಿತಿಯು ಅಂದಿನ ಶಾಸಕರಾಗಿದ್ದ, ಕೆ.ಜಿ. ಬೋಪಯ್ಯ ಅವರಿಗೆ ಮನವಿ ಮಾಡಿಕೋಂಡಾಗ ಅಂದಿನ ಸಹಕಾರಿ ಸಚಿವರು, ಮತ್ತು ಮುಖ್ಯ ಮಂತ್ರಗಳೂ ಕೂಡ ಯಾವುದೇ ಸ್ಪಂದನೆ ನೀಡಲಿಲ್ಲ. ಕೆ.ಜಿ. ಬೋಪಯ್ಯ ಅವರು ಸದನದಲ್ಲಿ ಈ ಕುರಿತು ಪ್ರಸ್ತಾಪಿಸಿದರೂ ಅಂದಿನ ಸರ್ಕಾರ ಯಾವುದೇ ರೀತಿಯ ಕ್ರಮವನ್ನು ರೂತರ ಪರವಾಗಿ ಕೈಗೊಳ್ಳಲೇ ಇಲ್ಲ.
2023ರಲ್ಲಿ ವಿರಾಜಪೇಟೆಯ ಶಾಸಕರಾಗಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಆಯ್ಕೆಯಾಗುವ ಮಾನ್ಯ ಅಜ್ಜಿಕುಟ್ಟಿರ ಪೊನ್ನಣ್ಣ ಅವರ ಬಳಿ ಮತ್ತೆ ತೆರಳುವ ರೈತ ಹೋರಾಟ ಸಮಿತಿಯು, ಸಂಘಕ್ಕೆ ಆಡಳಿತ ಮಂಡಳಿಯ ಚುನಾವಣೆ ನಡೆಸಿ, ರೈತರ ಮತ್ತು ಸಹಕಾರಿ ಸದಸ್ಯ ಹಿತ ಕಾಪಾಡುವಲ್ಲಿ ಕ್ರಮವಹಿಸಬೇಕೆಂದು ಮನವಿ ಮಾಡುತ್ತಾರೆ. ತಕ್ಷಣಕ್ಕೆ ಸ್ಪಂದಿಸುವ ಪೊನ್ನಣ್ಣ ಅವರು, ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರೊಂದಿಗೆ ವ್ಯವಹರಿಸಿ 2023ರಲ್ಲಿ ಸಮಾಪನಾಧಿಕಾರಿಯ ಹಿಡಿತಂದಿಂದ ಸಂಘವನ್ನು ಬಿಡಿಸಿದಲ್ಲದೆ, ಪರಭಾರೆ ಆಗಲಿದ್ದ ನೂರಾರು ಕೋಟಿ ರೂ ಮೌಲ್ಯದ ಆಸ್ತಿಯನ್ನು ಸಂಘಕ್ಕೆ ಉಳಿಸಿಕೊಡುವುದರ ಮೂಲಕ, ಸಂಸ್ಥೆಯ ಪುನಶ್ಚೇತನಕ್ಕಾಗಿ, ತಾವೇ ಅವಿರೋಧ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಇವರೊಂದಿಗೆ ರೈತ ಹೋರಾಟ ಸಮಿತಿಯ ಸದಸ್ಯರು ಮತ್ತು ಹಿರಿಯ ಸಹಕಾರಿಗಳು ಸೇರಿದಂತೆ, ಉಪಾಧ್ಯಕ್ಷರಾಗಿ ಪಿ.ಜಿ. ಪ್ರಭುದೇವ್ ಮತ್ತು ನಿರ್ದೇಷಕರುಗಳಾಗಿ, ಕೋಲತಂಡ ಸುಬ್ರಮಣಿ ಚೇಂದ್ರಿಮಾಡ ಗಣೇಶ್ ನಂಜಪ್ಪ, ಚೇರಂಡ ನಂದಸುಬ್ಬಯ್ಯ ಕುಂದಳ್ಳಿ, ದಿನೇಶ್ ನೆಲ್ಲಿರ ಚಲನ್ ಕುಮಾರ್, ಅಪ್ಪಚಟ್ಟೋಳಂಡ ಮನುಮುತ್ತಪ್ಪ, ಐಗೂರು ಶಂಕರೇಗೌಡ, ಪ್ರತಾಪ್ ಶಿವಪ್ಪ, ಅಳಮೆಂಗಡ ವಿವೇಕ್, ರಾಜಶೇಖರ್ ಸೋಮವಾರಪೇಟೆ, ಎಂ.ಎಸ್. ಮೊಹಮ್ಮದ್ ಅಲಿ, ದಳವಾಯಿ ಹೆಚ್. ಉಮೇಶ್, ಶ್ರೀಮತಿ ಸಿ.ಎಂ. ಕಾವೇರಮ್ಮ ಹಾಗೂ ಶ್ರೀಮತಿ ಬಿ.ಎಸ್ ಲೀಲಾಕುಮಾರಿ ಅವರು ಆಯ್ಕೆಯಾಗಿದ್ದಾರೆ.
ಆದರೆ ಹೋರಾಟದ ಸಂಪೂರ್ಣ ಉಸ್ತುವಾರಿ ಹೊತ್ತಿದ್ದ ಹೋರಾಟ ಸಮಿತಿಯ ಸಂಚಾಲಕ ಮೂಕೊಂಡ ಬೋಸ್ ದೇವಯ್ಯ ಅವರು ಈಗ ಬೌತಿಕವಾಗಿ ನಮ್ಮೊಂದಿಗಿಲ್ಲ. ಆದರೂ ಅವರ ನಿಸ್ವಾರ್ಥ ಹೋರಾಟ ಮತ್ತು ಶ್ರಮ ವ್ಯರ್ಥವಾಗದೆ ರೈತರ ಆಸ್ತಿ ರೈತರಿಗೇ ಉಳಿಯುಂತೆ ಆಗಿರುವುದು ಅವರ ಆತ್ಮಕ್ಕೆ ಖಂಡಿತ ಸದ್ಗತಿ ಸಂದಿದೆ ಎನ್ನುವುದು ಅವರ ಒಡನಾಡಿಗಳ ನಿರಮ್ಮಳ ನಿಟ್ಟುಸಿರ ಅಭಿಪ್ರಾಯ. ಜೊತೆಗೆ ಈ ಇಡೀ ಹೋರಾಟವನ್ನು ಆರಂಭದಿಂದ ಅಂತ್ಯದವರೆಗೂ, ಛಲದಂಕ ಮಲ್ಲನಂತೆ ಹಿಂದೆ ನಿಂತು ಹೋರಾಡಿದ, ಸಮಿತಿಯ ಕಾರ್ಯದರ್ಶಿ ಕೋಲತಂಡ ಸುಬ್ರಮಣಿ ಅವರು, ಪ್ರಸ್ತುತ ಆಡಳಿತ ಮಂಡಳಿಯಲ್ಲೂ ಇದ್ದಾರೆ. ಇವರೊಂದಿಗೆ ಹೆಗಲಾಗಿ ದುಡಿದ, ಹೋರಾಟ ಸಮಿತಿ ಸದಸ್ಯರುಗಳಾದ, ಜಿ.ಎಸ್. ಪ್ರಭುದೇವ, ಕೆ.ಬಿ. ಹೇಮ ಚಂದ್ರ, ಚೇರಂಡ ನಂದಾ ಸುಬ್ಬಯ್ಯ, ಎಸ್.ಪಿ. ಪ್ರಸನ್ನ, ಚೇಂದ್ರಿಮಾಡ ಗಣೇಶ್ನಂಜಪ್ಪ, ಬಿ.ಬಿ. ಸುದೀಪ್, ಐಗೂರು ಶಂಕರೇಗೌಡ, ಬಿ.ಎಸ್. ಪ್ರತಾಪ್ ಅವರುಗಳ ಶ್ರಮ ಇತಿಹಾಸದ ಪುಟಗಳಲ್ಲಿ ಶಾಸ್ವತವಾಗಿ ಉಳಿಯಬೇಕು. ಈ ಹೋರಾಟ ಸಮಿತಿಯಲ್ಲಿ ಕೆಲವರು ಇಂದಿನ ಆಡಳಿತ ಮಂಡಳಿಯ ನಿರ್ದೇಶಕರಾದರೆ, ಕೆಲವರು ಹೊರಗಿದ್ದಾರೆ. ಆದರರೆ ಇವರ ಹೋರಾಟದ ಫಲ, ಮುಂದೆ ಮೂರೂ ಜಿಲ್ಲೆಯ ರೈತರೂ ಸೇರಿದಂತೆ, ದೇಶದ್ಯಾಂತ ಇರುವ ಎಲ್ಲಾ ರೈತಬಂಧುಗಳಿಗೂ ದೊರಕಿದಾಗ ಮಾತ್ರ ಈ ಎಲ್ಲರ ನಿಶ್ಕಲ್ಮಶ ಹೋರಾಟಕ್ಕೊಂದು ಸಾರ್ಥಕತೆ ದೊರಕುತ್ತದೆ. ಹಾಲಿ ಆಡಳಿತ ಮಂಡಳಿ ಈ ನಿಟ್ಟಿನಲ್ಲಿ, ಕಾಫಿಬೆಳೆಗಾರರ ಜೊತೆಗೆ ಇತರ ಎಲ್ಲಾ ರೈತರಿಗೂ ಸಹಕಾರಿಯಾಗುವ ಹಲವು ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಿದ್ದು, ಮುಂದೆ ರೈತರ ಸಂಘವಾಗಿ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಯಿಡಲಿ ಎಂಬುದು, ಸಹಕಾರ ಸಪ್ತಾಹದ ಈ ಶುಭ ಸಂದರ್ಭದಲ್ಲಿ ನಡುಬಾಡೆಯ ಹಾರೈಕೆ.